ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಶ್ವರಪ್ಪ ಚುನಾವಣೆಗೆ ಸ್ಪರ್ಧಿಸುವುದು ಈಗಲೂ ಅನುಮಾನ : ಕಿಮ್ಮನೆ ರತ್ನಾಕ

ಮೇ 6ರವರೆಗೆ ಏನೂ ಮಾತಾಡೊಲ್ಲ; ಕಿಮ್ಮನೆ
Published 11 ಏಪ್ರಿಲ್ 2024, 8:33 IST
Last Updated 11 ಏಪ್ರಿಲ್ 2024, 8:33 IST
ಅಕ್ಷರ ಗಾತ್ರ

ಶಿವಮೊಗ್ಗ: ’ಲೋಕಸಭಾ ಚುನಾವಣೆಯಲ್ಲಿ ಕೆ.ಎಸ್.ಈಶ್ವರಪ್ಪ ಸ್ವತಂತ್ರ ಅಭ್ಯರ್ಥಿ ಆಗಿ ಸ್ಪರ್ಧಿಸುವ ಬಗ್ಗೆ ನಮಗೆ ಈಗಲೂ ಅನುಮಾನವಿದೆ. ಮತದಾನದ ಮುನ್ನಾ ದಿನವಾದ ಮೇ 6ರ ತನಕ ಈಶ್ವರಪ್ಪ ವಿಚಾರದಲ್ಲಿ ಏನೂ (ಕಾಂಗ್ರೆಸ್‌) ಮಾತಾಡುವುದಿಲ್ಲ‘ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈಶ್ವರಪ್ಪ ಅವರ ಸ್ಪರ್ಧೆಯಿಂದ ಕಾಂಗ್ರೆಸ್ ಗೆ ಯಾವುದೇ ಲಾಭವಿಲ್ಲ. ಎದುರಾಳಿ ಮತಗಳು ವಿಭಜನೆ ಆದರೆ ನಮಗೆ ಲಾಭವೇ, ಹಾಗೆಂದು ನಾವು ಅವರ ಸ್ಪರ್ಧೆಯನ್ನು ನಂಬಿ ಕುಳಿತಿಲ್ಲ. ಬದಲಿಗೆ ಗ್ಯಾರಂಟಿ ಯೋಜನೆಗಳ ನಂಬಿ ಸ್ಪರ್ಧಿಸುತ್ತಿದ್ದೇವೆ ಎಂದು ತಿಳಿಸಿದರು.

’ರಾಜ್ಯದಲ್ಲಿ ನೆರೆ ಹಾವಳಿ ಮತ್ತು ಬರಗಾಲದ ಸಮಯದಲ್ಲಿ ಭೇಟಿ ನೀಡದ ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣೆ ಕಾರಣಕ್ಕೆ ಕರ್ನಾಟಕಕ್ಕೆ ಮೇಲಿಂದ ಮೇಲೆ ಭೇಟಿ ನೀಡುತ್ತಿರುವುದು ಹಾಸ್ಯಾಸ್ಪದ. ಕರ್ನಾಟಕದಲ್ಲಿ 2020 ರಲ್ಲಿ ಬಿಜೆಪಿ ಸರ್ಕಾರ ಇದ್ದಾಗಲೇ ನೆರೆ ಹಾವಳಿಯಿಂದಾಗಿ ₹34 ಸಾವಿರ ಕೋಟಿ ಮೊತ್ತದ ನಷ್ಟ ಉಂಟಾಗಿತ್ತು. ರಾಜ್ಯದ ಜನರು ಮನೆ, ಮಾರು, ಜಾನುವಾರು, ಆಸ್ತಿ ಪಾಸ್ತಿ ಕಳೆದುಕೊಂಡು ನಷ್ಟ ಅನುಭವಿಸಿದ್ದರು. ಆಗ ಕೇಂದ್ರ ಸರ್ಕಾರ ಸ್ಪಂದಿಸಿರಲಿಲ್ಲ. ಪ್ರಧಾನಿ ಇತ್ತ ತಿರುಗಿ ನೋಡಿರಲಿಲ್ಲ‘ ಎಂದರು.

ಈಗ ಬರಗಾಲ ಬಂದಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವುದರಿಂದ ಕೇಂದ್ರ ಸರ್ಕಾರ ಯಾವುದೇ ನೆರವು ಕೊಡಲಿಲ್ಲ. ಕರ್ನಾಟಕಕ್ಕೆ ಕೇಂದ್ರದಿಂದ ತೆರಿಗೆ ಅನುದಾನ ಹಂಚಿಕೆಯಲ್ಲಿ ಬರಬೇಕಾದ ₹1.87 ಲಕ್ಷ ಪಡೆಯಲು ಕಾಂಗ್ರೆಸ್ ಸರ್ಕಾರ ಅನಿವಾರ್ಯವಾಗಿ ಸುಪ್ರೀಂಕೋರ್ಟ್‌ ಮೆಟ್ಟಿಲೇರಬೇಕಾಯಿತು ಎಂದು ದೂರಿದರು.

ರಾಜ್ಯದ ಬಿಜೆಪಿ ಸಂಸದರು ಕೇಂದ್ರದಿಂದ ರಾಜ್ಯಕ್ಕೆ ಆರ್ಥಿಕ ನೆರವು ಕೇಳಲಿಲ್ಲ. ಈಗ ಮತಯಾಚಿಸಲು ಜನರ ಮುಂದೆ ಬಂದಿದ್ದಾರೆ. ಕರ್ನಾಟಕದ ಮತದಾರರು ಅವರನ್ನು ಮತ್ತೆ ಗೆಲ್ಲಿಸುವುದು ಅಗತ್ಯವಿದೆಯೇ ಎಂದು ಪ್ರಶ್ನಿಸಿದರು.

’ಬಿಜೆಪಿಯವರು ಸದಾ ಜಾತಿ, ಧರ್ಮದ ವಿಷಯಗಳನ್ನು ಮುನ್ನೆಲೆಗೆ ತಂದು ಬಹುಸಂಖ್ಯಾತರ ಮತ ಗಳಿಸುವ ಮೂಲಕ ಅಧಿಕಾರಕ್ಕೆ ಬಂದು, ದೇಶದಲ್ಲಿ ಶಾಂತಿ ನೆಮ್ಮದಿ ಹಾಳು ಮಾಡುತ್ತಿದ್ದಾರೆ. ಬಿಜೆಪಿ ಯಾವಾಗಲೂ ಶ್ರೀಮಂತರ ಮತ್ತು ಶ್ರೀಮಂತ ಉದ್ಯಮಿಗಳ ಪರವಾದ ಆರ್ಥಿಕ ನಿಲುವುಗಳನ್ನು ತೆಗೆದುಕೊಂಡು, ಬಡವರ ಬದುಕಿನ ವಿರುದ್ಧ ಪ್ರಹಾರ ಮಾಡುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿಗೋಷ್ಟಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನಕುಮಾರ್, ಮುಖಂಡರಾದ ಎನ್.ರಮೇಶ್, ಜಿ.ಡಿ ಮಂಜುನಾಥ್, ಶಿವಾನಂದ್, ಜಿತೇಂದ್ರ ಗೌಡ, ಚಂದ್ರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT