ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಲುಷಿತ ನೀರಿನ ಆತಂಕ: 5,240 ಕಡೆ ನೀರಿನ ಮಾದರಿ ಸಂಗ್ರಹ

ನೀರಿನ ಮೇಲೆ ಆರೋಗ್ಯ ಇಲಾಖೆ ನಿಗಾ, ಜಿಲ್ಲೆಯಾದ್ಯಂತ ನೀರಿನ ‍ಪರೀಕ್ಷೆ
Published 18 ಜೂನ್ 2024, 5:16 IST
Last Updated 18 ಜೂನ್ 2024, 5:16 IST
ಅಕ್ಷರ ಗಾತ್ರ

ರಾಮನಗರ: ತುಮಕೂರಿನಲ್ಲಿ ಕಲುಷಿತ ನೀರು ಕುಡಿದು ಆರು ಮಂದಿ ಮೃತಪಟ್ಟ ಬೆನ್ನಲ್ಲೇ, ಜಿಲ್ಲೆಯಲ್ಲೂ ಕುಡಿಯುವ ನೀರಿನ ಮೇಲೆ ನಿಗಾ ಇಡಲಾಗಿದೆ. ಆರೋಗ್ಯ ಇಲಾಖೆಯು ಜಿಲ್ಲೆಯಾದ್ಯಂತ ವಿವಿಧ ಮೂಲಗಳಿಂದ ಪೂರೈಕೆಯಾಗುತ್ತಿರುವ ಕುಡಿಯುವ ನೀರಿನ ಮಾದರಿಯನ್ನು ಸಂಗ್ರಹಿಸಿ, ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಿ ನೀರಿನ ಶುದ್ಧತೆಯನ್ನು ಖಚಿತಪಡಿಸಿಕೊಳ್ಳುತ್ತಿದೆ.

ಕಲುಷಿತ ನೀರಿನಿಂದಾಗಿ ಕಾಲರಾ ರೋಗ ಹರಡುವ ಅಪಾಯ ಇರುವುದರಿಂದ, ಮುನ್ನೆಚ್ಚರಿಕೆ ಕ್ರಮವಾಗಿ ನೀರಿನ ಮಾದರಿ ಸಂಗ್ರಹಿಸಿ ಪರೀಕ್ಷಿಸುತ್ತಿರುವ ಆರೋಗ್ಯ ಇಲಾಖೆಯ ಕಾರ್ಯಕ್ಕೆ ಜಿಲ್ಲಾ ಪಂಚಾಯಿತಿ ಸಹ ಕೈ ಜೋಡಿಸಿದೆ. ಈ ಕುರಿತು ಇಲಾಖೆಯ ಮೇಲಧಿಕಾರಿಗಳು ಸರಣಿ ಸಭೆಗಳನ್ನು ನಡೆಸಿ ಸೂಚನೆಗಳನ್ನು ನೀಡಿದ್ದಾರೆ.ಗ್ರಾಮಗಳ ಮಟ್ಟದಿಂದಿಡಿದು ನಗರಪ್ರದೇಶದವರೆಗೆ ಆರೋಗ್ಯ ಸಿಬ್ಬಂದಿಯನ್ನೊಳಗೊಂಡ ತಂಡ ನೀರಿನ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳಿಸುತ್ತಿದೆ.

5,240 ಕಡೆ ಸಂಗ್ರಹ: ‘ಓವರ್ ಹೆಡ್ ಟ್ಯಾಂಕ್, ಕೊಳವೆ ಬಾವಿ, ಕೆರೆ, ಕೊಳಾಯಿ, ಶುದ್ಧ ಕುಡಿಯುವ ನೀರಿನ ಘಟಕ ಸೇರಿದಂತೆ ನೀರು ಪೂರೈಕೆಯಾಗುತ್ತಿರುವ ಮೂಲಗಳನ್ನು ಒಳಗೊಂಡಂತೆ ಜಿಲ್ಲೆಯಾದ್ಯಂತ 5,240 ಕಡೆ ನೀರಿನ ಮಾದರಿ ಸಂಗ್ರಹಿಸಲಾಗುತ್ತಿದೆ’ ಎಂದು ಜಿಲ್ಲಾ ಆರೋಗ್ಯ ಆರೋಗ್ಯಾಧಿಕಾರಿ ಡಾ. ಬಿ.ಎಸ್. ನಿರಂಜನ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಜಿಲ್ಲೆಯಾದ್ಯಂತ ನಿಯಮಿತವಾಗಿ ನೀರಿನ ಪರೀಕ್ಷೆಯನ್ನು ಸಾಮಾನ್ಯವಾಗಿ ಮಾಡಲಾಗುತ್ತದೆ. ಆದರೆ, ತುಮಕೂರು ಘಟನೆ ಬೆನ್ನಲ್ಲೇ ಮತ್ತಷ್ಟು ತ್ವರಿತಗೊಳಿಸಲಾಗಿದೆ. ಸಂಗ್ರಹಿತ ನೀರಿನ ಮಾದರಿಯನ್ನು ಜಿಲ್ಲಾ ಕೇಂದ್ರದಲ್ಲಿರುವ ಪ್ರಯೋಗಾಲಯದ ಜೊತೆಗೆ, ಬೆಂಗಳೂರಿನ ಪ್ರಯೋಗಾಲಯಕ್ಕೂ ಕಳಿಸಲಾಗಿದೆ. ಎರಡು ವಾರದೊಳಗೆ ವರದಿ ಬರಲಿದೆ’ ಎಂದು ಹೇಳಿದರು.

‘ವರದಿ ಮೇರೆಗೆ ನೀರಿನ ಶುದ್ಧತೆ ಮತ್ತು ಸುರಕ್ಷತೆ ಕುರಿತು ಮುಂದಿನ ಕ್ರಮ ಕೈಗೊಳ್ಳಲಾಗುವುದು. ಇದರ ಜೊತೆಗೆ, ನೀರು ಪೂರೈಕೆ ಸ್ಥಳಗಳಲ್ಲಿ ಸ್ವಚ್ಛತೆಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ನೀರಿನ ಮೂಲಗಳ ಬಳಿ ಕೊಳಚೆ ಹರಿಯದಂತೆ ನೋಡಿಕೊಳ್ಳುವುದು, ಕೊಳವೆಬಾವಿ ಮತ್ತು ನಳಗಳು ತುಕ್ಕು ಹಿಡಿದಿದ್ದರೆ ಬದಲಾಯಿಸುವಂತೆಯೂ ಸಲಹೆ ನೀಡಲಾಗಿದೆ’ ಎಂದರು.

ಬೆಂಗಳೂರಿನಲ್ಲಿದ್ದ ಇಬ್ಬರಿಗೆ ಕಾಲರಾ: ‘ಬೆಂಗಳೂರಿನಲ್ಲಿ ನೆಲೆಸಿರುವ ಜಿಲ್ಲೆಯ ಕನಕಪುರ ಮತ್ತು ಮಾಗಡಿ ತಾಲ್ಲೂಕಿನ ತಲಾ ಒಬ್ಬೊಬ್ಬರು ಕಾಲರಾದಿಂದ ಬಳಲುತ್ತಿದ್ದಾರೆ. ಕಾರ್ಮಿಕರಾದ ಇಬ್ಬರೂ ಬೆಂಗಳೂರಿನಲ್ಲಿ ರಸ್ತೆ ಬದಿಯ ಊಟ ಸೇವಿಸಿ ಅನಾರೋಗ್ಯಕ್ಕೆ ತುತ್ತಾಗಿದ್ದರು. ಆಸ್ಪತ್ರೆಗೆ ದಾಖಲಾಗಿದ್ದ ಇಬ್ಬರ ಪರೀಕ್ಷೆ ನಡೆಸಿದಾಗ ಕಾಲರಾ ಸೋಂಕು ಇರುವುದು ಗೊತ್ತಾಗಿದೆ. ಸದ್ಯ ಇಬ್ಬರೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಕಾಲರಾ ಸೋಂಕು ಕಾಣಿಸಿಕೊಂಡಿಲ್ಲ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

ಬಿಸಿ ನೀರು ಸೇವಿಸಲು ಸಲಹೆ

‘ಮಾರಣಾಂತಿಕ ಕಾಲರಾ ರೋಗ ಕಲುಷಿತ ನೀರಿನಿಂದಾಗಿ ಹರಡುತ್ತದೆ. ಹಾಗಾಗಿನದಿ ಕೆರೆ ಹಾಗೂ ಕೊಳವೆಬಾವಿ ಸೇರಿದಂತೆ ಯಾವುದೇ ಮೂಲದಿಂದ ನೀರು ಬಂದರೂ ಅದನ್ನು ಕುದಿಸಿ ಆರಿಸಿಯೇ ಕುಡಿಯಬೇಕು. ಯಾವುದೇ ಕಾರಣಕ್ಕೂ ತಣ್ಣೀರನ್ನು ಸೇವಿಸಬಾರದು. ಮನೆ ಬಳಿಯ ಕೊಳವೆಬಾವಿ ಬಾವಿ ಅಥವಾ ನಳದ ಬಳಿ ಕೊಳಚೆ ನೀರು ಹರಿಯದಂತೆ ಹಾಗೂ ನಿಲ್ಲದಂತೆ ಎಚ್ಚರಿಕೆ ವಹಿಸಬೇಕು’ ಎಂದು ಡಾ. ಬಿ.ಎಸ್. ನಿರಂಜನ್ ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT