ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂತ್ರಸ್ತರಿಗೆ ನಿವೇಶನ ಒದಗಿಸಿ ನ್ಯಾಯ: ಶಾಸಕ

ಅಧಿಕಾರ ಸ್ವೀಕರಿಸಿದ ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ
Published 14 ಮಾರ್ಚ್ 2024, 6:39 IST
Last Updated 14 ಮಾರ್ಚ್ 2024, 6:39 IST
ಅಕ್ಷರ ಗಾತ್ರ

ರಾಮನಗರ: ‘ನಿವೇಶನಕ್ಕಾಗಿ ಹಣ ಪಾವತಿಸಿ ವರ್ಷಗಳಿಂದ ಕಾಯುತ್ತಿರುವ 1,837 ಸಂತ್ರಸ್ತರಿಗೆ ತಿಂಗಳೊಳಗೆ ನಿವೇಶನ ಹಂಚಿಕೆ ಮಾಡಲಾಗುವುದು. ಮಧ್ಯವರ್ತಿಗಳಿಗೆ ಅವಕಾಶ ನೀಡದೆ, ಸಂತ್ರಸ್ತರಿಂದ ಯಾವುದೇ ರೀತಿಯ ಹಣ ಪಡೆಯದೆ ನಿವೇಶನ ಸಮಸ್ಯೆಯನ್ನು ನಿವಾರಿಸಿ ನ್ಯಾಯ ಒದಗಿಸಲಾಗುವುದು’ ಎಂದು ಶಾಸಕ ಎಚ್‌.ಎ. ಇಕ್ಬಾಲ್ ಹುಸೇನ್ ಭರವಸೆ ನೀಡಿದರು.

ನಗರದಲ್ಲಿರುವ ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಬುಧವಾರ ನೂತನ ಅಧ್ಯಕ್ಷ ಎ.ಬಿ. ಚೇತನ್‌ಕುಮಾರ್ ಅಧಿಕಾರ ಸ್ವೀಕಾರ ಸಮಾರಂಭದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಜನ ಹಣ ಕೊಟ್ಟು ನಿವೇಶನ ಖರೀದಿಸಿದರೂ ಅದು ಅವರದ್ದಾಗಿಲ್ಲ. ಭೂಮಿ ಇನ್ನು ಮಾಲೀಕನ ಹೆಸರಿನಲ್ಲೇ ಇದೆ. ಈ ಸಮಸ್ಯೆಗೆ ತ್ವರಿತವಾಗಿ ಪರಿಹಾರ ಸಿಗಲಿದೆ’ ಎಂದರು.

‘ಪ್ರಾಧಿಕಾರದ ವ್ಯಾಪ್ತಿಯಲ್ಲಿ ನಿರ್ಮಾಣವಾಗಿರುವ ಬಡಾವಣೆಗಳಲ್ಲಿ ಹಲವು ಸಮಸ್ಯೆಗಳಿವೆ. ನೀರು, ಒಳಚರಂಡಿ, ವಿದ್ಯುತ್, ರಸ್ತೆ, ಉದ್ಯಾನ ಸೇರಿದಂತೆ ಮೂಲಸೌಕರ್ಯ ಕೊರತೆ ಇದೆ. ಹಲವು ಬಡಾವಣೆಗಳಿಗೆ ಇಂದಿಗೂ ಸುಸಜ್ಜಿತ ರಸ್ತೆ ಇಲ್ಲ. ಹಿಂದೆ ಇದ್ದವರು ಸಹ ಈ ಬಗ್ಗೆ ಯಾವುದೇ ಗಮನ ಹರಿಸಿಲ್ಲ’ ಎಂದು ತಿಳಿಸಿದರು.

‘ಬಡಾವಣೆಗಳಲ್ಲಿರುವ ಮೂಲಸೌಕರ್ಯ ಕೊರತೆ ನೀಗಿಸುವ ನಿಟ್ಟಿನಲ್ಲಿ ಹೊಸ ಅಧ್ಯಕ್ಷ ಚೇತನ್ ಅವರು ಕೆಲಸ ಮಾಡಲಿದ್ದಾರೆ. ತಳಮಟ್ಟದಿಂದ ಕೆಲಸ ಮಾಡಿಕೊಂಡು ಬಂದಿರುವ ಹಾಗೂ ವಿವಿಧ ಹುದ್ದೆಗಳನ್ನು ನಿಭಾಯಿಸಿರುವ  ಅವರು, ಪ್ರಾಧಿಕಾರಕ್ಕೆ ಹೊಸ ಸ್ವರೂಪ ನೀಡಲಿದ್ದಾರೆ ಎಂಬ ಭರವಸೆ ಇದೆ’ ಎಂದು ಆಶಾಭಾವನೆ ವ್ಯಕ್ತಪಡಿಸಿದರು.

‘ನಿವೇಶನಕ್ಕಾಗಿ ಪ್ರಾಧಿಕಾರಕ್ಕೆ ಜನ ಪಾವತಿಸಿದ್ದ ₹22 ಕೋಟಿ ಹಣ ದುರುಪಯೋಗ ಹಗರಣ ಪ್ರಕರಣವು ಕೋರ್ಟ್‌ನಲ್ಲಿದೆ. ಅದಕ್ಕೂ ನಮಗೂ ಸಂಬಂಧವಿಲ್ಲ. ಈಗ ಏನಿದೆಯೊ ಅದನ್ನು ಮುಂದುವರಿಸಿಕೊಂಡು ಹೋಗುವುದಷ್ಟೇ ನಮ್ಮ ಕೆಲಸ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಪ್ರಾಧಿಕಾರದ ಅಧ್ಯಕ್ಷ ಎ.ಬಿ. ಚೇತನ್‌ಕುಮಾರ್ ಮಾತನಾಡಿ, ‘ನನ್ನನ್ನು ಗುರುತಿಸಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಕ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಂಸದ‌ ಡಿ.ಕೆ. ಸುರೇಶ್, ಶಾಸಕರಾದ ಎಚ್.ಎ. ಇಕ್ಬಾಲ್ ಹುಸೇನ್, ವಿಧಾನ ಪರಿಷತ್ತು ಸದಸ್ಯ ಎಸ್. ರವಿ ಅವರಿಗೆ ನಾನು ಚಿರಋಣಿ. ಹಿರಿಯರಾದ ಮಾಜಿ ಸದಸ್ಯ ಸಿ.ಎಂ. ಲಿಂಗಪ್ಪ, ಮಾಜಿ ಶಾಸಕ ಕೆ.ರಾಜು, ಪಕ್ಷದ ಜಿಲ್ಲಾಧ್ಯಕ್ಷ ಎಸ್. ಗಂಗಾಧರ್ ಸೇರಿದಂತೆ ಪಕ್ಷದ ಹಿರಿಯ-ಕಿರಿಯ ಮುಖಂಡರ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತೇನೆ’ ಎಂದರು.

ಪ್ರಾಧಿಕಾರದ ಆಯುಕ್ತ ಶಿವನಂಕರಿಗೌಡ, ಸದಸ್ಯರಾದ ಪ್ರವೀಣ್ ಎಸ್, ಶ್ರೀನಿವಾಸ, ವಿ.ಕೆ. ಶ್ರೀದೇವಿ, ಪರ್ವೀಜ್ ಪಾಷ, ಕಾಂಗ್ರೆಸ್ ಮುಖಂಡರು ಹಾಗೂ ಪ್ರಾಧಿಕಾರದ ಸಿಬ್ಬಂದಿ ಇದ್ದರು. ನೂತನ ಅಧ್ಯಕ್ಷರು ಹಾಗೂ ಸದಸ್ಯರಿಗೆ ಕಾಂಗ್ರೆಸ್ ಪದಾಧಿಕಾರಿಗಳು, ಮುಖಂಡರು ಹಾಗೂ ಅಭಿಮಾನಿಗಳು ಹೂವಿನ ಹಾರ ಹಾಕಿ ಅಭಿನಂದಿಸಿದರು. ಕಚೇರಿ ಎದುರು ಪಟಾಕಿ ಸಿಡಿಸಿ ಸಂಭ್ರಮಾಚರಿಸಿದರು.

ಪ್ರಾಧಿಕಾರದಲ್ಲಿರುವ ವಿವಿಧ ಸಮಸ್ಯೆಗಳ ಕುರಿತು ಅಧಿಕಾರಿಗಳ ಜೊತೆ ಚರ್ಚಿಸಿ ಅವುಗಳನ್ನು ಪರಿಹರಿಸಲಾಗುವುದು. ಪಕ್ಷದ ನಾಯಕರ ಮಾರ್ಗದರ್ಶನದಲ್ಲಿ ಉತ್ತಮವಾಗಿ ಕೆಲಸ ಮಾಡುವೆ
–ಎ.ಬಿ. ಚೇತನ್‌ಕುಮಾರ್, ಅಧ್ಯಕ್ಷ ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ

‘ಬಸ್ ನಿಲ್ದಾಣಕ್ಕೆ ಸಚಿವರೊಂದಿಗೆ ಚರ್ಚೆ’

‘ನಗರದ ಐಜೂರು ವೃತ್ತದ ಸಮೀಪ ಹಳೆ ಬೆಂಗಳೂರು–ಮೈಸೂರು ರಸ್ತೆಗೆ ಹೊಂದಿಕೊಂಡಂತಿರುವ ಕೈಗಾರಿಕಾ ಪ್ರದೇಶದ ಜಾಗದಲ್ಲಿ ಸುಸಜ್ಜಿತವಾದ ಬಸ್ ನಿಲ್ದಾಣವನ್ನು ನಿರ್ಮಾಣ ಮಾಡುವ ಚಿಂತನೆ ಇದೆ. ಈ ಕುರಿತು ಸಾರಿಗೆ ಸಚಿವರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಅವರೊಂದಿಗೆ ಚರ್ಚೆ ನಡೆಸಿದ್ದೇನೆ. ಕೈಗಾರಿಕಾ ಪ್ರದೇಶದಲ್ಲಿರುವ ಉದ್ಯಮಿಗಳ ಜೊತೆಗೂ ಸಭೆ ನಡೆಸಿದ್ದೇನೆ. ಕೆಲವರು ಬೇರೆ ಕಡೆ ಹೋಗಲು ಒಪ್ಪಿದ್ದಾರೆ. ಉಳಿದವರು ಹೆಚ್ಚಿನ ಪರಿಹಾರಕ್ಕೆ ಒತ್ತಾಯಿಸಿದ್ದಾರೆ. ಉದ್ಯಮಿಗಳು ಅಧಿಕಾರಿಗಳು ಹಾಗೂ ಸಚಿವರ ಜೊತೆ ಮತ್ತೊಮ್ಮೆ ಚರ್ಚೆ ನಡೆಸಿ ನಿಲ್ದಾಣ ನಿರ್ಮಾಣಕ್ಕೆ ರೂಪುರೇಷೆ ಸಿದ್ದಪಡಿಸಲಾಗುವುದು’ ಎಂದು ಶಾಸಕ ಇಕ್ಬಾಲ್ ಹುಸೇನ್ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT