ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ| ಲೈಂಗಿಕ ಕಿರುಕುಳ, ಜಾತಿ ನಿಂದನೆ ಆರೋಪ: ಡಿಎಸ್‌ಡಬ್ಲ್ಯೂ, ಶಿಕ್ಷಕ ಅಮಾನತು

Published 28 ಅಕ್ಟೋಬರ್ 2023, 15:45 IST
Last Updated 28 ಅಕ್ಟೋಬರ್ 2023, 15:45 IST
ಅಕ್ಷರ ಗಾತ್ರ

ರಾಮನಗರ: ಸರ್ಕಾರಿ ವಸತಿ ಶಾಲೆಯೊಂದರ ಪ್ರಾಚಾರ್ಯೆಗೆ ಲೈಂಗಿಕ ಕಿರುಕುಳದ ಜೊತೆಗೆ, ಜಾತಿ ನಿಂದನೆ ಮಾಡಿದ ಆರೋಪ ಎದುರಿಸುತ್ತಿರುವ ರಾಮನಗರದ ಸಮಾಜ ಕಲ್ಯಾಣ ಇಲಾಖೆಯ ಹಿಂದಿನ ಉಪ ನಿರ್ದೇಶಕ ಯೋಗೇಶ್ ಎಸ್‌.ಬಿ ಮತ್ತು ಅದೇ ಶಾಲೆಯ ಕನ್ನಡ ಶಿಕ್ಷಕ ಮಹೇಶ್ ಎಂ.ಬಿ. ಅವರನ್ನು ಸಮಾಜ ಕಲ್ಯಾಣ ಇಲಾಖೆಯು ಅಮಾನತುಗೊಳಿಸಿದೆ.

ಮೇಲಧಿಕಾರಿ ಮತ್ತು ಶಿಕ್ಷಕರ ಕಿರುಕುಳದಿಂದ ಬೇಸತ್ತಿದ್ದ ಪ್ರಾಚಾರ್ಯೆ ಅ. 9ರಂದು ಆತ್ಮಹತ್ಯೆಗೆ ಯತ್ನಿಸಿದ್ದರು. 12 ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡ ಬಳಿಕ, ಇಬ್ಬರ ವಿರುದ್ಧ ನಗರದ ಪುರ ಪೊಲೀಸ್ ಠಾಣೆಗೆ ಅ. 22ರಂದು ದೂರು ಕೊಟ್ಟಿದ್ದರು.

ಆ ಮೇರೆಗೆ, ಇಬ್ಬರ ವಿರುದ್ಧ ಎಸ್‌ಸಿ ಮತ್ತು ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ಮತ್ತು ಐಸಿಪಿ 509 ಕಲಂ ಅಡಿ ಎಫ್‌ಐಆರ್‌ ದಾಖಲಾಗಿತ್ತು. ಈ ಕುರಿತು ‘ಪ್ರಜಾವಾಣಿ’ಯಲ್ಲಿ ಅ. 28ರಂದು ಪ್ರಕಟವಾಗಿದ್ದ ವರದಿ ಬೆನ್ನಲ್ಲೇ, ಎಚ್ಚೆತ್ತುಕೊಂಡಿರುವ ಇಲಾಖೆಯು ಇಬ್ಬರನ್ನು ಅಮಾನತುಗೊಳಿದೆ.

‘ಆರೋಪದ ಕುರಿತು ಸತ್ಯಾಸತ್ಯತೆ ತಿಳಿಯಲು ಇಬ್ಬರ ವಿರುದ್ಧ ಇಲಾಖಾ ವಿಚಾರಣೆಗೆ ಕಾಯ್ದಿರಿಸಲಾಗಿದ್ದು, ಅಮಾನತು ಅವಧಿಯಲ್ಲಿ ಸಕ್ಷಮ ಪ್ರಾಧಿಕಾರದ ಅನುಮತಿ ಇಲ್ಲದೆ ಇಬ್ಬರೂ ಕೇಂದ್ರ ಸ್ಥಾನವನ್ನು ಬಿಡುವಂತಿಲ್ಲ’ ಎಂದು ಇಲಾಖೆಯ ಅಧೀನ ಕಾರ್ಯದರ್ಶಿ ಎಲ್. ನರಸಿಂಹಮೂರ್ತಿ ಅವರು ಆದೇಶದಲ್ಲಿ ತಿಳಿಸಿದ್ದಾರೆ.

ರಾಮನಗರದಲ್ಲಿ ಉಪ ನಿರ್ದೇಶಕರಾಗಿದ್ದ ಯೋಗೇಶ್ ಅವರು, ಜುಲೈ ತಿಂಗಳಲ್ಲಿ ಚಿಕ್ಕಮಗಳೂರು ಜಿಲ್ಲೆಗೆ ವರ್ಗಾವಣೆಯಾಗಿದ್ದರು.

ಪ್ರಾಚಾರ್ಯೆ ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಯುತ್ತಿದೆ. ಇದುವರೆಗೆ ಯಾರನ್ನೂ ಬಂಧಿಸಿಲ್ಲ
– ದಿನಕರ ಶೆಟ್ಟಿ, ತನಿಖಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT