ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಡಿವಾಳ ಸಮಾಜವನ್ನು ಯಾರೂ ಮಾರಿಕೊಂಡಿಲ್ಲ: ಪಿ. ಹನುಮಂತಪ್ಪ

ರಾಜು ತಲ್ಲೂರು ಹೇಳಿಕೆಗೆ ಸೊರಬ ತಾಲ್ಲೂಕು ಮಡಿವಾಳ ಸಮಾಜ ಖಂಡನೆ
Published 27 ಏಪ್ರಿಲ್ 2024, 15:38 IST
Last Updated 27 ಏಪ್ರಿಲ್ 2024, 15:38 IST
ಅಕ್ಷರ ಗಾತ್ರ

ಆನವಟ್ಟಿ: ಸ್ವಾರ್ಥ ರಾಜಕಾರಣ ಹಾಗೂ ವೈಯಕ್ತಿಕ ಹಿತ ಸಾಧನೆಗಾಗಿ ರಾಜು ತಲ್ಲೂರು ಅವರು ಮಡಿವಾಳ ಸಮುದಾಯವನ್ನು ಬಲಿಕೊಡುವ ಕೀಳುಮಟ್ಟದ ರಾಜಕೀಯ ಮಾಡುತ್ತಿದ್ದಾರೆ ಎಂದು ಸೊರಬ ತಾಲ್ಲೂಕು ಮಡಿವಾಳ ಸಮಾಜ ಆರೋಪಿಸಿದೆ. 

ಆನವಟ್ಟಿಯಲ್ಲಿ ಶನಿವಾರ ತಾಲ್ಲೂಕು ಮಡಿವಾಳ ಸಮಾಜದ ಮುಖಂಡರು ಹಮ್ಮಿಕೊಂಡಿದ್ದ ಸಭೆಯಲ್ಲಿ ರಾಜು ತಲ್ಲೂರು ಹೇಳಿಕೆಯನ್ನು ಸದಸ್ಯರು ಖಂಡಿಸಿದರು. 

ಮಡಿವಾಳ ಸಮಾಜ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಪತ್ರಿಕಾ ಹೇಳಿಕೆ ನೀಡಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.  

ಸಮಾಜದ ಬೆಂಬಲವಿಲ್ಲದೇ ಕೇವಲ ಹಣಬಲದ ಮೇಲೆ ನಿಗಮ ಮಂಡಳಿ ಅಧ್ಯಕ್ಷ ಸ‍್ಥಾನ ಪಡೆದಕೊಂಡು, ₹17 ಕೋಟಿ ಅನುದಾನ ತಂದಿದ್ದಾಗಿ ಹೇಳುವ ರಾಜು ತಲ್ಲೂರು ಶಿವಮೊಗ್ಗ ಜಿಲ್ಲೆಯ ಮಡಿವಾಳರಿಗೆ ನೀಡಿರುವ ಕೊಡುಗೆ ಏನು ಎಂದು ಆನವಟ್ಟಿಯ ಶಿವಶರಣ ಮಡಿವಾಳ ಮಾಚಿದೇವ ಸಂಘದ ಅಧ್ಯಕ್ಷ ಪಿ. ಹನುಮಂತಪ್ಪ ಹೊಸಳ್ಳಿ ಪ್ರಶ್ನೆ ಮಾಡಿದರು.

‘ತಾಲ್ಲೂಕು ಮಡಿವಾಳ ಸಮಾಜದ ಅಧ್ಯಕ್ಷ, ಪಧಾದಿಕಾರಿಗಳು ಸೇರಿದಂತೆ ಸಮಾಜದ 14 ಜನರನ್ನು ಕೋರ್ಟ್‍ಗೆ ಎಳೆದಿದ್ದೇ ನಿಮ್ಮ ಸಾಧನೆ’ ಎಂದು ಕುಟುಕಿದರು.

‘ಎಸ್‍. ಬಂಗಾರಪ್ಪ ಅವರು ಜಿಲ್ಲಾ ಸಂಘಕ್ಕೆ ನಿವೇಶನ ಹಾಗೂ ಸಮುದಾಯ ಭವನ ಮಂಜೂರು ಮಾಡಿದ್ದರು. ಅವರ ಪುತ್ರ ಸಚಿವ ಮಧು ಬಂಗಾರಪ್ಪ ಅವರು ಆನವಟ್ಟಿ ಸಮುದಾಯ ಭವನಕ್ಕೆ ₹50 ಲಕ್ಷ ಅನುದಾನ ನೀಡಿದ್ದಾರೆ. ಸಮಾಜದ ಕೆಲವರನ್ನು ತಾಲ್ಲೂಕು ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗಲು ಅವಕಾಶ ನೀಡಿದ್ದಾರೆ. ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ಮಾಚಿದೇವರ ಜಯಂತಿ ಪ್ರಾರಂಭಿಸಿದರು. ನಿಗಮ ಮಂಡಳಿ ರಚಿಸಿ ಮಡಿವಾಳ ಸಮಾಜಕ್ಕೆ ಅಪಾರ ಕೊಡುಗೆ ನೀಡಿರುವುದು ಕಾಂಗ್ರೆಸ್‍ ಪಕ್ಷ. ಹೀಗಿದ್ದಾಗ ರಾಜು ತಲ್ಲೂರು ಅವರು ಏಕಮುಖವಾಗಿ ಒಂದು ಪಕ್ಷದ ಪರ ಸಮಾಜ ಇದೆ ಎನ್ನುವಂತೆ ಹೇಳಿಕೆ ನೀಡುವುದು ಸರಿಯಲ್ಲ. ಮಡಿವಾಳ ಸಮಾಜವನ್ನು ಯಾರು ಮಾರಿಕೊಂಡಿಲ್ಲ’ ಎಂದು ಅವರು ಅಕ್ರೋಶ ವ್ಯಕ್ತಪಡಿಸಿದರು.

‘ಮಡಿವಾಳ ಸಮಾಜಕ್ಕೆ ಯಾವ ಪಕ್ಷದವರು ಹೆಚ್ಚು ಕೊಡುಗೆ ನೀಡಿದ್ದಾರೆ ಎಂಬುದು ಸಮಾಜದ ಪ್ರತಿಯೊಬ್ಬರಿಗೂ ಗೊತ್ತು. ಯಾವ ಪಕ್ಷವನ್ನು ಬೆಂಬಲಿಸಬೇಕು ಎಂಬುದು ಸಮಾಜದ ಪ್ರತಿಯೊಬ್ಬರ ವೈಯಕ್ತಿಕ ಅಭಿಪ್ರಾಯ. ಇಂತಹ ಹೇಳಿಕೆ ನೀಡುವ ಅಗತ್ಯವಿಲ್ಲ’ ಎಂದು ಶಿವಶರಣ ಮಾಚಿದೇವ ಸಂಘದ ಕಾರ್ಯದರ್ಶಿ ಅಶ್ವಿನ್‍ಕುಮಾರ್ ಗುಡುಗಿದರು.

‘ಮಡಿವಾಳ ಸಮಾಜದ ಹೆಸರನ್ನು ರಾಜು ತಲ್ಲೂರು ಅವರು ತಮ್ಮ ಬೆಳವಣಿಗೆಗೆ ಬಳಸಿಕೊಂಡಿದ್ದಾರೆ. ಮುಗ್ಧರನ್ನು ತನ್ನ ದಾಳಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಇನ್ನೊಮ್ಮೆ ತನ್ನ ಅನುಕೂಲಕ್ಕಾಗಿ ಇಂತಹ ಹೇಳಿಕೆ ನೀಡಿದರೆ ತಕ್ಕ ಪಾಠ ಕಲಿಸಬೇಕಾಗುತ್ತದೆ’ ಎಂದು ತಾಲ್ಲೂಕು ಘಟಕದ ಉಪಾಧ್ಯಕ್ಷ ಶಿವಾನಂದಪ್ಪ ಮೂಗುರು, ಕಾರ್ಯದರ್ಶಿ ಹನುಮಂತಪ್ಪ ನೇರಲಗಿ, ನಿರ್ದೇಶಕರಾದ ಪರಶುರಾಮಪ್ಪ ಕೊಡಳ್ಳಿ, ರಾಜಶೇಖರಪ್ಪ ಆನವಟ್ಟಿ, ಮುಖಂಡರಾದ ರಘುಪತಿ, ಮಂಜಪ್ಪ ಮೇಸ್ಟ್ರು ಕುಬಟೂರು, ಬಸವರಾಜಪ್ಪ ಮೇಸ್ಟ್ರು ಆನವಟ್ಟಿ ಎಚ್ಚರಿಕೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT