ಶನಿವಾರ, ಜೂಲೈ 11, 2020
23 °C
2018-19ನೇ ಸಾಲಿನ ರಾಜ್ಯ ಮಟ್ಟದ ಅತ್ಯುತ್ತಮ ಪ್ರಾಚಾರ್ಯ ಪ್ರಶಸ್ತಿ ಪುರಸ್ಕೃತ

ರವಿಕಾಂತ ಜಹಾಗೀರದಾರ ಅತ್ಯುತ್ತಮ ಪ್ರಾಚಾರ್ಯ

ಪ್ರಕಾಶ ಎನ್‌.ಮಸಬಿನಾಳ Updated:

ಅಕ್ಷರ ಗಾತ್ರ : | |

Deccan Herald

ಬಸವನಬಾಗೇವಾಡಿ: ತಾಲ್ಲೂಕಿನ ಮುಳವಾಡ ಗ್ರಾಮದ ನಿರ್ಮಲಾಬಾಯಿ ಶರಣಪ್ಪ ಲಳಗಿ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಿರುವ ರವಿಕಾಂತ ಎ.ಜಹಾಗೀರದಾರ ಅವರಿಗೆ, ರಾಜ್ಯ ಸರ್ಕಾರ ಶಿಕ್ಷಕರ ದಿನಾಚರಣೆ ಅಂಗವಾಗಿ ನೀಡುವ 2018-19ನೇ ಸಾಲಿನ ರಾಜ್ಯ ಮಟ್ಟದ ಅತ್ಯುತ್ತಮ ಪ್ರಾಚಾರ್ಯ ಪ್ರಶಸ್ತಿ ಲಭಿಸಿದೆ.

2012ರಲ್ಲಿ ಪ್ರಾಚಾರ್ಯರಾಗಿ ಬಡ್ತಿ ಪಡೆದಿರುವ ಜಹಾಗೀರದಾರ ತಮ್ಮ ನಯ, ವಿನಯತೆ, ನಡವಳಿಕೆ, ಸದಾ ಹಸನ್ಮುಖತೆಯಿಂದಾಗಿ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಗುರುಗಳಾಗಿದ್ದಾರೆ. ಉಪನ್ಯಾಸಕರು ಹಾಗೂ ಪಾಲಕರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದು, ಕಾಲೇಜಿನ ಏಳ್ಗೆಗಾಗಿ ಅಪಾರವಾಗಿ ಶ್ರಮಿಸಿದ್ದಾರೆ.

ಎಸ್‌ಎಸ್‌ಎಲ್‌ಸಿ ನಂತರ ಪಿಯುಸಿ ವಿಜ್ಞಾನ ವಿಭಾಗದ ಅಧ್ಯಯನಕ್ಕಾಗಿ ಪಟ್ಟಣ, ನಗರ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳ ಸಂಖ್ಯೆಯೇ ಈಚೆಗಿನ ದಿನಗಳಲ್ಲಿ ಹೆಚ್ಚಿದೆ. ಆದರೆ ಮುಳವಾಡ ಸೇರಿದಂತೆ ಸುತ್ತಮುತ್ತ ಗ್ರಾಮದ ವಿದ್ಯಾರ್ಥಿಗಳು ಈ ಕಾಲೇಜಿನಲ್ಲಿ ಪ್ರವೇಶ ಪಡೆಯಲು ಮುಗಿಬೀಳುತ್ತಾರೆ.

ಕಲಾ, ವಾಣಿಜ್ಯ, ವಿಜ್ಞಾನ ವಿಭಾಗ ಹೊಂದಿರುವ ಕಾಲೇಜಿನಲ್ಲಿ 261 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಪುಟ್ಟ ಗ್ರಾಮದ ಸುಂದರ ಪರಿಸರದಲ್ಲಿನ ಕಾಲೇಜು ಆವರಣವನ್ನು ಸ್ವಚ್ಛವಾಗಿಟ್ಟುಕೊಳ್ಳುವತ್ತಾ ರವಿಕಾಂತ ವಿಶೇಷ ಕಾಳಜಿ ವಹಿಸಿದ್ದಾರೆ. ಮಾಹಿತಿ ಮತ್ತು ತಂತ್ರಜ್ಞಾನದಡಿ ₹ 5 ಲಕ್ಷ ಅನುದಾನದಲ್ಲಿ ಸುಸಜ್ಜಿತ ವಿಜ್ಞಾನ ಪ್ರಯೋಗಾಲಯದ ವ್ಯವಸ್ಥೆಯನ್ನೂ ಮಾಡಿದ್ದಾರೆ.

ಉತ್ತಮ ಪರಿಸರ, ಉಪನ್ಯಾಸಕರು, ಪ್ರಾಚಾರ್ಯರ ವಿಶೇಷ ಕಾಳಜಿಯಿರುವ ಇಂತಹ ಕಾಲೇಜಿನಲ್ಲಿ ಅಧ್ಯಯನ ಮಾಡುತ್ತಿರುವುದಕ್ಕೆ ನಮಗೆ ಹೆಮ್ಮೆ ಎನಿಸುತ್ತದೆ ಎಂದು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾದ ಲಕ್ಷ್ಮೀ ಗರಸಂಗಿ, ಸುನೀಲ ಬಿರಾದಾರ, ಭಾಗ್ಯಾ ನಾಗರಾಳ ಹೇಳಿದರು.

ಕಾಲೇಜಿನ ಫಲಿತಾಂಶವು ಉತ್ತಮವಾಗಿದೆ. ಮಾರ್ಚ್‌–2018ರ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ 96ರಷ್ಟು ಫಲಿತಾಂಶ ಬಂದಿದೆ. ಪಠ್ಯೇತರ ಚಟುವಟಿಕೆಗಳಿಗೂ ಗಮನ ಹರಿಸಲಾಗುತ್ತಿದೆ.

ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ವ್ಯವಹಾರ ಅಧ್ಯಯನ ಹಾಗೂ ಲೆಕ್ಕಶಾಸ್ತ್ರ ಬೋಧನೆ ಮಾಡುತ್ತಿರುವ ರವಿಕಾಂತ ತಮ್ಮ 22 ವರ್ಷದ ಉಪನ್ಯಾಸಕ ವೃತ್ತಿಯಲ್ಲಿ ಚಿತ್ರದುರ್ಗ, ಗದಗ, ಬಸವನಬಾಗೇವಾಡಿಯಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ.

ಫಲಿತಾಂಶ ಸುಧಾರಣೆಗಾಗಿ ವಿಶೇಷ ತರಗತಿ, ವಿಜ್ಞಾನ ಪ್ರಯೋಗಾಲಯದ ಸದ್ಬಳಕೆ, ವಿಶೇಷ ಉಪನ್ಯಾಸ, ವಿದ್ಯಾರ್ಥಿಗಳಿಗೆ ಕಠಿಣ ಎನಿಸಿದ ಪಾಠದ ಕುರಿತು ಪುನರ್‌ ಮನನ ಮಾಡಿಸುವುದು, ಸ್ಪರ್ಧಾತ್ಮಕ ಪರೀಕ್ಷೆಗೆ ಪೂರಕವಾದ ವಾತಾವರಣ ನಿರ್ಮಾಣ ಮಾಡಿರುವುದು ರವಿಕಾಂತರ ಹೆಗ್ಗಳಿಕೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು