ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಟಿ. ಹೊಸಹಳ್ಳಿ: ದಾಖಲಾತಿ ಕಸಿದ ಶಿಥಿಲ ಶಾಲಾ ಕಟ್ಟಡ

ಬಿರುಕು ಬಿಟ್ಟ ಶಾಲೆಯ ಗೋಡೆ, ಉದುರುವ ಕಾಂಕ್ರೀಟ್, ಮಳೆಗೆ ಹಳ್ಳವಾಗುವ ಶಾಲಾವರಣ
ಗೋವಿಂದರಾಜು ವಿ.
Published 26 ಜೂನ್ 2024, 4:04 IST
Last Updated 26 ಜೂನ್ 2024, 4:04 IST
ಅಕ್ಷರ ಗಾತ್ರ

ಹಾರೋಹಳ್ಳಿ: ಒಂದು ಕಾಲದಲ್ಲಿ ಸುತ್ತಮುತ್ತಲಿನ ಹಳ್ಳಿಗಳ ಮಕ್ಕಳ ಶಿಕ್ಷಣದ ತಾಣವಾಗಿ, ಹೆಸರುವಾಸಿಯಾಗಿದ್ದ ಶಾಲೆ ಈಗ ತನ್ನ ಹೊಳಪು ಕಳೆದುಕೊಂಡಿದೆ. ಹಳೆಯದಾದ ಶಾಲಾ ಕಟ್ಟಡವು ವರ್ಷಗಳಾದರೂ ದುರಸ್ತಿ ಕಾಣದೆ ಶಿಥಿಲವಾಗುತ್ತಾ ಬಂದಿದೆ. ವಿದ್ಯಾರ್ಥಿಗಳು ಮತ್ತು ಶಿಕ್ಷಕರು ನಿತ್ಯ ಆತಂಕದಲ್ಲೇ ಶಾಲೆಗೆ ಬಂದು ಹೋಗಬೇಕಾಗಿದೆ.

ತಾಲ್ಲೂಕಿನ ಟಿ. ಹೊಸಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸ್ಥಿತಿ ಇದು. ಐವತ್ತು ವರ್ಷಕ್ಕೂ ಹಳೆಯದಾದ ಶಾಲಾ ಕಟ್ಟಡವು ಅತ್ತ ಜನಪ್ರತಿನಿಧಿಗಳು ಹಾಗೂ ಇತ್ತ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಉಚಿತ ಶಿಕ್ಷಣದ ಸೌಲಭ್ಯವುಳ್ಳ ಶಾಲೆಯು ತನ್ನ ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳನ್ನು ಸೆಳೆಯುವ ಬದಲು ಕಳೆದುಕೊಳ್ಳುತ್ತಿದೆ. ವರ್ಷದಿಂದ ವರ್ಷಕ್ಕೆ ಇಲ್ಲಿನ ದಾಖಲಾತಿಯಲ್ಲಿ ಇಳಿಮುಖವಾಗುತ್ತಿದೆ.

ಗೋಡೆಯಲ್ಲಿ ಬಿರುಕು:

ಹಳೆಯದಾದ ಕಟ್ಟಡದ ಹೆಂಚುಗಳು ಅಲ್ಲಲ್ಲಿ ಒಡೆದು ಹೋಗಿವೆ. ಮಳೆ ಬಂದರೆ ಕೊಠಡಿ ಸೋರುತ್ತದೆ. ಇದರಿಂದಾಗಿ ಶಾಲೆಯ ಪಕಾಸುಗಳು ಸಹ ಗೆದ್ದಲು ತಿಂದಿವೆ. ಗೋಡೆ ಮತ್ತು ಚಾವಣಿ ಶಿಥಿಲಗೊಂಡು ಅಲ್ಲಲ್ಲಿ ಬಿರುಕು ಬಿಟ್ಟಿವೆ. ಚಾವಣಿಯ ಕಾಂಕ್ರೀಟ್ ಚಕ್ಕೆ ಕಿತ್ತು ಬರುತ್ತಿದ್ದು, ಒಳಗೆ ತುಕ್ಕು ಹಿಡಿದ ಕಬ್ಬಿಣ ಕಾಣುತ್ತಿದೆ.

ಮಳೆ ಬಂದರೆ ಕೊಠಡಿಯಲ್ಲಿ ನೆನೆಯದಂತೆ ಮಕ್ಕಳನ್ನು ಸುರಕ್ಷಿತವಾಗಿ ನೋಡಿಕೊಳ್ಳುವ ಸವಾಲು ಶಾಲೆಯ ಮೂವರು ಶಿಕ್ಷಕರದ್ದು. ಆದರೂ ಕಲಿಕಾ ಸಾಮಗ್ರಿಗಳು ಮಳೆ–ಗಾಳಿಗೆ ಹಾಳಾಗಿವೆ. ಚಾವಣಿಗೆ ಅಳವಡಿಸಿರುವ ಹೆಂಚುಗಳು ಭಾರೀ ಗಾಳಿ–ಮಳೆ ಬಂದಾಗ ಜಾರಿ ನೆಲಕ್ಕೆ ಬಿದ್ದಿವೆ. ಕಿಟಕಿಗಳು ಸಹ ಹಾನಿಗೊಂಡಿವೆ.

ದಾಖಲಾತಿ ಕುಸಿತ:

ಸುತ್ತಮುತ್ತಲಿನ ಮೂರ್ನಾಲ್ಕು ಹಳ್ಳಿಗಳ ಮಕ್ಕಳಿಗೆ ಟಿ. ಹೊಸಹಳ್ಳಿಯೇ ಏಕೈಕ ಹಿರಿಯ ಪ್ರಾಥಮಿಕ ಶಾಲೆ ಹೊಂದಿರುವ ಊರು. ಹಿಂದೆ ಇಲ್ಲಿನ ವಿದ್ಯಾರ್ಥಿಗಳ ಸಂಖ್ಯೆ ಮೂರಂಕಿ ದಾಟುತ್ತಿತ್ತು. ಅಂತಹ ಶಾಲೆಯಲ್ಲೀಗ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಕುಸಿತ ಕಂಡಿದೆ. ಶಾಲೆ ಸ್ಥಿತಿ ಕಂಡು, ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಕಳಿಸುತ್ತಿದ್ದಾರೆ.

‘ಕಳೆದ ವರ್ಷ ಶಾಲೆಯಲ್ಲಿ 27 ವಿದ್ಯಾರ್ಥಿಗಳಿದ್ದರು. ಈ ವರ್ಷ 28 ಮಕ್ಕಳಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಮಕ್ಕಳ ಸಂಖ್ಯೆ ಇಳಿಕೆಯತ್ತ ಸಾಗುತ್ತಿದೆಯೇ ಹೊರತು ಏರುಗತಿಯಲ್ಲಿಲ್ಲ. ಶಾಲೆಯ ಹಳೆಯದಾಗಿದ್ದು, ಸೋರುತ್ತಿದೆ ಎಂದು ಪೋಷಕರು ತಮ್ಮ ಮಕ್ಕಳನ್ನು ಕಳಿಸಲು ಹಿಂದೇಟು ಹಾಕುತ್ತಿದ್ದಾರೆ. ಬಡವರಾದರೂ ಮಕ್ಕಳ ಜೀವಕ್ಕೆ ಖಾತ್ರಿ ಇಲ್ಲದ ಮೇಲೆ ಇಲ್ಯಾಕೆ ಕಳಿಸಬೇಕು ಎಂದು ಬೇರೆ ಶಾಲೆಗೆ ಕಳಿಸುತ್ತಿದ್ದಾರೆ’ ಎಂದು ಶಾಲೆಯ ಮುಖ್ಯ ಶಿಕ್ಷಕ ಸುರೇಶ್ ಬೇಸರ ವ್ಯಕ್ತಪಡಿಸಿದರು.

ಒಂದೇ ಕೊಠಡಿಯ‌ಲ್ಲಿ ಸಾಮಗ್ರಿ: 

ಶಾಲೆಯ ಪಾಠೋಪಕರಣಗಳು, ಪೀಠೋಪಕರಣಗಳು, ಅಡುಗೆ ಸಾಮಗ್ರಿ, ಪಾತ್ರೆ ಸೇರಿದಂತೆ ಇತರ ಸಾಮಗ್ರಿಗಳನ್ನು ಶಾಲೆಯಲ್ಲಿ ಜಾಗವಿಲ್ಲ. ಹಾಗಾಗಿ, ಮಕ್ಕಳಿಗೆ ತರಗತಿ ನಡೆಯುವ ಕೊಠಡಿಯಕ್ಕೇ ಎಲ್ಲವನ್ನೂ ಇಡಲಾಗಿದೆ. ತರಗತಿಗೆ ಸರಿಯಾದ ಗಾಳಿ–ಬೆಳಕು ಇಲ್ಲದಿರುವುದರಿಂದ ಹಗಲಲ್ಲೂ ಕತ್ತಲೆಯಲ್ಲಿ ಕುಳಿತ ಪಾಠ ಕೇಳಿದ ಅನುಭವವಾಗುತ್ತದೆ.

‘ಸರ್ಕಾರಿ ಅನಗತ್ಯ ಯೋಜನೆಗಳಿಗೆ ಹಣ ಖರ್ಚು ಮಾಡುತ್ತದೆ. ಮಕ್ಕಳ ಭವಿಷ್ಯ ರೂಪಿಸುವ ಶಾಲಾ ಕಟ್ಟಡವನ್ನು ಸದಾ ಸುಸ್ಥಿತಿಯಲ್ಲಿಟ್ಟು ಉತ್ತಮವಾಗಿ ನಿರ್ವಹಣೆ ಮಾಡುವತ್ತ ಗಮನ ಹರಿಸುವುದಿಲ್ಲ. ಶಾಲೆಗಳಿಗೆ ಬಂಡವಾಳ ಹಾಕಿದರೆ, ಭವಿಷ್ಯದಲ್ಲಿ ಉತ್ತಮ ಪ್ರಜೆಗಳನ್ನು ಸಮಾಜಕ್ಕೆ ಕೊಟ್ಟಂತಾಗುತ್ತದೆ. ಈ ಅರಿವು ಸರ್ಕಾರಕ್ಕೆ ಯಾವಾಗ ಬರುತ್ತದೊ’ ಎಂದು ಶಾಲೆಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಮುತ್ತುರಾಜು ಹೇಳಿದರು.

ಕೆಲ ವರ್ಷಗಳ ಹಿಂದೆ ಶಾಲೆಗೆ ಸೇರಿದ ಜಾಗವನ್ನು ಒತ್ತುವರಿ ಮಾಡಿಕೊಂಡು ದೇವಸ್ಥಾನ ನಿರ್ಮಿಸಲಾಗಿದೆ. ಮಕ್ಕಳು ಕಲಿಯುವ ಜಾಗದಲ್ಲಿ ದೇವಸ್ಥಾನ ನಿರ್ಮಾಣ ಸರಿಯಲ್ಲ. ಆದರೂ, ಕೆಲವರು ದೇವಸ್ಥಾನ ನಿರ್ಮಿಸಿದರು. ಇದನ್ನು ಶಿಕ್ಷಣ ಇಲಾಖೆಯವರಿಗಾಗಲೇ, ಸ್ಥಳೀಯ ಜನಪ್ರತಿನಿಧಿಗಳಿಗಾಗಲೀ ಕೇಳಿಲ್ಲ. ಶಾಲೆಯ ಬಗ್ಗೆ ಅವರಿಗಿರುವ ಕಾಳಜಿ ಎಂತಹದ್ದು ಎಂಬುದು ಇದರಲ್ಲೇ ಗೊತ್ತಾಗುತ್ತದೆ ಎಂದು ಹೆಸರು ಹೇಳಲಿಚ್ಛಿಸದ ಸ್ಥಳೀಯ ನಿವಾಸಿಯೊಬ್ಬರು ಬೇಸರ ತೋಡಿಕೊಂಡರು.

ಜೀವಕ್ಕೆ ಗ್ಯಾರಂಟಿ ಕೊಟ್ಟರೆ ಮಕ್ಕಳು ಬರುತ್ತಾರೆ? 

‘ಸರ್ಕಾರ ಉಚಿತ ಶಿಕ್ಷಣದ ಹೆಸರಿನಲ್ಲಿ ವಿದ್ಯಾರ್ಥಿಗಳಿಗೆ ಪುಸ್ತಕ ಸಮವಸ್ತ್ರ ಬಿಸಿಯೂಟ ಹಾಲು ಶೂ ಸಾಕ್ಸ್ ಸೇರಿದಂತೆ ಹಲವು ಸೌಲಭ್ಯಗಳನ್ನು ನೀಡುತ್ತಿದೆ. ಆದರೆ ಇವೆಲ್ಲವನ್ನೂ ಮೀರಿ ಮಕ್ಕಳ ಕಲಿಕೆಗೆ ಬೇಕಾದ ಸುಸಜ್ಜಿತ ಶಾಲಾ ಕಟ್ಟಡ ಮತ್ತು ಕಲಿಸಲು ಅಗತ್ಯ ಶಿಕ್ಷಕರನ್ನು ಒದಗಿಸಬೇಕಲ್ಲವೇ? ನಮ್ಮೂರಿನ ಶಾಲೆಯಲ್ಲಿ ಇವೆರಡೂ ಇಲ್ಲದಿರುವುದೇ ಶಾಲೆ ಈ ದುಃಸ್ಥಿತಿಗೆ ಬರಲು ಕಾರಣ. ಯಾವಾಗ ಈ ಕಟ್ಟಡ ಬೀಳುತ್ತದೊ ಎಂಬ ಆತಂಕದಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಭಯದಲ್ಲೇ ಕಟ್ಟಡದಲ್ಲಿ ಕಾಲ ಕಳೆಯಬೇಕಿದೆ’ ಎಂದು ಟಿ. ಹೊಸಳ್ಳಿಯ ಹಿರಿಯ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಮುತ್ತುರಾಜು ಆತಂಕ ವ್ಯಕ್ತಪಡಿಸಿದರು.

‘ಕಟ್ಟಡದ ಸ್ಥಿತಿ ಹೀಗಿರುವಾಗ ಪೋಷಕರು ಯಾವ ಧೈರ್ಯದ ಮೇಲೆ ಶಾಲೆ ಕಳಿಸುತ್ತಾರೆ? ಏನಾದರೂ ಅನಾಹುತವಾದರೆ ಯಾರು ಹೊಣೆ? ಗ್ರಾಮದ ಶಾಲೆಯನ್ನು ದುರಸ್ತಿ ಮಾಡುವ ಅಥವಾ ಹಳೆ ಕಟ್ಟಡ ಕೆಡವಿ ಹೊಸ ಕಟ್ಟಡ ನಿರ್ಮಿಸುವ ಕುರಿತು ಜನಪ್ರತಿನಿಧಿಗಳು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ಗಮನ ಹರಿಸಬೇಕು. ಇಲ್ಲದಿದ್ದರೆ ಮುಂದೊಂದು ದಿನ ಶಾಲಾ ದಾಖಲಾತಿ ಶೂನ್ಯಕ್ಕಿಳಿದು ಮುಚ್ಚುವ ಸ್ಥಿತಿ ಬರುತ್ತದೆ’ ಎಂದರು.

ಮಳೆಗೆ ಹಳ್ಳವಾಗುವ ಶಾಲೆಯಂಗಳ

ಮಳೆ ಬಂದಾಗಲೆಲ್ಲಾ ಟಿ. ಹೊಸಹಳ್ಳಿಯ ಶಾಲೆಯಂಗಳ ಹಳ್ಳವಾಗುತ್ತದೆ. ಸುತ್ತಮುತ್ತಲಿನ ನೀರು ಸೀದಾ ಶಾಲಾವರಣಕ್ಕೆ ನುಗ್ಗುತ್ತದೆ. ಜೋರು ಮಳೆ ಬಂದಾಗ ಶಾಲೆಯೊಳಕ್ಕೂ ನುಗ್ಗಿ ಅನಾಹುತ ಉಂಟುಮಾಡಿದೆ. ಆಗ ಮಕ್ಕಳು ನೀರು ಹಾಯ್ದುಕೊಂಡೇ ಹೋಗಬೇಕು. ನೀರು ನಿಲ್ಲದೆ ಸರಾಗವಾಗಿ ಹರಿದು ಹೋಗುವಂತೆ ಶಾಲೆಯ ಅಂಗಳವನ್ನು ಸಮತಟ್ಟು ಮಾಡಬೇಕಿದೆ. ಶಾಲೆಯ ಅಭಿವೃದ್ಧಿ ಮಾಡುವಂತೆ ಶಾಲೆಯ ಮುಖ್ಯ ಶಿಕ್ಷಕರು ಗ್ರಾಮ ಪಂಚಾಯಿತಿ ಹಾಗೂ ಶಿಕ್ಷಣ ಇಲಾಖೆಗೆ ಹಲವು ಬಾರಿ ಮನವಿ ಮಾಡಿದ್ದೇವೆ. ಶಿಥಿಲಗೊಂಡಿರುವ ಕೊಠಡಿಗಳನ್ನು ದುರಸ್ತಿ ಮಾಡಿಸಬೇಕು. ಹೆಂಚುಗಳನ್ನು ತೆಗೆದು ಬೇರೆ ಹೆಂಚು ಹಾಕಬೇಕು ಎಂದು ಅರ್ಜಿ ಕೊಡಲಾಗಿದೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ. ಮನವಿ ಪತ್ರಗಳು ಮತ್ತು ಅರ್ಜಿಗಳನ್ನು ಪಡೆದ ಅಧಿಕಾರಿಗಳು ಮತ್ತೆ ಶಾಲೆಯತ್ತ ತಿರುಗಿ ನೋಡಿಲ್ಲ. ಅವರಿಗೆ ನಮ್ಮೂರ ಶಾಲೆ ಉಳಿಸುವ ಮನಸ್ಸಿಲ್ಲ ಎನಿಸುತ್ತದೆ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದರು.

ಮುಚ್ಚುವ ಹಂತಕ್ಕೆ ಬಂದಿರುವ ಶಾಲೆಯನ್ನು ಉಳಿಸುವ ಪ್ರಯತ್ನಕ್ಕೆ ಇಲ್ಲಿ ಓದಿದ ಹಳೆ ವಿದ್ಯಾರ್ಥಿಗಳು ಸಹ ಕೈ ಜೋಡಿಸಿದ್ದಾರೆ. ಶಿಕ್ಷಣ ಇಲಾಖೆ ಶಾಲೆಯತ್ತ ಗಮನ ಹರಿಸಬೇಕು.
ಗೌರಮ್ಮ, ಉಪಾಧ್ಯಕ್ಷೆ, ಎಸ್‌ಡಿಎಂಸಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಟಿ. ಹೊಸಹಳ್ಳಿ
ಶಿಥಿಲವಾಗಿರುವ ಶಾಲೆಯ ಸ್ಥಿತಿಯನ್ನು ದುರಸ್ತಿ ಮಾಡುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಅನುದಾನ ಬಂದ ಬಳಿಕ ದುರಸ್ತಿ ಮಾಡೋಣ ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.
ಸುರೇಶ್, ಮುಖ್ಯ ಶಿಕ್ಷಕ, ಟಿ. ಹೊಸಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಟಿ. ಹೊಸಹಳ್ಳಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಬಗ್ಗೆ ಮಾಹಿತಿ ಪಡೆದು ಮುಂದಿನ ದಿನಗಳಲ್ಲಿ ದುರಸ್ತಿ ಅಥವಾ ಹೊಸ ಕೊಠಡಿ ನಿರ್ಮಾಣ ಮಾಡುವುದಕ್ಕೆ ಕ್ರಮ ತೆಗೆದುಕೊಳ್ಳಲಾಗುವುದು.
ಜೆ.ಬಿ. ರಾಮಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಕನಕಪುರ
ಹಾರೋಹಳ್ಳಿ ತಾಲ್ಲೂಕಿನ ಟಿ. ಹೊಸಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಯ ಹೆಂಚುಗಳು ಹಾಳಾಗಿ ಗೋಡೆ ಶಿಥಿಲವಾಗಿರುವುದು
ಹಾರೋಹಳ್ಳಿ ತಾಲ್ಲೂಕಿನ ಟಿ. ಹೊಸಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಯ ಹೆಂಚುಗಳು ಹಾಳಾಗಿ ಗೋಡೆ ಶಿಥಿಲವಾಗಿರುವುದು
ಹಾರೋಹಳ್ಳಿ ತಾಲ್ಲೂಕಿನ ಟಿ. ಹೊಸಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ತರಗತಿಯ ಸ್ಥಿತಿ
ಹಾರೋಹಳ್ಳಿ ತಾಲ್ಲೂಕಿನ ಟಿ. ಹೊಸಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ತರಗತಿಯ ಸ್ಥಿತಿ
ಶಾಲೆಯಲ್ಲಿ ಸ್ಥಳಾವಕಾಶವಿಲ್ಲದೆ ಒಂದೇ ಕೊಠಡಿಯಲ್ಲಿ ವಿವಿಧ ಸಾಮಗ್ರಿಗಳನ್ನು ಇಟ್ಟಿರುವುದು
ಶಾಲೆಯಲ್ಲಿ ಸ್ಥಳಾವಕಾಶವಿಲ್ಲದೆ ಒಂದೇ ಕೊಠಡಿಯಲ್ಲಿ ವಿವಿಧ ಸಾಮಗ್ರಿಗಳನ್ನು ಇಟ್ಟಿರುವುದು
ಶಾಲೆಯ ಗೋಡೆ ಕಿತ್ತು ಹೋಗಿ ಕಾಂಕ್ರೀಟ್ ಉದುರಿರುವುದು
ಶಾಲೆಯ ಗೋಡೆ ಕಿತ್ತು ಹೋಗಿ ಕಾಂಕ್ರೀಟ್ ಉದುರಿರುವುದು
ಮಳೆ ಬಂದರೆ ಜಲಾವೃತಗೊಳ್ಳುವ ಶಾಲೆಯ ಅಂಗಳ
ಮಳೆ ಬಂದರೆ ಜಲಾವೃತಗೊಳ್ಳುವ ಶಾಲೆಯ ಅಂಗಳ
ಹಾರೋಹಳ್ಳಿ ತಾಲ್ಲೂಕಿನ ಟಿ. ಹೊಸಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಚಾವಣಿ ಶಿಥಿಲಗೊಂಡು ಅಲ್ಲಲ್ಲಿ ಬಿರುಕು ಬಿಟ್ಟಿರುವುದು
ಹಾರೋಹಳ್ಳಿ ತಾಲ್ಲೂಕಿನ ಟಿ. ಹೊಸಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಚಾವಣಿ ಶಿಥಿಲಗೊಂಡು ಅಲ್ಲಲ್ಲಿ ಬಿರುಕು ಬಿಟ್ಟಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT