ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜೋಗ: ಅಭಿವೃದ್ಧಿಗೆ ₹70 ಕೋಟಿ ಬಿಡುಗಡೆ–ಬೇಳೂರು

Published 30 ಜನವರಿ 2024, 14:09 IST
Last Updated 30 ಜನವರಿ 2024, 14:09 IST
ಅಕ್ಷರ ಗಾತ್ರ

ಕಾರ್ಗಲ್: ಜೋಗ ಜಲಪಾತ ಪ್ರದೇಶದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ರಾಜ್ಯ ಸರ್ಕಾರ ₹70 ಕೋಟಿ ಬಿಡುಗಡೆ ಮಾಡಿದೆ ಎಂದು ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕೆ ನಿಗಮದ ಅಧ್ಯಕ್ಷ ಮತ್ತು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.

ಇಲ್ಲಿಗೆ ಸಮೀಪದ ಜೋಗ ಜಲಪಾತದಲ್ಲಿ ಪ್ರವಾಸಿಗರಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಘಟಕವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ವಿಶ್ವವಿಖ್ಯಾತ ಜೋಗಕ್ಕೆ ಪ್ರವಾಸಿಗರು ಆಗಮಿಸುವ ವೇಳೆ ಅವರಿಗೆ ಮೂಲ ಸೌಕರ್ಯಗಳೊಂದಿಗೆ ಶುದ್ಧ ಕುಡಿಯುವ ನೀರನ್ನು ಪೂರೈಸುವ ಸಲುವಾಗಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಲೋಕಾರ್ಪಣೆ ಮಾಡಲಾಗಿದೆ. ಜಲಪಾತ ಪ್ರದೇಶದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು, ನೂತನ ಕಟ್ಟಡಗಳಲ್ಲಿಯೂ ಹೈಟೆಕ್ ಮಾದರಿಯ ಕುಡಿಯುವ ನೀರಿನ ಘಟಕಗಳನ್ನು ಅಳವಡಿಸಲು ಸೂಚನೆ ನೀಡಲಾಗಿದೆ. ಜೋಗ ಜಲಪಾತ ಪ್ರದೇಶದಲ್ಲಿರುವ ಲೋಕೋಪಯೋಗಿ ಇಲಾಖೆ, ಕೆಪಿಸಿ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆಯ ಹಳೆಯ ಅತಿಥಿ ಗೃಹಗಳನ್ನು ನೂತನ ಯೋಜನೆಗೆ ಪೂರಕವಾಗಿ ಅಭಿವೃದ್ಧಿ ಮಾಡಲಾಗುವುದು. ಈ ಬಗ್ಗೆ ತಾಂತ್ರಿಕ ಸಲಹೆ ಪಡೆದು ಸಂಬಂಧಪಟ್ಟ ಸಚಿವರೊಂದಿಗೆ ಚರ್ಚೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದರು.

‘ಜೋಗ ಜಲಪಾತ ಪ್ರದೇಶದಲ್ಲಿರುವ ಮೂಲ ಯೋಜನೆಗಳೊಂದಿಗೆ ಅಂತರರಾಷ್ಟ್ರೀಯ ಪ್ರವಾಸಿ ತಾಣವಾಗಿ ಜೋಗವನ್ನು ರೂಪುಗೊಳಿಸುವ ನಿಟ್ಟಿನಲ್ಲಿ, ಹೈದರಾಬಾದ್ ರಾಮೋಜಿ ಸಿಟಿಯಲ್ಲಿ ಅಳವಡಿಸಿರುವ ನೈಪುಣ್ಯಗಳನ್ನು ಇಲ್ಲಿಯೂ ಅಳವಡಿಸಿಕೊಳ್ಳಲು ಯೋಚಿಸಲಾಗಿದೆ’ ಎಂದು ಅವರು ಮಾಹಿತಿ ನೀಡಿದರು.

‘ಜೋಗ ಜಲಪಾತದ ಅಭಿವೃದ್ಧಿ ವಿಚಾರದಲ್ಲಿ ಸಂಸದರು ಕೇವಲ ಭಾಷಣ ಮಾಡಿ ಹೋಗಿದ್ದಷ್ಟೇ ಬಿಟ್ಟರೇ ಚಿಕ್ಕಾಸು ಬಿಡುಗಡೆಗೆ ಪ್ರಯತ್ನಿಸಿರಲಿಲ್ಲ. ಸಂಸದರ ಅಭಿವೃದ್ಧಿ ಕೇವಲ ಭಾಷಣಕ್ಕಷ್ಟೇ ಮೀಸಲಾಗಿದೆ’ ಎಂದು ಬೇಳೂರು ವ್ಯಂಗ್ಯ ಮಾಡಿದರು.

ಲೋಕೋಪಯೋಗಿ ಇಲಾಖೆಯ ನಿವೃತ್ತ ಇಂಜಿನಿಯರ್ ಟಿ.ಪಿ. ರಮೇಶ್, ಎಸ್.ಎನ್.ಸಿ. ಕಂಪನಿಯ ಯೋಜನಾ ವ್ಯವಸ್ಥಾಪಕ ಸಂದೀಪ್, ಪ್ರವಾಸೋದ್ಯಮ ಇಲಾಖೆಯ ವ್ಯವಸ್ಥಾಪಕ ಮನೋಜ್ ಕುಮಾರ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಂ.ಕೆ. ಸುರೇಶ್, ಸದಸ್ಯ ಎಂ.ರಾಜು, ಮುಖಂಡರಾದ ಬಿ. ಉಮೇಶ್, ವಿಜಯಕುಮಾರ್, ಎಚ್.ಎಸ್.ಸಾದಿಕ್, ಸಣ್ಣಪ್ಪ, ಎಸ್.ಎಲ್. ರಾಜಕುಮಾರ್, ಶ್ರೀಲತಾ ಮುಂತಾದವರು ಉಪಸ್ಥಿತರಿದ್ದರು.

ಕಾರ್ಗಲ್ ಸಮೀಪದ ಕುಗ್ರಾಮ ಕುಡುಗುಂಜಿಯಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಅವರನ್ನು ಗ್ರಾಮಸ್ಥರು ಸನ್ಮಾನಿಸಿದರು
ಕಾರ್ಗಲ್ ಸಮೀಪದ ಕುಗ್ರಾಮ ಕುಡುಗುಂಜಿಯಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಅವರನ್ನು ಗ್ರಾಮಸ್ಥರು ಸನ್ಮಾನಿಸಿದರು

10 ಕಾಲು ಸಂಕ: ಬೇಳೂರು

ಭಾರಂಗಿ ಹೋಬಳಿ ವ್ಯಾಪ್ತಿಯ ಕುಗ್ರಾಮಗಳ ಮಹಿಳೆಯರು ಹಾಗೂ ಮಕ್ಕಳು ಮಳೆಗಾಲದಲ್ಲಿ ಹಳ್ಳ ಕೊಳ್ಳಗಳನ್ನು ದಾಟುವಾಗ ಅಪಾಯ ಸಂಭವಿಸುವ ಸಾಧ್ಯತೆಯಿರುವ ಪ್ರದೇಶಗಳನ್ನು ಆದ್ಯತೆ ಮೇರೆಗೆ ಗುರುತಿಸಿ ಮೊದಲ ಹಂತದಲ್ಲಿ  ₹20 ಲಕ್ಷ ವೆಚ್ಚದಲ್ಲಿ 10 ಕಾಲು ಸಂಕಗಳನ್ನು ನಿರ್ಮಾಣ ಮಾಡಲು ಚಾಲನೆ ನೀಡಲಾಗಿದೆ ಎಂದು ಬೇಳೂರು ತಿಳಿಸಿದರು.  ಭಾರಂಗಿ ಹೋಬಳಿ ಪ್ರದೇಶದ ದೇವಾಲಯಗಳ ಅಭಿವೃದ್ಧಿಗೆ ಪರಿಶೀಲನೆ ಬಳಿಕ ಅಗತ್ಯವಿರುವ ಧನಸಹಾಯವನ್ನು ಶೀಘ್ರದಲ್ಲೇ ನೀಡಲಾಗುವುದು ಎಂದು ಅವರು ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT