ಶುಕ್ರವಾರ, ಜನವರಿ 27, 2023
18 °C
ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹವಾನಿಯಂತ್ರಿತ ವ್ಯವಸ್ಥೆಯಲ್ಲಿ ಬಂದಿದ್ದ ‘ಭೀಮ’

ರೇಂಜ್ ರೋವರ್‌ ಕಾರಲ್ಲಿ ಪಯಣಿಸಿದ ಶ್ವಾನ, ತ್ರಿಸ್ಟಾರ್‌ ಹೋಟೆಲ್‌ನಲ್ಲಿ ವಾಸ್ತವ್ಯ!

ವೆಂಕಟೇಶ ಜಿ.ಎಚ್ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಇಲ್ಲಿನ ಗಾಂಧಿ ಪಾರ್ಕ್‌ನಲ್ಲಿ ಭಾನುವಾರ ದಸರಾ ಅಂಗವಾಗಿ ಮಹಾನಗರ ಪಾಲಿಕೆಯಿಂದ ಆಯೋಜಿಸಿದ್ದ ಶ್ವಾನ ಪ್ರದರ್ಶನದಲ್ಲಿ ದೂರದ ಬೆಂಗಳೂರಿನಿಂದ ಬಂದಿದ್ದ ಶ್ವಾನ ‘ಭೀಮ’ ಜನರನ್ನು ಆಕರ್ಷಿಸಿತು.

ಟಿಬೆಟಿಯನ್ ಮಸ್ತಿಫ್ (Tibetian Mastiff) ತಳಿಯ ಭೀಮ ಬಹುತೇಕ ಕರಡಿ ಹೋಲುತ್ತಾನೆ. ಈ ಶುನಕನ ಬೆಲೆಯ ಬಗ್ಗೆ ಸಂಘಟಕರು ಮಾಡಿದ್ದ ಪ್ರಚಾರದಿಂದಾಗಿ ಹಿಂದಿನ ದಿನವೇ ನಗರದ ಶ್ವಾನ ಪ್ರಿಯರ ಕುತೂಹಲ ಇಮ್ಮಡಿಗೊಂಡಿತ್ತು.

ಹೀಗಾಗಿ ವಾರಾಂತ್ಯದ ರಜೆಯ ದಿನ ‘ಭೀಮ‘ನ ಬರುವಿಕೆಗೆ ಮುನ್ನವೇ ಜನರು ಗಾಂಧಿ ಪಾರ್ಕ್‌ನಲ್ಲಿ ಜಮಾಯಿಸಿದ್ದರು. ಈ ಶ್ವಾನದ ಫೋಟೊ ತೆಗೆದುಕೊಂಡರು.

ಅದರ ನಿರ್ವಹಣೆ ವೆಚ್ಚ, ಬದುಕಿನ ರೀತಿ ಸಂಘಟಕರಿಂದ ಕೇಳಿ ತಿಳಿದುಕೊಂಡರು. ಅದು ಗಾಂಭೀರ್ಯದಿಂದ ಕೆಲ ಹೊತ್ತು ಸಮಾರಂಭದ ವೇದಿಕೆಯಲ್ಲಿ ಹೆಜ್ಜೆ ಹಾಕಿದ್ದನ್ನು ನೋಡಲು ನೂಕು–ನುಗ್ಗಲು ಉಂಟಾಯಿತು. ಈ ಗಡಿಬಿಡಿಯಲ್ಲಿ ‘ಭೀಮ’ನೊಂದಿಗೆ ಸೆಲ್ಫಿ ತೆಗೆದುಕೊಳ್ಳುವ ಇಚ್ಛೆ ಈಡೇರದೆ ಹಲವರು ‘ಇದು ನಾವು ಸಾಕಲು ತಕ್ಕುದ್ದಲ್ಲ. ಈ ಶ್ವಾನದ ಸಹವಾಸ ನಮಗಲ್ಲ’ ಎಂದು ಗೊಣಗುತ್ತಾ ಮರಳಿದರು.

ಬೆಂಗಳೂರಿನಿಂದ ಹಿಂದಿನ ದಿನವೇ ರೇಂಜ್ ರೋವರ್‌ ಕಾರಿನಲ್ಲಿ ತಂದಿದ್ದ ಈ ಶ್ವಾನವನ್ನು ಇಲ್ಲಿನ ಬಿ.ಎಚ್. ರಸ್ತೆಯ ತ್ರಿಸ್ಟಾರ್‌ ಹೋಟೆಲ್‌ನಲ್ಲಿ ಇಡಲಾಗಿತ್ತು. 

‘ಅದಕ್ಕೆ ಹವಾನಿಯಂತ್ರಿತ ವ್ಯವಸ್ಥೆ ಬೇಕಿದ್ದರಿಂದ ಪ್ರತ್ಯೇಕ ಕೊಠಡಿಯ ವ್ಯವಸ್ಥೆ ಮಾಡಲಾಗಿತ್ತು’ ಎಂದು ಶ್ವಾನ ಮೇಳದ ಸಂಘಟಕ, ಪಾಲಿಕೆ ಸದಸ್ಯ ಎಚ್.ಸಿ. ಯೋಗೀಶ ಹೇಳಿದರು. ಮೊದಲಿಗೆ ನಾಯಿ ಕರೆತರಲು ಹೆಲಿಕಾಪ್ಟರ್‌ ವ್ಯವಸ್ಥೆ ಕೇಳಲಾಗಿತ್ತು. ಕೊನೆಗೆ ಜೆಡಿಎಸ್ ಮುಖಂಡ ಎಂ.ಶ್ರೀಕಾಂತ ಅವರ ಪ್ರಯತ್ನದಿಂದ ಐಷಾರಾಮಿ ಕಾರಿನ ವ್ಯವಸ್ಥೆ ಮಾಡಲಾಯಿತು ಎಂದು ತಿಳಿದುಬಂದಿದೆ.

‘ದುಬಾರಿ ಶ್ವಾನಗಳಲ್ಲೊಂದು’

‘ಟಿಬೆಟಿಯನ್ ಮಸ್ತಿಫ್ ಪ್ರಪಂಚದಲ್ಲಿಯೇ ಅತ್ಯಂತ ದುಬಾರಿ ತಳಿಯ ಶ್ವಾನ. ಇದರ ಮಾದರಿಯಲ್ಲಿಯೇ ಹಲವು ತಳಿಗಳಿದ್ದು ಬೆಲೆಯಲ್ಲಿ ವ್ಯತ್ಯಾಸವೂ ಆಗಬಹುದು. ಆದರೆ ಇದರ ಬೆಲೆ ಮಾತ್ರ ₹ 10 ಕೋಟಿ’ ಎಂದು ನಾಯಿಯ ಮಾಲೀಕ ಬೆಂಗಳೂರಿನ ಸತೀಶ ಕಾಡಬೋಮ್ಸ್ ಹೇಳುತ್ತಾರೆ.

ಟಿಬೆಟಿಯನ್ ಮಸ್ತಿಫ್ ತಳಿ ನಾಯಿಗಳ ಬೆಲೆಯ ಬಗ್ಗೆ ವೆಬ್‌ಸೈಟ್‌ಗಳಲ್ಲಿ ಸಾವಿರ, ಲಕ್ಷಗಳ ಲೆಕ್ಕದಲ್ಲಿ ಉಲ್ಲೇಖವಾಗಿರುವ ಬಗ್ಗೆ ‘ಪ್ರಜಾವಾಣಿ’ ಪ್ರಶ್ನೆಗೆ ಸತೀಶ  ಪ್ರತಿಕ್ರಿಯಿಸಿದರು.

‘ಮೂರು ವರ್ಷಗಳ ಹಿಂದೆ ಚೈನಾದ ಬೀಜಿಂಗ್‌ನಿಂದ 3.5 ತಿಂಗಳ ನಾಯಿ ಮರಿ ತರಿಸಿದ್ದೆ. ಈ ತಳಿಯ ನಾಯಿ ಸಾಕುವುದು ಮನೆಯಲ್ಲಿ ರೋಲ್ಸ್‌ರಾಯ್ಸ್ ಕಾರು ಇಟ್ಟುಕೊಂಡಷ್ಟೇ ಗೌರವದ ಸಂಗತಿ’ ಎಂದು ಅವರು ಹೇಳುತ್ತಾರೆ.

‘ಇದಕ್ಕೆ ದಿನಕ್ಕೆ 2.5 ಕೆ.ಜಿ ಕೋಳಿಯ ಹಸಿ ಮಾಂಸ ಹಾಗೂ ರಾಯಲ್ ಕೆನನ್ ಸಿದ್ಧ ಆಹಾರ ಕೊಡುತ್ತಾರೆ. ಹವಾನಿಯಂತ್ರಿತ ವ್ಯವಸ್ಥೆ ಇಲ್ಲದೇ ಸೆಕೆಯಲ್ಲಿ ಇಟ್ಟರೆ ನಾಯಿಯ ಕೂದಲಿನ ಬೆಳವಣಿಗೆ ಕುಂಠಿತವಾಗುತ್ತದೆ‘ ಎನ್ನುತ್ತಾರೆ ಅವರು.

ಇಂಟರ್‌ನ್ಯಾಷನಲ್ ಸೆಲಬ್ರಿಟಿ ಡಾಗ್ ಬ್ರೀಡರ್ ಶ್ರೇಯಕ್ಕೆ ಪಾತ್ರರಾಗಿರುವ ಸತೀಶ ಕಾಡಬೋಮ್ಸ್ ಅವರು 150ಕ್ಕೂ ಹೆಚ್ಚು ತಳಿಯ ನಾಯಿಗಳನ್ನು ಸಾಕಿರುವುದಾಗಿ ಹೇಳುತ್ತಾರೆ. ಸದ್ಯ ಅವರು ಇಂಡಿಯನ್ ಡಾಗ್ ಬ್ರೀಡರ್ಸ್ ಅಸೋಸಿಯೇಶನ್ ಅಧ್ಯಕ್ಷ.

ಉಡುಪಿಯ ಶ್ವಾನ, ಬಾಕ್ಸರ್ ಚಾಂಪಿಯನ್...

ಶ್ವಾನ ಮೇಳದಲ್ಲಿ ಭಾನುವಾರ ಸಂಜೆವರೆಗೂ ಬೌ ಬೌ ಸದ್ದು ಅನುರಣಿಸಿತು. ಮೇಳಕ್ಕೆ ಸಾಕು ನಾಯಿಗಳನ್ನು ಕರೆತಂದಿದ್ದ ಮಹಿಳೆಯರು, ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು. ಅವುಗಳನ್ನು ಮುದ್ದಿಸುತ್ತಾ ಸ್ಪರ್ಧೆಗೆ ಅಣಿಗೊಳಿಸಿದ್ದು ಕಂಡುಬಂದಿತು.

ಭಿನ್ನ ತಳಿಯ ನಾಯಿಗಳು ಬೊಗಳಿ, ಅರಚಿ ಪರಸ್ಪರರು ತಮ್ಮ ಇರುವಿಕೆಯನ್ನು ಖಚಿತಪಡಿಸುತ್ತಿದ್ದದ್ದು, ಮಾಲೀಕರು ಸಮಾಧಾನ ಮಾಡಿದಷ್ಟು ದನಿ ಜೋರು ಮಾಡುತ್ತಿದ್ದುದು ಕಂಡಿತು. ನಿತ್ಯ ಪಾರ್ಕ್‌ನಲ್ಲಿ ನೆರೆಯುತ್ತಿದ್ದ ಬೀದಿ ನಾಯಿಗಳು ತಮ್ಮ ಪರಿಸರದಲ್ಲಿ ಆದ ದಿಢೀರ್ ಬದಲಾವಣೆಗೆ ಗೊಂದಲಕ್ಕೀಡಾದಂತೆ ಕಂಡವು. ಬೊಗಳಿ, ಓಡಾಡಿ ತಮ್ಮ ಅಸಮಾಧಾನ ತೋಡಿಕೊಂಡವು.

ಒಟ್ಟು 23 ತಳಿಯ ನಾಯಿಗಳು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದು, 163 ನಾಯಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವು.

ಬಹುಮಾನ ವಿಜೇತರು: ಪ್ರಥಮ ಬಹುಮಾನ: ಉಡುಪಿಯ ಕೆ.ಎಸ್.ಸಂದೀಪ್ (ಬಾಕ್ಸರ್ ತಳಿ) ₹ 15 ಸಾವಿರ, ದ್ವಿತೀಯ: ಹರಿಹರದ ಗಂಗಾಧರ (ರಾಟ್ ವೀಲರ್) ₹10 ಸಾವಿರ, ತೃತೀಯ: ಭದ್ರಾವತಿಯ ಗುರುರಾಜ್ (ಜರ್ಮನ್ ಶೆಪರ್ಡ್) ₹7 ಸಾವಿರ ಬಹುಮಾನ ಪಡೆದರು. ನಾಲ್ಕನೇ ಬಹುಮಾನ: ಹಾಸನದ ಚಂದನ್ (ಡಾಬರ್‌ಮನ್), ಐದನೇ ಬಹುಮಾನ: ಶಿವಮೊಗ್ಗದ ಕೆನಿತ್ ಹರ್ಷ (ಬೀಗಲ್), ಆರನೇ ಸ್ಥಾನ: ಕಡೂರಿನ ರಮೇಶ (ಗೋಲ್ಡನ್‌ ರಿಟ್ರೀವರ್) ಏಳನೇ ಸ್ಥಾನ: ಶಿವಮೊಗ್ಗದ ಪವನ್ (ಸಿಟ್ಜ್ಯು), ಎಂಟನೇ: ಭದ್ರಾವತಿಯ ಮದನ್ (ಗ್ರೇಟ್‌ಡೇನ್).

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು