ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೂವರು ಕಳ್ಳರ ಬಂಧನ; ₹22.80 ಲಕ್ಷ ಮೌಲ್ಯದ ವಸ್ತು ಜಪ್ತಿ

ಸುಲಿಗೆ, ಮನೆಗಳ್ಳತನ ಸೇರಿ 5 ಪ್ರಕರಣ ಬೇಧಿಸಿದ ಕುಂಬಳಗೋಡು ಪೊಲೀಸರು
Published 30 ಮೇ 2024, 7:18 IST
Last Updated 30 ಮೇ 2024, 7:18 IST
ಅಕ್ಷರ ಗಾತ್ರ

ರಾಮನಗರ: ಮೂವರು ಅಂತರರಾಜ್ಯ ಕಳ್ಳರನ್ನು ಬಂಧಿಸಿರುವ ತಾಲ್ಲೂಕಿನ ಕುಂಬಳಗೋಡು ಠಾಣೆ ಪೊಲೀಸರು, ಇತ್ತೀಚೆಗೆ ದಾಖಲಾಗಿದ್ದ ಸುಲಿಗೆ ಮತ್ತು ಮನೆಗಳ್ಳತನಕ್ಕೆ ಸಂಬಂಧಿಸಿದ 5 ಪ್ರಕರಣಗಳನ್ನು ಬೇಧಿಸಿದ್ದಾರೆ. ಆರೋಪಿಗಳಿಂದ ಚಿನ್ನ–ಬೆಳ್ಳಿ ಆಭರಣ, ಲ್ಯಾಪ್‌ಟಾಪ್ ಸೇರಿದಂತೆ ₹22.80 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

ಮಾಗಡಿ ತಾಲ್ಲೂಕಿನ ನಾರಸಂದ್ರ ಹೋಬಳಿಯ ಮುತ್ತಯ್ಯನಪಾಳ್ಯ ಗ್ರಾಮದ ಉದಯ್ ಎಂ.ಆರ್ (35), ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಚಿಲಕನೇರ್ಪು ಹೋಬಳಿಯ ಕದಿರೇನಹಳ್ಳಿಯ ಪ್ರತಾಪ್ ಕೆ.ಆರ್ (24) ಹಾಗೂ ತಮಿಳುನಾಡಿನ ತಿರುಚಿನಾಪಳ್ಳಿ ಜಿಲ್ಲೆಯ ರಾಮ್‌ಜಿ ನಗರ ಮೂಲದ, ಸದ್ಯ ಬೆಂಗಳೂರು ದಕ್ಷಿಣ ತಾಲ್ಲೂಕಿನ ಮದನಘಟ್ಟ ವಾಸಿಯಾದ ಧನಗೋಪಾಲ್ ಕೆ. (46) ಬಂಧಿತರು.

ಆರೋಪಿಗಳು ಅಪರಾಧವನ್ನೇ ವೃತ್ತಿಯನ್ನಾಗಿ ಮಾಡಿಕೊಂಡಿದ್ದರು. ಇವರ ಬಂಧನದಿಂದಾಗಿ ಕುಂಬಳಗೋಡಿನಲ್ಲಿ ದಾಖಲಾಗಿದ್ದ 4 ಮತ್ತು ಮೈಸೂರು ದಕ್ಷಿಣ ಠಾಣೆಯಲ್ಲಿ ದಾಖಲಾಗಿದ್ದ ಒಂದು ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿಗಳ ಪೈಕಿ ಉದಯ್ ಆಟೊ ಚಾಲನೆ ಮಾಡಿಕೊಂಡಿದ್ದ. ಉಳಿದಿಬ್ಬರು ಕೂಲಿ ಕಾರ್ಮಿಕರಾಗಿ ಕೆಲಸ ಮಾಡಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದರು.

ಡ್ರಿಲ್ಲಿಂಗ್ ಯಂತ್ರ ಬಳಕೆ: ಯಾವುದಾದರೂ ಮನೆಗೆ ಎರಡ್ಮೂರು ದಿನಗಳಿಂದ ಬೀಗ ಹಾಕಿದ್ದರೆ, ಆರೋಪಿಗಳು ಅಂತಹ ಮನೆಗಳನ್ನೇ ಗುರಿಯಾಗಿಟ್ಟುಕೊಂಡು ಕಳ್ಳತನ ಮಾಡುತ್ತಿದ್ದರು. ಮಧ್ಯರಾತ್ರಿ ಅಥವಾ ನಸುಕಿನಲ್ಲಿ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಆರೋಪಿಗಳು ಏರ್‌ಗನ್ ಮತ್ತು ಡ್ರಿಲ್ಲಿಂಗ್ ಯಂತ್ರ ಬಳಸಿ ಮನೆ ಬೀಗ ಮುರಿದು ಒಳನುಗ್ಗಿ ಕೃತ್ಯ ಎಸಗುತ್ತಿದ್ದರು ಎಂದು ಹೇಳಿದರು.

ಘಟನಾ ಸ್ಥಳ ಹಾಗೂ ಸುತ್ತಮುತ್ತ ಸಿಕ್ಕ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಸೇರಿದಂತೆ, ಇತರ ಮೂಲಗಳ ಖಚಿತ ಮಾಹಿತಿ ಮೇರೆಗೆ ಆರೋಪಿಗಳನ್ನು ಬಂಧಿಸಿ, ಚಿನ್ನಾಭರಣ ಸೇರಿದಂತೆ ಇತರ ವಸ್ತುಗಳನ್ನು ಜಪ್ತಿ ಮಾಡಲಾಯಿತು. ಸದ್ಯ ಮೂವರೂ ನ್ಯಾಯಾಂಗ ಬಂಧನದಲ್ಲಿದ್ದಾರೆ ಎಂದು ಮಾಹಿತಿ ನೀಡಿದರು.

ಎಸ್‌ಪಿ ಕಾರ್ತಿಕ್ ರೆಡ್ಡಿ, ಎಎಸ್‌ಪಿಗಳಾದ ಟಿ.ವಿ. ಸುರೇಶ್, ರಾಮಚಂದ್ರಯ್ಯ ಎನ್.ಎಚ್ ಹಾಗೂ ಡಿವೈಎಸ್ಪಿ ಪ್ರವೀಣ್ ಎಂ. ಮಾರ್ಗದರ್ಶನದಲ್ಲಿ ಕುಂಬಳಗೋಡು ಇನ್‌ಸ್ಪೆಕ್ಟರ್ ಮಂಜುನಾಥ್ ಜಿ. ಹೂಗಾರ್ ನೇತೃತ್ವದಲ್ಲಿ ಪಿಎಸ್‌ಐಗಳಾದ ಭೀಮೇಶಯ್ಯ, ಪುರಂದರ್, ಹೆಡ್ ಕಾನ್‌ಸ್ಟೆಬಲ್‌ಗಳಾದ ಅಜೀಮುದ್ದೀನ್, ಲೋಕೇಶ್, ಮಂಜುನಾಥ್, ಕಾನ್‌ಸ್ಟೆಬಲ್‌ಗಳಾದ ಪುನೀತ್, ಕೆಂಪಣ್ಣ ಸ್ವಾಮಿ, ಶರಣಬಸವ ಹಾಗೂ ಬಸವರಾಜು ಅವರನ್ನೊಳಗೊಂಡ ತಂಡ ಆರೋಪಿಗಳನ್ನು ಬಂಧಿಸಿದೆ.

₹22.80 ಲಕ್ಷ ವಸ್ತುಗಳು ವಶಕ್ಕೆ

ಐದೂ ಪ್ರಕರಣಗಳಿಂದ ಒಟ್ಟು ₹22.80 ಲಕ್ಷ ವಸ್ತುಗಳು ವಶಕ್ಕೆ ಪಡೆಯಲಾಗಿದೆ. ಈ ಪೈಕಿ ಕುಂಬಳಗೋಡಿನ ಮೊದಲ ಪ್ರಕರಣದಲ್ಲಿ ₹60 ಸಾವಿರ ಮೌಲ್ಯದ 9.50 ಗ್ರಾಂ ಚಿನ್ನದ ಗಟ್ಟಿ 2ನೇ ಪ್ರಕರಣದಲ್ಲಿ ₹3.30 ಲಕ್ಷದ 55 ಗ್ರಾಂ ಚಿನ್ನಾಭರಣ 3ನೇ ಪ್ರಕರಣದಲ್ಲಿ ₹16.50 ಲಕ್ಷ ಮೌಲ್ಯದ 275.05 ಗ್ರಾಂ ಒಡವೆ 4ನೇ ಪ್ರಕರಣದಲ್ಲಿ ₹2 ಲಕ್ಷ ಮೌಲ್ಯದ 2 ಕೆ.ಜಿ ಬೆಳ್ಳಿ ಒಡವೆ ಮೈಸೂರು ದಕ್ಷಿಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದ್ದ 5ನೇ ಪ್ರಕರಣದಲ್ಲಿ ₹40 ಸಾವಿರ ಮೌಲ್ಯದ ಲ್ಯಾಪ್‌ಟಾಪ್ ಮತ್ತು 2 ಬೆಳ್ಳಿ ದೀಪ ವಶ ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ ಬೈಕ್ ಏರ್‌ಗನ್ ಮತ್ತು ಡ್ರಿಲ್ಲಿಂಗ್ ಯಂತ್ರವನ್ನು ವಶಪಡಿಸಿಕೊಳ್ಳಲಾಗಿದೆ. ಕಳ್ಳತನವೇ ಕಸುಬು ಬಂಧಿತ ಮೂವರು ಆರೋಪಿಗಳ ಪೈಕಿ ತಮಿಳುನಾಡಿನ ಧನಗೋಪಾಲ್ ಅವರ ಇಡೀ ಕುಟುಂಬವೇ ಅಪರಾಧ ಹಿನ್ನೆಲೆಯನ್ನು ಹೊಂದಿದ್ದು ಕಳ್ಳತನವೇ ಅವರ ಕಸುಬಾಗಿದೆ. ತಮಿಳುನಾಡು ಮತ್ತು ಕರ್ನಾಟಕದಲ್ಲಿ ಕಳೆದ 20 ವರ್ಷಗಳಿಂದ ಈತ ಕೃತ್ಯಗಳನ್ನು ಎಸಗುತ್ತಾ ಬಂದಿದ್ದಾನೆ. ಇವರ ಬಂಧನದಿಂದ ಸುಲಿಗೆ ಮತ್ತು ಮನೆಗಳ್ಳತನದ 5 ಪ್ರಕರಣಗಳು ಗೊತ್ತಾಗಿದ್ದು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT