ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ| ಬದುಕಿನ ಬಂಡಿಗೆ ಸ್ವಾವಲಂಬನೆಯ ಡ್ರೈವಿಂಗ್

ಕೋಹಳ್ಳಿ ಗ್ರಾ.ಪಂ: ಕಸ ನಿರ್ವಹಣೆ ಗಾಡಿಗೆ ಕುಸುಮಾ ಸಾರಥಿ
Last Updated 8 ಮಾರ್ಚ್ 2023, 7:20 IST
ಅಕ್ಷರ ಗಾತ್ರ

ಶಿವಮೊಗ್ಗ: ‘ಮೊದಲು ಬೇರೆಯವರ ವಾಹನದಲ್ಲಿ ಡ್ರೈವರ್ ಪಕ್ಕದಲ್ಲಿ ಕುಳಿತಾಗ ಎದುರಿಗೆ ಯಾವುದಾದರೂ ವೆಹಿಕಲ್ ಬಂದರೆ ಗುದ್ದಿ ಬಿಡುತ್ತಾರೇನೋ ಅನ್ನಿಸುತ್ತಿತ್ತು. ಭಯವಾಗುತ್ತಿತ್ತು. ಈಗ ಎದುರಿಗೆ ಬರುವವರು ಸೈಡ್‌ನಲ್ಲಿ ಹೋಗುತ್ತಾರೆ ಬಿಡು ಅನ್ನಿಸುತ್ತದೆ...’

ಇದು ಶಿವಮೊಗ್ಗ ತಾಲ್ಲೂಕಿನ ಕೋಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಕಸ ಸಂಗ್ರಹ ವಾಹನ ಓಡಿಸುವ ಚಾಲಕಿ ಆಯನೂರಿನ ಕುಸುಮಾ ಬಾಯಿ ಅವರ ಮಾತು.

ಕುಸುಮಾ ನಿತ್ಯ ಕೋಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳ ಮನೆ–ಮನೆಗೆ ವಾಹನ ಒಯ್ದು ಕಸ ಸಂಗ್ರಹಣೆಗೆ ನೆರವಾಗುತ್ತಾರೆ. ಸ್ವಚ್ಛ ಭಾರತ್ ಯೋಜನೆಯಡಿ ಗ್ರಾಮ ಪಂಚಾಯಿತಿಯಲ್ಲಿ ಆರಂಭಿಸಿರುವ ಕಸ ನಿರ್ವಹಣಾ ಘಟಕಕ್ಕೆ ಸಂಗ್ರಹಿಸಿ ತಂದ ಕಸ ಅನ್‌ಲೋಡ್ ಮಾಡುತ್ತಾರೆ.

‘ನಮ್ಮದು ಕೂಲಿ ಕಾರ್ಮಿಕ ಕುಟುಂಬ. ಸ್ವಂತ ಜಮೀನು ಇಲ್ಲ. ಪತಿ ದೇವರಾಜ ನಾಯ್ಕ ಬೇರೆಯವರ ಜಮೀನು ಗುತ್ತಿಗೆ ಹಿಡಿದು ಜೋಳ, ಭತ್ತ, ಶುಂಠಿ ಬೆಳೆಯುತ್ತಾರೆ. ನಾನೂ ಕೆಲಸಕ್ಕೆ ಸೇರಿದ್ದರಿಂದ ಮಾಸಿಕ ₹ 11 ಸಾವಿರ ವೇತನ ದೊರೆಯುತ್ತಿದೆ. ಕುಟುಂಬ ನಿರ್ವಹಣೆಗೆ ಅನುಕೂಲವಾಗಿದೆ’ ಎಂದು ಕುಸುಮಾ ಬಾಯಿ ತಿಳಿಸಿದರು.

‘ಬಾಲ್ಯದಲ್ಲಿ ಸೈಕಲ್ ಓಡಿಸಿದ್ದ ನೆನಪು. ಚಾಲನೆ ಗೊತ್ತಿರಲಿಲ್ಲ. ಕೆಲಸಕ್ಕೆ ಸೇರುವ ಮುನ್ನ ಭದ್ರಾವತಿಯ ದಿಲ್‌ದಾರ್ ಡ್ರೈವಿಂಗ್ ಶಾಲೆಯಲ್ಲಿ 25 ದಿನಗಳ ಕಾಲ ವಾಹನ ಚಾಲನೆ ತರಬೇತಿ ಪಡೆದುಕೊಂಡೆ. ಗಾಡಿ ಸ್ಟಾರ್ಟ್ ಮಾಡುವುದು, ಕ್ಲಚ್, ಗಿಯರ್ ಬಳಕೆ, ಇಂಡಿಕೇಟರ್, ಹೆಡ್‌ಲೈಟ್ ಬಳಕೆ ಎಲ್ಲವನ್ನೂ ಕಲಿತಿದ್ದೇನೆ. ಚಾಲನೆ ಕಲಿಯುವಾಗ ಯಾರಿಗೆ ಬೇಕಪ್ಪಾ ಈ ಕೆಲಸ. ಮನೆ ಕೆಲಸ ಮಾಡಿಕೊಂಡು ಇದ್ದರೆ ಆಯ್ತು ಅನ್ನಿಸುತ್ತಿತ್ತು. ಈಗ ಸಂತೋಷವಾಗುತ್ತದೆ. ವಾಹನ ಚಾಲನೆಯಿಂದ ನನ್ನ ಆತ್ಮವಿಶ್ವಾಸವೂ ಹೆಚ್ಚಿದೆ’ ಎಂದು ಅವರು ಹೇಳಿದರು.

ಕುಸುಮಾ ಅವರಿಗೆ ಇಬ್ಬರು ಹೆಣ್ಣು ಮಕ್ಕಳು. ಅವರಿಗೆ ಬೆಳಿಗ್ಗೆ ಏಳು ಗಂಟೆಯ ಒಳಗೆ ಉಪಾಹಾರ ಸಿದ್ಧಪಡಿಸಿ ನೀಡಿ ಗಾಡಿ ಚಾಲು ಮಾಡುತ್ತಾರೆ. ಮಧ್ಯಾಹ್ನ 3 ಗಂಟೆಯವರೆಗೆ ಕಸ ಸಂಗ್ರಹಿಸಿ ಘಟಕಕ್ಕೆ ತರುತ್ತಾರೆ.

‘ಸರ್ಕಾರ ನಮ್ಮ ಕೆಲಸ ಕಾಯಂ ಮಾಡಲಿ’ ಎಂದು ಅವರು ಮನವಿ ಮಾಡಿದ್ದಾರೆ.

ಕೋಟ್‌...

ಕುಸುಮಾ ಅವರ ಕೆಲಸದಲ್ಲಿನ ಬದ್ಧತೆಯಿಂದಾಗಿ ಕಸ ನಿರ್ವಹಣೆ ವಿಚಾರದಲ್ಲಿ ಪಂಚಾಯಿತಿಗೆ ಇಲ್ಲಿಯವರೆಗೆ ಯಾವುದೇ ದೂರು ಬಂದಿಲ್ಲ. ಮಹಿಳಾ ಚಾಲಕಿ ಬಗ್ಗೆ ಹೆಮ್ಮೆ ಇದೆ.

ಬಿ. ಸುಮಿತ್ರಾ, ಕೋಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT