ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿವಮೊಗ್ಗ: ವಂಚಕರಿಂದ ₹ 7.02 ಕೋಟಿ ಪಂಗನಾಮ

ಮಲ್ಲಪ್ಪ ಸಂಕೀನ್‌
Published 27 ಮೇ 2024, 5:49 IST
Last Updated 27 ಮೇ 2024, 5:49 IST
ಅಕ್ಷರ ಗಾತ್ರ

ಶಿವಮೊಗ್ಗ: ಜಿಲ್ಲೆಯಲ್ಲಿ ಎರಡೂವರೆ ವರ್ಷಗಳಲ್ಲಿ 95 ಆನ್‌ಲೈನ್‌ ವಂಚನೆ ಪ್ರಕರಣಗಳು ದಾಖಲಾಗಿವೆ. ವಂಚಕರಿಂದ ಜನರು ₹ 7.02 ಕೋಟಿ ಕಳೆದುಕೊಂಡಿದ್ದಾರೆ. ಈ ವರ್ಷ ಐದು ತಿಂಗಳಲ್ಲಿಯೇ 34 ಆನ್‌ಲೈನ್ ವಂಚನೆ ಪ್ರಕರಣ ದಾಖಲಾಗಿವೆ. ವಂಚನೆಗೊಳಗಾದವರು ಒಟ್ಟು ₹ 2.78 ಕೋಟಿ ಹಣ ಕಳೆದುಕೊಂಡಿದ್ದಾರೆ.

ಕಷ್ಟಪಟ್ಟು ದುಡಿದ ಹಣ ಬೇರೆಯವರ ಪಾಲಾಗಿರುವುದು ಹಣ ಕಳೆದುಕೊಂಡವರಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ.

2024ನೇ ವರ್ಷ ಆರಂಭದ ಐದು ತಿಂಗಳಲ್ಲಿಯೇ 34 ಆನ್‌ಲೈನ್‌ ವಂಚನೆ ಪ್ರಕರಣಗಳು ದಾಖಲಾಗಿವೆ. ₹ 2,78,33,744 ಕಳೆದುಕೊಂಡಿದ್ದಾರೆ. ಇದರಲ್ಲಿ ₹ 40.41 ಲಕ್ಷವನ್ನು ಹಣ ಕಳೆದುಕೊಂಡವರಿಗೆ ಕೋರ್ಟ್‌ ಮುಖಾಂತರ ಹಸ್ತಾಂತರಿಸಲಾಗಿದೆ. ₹ 40.74 ಲಕ್ಷವನ್ನು ವಿವಿಧ ಬ್ಯಾಂಕ್‌ಗಳಲ್ಲಿ ತಡೆಹಿಡಿಯಲಾಗಿದೆ. ಇನ್ನುಳಿದ ಹಣವನ್ನು ಯಾವ ರೀತಿಯಿಂದ ವಂಚಕರು ಬಳಕೆ ಮಾಡಿಕೊಂಡಿದ್ದಾರೆ ಎಂಬುದರ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಜಿಲ್ಲೆಯಲ್ಲಿ 2022ರಲ್ಲಿ ಒಟ್ಟು 16 ಆನ್‌ಲೈನ್‌ ವಂಚನೆ ಪ್ರಕರಣ ದಾಖಲಾಗಿವೆ. ಇದರಲ್ಲಿ ₹ 1.20 ಕೋಟಿ ಕಳೆದುಕೊಂಡಿದ್ದಾರೆ. ₹ 17.21 ಲಕ್ಷಣವನ್ನು ಕಳೆದುಕೊಂಡವರಿಗೆ ವಾಪಸ್ ನೀಡಲಾಗಿದೆ. ₹ 4.26 ಲಕ್ಷವನ್ನು  ವಿವಿಧ ಬ್ಯಾಂಕ್‌ಗಳಲ್ಲಿ ತಡೆಹಿಡಿಯಲಾಗಿದೆ. 

2023ರಲ್ಲಿ 45 ಆನ್‌ಲೈನ್‌ ವಂಚನೆ ಪ್ರಕರಣಗಳು ದಾಖಲಾಗಿವೆ. ₹ 3.02 ಕೋಟಿಯ‌‌ನ್ನು ಜನರು ಕಳೆದುಕೊಂಡಿದ್ದಾರೆ. ಈ ಪೈಕಿ ₹ 30.60 ಲಕ್ಷವನ್ನು ಕಳೆದುಕೊಂಡವರಿಗೆ ವಾಪಸ್‌ ನ್ಯಾಯಾಲಯದ ಮೂಲಕ ನೀಡಲಾಗಿದೆ. ₹ 40.74 ಲಕ್ಷವನ್ನು ವಿವಿಧ ಬ್ಯಾಂಕ್‌ಗಳಲ್ಲಿ ತಡೆಹಿಡಿಯಲಾಗಿದೆ. ಉಳಿದ ಹಣವನ್ನು ಪತ್ತೆ ಮಾಡಲು ಪೊಲೀಸರು ಎಲ್ಲ ಆಯಾಮಗಳಿಂದಲೂ ತನಿಖೆ ಮಾಡುತ್ತಿದ್ದಾರೆ. 

ಒಟ್ಟು ಎರಡೂವರೆ ವರ್ಷಗಳಲ್ಲಿ 95 ಪ್ರಕರಣ ದಾಖಲಾಗಿವೆ. ₹ 7.02 ಕೋಟಿ ಜನರು ಕಳೆದುಕೊಂಡಿದ್ದಾರೆ. ₹88,22 ಲಕ್ಷವನ್ನು ಹಣ ಕಳೆದುಕೊಂಡವರಿಗೆ ವಾಪಸ್ ಹಿಂದಿರುಗಿಸಲಾಗಿದೆ. ₹ 55.92 ಲಕ್ಷ ವಿವಿಧ ಬ್ಯಾಂಕ್‌ಗಳಲ್ಲಿ ತಡೆಹಿಡಿಯಲಾಗಿದೆ. ಒಟ್ಟು 5.58 ಕೋಟಿ ವಂಚಕರಿಂದ ಬಳಕೆಯಾಗಿದೆ.

ಖಾಸಗಿ ಆ್ಯಪ್‌ಗಳನ್ನು ಮೊಬೈಲ್‌ಗಳಿಗೆ ಕಳುಹಿಸಿ ಬ್ಯಾಂಕ್‌ನ ಗೌಪ್ಯ ವ್ಯವಹಾರಕ್ಕೆ ಸಂಬಂಧಿಸಿದ ಮಾಹಿತಿ ಪಡೆದು ಹಣ ದೋಚುತ್ತಾರೆ. ಇದಲ್ಲದೇ ಬ್ಯಾಂಕ್‌ಗಳಿಗೆ ಹೋಲಿಕೆ ಆಗುವಂತಹ ಆ್ಯಪ್‌ಗಳನ್ನು ಸಹ ಕಳುಹಿಸಿ ಮಾಹಿತಿ ಪಡೆದುಕೊಳ್ಳುತ್ತಾರೆ. ಬ್ಯಾಂಕಿನಿಂದ ಮಾತನಾಡುತ್ತಿರುವುದು ಎಂದು ಮೊಬೈಲ್‌ ನಂಬರ್‌ಗೆ ಕರೆ ಮಾಡಿ ಎಲ್ಲ ಮಾಹಿತಿ ಪಡೆದು ಹಣ ದೋಚುತ್ತಾರೆ ಎಂದು ಪೊಲೀಸರು ತಿಳಿಸಿದರು.

ಸಾವರ್ಜನಿಕರು ಯಾವುದೇ ಕಾರಣಕ್ಕೂ ಎಟಿಎಂ ಕಾರ್ಡ್‌ ನಂಬರ್‌ ಓಟಿಪಿ ನಂಬರ್ ಹೇಳಬಾರದು. ಇದಲ್ಲದೇ ನಿಮ್ಮ ಇಂಟರ್‌ನೆಟ್‌ ಬ್ಯಾಂಕಿಂಗ್‌ ಮಾಹಿತಿ ವಿನಿಮಯ ಮಾಡಿಕೊಳ್ಳಬಾರದು. ಈ ಮೂರು ಅಂಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಹಣ ಕಳೆದುಕೊಳ್ಳುವಂತಹ ಪ್ರಶ್ನೆಯೇ ಬರುವುದಿಲ್ಲ. ಇಲಾಖೆ ವತಿಯಿಂದ ಜಾಗೃತಿ ಮೂಡಿಸಲಾಗುತ್ತಿದೆ.
ಜಿ.ಕೆ. ಮಿಥುನ್‌ ಕುಮಾರ್‌ ಎಸ್ಪಿ

1930ಗೆ ಕರೆ ಮಾಡಿ

ಆನ್‌ಲೈನ್‌ ವಂಚನೆಗೊಳಗಾಗಿ ಹಣ ಕಳೆದುಕೊಂಡಿರುವುದು ಕಂಡುಬಂದರೇ ತಕ್ಷಣವೇ ಸಹಾಯವಾಣಿ 1930ಗೆ ಕರೆ ಮಾಡಿ ಮಾಹಿತಿ ನೀಡಬೇಕು. ಇವರು ಬ್ಯಾಂಕಿನ ವಹಿವಾಟುಗಳನ್ನು ಬಂದ್‌ ಮಾಡುತ್ತಾರೆ. ಇದಾದ ಮೇಲೆ ಹಣ ಕಳೆದುಕೊಂಡವರು ಸೈಬರ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT