ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಮನಗರ: ಚಿಕನ್‌ಗಿಂತಲೂ ದುಬಾರಿಯಾದ ಬೀನ್ಸ್!

ಗಗನಕ್ಕೇರಿದ ತರಕಾರಿ ದರ; ಬೀನ್ಸ್‌ ಕೆ.ಜಿ.ಗೆ ₹200, ಮೆಂತ್ಯೆ ಕಟ್ಟಿಗೆ ₹100
Published 29 ಮೇ 2024, 6:57 IST
Last Updated 29 ಮೇ 2024, 6:57 IST
ಅಕ್ಷರ ಗಾತ್ರ

ರಾಮನಗರ: ಬರದಿಂದಾಗಿ ಗಗನಮುಖಿಯಾಗಿದ್ದ ತರಕಾರಿಗಳ ದರ ಇಳಿಕೆಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಅದರಲ್ಲೂ ಬೀನ್ಸ್ ದರ ಏರುಗತಿಯಲ್ಲೇ ಸಾಗುತ್ತಿದ್ದು, ಚಿಕನ್‌ಗಿಂತಲೂ ದುಬಾರಿಯಾಗಿದೆ. ಹೌದು, ಮಾರುಕಟ್ಟೆಯಲ್ಲಿ ಇದೀಗ ಬೀನ್ಸ್ ಪ್ರತಿ ಕೆ.ಜಿ.ಗೆ ₹200 ದಾಟಿದೆ. ಅದೇ ಕೋಳಿ ಮಾಂಸದ ದರ ಬಾಯ್ಲರ್ ಪ್ರತಿ ಕೆ.ಜಿ.ಗೆ ₹175–₹180 ಇದ್ದರೆ, ಫಾರಂ ಕೋಳಿ ಕೆ.ಜಿ.ಗೆ ₹145. ಇತರ ತರಕಾರಿಗಳು ದರವೂ ಶತಕ ಮತ್ತು ಅರ್ಧ ಶತಕದ ಗಡಿ ದಾಟಿವೆ.

ಬಿಸಿಲ ಬೇಗೆಯಿಂದಾಗಿ ಗಗನಮುಖಿಯಾಗಿದ್ದ ದರವು, ಕೆಲ ದಿನಗಳಿಂದ ಸುರಿದ ಮಳೆ ಬೆನ್ನಲ್ಲೇ ಮತ್ತಷ್ಟು ತುಟ್ಟಿಯಾಗಿದೆ. ತರಕಾರಿಗಳಷ್ಟೇ ಅಲ್ಲದೆ, ಸೊಪ್ಪುಗಳ ಬೆಲೆಯೂ ದುಬಾರಿಯಾಗಿದ್ದು ಗ್ರಾಹಕನ ಜೇಬಿಗೆ ಬರೆ ಬಿದ್ದಿದೆ. ತರಕಾರಿಗಳಲ್ಲೇ ಬೀನ್ಸ್‌ ದರದಲ್ಲಿ ಭಾರಿ ಹೆಚ್ಚಳವಾಗಿದ್ದು, ಎರಡ್ಮೂರು ತಿಂಗಳಿಂದ ₹150ರಿಂದ ಕೆಳಕ್ಕಿಳಿದಿಲ್ಲ.

ಕಳೆದ ವಾರ ಪ್ರತಿ ಕೆ.ಜಿ.ಗೆ ₹180 ಇದ್ದ ಬೀನ್ಸ್, ಇದೀಗ ₹200–₹220ಕ್ಕೆ ಏರಿಕೆಯಾಗಿದೆ. ಮಳೆ ಕೊರತೆ ಕಾರಣದಿಂದಾಗಿ ತರಕಾರಿ ಬೆಳೆಯುವವರ ಸಂಖ್ಯೆ ಕಡಿಮೆಯಾಗಿರುವುದರಿಂದ ಪೂರೈಕೆಯಲ್ಲಿ ಕೊರತೆಯಾಗಿದೆ. ಇದರಿಂದಾಗಿ ಹಲವು ತರಕಾರಿಗಳ ದರ ಪ್ರತಿ ಕೆ.ಜಿ.ಗೆ ₹50ರಿಂದ ₹100ರ ನೂರರ ಗಡಿ ದಾಟಿದೆ. ತರಕಾರಿ ದರ ಕೇಳಿ ಗ್ರಾಹಕರು ಹುಬ್ಬೇರಿಸುವ ಸ್ಥಿತಿ ಬಂದಿದೆ.

‘ಬೀನ್ಸ್ ದರ ತೀವ್ರ ಹೆಚ್ಚಳವಾಗಿದೆ ಎಂಬ ಕಾರಣಕ್ಕೆ ಸಾಮಾನ್ಯ ಗ್ರಾಹಕರು ಬೀನ್ಸ್‌ ಖರೀದಿಸುವುದನ್ನೇ ನಿಲ್ಲಿಸಿದ್ದಾರೆ. ಹೋಟೆಲ್‌ನವರು, ಶುಭ–ಸಮಾರಂಭ, ಜಾತ್ರೆಯಂತ ಕಾರ್ಯಕ್ರಮಗಳನ್ನು ಮಾಡುವವರು ಮಾತ್ರ ಹೆಚ್ಚಾಗಿ ಖರೀದಿಸುತ್ತಾರೆ. ಅಂತಹವರು ಮುಂಚೆಯೇ ಆರ್ಡರ್ ಕೊಟ್ಟಿದ್ದರೆ ಮಾತ್ರ ತರಿಸಿ ಕೊಡುತ್ತೇವೆ. ಹಾಗಾಗಿ, ಕೆಲ ವ್ಯಾಪಾರಿಗಳು ಬೀನ್ಸ್ ಮಾರುವುದನ್ನೇ ನಿಲ್ಲಿಸಿದ್ದೇವೆ’ ಎಂದು ಬೀದಿ ವ್ಯಾಪಾರಿಯೊಬ್ಬರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ದುಬಾರಿಯಾದ ಸೊಪ್ಪು: ದುಬಾರಿ ತರಕಾರಿಗಳ ಬದಲು ಸೊಪ್ಪನ್ನಾದರೂ ಖರೀದಿಸೋಣ ಎಂದು ಗ್ರಾಹಕರು, ಸೊಪ್ಪುಗಳ ದರ ವಿಚಾರಿಸಿದರೂ ಅಲ್ಲೂ ಶಾಕ್ ಆಗುವುದು ತಪ್ಪದು. ಯಾಕೆಂದರೆ, ಅವುಗಳ ದರ ಸಹ ಏರಿಕೆಯಾಗಿದೆ. ಕಳೆದ ವಾರ ಒಂದು ಕಟ್ಟಿಗೆ ₹80 ಇದ್ದ ಮೆಂತ್ಯೆ ಸೊಪ್ಪು ಈ ವಾರ ₹100ಕ್ಕೆ ಏರಿಕೆಯಾಗಿದೆ. ಸಬ್ಬಸ್ಸಿಗೆ ₹40ರಿಂದ ₹60ಕ್ಕೆ ತಲುಪಿದೆ. ಇತರ ಸೊಪ್ಪುಗಳು ಸಹ ದುಬಾರಿಯಾಗಿವೆ.

ಇನ್ನು ಉಪಾಹಾರ, ಮಾಂಸದ ಸಾರಿಗೆ ಅಗತ್ಯವಾದ ಕೊತಂಬರಿ ಸೊಪ್ಪು ₹60ರಿಂದ ₹70ಕ್ಕೆ ತಲುಪಿದೆ. ಕೆಲ ವಾರಗಳಿಂದ ಕೊತಂಬರಿ ದರ ₹50ಕ್ಕಿಂತ ಮೇಲೆಯೇ ಇದೆ. ಪುದಿನಾ ದರ ಮಾತ್ರ ₹10ರಿಂದ ₹15 ಆಸುಪಾಸಿನಲ್ಲಿದೆ.

ರಾಮನಗರದ ಮಾರುಕಟ್ಟೆಯಲ್ಲಿ ತರಕಾರಿ ಖರೀದಿಯಲ್ಲಿ ತೊಡಗಿದ್ದ ಗ್ರಾಹಕರು
ರಾಮನಗರದ ಮಾರುಕಟ್ಟೆಯಲ್ಲಿ ತರಕಾರಿ ಖರೀದಿಯಲ್ಲಿ ತೊಡಗಿದ್ದ ಗ್ರಾಹಕರು
ರಾಮನಗರದ ಹಳೇ ಬಸ್ ನಿಲ್ದಾಣ ವೃತ್ತದ ಬಳಿ ತಳ್ಳುಗಾಡಿಯಲ್ಲಿ ಸೊಪ್ಪು ಮಾರಾಟದಲ್ಲಿ ತೊಡಗಿದ್ದ ಮಹಿಳೆ
ರಾಮನಗರದ ಹಳೇ ಬಸ್ ನಿಲ್ದಾಣ ವೃತ್ತದ ಬಳಿ ತಳ್ಳುಗಾಡಿಯಲ್ಲಿ ಸೊಪ್ಪು ಮಾರಾಟದಲ್ಲಿ ತೊಡಗಿದ್ದ ಮಹಿಳೆ

ಮಳೆ ಕೊರತೆ ಕಾರಣಕ್ಕೆ ತಿಂಗಳುಗಳ ಹಿಂದೆ ತರಕಾರಿ ದರ ಏರಿಕೆಯಾಗಿತ್ತು. ಇದೀಗ ಕೆಲ ದಿನಗಳಿಂದ ಸುರಿದ ಮಳೆಯಿಂದಾಗಿ ತರಕಾರಿ ಬೆಳೆಗಳು ಹಾನಿಯಾಗಿವೆ. ಹಾಗಾಗಿ ತರಕಾರಿ ದರ ಮತ್ತೆ ದುಬಾರಿಯಾಗಿದೆ

– ಮೊಹಮ್ಮದ್ ಶಫಿ ತರಕಾರಿ ವ್ಯಾಪಾರಿ ರಾಮನಗರ

‘ದರ ಕೇಳಿದರೆ ತಲೆ ತಿರುಗುತ್ತದೆ’

‘ಮಾರುಕಟ್ಟೆಯಿಂದ ವಾರಕ್ಕಾಗುವಷ್ಟೇ ತರಕಾರಿ ತರಬೇಕಾದರೆ ಕನಿಷ್ಠ ₹800–₹1000 ಬೇಕು. ತರಕಾರಿಗಳ ದರವನ್ನು ಕೇಳಿದರೆ ತಲೆ ತಿರುಗಿದಂತಾಗುತ್ತದೆ. ಬೀನ್ಸ್ ಖರೀದಿ ಮಾಡುವ ಬದಲು ಕೋಳಿ ಮಾಂಸ ತೆಗೆದುಕೊಂಡು ಹೋಗುವುದೇ ವಾಸಿ ಎನಿಸುತ್ತದೆ. ಆದರೂ ವಿಧಿ ಇಲ್ಲದೆ ತರಕಾರಿ ಖರೀದಿಸಬೇಕಾದ ಅನಿವಾರ್ಯತೆ ಇದೆ’ ಎಂದು ಗ್ರಾಹಕ ವಿಜಯಕುಮಾರ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು. ‘ದರ ಏರಿಕೆಯ ಹೊರೆಯಿಂದಾಗಿ ಒಂದು ಕೆ.ಜಿ ತರಕಾರಿ ತೆಗೆದುಕೊಳ್ಳುವ ಬದಲು ಅರ್ಧ ಮತ್ತು ಕಾಲು ಕೆ.ಜಿ. ತೆಗೆದುಕೊಳ್ಳುವ ಹಂತಕ್ಕೆ ಬಂದಿದ್ದೇವೆ. ಎಲ್ಲರಿಗೂ ಒಂದು ಕಾಲವೆಂಬಂತೆ ತರಕಾರಿ ಬೆಳೆಗಾರರಿಗೂ ಇದೊಂದು ರೀತಿಯ ಸುಗ್ಗಿ ಎನ್ನಬಹುದು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT