ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

'ಮುಳುಗಡೆ ಸಂತ್ರಸ್ತರಿಗೆ ನ್ಯಾಯ ಒದಗಿಸುವಲ್ಲಿ ಜನಪ್ರತಿನಿಧಿಗಳ ನಿರಾಸಕ್ತಿ'

ರೈತ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ ಆಕ್ರೋಶ
Published 4 ಜನವರಿ 2024, 15:33 IST
Last Updated 4 ಜನವರಿ 2024, 15:33 IST
ಅಕ್ಷರ ಗಾತ್ರ

ಸಾಗರ: ಮಲೆನಾಡಿನ ಮುಳುಗಡೆ ಸಂತ್ರಸ್ತರಿಗೆ ನ್ಯಾಯ ಒದಗಿಸುವಲ್ಲಿ ಜನಪ್ರತಿನಿಧಿಗಳು ನಿರಾಸಕ್ತಿ ಧೋರಣೆ ತಾಳಿದ್ದಾರೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಲ್ಲೂಕಿನ ತಾಳಗುಪ್ಪ ಗ್ರಾಮದಲ್ಲಿ ರೈತ ಸಂಘ (ಎಚ್.ಗಣಪತಿಯಪ್ಪ ಸ್ಥಾಪಿತ) ಗುರುವಾರ ರೈತ ಸಂಘದ ಸಂಸ್ಥಾಪನೆ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಕರಾಳ ದಿನಾಚರಣೆ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.

ಶರಾವತಿ, ಚಕ್ರ, ಸಾವೇಹಕ್ಲು, ವರಾಹಿ ಸೇರಿದಂತೆ ಹಲವು ಜಲವಿದ್ಯುತ್ ಯೋಜನೆಗಳಿಗಾಗಿ ಮಲೆನಾಡಿನ ಸಾವಿರಾರು ಕುಟುಂಬಗಳು ಆಸ್ತಿ ಕಳೆದುಕೊಂಡು ಬೀದಿಗೆ ಬಂದಿವೆ. ಈ ವಿದ್ಯಮಾನ ಘಟಿಸಿ ಹಲವು ದಶಕಗಳು ಕಳೆದಿದ್ದರೂ ಇನ್ನೂ ಸಂತ್ರಸ್ತರ ಕುಟುಂಬಗಳಿಗೆ ಭೂಮಿಯ ಹಕ್ಕುಪತ್ರ ನೀಡಲು ಸಾಧ್ಯವಾಗದೆ ಇರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಅವರು ಟೀಕಿಸಿದರು.

ಮುಳುಗಡೆ ಸಂತ್ರಸ್ತರಿಗೆ ನ್ಯಾಯ ಒದಗಿಸಲು ಈ ಹಿಂದೆ ರಚನೆಯಾಗಿದ್ದ ಟಾಸ್ಕ್ ಪೋರ್ಸ್ ಸಮಿತಿಯನ್ನು ಪುನರ್ ರಚಿಸುವಂತೆ ಹಲವು ವರ್ಷಗಳಿಂದ ಒತ್ತಾಯಿಸಲಾಗುತ್ತಿದೆ. ಆದರೆ ಇದಕ್ಕೆ ಸ್ಪಂದನೆ ಸಿಗುತ್ತಿಲ್ಲ. ಜಾತಿ ಸಮಾವೇಶದಲ್ಲಿ ಸಂತ್ರಸ್ತರ ಸಮಸ್ಯೆ ಪ್ರಸ್ತಾಪಿಸುವ ಜನಪ್ರತಿನಿಧಿಗಳಿಗೆ ವಿಧಾನಸಭೆಯ ಅಧಿವೇಶನದಲ್ಲಿ ಈ ಕುರಿತು ಧ್ವನಿ ಎತ್ತಲು ಏನು ತೊಂದರೆ ಎಂದು ಅವರು ಪ್ರಶ್ನಿಸಿದರು.

‘ಕೇವಲ ತಮ್ಮ ಆಸ್ತಿಯ ವೃದ್ಧಿ ಹಾಗೂ ಸಂರಕ್ಷಣೆಗೆ ಸಂಬಂಧಿಸಿದಂತೆ ಮಾತ್ರ ಜಿಲ್ಲೆಯ ರಾಜಕಾರಣಿಗಳು ಆಸಕ್ತಿ ತೋರುತ್ತಿದ್ದಾರೆ. ಮುಳುಗಡೆ ಸಂತ್ರಸ್ತರಿಗೆ ಹಕ್ಕುಪತ್ರ ನೀಡಲು ಅಗತ್ಯವಿರುವ ಕಾನೂನು ತಿದ್ದುಪಡಿ ಪ್ರಕ್ರಿಯೆ ಚುರುಕುಗೊಳಿಸಲು ಸರ್ಕಾರಕ್ಕೆ ಉತ್ಸಾಹ ಇಲ್ಲವಾಗಿದೆ’ ಎಂದು ಸಾಮಾಜಿಕ ಕಾರ್ಯಕರ್ತ ತೀ.ನ.ಶ್ರೀನಿವಾಸ್ ಟೀಕಿಸಿದರು.

ರೈತ ಸಂಘದ ಪ್ರಮುಖರಾದ ಚೂನಪ್ಪ ಪೂಜೇರಿ, ಹೊಯ್ಸಳ ಗಣಪತಿಯಪ್ಪ, ರಮೇಶ್ ಕೆಳದಿ, ರಾಮಚಂದ್ರಪ್ಪ ಮನೆಘಟ್ಟ, ವಿ.ಜಿ.ಶ್ರೀಕರ್ ಸಂಪಕಟ್ಟೆ, ರವಿಕುಮಾರ್ ಬಲ್ಲೂರ್ ,ಸುರೇಶ್, ರಾಜು ಪವಾರ್, ಶಶಿಕಾಂತ್, ಮಹಾಂತೇಶ್, ಪ್ರಕಾಶ್ ನಾಯ್ಕ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT