ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಹಣಿಗೆ ಆಧಾರ್ ಜೋಡಣೆ ವಿಳಂಬ: ಪರದಾಟ

ಸುಳ್ಳಳ್ಳಿ ನಾಡಕಚೇರಿಯಲ್ಲಿ ನಿತ್ಯ ಕಾಯುವ ರೈತರು; ನೆಟ್‌ವರ್ಕ್ ಸಮಸ್ಯೆ: ಬಾರದ ಒಟಿಪಿ
Published 1 ಜೂನ್ 2024, 7:45 IST
Last Updated 1 ಜೂನ್ 2024, 7:45 IST
ಅಕ್ಷರ ಗಾತ್ರ

ಸುಳ್ಳಳ್ಳಿ (ತುಮರಿ): ಪಹಣಿಗೆ ಆಧಾರ್ ಜೋಡಣೆ ಕಡ್ಡಾಯ ಎಂಬ ಕಂದಾಯ ಇಲಾಖೆಯ ಸೂಚನೆ ಅನ್ವಯ ಗ್ರಾಮ ಆಡಳಿತ ಕಾರ್ಯಾಲಯಗಳಲ್ಲಿ ಪಹಣಿಗೆ ಆಧಾರ್ ಜೋಡಣೆ ಕಾರ್ಯ ನಡೆಯುತ್ತಿದೆ. ಆದರೆ, ಅದು ವಿಳಂಬವಾಗುತ್ತಿರುವ ಪರಿಣಾಮ ರೈತರು ಪರದಾಡುವಂತಾಗಿದೆ.

ಕಂದಾಯ ಇಲಾಖೆಯು ‘ನನ್ನ ಆಧಾರನೊಂದಿಗೆ ನನ್ನ ಆಸ್ತಿ ಸುಭದ್ರ’ ಯೋಜನೆ ಆರಂಭಿಸಿದ್ದು, ಯೋಜನೆಯನ್ವಯ ಸರ್ಕಾರದ ವಿವಿಧ ಯೋಜನೆಗಳ ಪ್ರಯೋಜನಗಳನ್ನು ನೇರವಾಗಿ ಪಡೆಯಲು ಪಹಣಿಗೆ ಆಧಾರ್ ಜೋಡಣೆ ಕಡ್ಡಾಯವಾಗಿ ಮಾಡಬೇಕು ಎಂದು ಆದೇಶ ಹೊರಡಿಸಿದೆ. ಆದ್ದರಿಂದ ರೈತರು ಪಹಣಿಗೆ ಆಧಾರ್ ಕಾರ್ಡ್ ಜೋಡಣೆ ಮಾಡಲು ಮುಂದಾಗಿದ್ದಾರೆ.

ಪಹಣಿಗೆ ಆಧಾರ್ ಜೋಡಿಸಬೇಕಾದರೆ ಬಳಕೆಯಲ್ಲಿರುವ ಮೊಬೈಲ್ ಸಂಖ್ಯೆ ಆಧಾರ್‌ಗೆ ಜೋಡಣೆಯಾಗಿರಬೇಕು. ಪ್ರಕ್ರಿಯೆಯಲ್ಲಿ ಎರಡು ಪ್ರತ್ಯೇಕ ಒಟಿಪಿ ಬರುತ್ತವೆ. ಸ್ಥಳದಲ್ಲಿಯೇ ರೈತರ ನೈಜ ಚಿತ್ರ ಅಪ್‌ಲೋಡ್ ಮಾಡುವ ಮೂಲಕ ಆಧಾರ್ ಜೋಡಣೆ ಪ್ರಕ್ರಿಯೆ ನಡೆಯುತ್ತದೆ. ಒಟಿಪಿ ವಿಳಂಬ, ಆಧಾರ್ ಕಾರ್ಡ್‌ಗೆ ಮೊಬೈಲ್ ಸಂಖ್ಯೆ ಜೋಡಣೆ ಆಗದಿರುವುದು ಮತ್ತಿತ್ತರ ಸಮಸ್ಯೆಗಳಿಂದ ಇಡೀ ಪ್ರಕ್ರಿಯೆ ವಿಳಂಬವಾಗುತ್ತಿದೆ ಎಂದು ಗ್ರಾಮ ಆಡಳಿತ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಬರ ಪರಿಹಾರ ಬ್ಯಾಂಕ್ ಖಾತೆಗೆ ಜಮಾ ಆಗದಿರುವ ಕಾರಣದಿಂದ ಪಹಣಿಗೆ ಆಧಾರ್ ಜೋಡಿಸಲು ರೈತರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಆದರೆ, ಪ್ರಕ್ರಿಯೆ ವಿಳಂಬವಾಗುತ್ತಿದ್ದು, ರೈತರು ಕೆಲಸ ಬಿಟ್ಟು ನಾಡಕಚೇರಿಯಲ್ಲಿ ಕಾಯುತ್ತಾ ನಿಲ್ಲುವಂತಾಗಿದೆ’ ಎಂದು ಚನ್ನಗೊಂಡ ಗ್ರಾಮದ ನೀಲಮ್ಮ ನೋವು ತೋಡಿಕೊಂಡರು.

ಆನ್‌ಲೈನ್ ಕೇಂದ್ರಗಳ ಮೂಲಕ ದಾಖಲಿಸಲು ಸೌಲಭ್ಯ ಇದ್ದರೂ ಆಧಾರ್‌ನಲ್ಲಿರುವ ಹೆಸರು ಹಾಗೂ ಪಹಣಿಯಲ್ಲಿರುವ ಹೆಸರಿಗೆ ವ್ಯತ್ಯಾಸ ಇದ್ದರೆ ಜೋಡಣೆಯಾಗುತ್ತಿಲ್ಲ. ಆದರೆ, ಗ್ರಾಮ ಆಡಳಿತ ಅಧಿಕಾರಿಗಳ ಕಾರ್ಯಾಲಯದಲ್ಲಿ ಜೋಡಣೆ ಆಗುತ್ತಿದೆ. ಕರೂರು ಹೋಬಳಿಯ ಚನ್ನಗೊಂಡ, ಮಳೂರು, ಬರುವೆ ಸೇರಿ ಕೆಲ ಗ್ರಾಮಗಳಲ್ಲಿ ನೆಟ್‌ವರ್ಕ್ ಸಮಸ್ಯೆಯೂ ಕಾಡುತ್ತಿದೆ. ಅಲ್ಲದೆ, ಕೆಲ ರೈತರ ಮೊಬೈಲ್ ಸಂಖ್ಯೆ ಚಾಲ್ತಿಯಲ್ಲಿ ಇಲ್ಲದಿರುವುದು ಸಹ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಲೋಕಸಭೆ ಚುನಾವಣೆ ದಿನಾಂಕ ಘೋಷಣೆಗೂ ಮೊದಲೇ ಈ ಪಕ್ರಿಯೆ ಚಾಲನೆಯಲ್ಲಿದೆ. ಆದರೆ, ಕಾರ್ಯಾಲಯದ ಸಿಬ್ಬಂದಿ ಚುನಾವಣೆ ಕಾರ್ಯದಲ್ಲಿ ತೊಡಗಿದ್ದರಿಂದ ಪ್ರಕ್ರಿಯೆ ಅಷ್ಟೆನೋ ಚುರುಕಾಗಿರಲಿಲ್ಲ. ಈಗ ಚುನಾವಣೆ ಮುಗಿದಿದ್ದರಿಂದ ಈ ಕಾರ್ಯ ಮತ್ತೆ ಆರಂಭವಾಗಿದೆ. ಪ್ರಮುಖವಾಗಿ ಕರೂರು, ಬಾರಂಗಿ ಹೋಬಳಿಗಳಲ್ಲಿ ಈ ಪ್ರಕ್ರಿಯೆಗೆ ನೇಟ್‌ವರ್ಕ್ ಸಮಸ್ಯೆ ತೀವ್ರವಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.

ಒಬ್ಬ ರೈತ ಬೇರೆ ಬೇರೆ ಸರ್ವೆ ಸಂಖ್ಯೆಯ ಭೂಮಿ ಹೊಂದಿದ್ದರೆ ಆಧಾರ್ ಜೋಡಣೆಯಿಂದ ಒಂದೇ ದಾಖಲೆಯಲ್ಲಿ ಎಲ್ಲ ಮಾಹಿತಿ ಸಿಗಲಿದೆ. ಭೂ ವಂಚನೆಗಳೂ ತಪ್ಪುತ್ತವೆ. ತಾಲ್ಲೂಕಿನಾದ್ಯಂತ ಸರ್ವರ್ ಒಟಿಪಿ ಸಮಸ್ಯೆ ಸರಿಯಾದರೆ ಯಾವುದೇ ಸಮಸ್ಯೆ ಇರುವುದಿಲ್ಲ. ಸೈಯದ್ ಕಲೀಂವುಲ್ಲಾ ತಹಶೀಲ್ದಾರ್ ಸಾಗರ ಪಹಣಿಗೆ ಆಧಾರ್ ಜೋಡಣೆ ಬಗ್ಗೆ ಯಾವುದೇ ಮಾಹಿತಿಯನ್ನು ಗ್ರಾಮ ಆಡಳಿತ ಅಧಿಕಾರಿಗಳು ರೈತರಿಗೆ ನೀಡುತ್ತಿಲ್ಲ. ಅಲ್ಲದೆ ಮಾಹಿತಿ ಇರುವ ರೈತರು ದೂರದ ಊರುಗಳಿಂದ ಬಂದರೂ ಆಧಾರ್ ಜೋಡಣೆ ಕಾರ್ಯ ವಿಳಂಬ ಆಗುತ್ತಿದೆ. ಸಮಸ್ಯೆ ಪರಿಹಾರಕ್ಕೆ ಸ್ಥಳೀಯ ಶಾಸಕರು ಗಮನ ಹರಿಸಬೇಕು. ಕೃಷ್ಣಪ್ಪ ಗ್ರಾಮಸ್ಥರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT