ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೌಢಶಾಲೆ ಈಗ ರೈಲು ಶಾಲೆ!

ಖಾಸಗಿಗೆ ಪೈಪೋಟಿ ನೀಡುತ್ತಿರುವ ಸರ್ಕಾರಿ ಶಾಲೆ
Last Updated 2 ಆಗಸ್ಟ್ 2019, 19:30 IST
ಅಕ್ಷರ ಗಾತ್ರ

ಮುದ್ದೇಬಿಹಾಳ: ದೂರದಿಂದ ನೋಡಿದರೆ ನಾವು ಶಾಲೆಗೆ ಬಂದಿದ್ದೇವೆಯೋ, ಅಥವಾ ರೈಲು ನಿಲ್ದಾಣಕ್ಕೆ ಬಂದಿದ್ದೇವೆಯೋ ಎಂದು ಭಾಸವಾಗುತ್ತದೆ. ಆದರೆ, ಇದು ಇಂಗಳಗೇರಿ ಸರ್ಕಾರಿ ಪ್ರೌಢಶಾಲೆ. ಇದೀಗ ರೈಲು ಶಾಲೆ ಎನಿಸಿದೆ.

ರಾಯಚೂರು ಜಿಲ್ಲೆ ಲಿಂಗಸುಗೂರಿನಿಂದ ಬಂದಿದ್ದ ಚಿತ್ರಕಲಾವಿದರ ತಂಡ ಮಾಡಿದ ಅದ್ಭುತ ಪ್ರಯೋಗದಿಂದ ಈ ಶಾಲೆ ಈಗ ಗಮನ ಸೆಳೆಯುತ್ತಿದೆ. ಶಾಲಾ ಆವರಣ ಸುಂದರವಾಗಿರಲಿ,ಮಕ್ಕಳು ಖುಷಿಯಾಗಲಿ ಎಂದು ಆಶಿಸಿದ ಕಲಾವಿದರು ತಮ್ಮ ಕುಂಚದಿಂದ ರೈಲು ಹಾಗೂ ಬಸ್ಸಿನ ಚಿತ್ರಗಳನ್ನು ಬಿಡಿಸಿದ್ದಾರೆ.

ಎರಡು ಎಕರೆ ವಿಸ್ತೀರ್ಣದಲ್ಲಿರುವ ಈ ಶಾಲೆಯು ಗುಣಮಟ್ಟ ಶಿಕ್ಷಣದಿಂದಾಗಿ ತನ್ನ ಹಿರಿಮೆಯನ್ನು ಹೆಚ್ಚಿಸಿಕೊಂಡಿದೆ. ಇಲ್ಲಿ 140 ವಿದ್ಯಾರ್ಥಿಗಳು ಓದುತ್ತಿದ್ದು, 8 ಜನ ಶಿಕ್ಷಕರಿದ್ದಾರೆ. ಸಂಪೂರ್ಣ ಹಸಿರಿನಿಂದ ಕಂಗೊಳಿಸುತ್ತಿರುವ ಶಾಲಾ ಆವರಣ, ಆಟದ ಮೈದಾನ, ಸುಸಜ್ಜಿತ ಪ್ರಯೋಗ ಶಾಲೆ, ಇಂಗ್ಲಿಷ್ ಭಾಷೆಯಲ್ಲಿ ಮಕ್ಕಳು ಪ್ರೌಢಿಮೆ ಸಾಧಿಸಲು ಕ್ಯುಆರ್‌ ಕೋಡ್ ಬಳಸಿ ಬೋಧನೆ, ಪ್ರೊಜೆಕ್ಟರ್ ಮೂಲಕ ಆಯಾ ವಿಷಯಗಳ ಆಡಿಯೊ, ವಿಡಿಯೊಗಳನ್ನು ತೋರಿಸಲಾಗುತ್ತದೆ.

ಗುಣಮಟ್ಟದ ಬೋಧನೆ, ಗ್ರಂಥಾಲಯ, ನಿತ್ಯ ದಿನ ಪತ್ರಿಕೆಗಳ ಓದು ಈ ಶಾಲೆಯ ವಿಶೇಷ. 15 ದಿನಕ್ಕೊಮ್ಮೆ ಮಕ್ಕಳಲ್ಲಿಯೇ ನಾಲ್ಕು ಗುಂಪು ( ಕೃಷ್ಣಾ, ಘಟಪ್ರಭಾ, ಮಲಪ್ರಭಾ, ಭೀಮಾ) ರಚಿಸಿ ಎಲ್ಲ ವಿಷಯಗಳ ಮೇಲೆ ನಡೆಯುವ ಕ್ವಿಜ್ ಸ್ಪರ್ಧೆ ಮಕ್ಕಳಲ್ಲಿ ಸ್ಪರ್ಧಾ ಮನೋಭಾವ ಹೆಚ್ಚುವಂತೆ ಮಾಡಿದೆ. ಮಕ್ಕಳ ಜ್ಞಾನವನ್ನೂ ಹೆಚ್ಚಿಸಿದೆ. ಬಿಸಿಯೂಟದ ವ್ಯವಸ್ಥೆಯೂ ಇಲ್ಲಿದ್ದು, ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಮಾಡಲಾಗಿದೆ. 32 ವರ್ಷಗಳ ಹಿಂದೆ ಪ್ರಾರಂಭವಾಗಿರುವ ಈ ಶಾಲೆಯ ಆವರಣದ ಇನ್ನೊಂದು ಬದಿಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯೂ ಇದೆ.

ಶಾಲೆಯ ಆವರಣ, ಹಿಂದೆ, ಮುಂದೆ ನೂರಾರು ಗಿಡಗಳನ್ನು ಬೆಳೆಸಿ ಮಕ್ಕಳಲ್ಲಿ ಪರಿಸರ ಪ್ರೀತಿ ಬೆಳೆಯುವಂತೆ ಮಾಡಲಾಗಿದೆ. ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಅಂಕಗಳನ್ನು ಪಡೆಯುವುದಕ್ಕಾಗಿ ಹೊಕ್ರಾಣಿ, ಜಮ್ಮಲದಿನ್ನಿ, ಜಕ್ಕೇರಾಳ, ಇಣಚಗಲ್ಲ, ಅಬ್ಬಿಹಾಳ, ಯಾದಗಿರಿ ಜಿಲ್ಲೆ ಶಹಾಪುರ ತಾಲ್ಲೂಕಿನ ಕೆಲವು ಗ್ರಾಮಗಳ ಮಕ್ಕಳು ಇಲ್ಲಿಗೆ ಓದಲು ಬರುತ್ತಿದ್ದಾರೆ.

‘ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಕುರಿತು ಮೊದಲೇ ಚರ್ಚಿಸುತ್ತೇವೆ. ನಮ್ಮ ಶಾಲೆಯ ಮಕ್ಕಳು ಅಥ್ಲೆಟಿಕ್ ವಿಭಾಗದಲ್ಲಿ ರಾಜ್ಯ ಮಟ್ಟದಲ್ಲಿ ಸ್ಪರ್ಧಿಸಿ, ಹೆಸರು ಗಳಿಸಿದ್ದಾರೆ. ಆ ಮೂಲಕ ನಮ್ಮ ಶಾಲೆಗೆ ಕೀರ್ತಿ ತಂದಿದ್ದಾರೆ’ ಎಂದು ಶಾಲೆಯ ಮುಖ್ಯ ಶಿಕ್ಷಕ ಪಿ.ಬಿ.ದೊಡಮನಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT