ಡೇರಿಯ ಸದಸ್ಯರಲ್ಲದವರು ಹಾಲು ಒಕ್ಕೂಟಕ್ಕೆ ಆಯ್ಕೆ

ಶನಿವಾರ, ಮೇ 25, 2019
23 °C
ಸಹಕಾರಿ ಧುರೀಣ ಪಾಪರಂಗಯ್ಯನ ಪಾಳ್ಯದ ಬೋರ್‌ವೆಲ್‌ ನರಸಿಂಹಯ್ಯ ಆರೋಪ

ಡೇರಿಯ ಸದಸ್ಯರಲ್ಲದವರು ಹಾಲು ಒಕ್ಕೂಟಕ್ಕೆ ಆಯ್ಕೆ

Published:
Updated:
Prajavani

ಮಾಗಡಿ: ‘ಬೆಂಗಳೂರು ಹಾಲು ಒಕ್ಕೂಟ ನಿರ್ದೇಶಕರ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಎಂಪಿಸಿಎಸ್‌ ಅಧ್ಯಕ್ಷರಿಗೆ ಚಿನ್ನದ ಸರ, ಬೆಳ್ಳಿನಾಣ್ಯದ ಜತೆಗೆ ₹ 60 ಸಾವಿರ ಹಣ ನೀಡಿ, ಧರ್ಮಸ್ಥಳಕ್ಕೆ ಕರೆದೊಯ್ದು ದೇವರ ಮುಂದೆ ಪ್ರಮಾಣ ಮಾಡಿಸಿ ಮತ ಪಡೆದಿರುವುದು ಸತ್ಯ’ ಎಂದು ಸಹಕಾರಿ ಧುರೀಣ ಪಾಪರಂಗಯ್ಯನ ಪಾಳ್ಯದ ಬೋರ್‌ವೆಲ್‌ ನರಸಿಂಹಯ್ಯ ಆರೋಪಿಸಿದರು.

ಪಟ್ಟಣದ ಜೆಡಿಎಸ್‌ ಕಚೇರಿಯಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕರಾಗಿ ಆಯ್ಕೆಯಾಗಿರುವ ಕೆಇಬಿ ರಾಜಣ್ಣ ಮತ್ತು ನರಸಿಂಹಮೂರ್ತಿ ಡೇರಿಯ ಸದಸ್ಯರಲ್ಲ. ಡೇರಿಗೆ ಹಾಲು ಹಾಕುವವರು ಮಾತ್ರ ಚುನಾವಣೆಗೆ ಸ್ಪರ್ಧಿಸಬೇಕು ಎಂಬ ನಿಯಮವನ್ನು ಅವರು ಉಲ್ಲಂಘನೆ ಮಾಡಿದ್ದಾರೆ. ಹಣ ನೀಡಿ ಮತ ಪಡೆದಿರುವ ಬಗ್ಗೆ ಪ್ರಾಮಾಣಿಕವಾಗಿ ತನಿಖೆ ನಡೆಯಬೇಕು. ಎಂಪಿಸಿಎಸ್‌ ಅಧ್ಯಕ್ಷರನ್ನು ಧರ್ಮಸ್ಥಳಕ್ಕೆ ಕರೆದೊಯ್ದ ಶಿವಪ್ರಸಾದ್‌ ಬಗ್ಗೆ ತನಿಖೆಯಾಗಲಿ’ ಎಂದು ಹೇಳಿದರು.

‘ನರಸಿಂಹಮೂರ್ತಿ ಅವರ ಮಗನ ವಿರುದ್ಧದ ಅತ್ಯಾಚಾರ ಪ್ರಕರಣದಲ್ಲಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಕೃಷ್ಣಮೂರ್ತಿ ಅವರಿಂದ ಸಹಾಯ ಪಡೆದಿದ್ದಾರೆ. ಈಗ ಅವರ ಬಗ್ಗೆ ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಲಿ. ಹಾಲು ಉತ್ಪಾದಕ ಸಹಕಾರ ಸಂಘಗಳು ಖಾಸಗಿ ಆಸ್ತಿಯ‌ಲ್ಲ. ಶಾಸಕ ಎ.ಮಂಜುನಾಥ ಕ್ಷಮೆ ಕೇಳುವ ಪ್ರಮೇಯ ಇಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜೆಡಿಎಸ್‌ ಮುಖಂಡ ತಿಪ್ಪಸಂದ್ರದ ವೆಂಕಟೇಶ್‌ ಮಾತನಾಡಿ ‘ಹಾಲು ಒಕ್ಕೂಟದ ನಿರ್ದೇಶಕರಾಗಿದ್ದ ಎಲ್‌.ಎಸ್‌.ಪರಶಿವಮೂರ್ತಿ ಅಧಿಕಾರದ ಅವಧಿಯಲ್ಲಿ ಸೋಲೂರು ಶೀತಲೀಕರಣ ಘಟಕ ಆರಂಬಿಸಿದ್ದರು. 5 ಬಾರಿ ನಿರ್ದೇಶಕರಾಗಿರುವ ನರಸಿಂಹಮೂರ್ತಿ ಹಣ ಗಳಿಸಿದ್ದು ಬಿಟ್ಟರೆ ಹಾಲು ಒಕ್ಕೂಟದ ಅಭಿವೃದ್ಧಿಗೆ ಏನೂ ಮಾಡಲಿಲ್ಲ. ಸಹಕಾರಿ ಧುರೀಣ ಕೆ.ಕೃಷ್ಣಮೂರ್ತಿ ಅವರಿಂದ ಸಂಕಟದಲ್ಲಿ ಸಹಾಯ ಪಡೆದು, ಸೋತಾಗ ತೇಜೋವಧೆ ಮಾಡುವುದು ಸರಿಯಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಬಿಡಿಸಿಸಿ ಬ್ಯಾಂಕ್‌ ಹಗರಣದಲ್ಲಿ ಸಿಲುಕಿ ವಜಾಗೊಂಡಿರುವ ಎಚ್‌.ಎನ್‌.ಅಶೋಕ್‌ ಅವರ ಮೇಲಿನ ಅಕ್ರಮಗಳ ತನಿಖೆಯಾಗಬೇಕು. ಎಂಪಿಸಿಎಸ್‌ ಅಧ್ಯಕ್ಷರನ್ನು ಹಣಕೊಟ್ಟು ಖರೀದಿಸಿಲ್ಲ ಎಂದು ಕಾಂಗ್ರೆಸ್‌ ಪಕ್ಷದ ಶಿವಪ್ರಕಾಶ್‌ ಪ್ರಮಾಣ ಮಾಡಲಿ. ತಾನೆ ಕಳ್ಳ ಪರರನ್ನು ನಂಬ ಎಂಬಂತಾಗಿದೆ ಅವರ ಸ್ಥಿತಿ’ ಎಂದು ಜೆಡಿಎಸ್‌ ಮುಖಂಡ ಐಯ್ಯಂಡಹಳ್ಳಿ ರಂಗಸ್ವಾಮಿ ಟೀಕಿಸಿದರು.

ಜೆಡಿಎಸ್‌ ಮುಖಂಡರಾದ ಕಲ್ಕೆರೆ ಶಿವಣ್ಣ, ಕುದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಘವೇಂದ್ರ. ತಾಲ್ಲೂಕು ಪಂಚಾಯಿತಿ ಸದಸ್ಯ ನರಸಿಂಹಮೂರ್ತಿ, ಹನುಮಾಪುರದ ಚಿಕ್ಕಣ್ಣ, ಸಾಗರ್‌ಗೌಡ, ಶಿವರಾಮಯ್ಯ , ಕುದೂರಿನ ಪುರುಷೋತ್ತಮ್‌, ಸಿಡಗನಹಳ್ಳಿ ವೆಂಕಟೇಶ್‌, ರೂಪೇಶ್‌, ಮುನಿಕೃಷ್ಣ, ರಹಮತ್‌ ಉಲ್ಲಾ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !