ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲ ಮರಳಿ ಕೊಡುವುದಾಗಿ ನಂಬಿಸಿ,ತೋಟದ ಮನೆಯಲ್ಲಿ ಮಹಿಳೆಯನ್ನು ಹತ್ಯೆ ಮಾಡಿದ ಸಂಬಂಧಿ

ತೋಟದಲ್ಲಿ ಗುಂಡಿ ತೋಡಿ ಶವ ಹೂತಿಟ್ಟಿದ್ದ ಆರೋಪಿ
Published 6 ಜೂನ್ 2024, 5:50 IST
Last Updated 6 ಜೂನ್ 2024, 5:50 IST
ಅಕ್ಷರ ಗಾತ್ರ

ಕನಕಪುರ: ತಾಲ್ಲೂಕಿನ ಚೌಕಸಂದ್ರ ಗ್ರಾಮದಲ್ಲಿ ವ್ಯಕ್ತಿಯೊಬ್ಬ ಸಾಲ ಮರಳಿ ಕೊಡುವುದಾಗಿ ನಂಬಿಸಿ ಸಂಬಂಧಿ ಮಹಿಳೆಯನ್ನು ಕರೆಸಿಕೊಂಡು ಹತ್ಯೆ ಮಾಡಿದ್ದಾನೆ. 

ಕೋಡಿಹಳ್ಳಿ ಹೋಬಳಿ ಟಿ.ಗೊಲ್ಲಳ್ಳಿಯ ಸುನಂದಮ್ಮ ಉರುಫ್‌ ಮುನಿಹಲಗಮ್ಮ (55) ಕೊಲೆಯಾದ ಮಹಿಳೆ. ಶ್ರೀನಿವಾಸನಹಳ್ಳಿಯ ರವಿ ಕೊಲೆ ಆರೋಪಿ. ಆರೋಪಿಯು ಸುನಂದಮ್ಮ ಅವರ ಸಂಬಂಧಿ. 

ಸುನಂದಮ್ಮ ಅವರಿಂದ ರವಿ ₹20 ಸಾವಿರ ಸಾಲ ಪಡೆದಿದ್ದ. ಸಾಲದ ಹಣ ಮರಳಿಸುವುದಾಗಿ ಹೇಳಿ ಮಂಗಳವಾರ ಬೆಳಗ್ಗೆ ಅವರನ್ನು ಕನಕಪುರಕ್ಕೆ ಕರೆಸಿಕೊಂಡಿದ್ದ. ಮಧ್ಯಾಹ್ನವಾದರೂ ತಾಯಿ ಮನೆಗೆ ಮರಳದ ಕಾರಣ ಸುನಂದಮ್ಮನರ ಮಕ್ಕಳು ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಪೊಲೀಸರು ರವಿಯ ವಿಚಾರಣೆ ನಡೆಸಿದಾಗ ‘ಹಣ ಪಡೆದ ಸುನಂದಮ್ಮ ಸಂಬಂಧಿಕರನ್ನು ನೋಡುವುದಾಗಿ ಹೇಳಿ ಹೋದರು’ ಎಂದು ತಿಳಿಸಿದ. ಸುನಂದಮ್ಮ ರಾತ್ರಿಯಾದರೂ ಮನೆಗೆ ಬಾರದ ಕಾರಣ ಆತಂಕಗೊಂಡ ಕುಟುಂಬ ಸದಸ್ಯರು, ರವಿಯ ಚೌಕಸಂದ್ರ ರೇಷ್ಮೆ ತೋಟದ ಮನೆ ಬಳಿ ಹುಡುಕಾಟ ನಡೆಸಿದಾಗ ಗುಂಡಿ ತೋಡಿ ಶವ ಹೂತಿದ್ದ ವಿಷಯ ಬೆಳಕಿಗೆ ಬಂದಿದೆ.

ಸುನಂದಮ್ಮ

ಸುನಂದಮ್ಮ

ಘಟನೆ ವಿವರ: ವ್ಯಾಪಾರದಲ್ಲಿ ನಷ್ಟ ಅನುಭವಿಸಿದ್ದ ರವಿ ರೇಷ್ಮೆ ಬೆಳೆಯಲು ತೀರ್ಮಾನಿಸಿ ಚೌಕಸಂದ್ರದಲ್ಲಿ ಎರಡು ಎಕರೆ ರೇಷ್ಮೆ ತೋಟ ಮತ್ತು ರೇಷ್ಮೆ ಹುಳು ಮನೆ ಬಾಡಿಗೆ ಪಡೆದಿದ್ದ.

ತಾನು ಸಾಲ ಪಡೆದಿದ್ದ ₹20 ಸಾವಿರ ಮರಳಿ ಕೊಡುವುದಾಗಿ ಹೇಳಿ ಮಂಗಳವಾರ ಬೆಳಗ್ಗೆ ಸುನಂದಮ್ಮ ಅವರನ್ನು ರೇಷ್ಮೆ ತೋಟದ ಮನೆಗೆ ಕರೆಸಿಕೊಂಡಿದ್ದಾನೆ. ನಂತರ ಕೊಲೆ ಮಾಡಿ ಶವವನ್ನು ರೇಷ್ಮೆ ಹುಳು ಮನೆಯಲ್ಲಿ ಬಿಟ್ಟು ಕನಕಪುರಕ್ಕೆ ತೆರಳಿದ್ದಾನೆ. ನಂತರ ರಾತ್ರಿ ಬಂದು ತೋಟದಲ್ಲಿ ಗುಂಡಿ ತೋಡಿ ಹೂತಿದ್ದಾನೆ. 

ತೋಟದ ಗುಂಡಿಯಲ್ಲಿ ಶವ ಸಿಕ್ಕಿರುವ ಈ ವಿಷಯ ತಿಳಿಯುತ್ತಿದ್ದಂತೆಯೇ ಆರೋಪಿ ರವಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಶವವನ್ನು ಕನಕಪುರ ತಹಶೀಲ್ದಾರ್‌ ಡಾ.ಸ್ಮಿತಾ ರಾಮ್‌ ಸಮ್ಮುಖದಲ್ಲಿ  ಗ್ರಾಮಾಂತರ ಠಾಣೆ ಪೊಲೀಸರು ಬುಧವಾರ ಸಂಜೆ ಹೊರ ತೆಗೆದರು. ಶವವನ್ನು ಕನಕಪುರ ಸಾರ್ವಜನಿಕ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಗುರುವಾರ ಬೆಳಗ್ಗೆ ಮರಣೋತ್ತರ ಪರೀಕ್ಷೆ ನಡೆಯಲಿದೆ.

ಮೈಮೇಲಿದ್ದ ಆಭರಣಕ್ಕಾಗಿ ಕೊಲೆ ಶಂಕೆ

ಸಾಲದ ಹಣ ಮರಳಿಸಲಾಗದೆ ಆರೋಪಿಯು ಸುನಂದಮ್ಮ ಅವರನ್ನು ಕೊಲೆ ಮಾಡಿರಬಹುದು ಎಂದು ಸಂಬಂಧಿಕರು ಶಂಕಿಸಿದ್ದರು. ಆದರೆ, ಸುನಂದಮ್ಮಮೈ ಮೇಲಿದ್ದ 50 ಗ್ರಾಂ ಚಿನ್ನಾಭರಣ ಕಾಣೆಯಾಗಿವೆ. ಈ ವಿಷಯ ಗೊತ್ತಾದ ನಂತರ ಆಭರಣಗಳಿಗಾಗಿಯೇ ಆತ ಕೊಲೆ ಮಾಡಿರಬಹುದು ಎಂದು ಕುಟುಂಬ ಸದಸ್ಯರು ಅನುಮಾನ ವ್ಯಕ್ತಪಡಿಸಿದ್ದಾರೆ. 

ರೇಷ್ಮೆ ತೋಟದ ಗುತ್ತಿಗೆ ಅವಧಿ ಸೋಮವಾರಕ್ಕೆ ಮುಕ್ತಾಯವಾಗಿತ್ತು. ಜಮೀನು ಮಾಲಿಕರಿಗೆ ಮಂಗಳವಾರ ಕರೆ ಮಾಡಿದ್ದ ಆರೋಪಿಯು ಮುಂದಿನ ಅವಧಿಗೆ ಗುತ್ತಿಗೆ ಹಣ ನೀಡಿ ತಾನೇ ತೋಟದ ಗುತ್ತಿಗೆ ಪಡೆಯುವುದಾಗಿ ಹೇಳಿದ್ದ ಎಂದು ತಿಳಿದು ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT