ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರದ ಒತ್ತಡ ಕಾರಣ: ಕಾಂಗ್ರೆಸ್ ಆಕ್ರೊಶ

ಎಲ್‌ಐಸಿ, ಎಸ್‌ಬಿಐ ಹಣ ಅದಾನಿ ಸಮೂಹದಲ್ಲಿ ಹೂಡಿಕೆ: ಪ್ರತಿಭಟನೆ
Last Updated 7 ಫೆಬ್ರುವರಿ 2023, 5:06 IST
ಅಕ್ಷರ ಗಾತ್ರ

ಶಿವಮೊಗ್ಗ: ಎಲ್‌ಐಸಿ ಮತ್ತು ಎಸ್‌ಬಿಐ ಸಾವಿರಾರು ಕೋಟಿ ವೇತನವನ್ನು ಅದಾನಿ ಸಮೂಹದ ಜೊತೆಗೆ ಹೂಡಿಕೆ ಮಾಡಿವೆ. ಕೇಂದ್ರ ಸರ್ಕಾರದ ಒತ್ತಡದ ಕಾರಣ ಈ ಅಪಾಯಕಾರಿ ವಹಿವಾಟು ನಡೆದಿದೆ ಎಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಸೋಮವಾರ ಪ್ರತಿಭಟನಾ ಮೆರವಣಿಗೆ ಮತ್ತು ಧರಣಿ ನಡೆಸಲಾಯಿತು.

ರಾಮಣ್ಣ ಶ್ರೇಷ್ಠಿ ಪಾರ್ಕ್ ಮುಂಭಾಗದಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ಆರಂಭವಾಗಿ ಗಾಂಧಿ ಬಜಾರ್, ಶಿವಪ್ಪ ನಾಯಕ ಪ್ರತಿಮೆಯಿಂದ ಬಿ.ಎಚ್. ರಸ್ತೆಯಲ್ಲಿರುವ ಎಸ್.ಬಿ.ಐ ಮುಖ್ಯ ಶಾಖೆ ಮುಂಭಾಗ ಧರಣಿ ನಡೆಸಲಾಯಿತು.

ಎಲ್‌ಐಸಿಯ 29 ಕೋಟಿ ಪಾಲಿಸಿದಾರರು ಮತ್ತು ಎಸ್‌ಬಿಐನ 45 ಕೋಟಿ ಖಾತೆದಾರರು ಕಷ್ಟದಿಂದ ಗಳಿಸಿ ಉಳಿತಾಯ ಮಾಡಿರುವ ಹಣ ಅಪಾಯಕ್ಕೆ ಸಿಲುಕಿದೆ. ಅದಾನಿ ಗ್ರೂಪ್‌ನಲ್ಲಿ ಎಲ್‌ಐಸಿ ಭಾರಿ ಹೂಡಿಕೆ ಮಾಡಿದ್ದು ಕಳೆದ ಕೆಲವು ದಿನಗಳಲ್ಲಿ ಎಲ್‌ಐಸಿಯ ಪಾಲಿಸಿದಾರರು ಮತ್ತು ಹೂಡಿಕೆದಾರರು ₹33,060 ಕೋಟಿ ಕಳೆದುಕೊಂಡಿದ್ದಾರೆ ಎಂದು ಪ್ರತಿಭಟನಕಾರರು ದೂರಿದರು.

ಅದಾನಿ ಗ್ರೂಪ್‌ಗೆ ಎಸ್‌ಬಿಐ ಮತ್ತು ಇತರೆ ರಾಷ್ಟ್ರೀಕೃತ ಬ್ಯಾಂಕ್‌ಗಳು ನೀಡಿದ್ದ ₹80 ಸಾವಿರ ಕೋಟಿ ಮೊತ್ತದ ಸಾಲ ಬಾಕಿ ಉಳಿದಿದೆ. ಎಲ್‌ಐಸಿ, ಎಸ್‌ಬಿಐ ಮತ್ತು ಇತರ ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಕೆಲವು ಆಯ್ದ ಕಂಪೆನಿಗಳಿಗೆ ಕೇಂದ್ರ ಸರ್ಕಾರ ಬಲವಂತದ ಹೂಡಿಕೆ ಮಾಡಿಸಿದೆ. ಕ್ರೋನಿ ಕ್ಯಾಪಿಟಲಿಸಂ ವಿರುದ್ಧವಾಗಿ ಬಿಜೆಪಿ ಸರ್ಕಾರ ರೂಪಿಸಿದ್ದ ನಿಯಮಗಳು ಸಂಸತ್ತಿನಲ್ಲಿ ಚರ್ಚಿಸಬೇಕು ಮತ್ತು ಹೂಡಿಕೆದಾರರನ್ನು ರಕ್ಷಿಸುವ ಕ್ರಮಗಳನ್ನು ತಕ್ಷಣ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಎಲ್‌ಐಸಿ ಸಾರ್ವಜನಿಕ ವಲಯದ ಬ್ಯಾಂಕ್‌ ಮತ್ತು ಹಣಕಾಸು ಸಂಸ್ಥೆಗಳು ಮಾರುಕಟ್ಟೆ ಮೌಲ್ಯವನ್ನು ಕಳೆದುಕೊಳ್ಳುತ್ತಿರುವ ಕಂಪನಿಗಳಲ್ಲಿ ಹೂಡಿಕೆ ಮಾಡುವುದನ್ನು ತಕ್ಷಣವೇ ಸ್ಥಗಿತಗೊಳಿಸಬೇಕು. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ನಿಷ್ಪಕ್ಷಪಾತ ತನಿಖೆ ಅಥವಾ ಜಂಟಿ ಸಂಸದೀಯ ಸಮಿತಿಯಿಂದ (ಜೆಪಿಸಿ) ತನಿಖೆ ನಡೆಸಬೇಕೆಂದು ಪ್ರತಿಭಟನಕಾರರು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎನ್.ರಮೇಶ್, ಮಾಜಿ ಶಾಸಕರಾದ ಆರ್.ಪ್ರಸನ್ನಕುಮಾರ್, ಕೆ.ಬಿ. ಪ್ರಸನ್ನಕುಮಾರ್, ಪಾಲಿಕೆ ಸದಸ್ಯ ಆರ್.ಸಿ.ನಾಯಕ್, ಉತ್ತರ ಬ್ಲಾಕ್ ಅಧ್ಯಕ್ಷ ದೀಪಕ್‌ಸಿಂಗ್, ಮುಖಂಡರಾದ ಇಸ್ಮಾಯಿಲ್ ಖಾನ್, ಎಸ್.ಕೆ. ಮರಿಯಪ್ಪ, ಸತ್ಯನಾರಾಯಣರಾವ್, ಎಸ್.ಪಿ. ದಿನೇಶ್, ಜಿ.ಡಿ. ಮಂಜುನಾಥ್, ಪಲ್ಲವಿ, ಕೆ.ರಂಗನಾಥ್, ರಮೇಶ್ ಇಕ್ಕೇರಿ, ಎಚ್.ಪಿ. ಗಿರೀಶ್, ವಿಜಯಲಕ್ಷ್ಮೀ ಪಾಟೀಲ್, ಎಸ್.ಪಿ. ಶೇಷಾದ್ರಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT