ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತೀರ್ಥಹಳ್ಳಿ: ಆಸ್ಪತ್ರೆ ರಸ್ತೆ ತುಂಬ ಗುಂಡಿ!

ರೋಗಿಗಳಿಗೆ ಇಲ್ಲಿ ಅಪಾಯ ಕಟ್ಟಿಟ್ಟಬುತ್ತಿ l ರಸ್ತೆ ಪಾಲಾಗುತ್ತಿವೆ ಜಲ್ಲಿಕಲ್ಲು
Published 6 ಏಪ್ರಿಲ್ 2024, 7:52 IST
Last Updated 6 ಏಪ್ರಿಲ್ 2024, 7:52 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ನಿತ್ಯ ಸಾವಿರಾರು ಜನ ಓಡಾಡುವ ಜೆ.ಸಿ. ಆಸ್ಪತ್ರೆ ರಸ್ತೆಯಲ್ಲಿ ಹೊಂಡ, ಗುಂಡಿ ಬಿದ್ದಿವೆ. ತುರ್ತು ಚಿಕಿತ್ಸೆಗೆಂದು ಧಾವಿಸಿ ಬರುವ ರೋಗಿಗಳು ಪರದಾಡುವ ಸ್ಥಿತಿ ಇದೆ.

ರಾಷ್ಟ್ರೀಯ ಹೆದ್ದಾರಿ– 169ಗೆ ಹೊಂದಿಕೊಂಡಂತೆ ಇರುವ ಜಯಚಾಮರಾಜೇಂದ್ರ ತಾಲ್ಲೂಕು ಆಸ್ಪತ್ರೆಯ ಸಂಪರ್ಕದ ಡಾಂಬಾರು ರಸ್ತೆ ಕಿತ್ತು ಹೋಗಿ ವರ್ಷಗಳೇ ಕಳೆದಿದ್ದರೂ, ದುರಸ್ತಿಯಾಗಿಲ್ಲ. ಹಿರಿಯ ನಾಗರಿಕರು, ರೋಗಿಗಳು, ಮಹಿಳೆಯರು ದ್ವಿಚಕ್ರ ವಾಹನ ಚಲಾಯಿಸುವಾಗ ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚಿದೆ.

ರಸ್ತೆಗೆ ಅಳವಡಿಸಿದ ಜಲ್ಲಿಗಳು ಕಿತ್ತು ಹೋಗಿದ್ದು ಹೆದ್ದಾರಿಯಲ್ಲಿ ಚಲಿಸುವ ಸವಾರರಿಗೂ ತೊಂದರೆಯಾಗುತ್ತಿದೆ. ಜಲ್ಲಿಗಳು ಅಲ್ಲಲ್ಲಿ ರಸ್ತೆಗೆ ಸೇರುತ್ತಿದ್ದು ಅಪಾಯಕ್ಕೆ ಆಹ್ವಾನ ನೀಡುವಂತಿದೆ. ಮಳೆಗಾಲದಲ್ಲಿ ಆಸ್ಪತ್ರೆಯ ಮೇಲ್ಭಾಗದಲ್ಲಿರುವ ಗುಡ್ಡದಿಂದ ಹರಿಯುವ ನೀರು ಹೆದ್ದಾರಿಗೆ ನೇರವಾಗಿ ಹರಿಯುತ್ತದೆ. ಇಲ್ಲಿ ಚರಂಡಿ ಇದ್ದರೂ ಇಲ್ಲದಂತಿದೆ. ಮಣ್ಣಿನಿಂದ ಚರಂಡಿ ಮುಚ್ಚಿ ಹೋಗಿರುವುದಲ್ಲದೇ, ಅದಕ್ಕೆ ಅಳವಡಿಸಿರುವ ಗ್ರಿಲ್‌ಗಳು ತುಕ್ಕು ಹಿಡಿದಿದೆ. ಚರಂಡಿ ಸರಿಪಡಿಸದ ಹೊರತು ಈ ಸಮಸ್ಯೆಗೆ ಪರಿಹಾರ ಇಲ್ಲ ಎನ್ನುತ್ತಾರೆ ಸ್ಥಳೀಯರು.

ಆಸ್ಪತ್ರೆ ಸಂಪರ್ಕದ ರಸ್ತೆಯಲ್ಲಿ ಗುಂಡಿ ಬಿದ್ದಿರುವುದು

ಆಸ್ಪತ್ರೆ ಸಂಪರ್ಕದ ರಸ್ತೆಯಲ್ಲಿ ಗುಂಡಿ ಬಿದ್ದಿರುವುದು

ರೋಗಿಯನ್ನು ಅವಸರದಲ್ಲಿ ಹೊತ್ತೊಯ್ಯುವ ಆಂಬುಲೆನ್ಸ್‌ಗಳ ಚಾಲಕರೂ ರಸ್ತೆ ಗುಂಡಿಗಳಿಂದ ಪ್ರಯಾಸಪಡುತ್ತಾರೆ. ಗುಂಡಿ ತಪ್ಪಿಸುವ ಭರದಲ್ಲಿ ಅನಾಹುತಕ್ಕೆ ಎಡಮಾಡಿಕೊಡುತ್ತದೆ. ತುರ್ತು ಚಿಕಿತ್ಸೆ ಅಗತ್ಯವಿರುವ ರೋಗಿಗಳ ಜೀವಕ್ಕೆ ಭದ್ರತೆ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ ಎಂದು ರೋಗಿಗಳು ಹೇಳುತ್ತಾರೆ.

ತುಂಬು ಗರ್ಭಿಣಿಯರನ್ನು ಆಸ್ಪತ್ರೆಗೆ ಹೆರಿಗೆಗೆ ಕರೆದೊಯ್ಯುವಾಗ ಈ ರಸ್ತೆಯಲ್ಲಿನ ಗುಂಡಿಗಳಿಂದಾಗಿ ಮಾರ್ಗ ಮಧ್ಯದಲ್ಲೇ ಅಸುರಕ್ಷಿತ ಹೆರಿಗೆ ಆಗುವ ಅಪಾಯವೂ ಇದೆ ಎಂದು ಅವರು ದೂರುತ್ತಾರೆ.

ಆಸ್ಪತ್ರೆಯ ಮುಖ್ಯ ರಸ್ತೆಯಲ್ಲಿಯೇ ಗುಂಡಿ ಬಿದ್ದಿದ್ದರೂ ದುರಸ್ತಿ ಕಾರ್ಯ ನಡೆಯುತ್ತಿಲ್ಲ. ರೋಗಿಗಳ ಪ್ರಾಣಕ್ಕೆ ಯಾರು ಹೊಣೆ? ತಕ್ಷಣವೇ ಆಸ್ಪತ್ರೆಯ ಆಡಳಿತ ಮಂಡಳಿ ಈ ಬಗ್ಗೆ ಗಮನ ಹರಿಸಬೇಕುಹಾರೋಗೊಳಿಗೆ
ವಿಶ್ವನಾಥ, ಸ್ಥಳೀಯ
ತಾಲ್ಲೂಕಿನ ಅಭಿವೃದ್ಧಿಗೆ ಕೋಟ್ಯಂತರ ರೂಪಾಯಿ ಅನುದಾನ ಬಂದಿದೆ. ಆಸ್ಪತ್ರೆಯ ಪಕ್ಕದಲ್ಲಿಯೇ ಶಾಸಕರ ಕಚೇರಿ ಇದ್ದೂ, ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ತಕ್ಷಣವೇ ಇದಕ್ಕೆ ಸ್ಪಂದಿಸಬೇಕು
ಪ್ರೇಮ್‌ ಯಡೂರು, ಸ್ಥಳೀಯ
ಆಸ್ಪತ್ರೆ ಸಂಪರ್ಕದ ರಸ್ತೆ ಹಾಳಾಗಿದ್ದು ರೋಗಿಗಳಿಗೆ ತೊಂದರೆಯಾಗುತ್ತಿರುವುದು ಗಮನಕ್ಕೆ ಬಂದಿದೆ. ದುರಸ್ತಿಗೆ ಅನುದಾನ ಇಲ್ಲದ ಕಾರಣ ಪಟ್ಟಣ ಪಂಚಾಯಿತಿ ನೆರವಿಗೆ ಮನವಿ ಸಲ್ಲಿಸಲಾಗಿದೆ
ಡಾ. ಗಣೇಶ್ ಭಟ್, ವೈದ್ಯಾಧಿಕಾರಿ, ಜೆ.ಸಿ. ಆಸ್ಪತ್ರೆ
ಕಿಷ್ಕಿಂದೆಯಂತಹ ರಸ್ತೆ: 
ಆಸ್ಪತ್ರೆಯನ್ನು ಸಂಪರ್ಕಿಸುವ ರಸ್ತೆ ಇಕ್ಕಟ್ಟಾಗಿದೆ. ಎರಡು ಪಥದ ರಸ್ತೆಯಿದ್ದರೂ ಸಂಪರ್ಕಕ್ಕೆ ಅನುಕೂಲಕರವಾಗಿ ಇಲ್ಲ. ಕೊಪ್ಪ ಸರ್ಕಲ್‌ ಮಾರ್ಗದಲ್ಲಿ ಹಿಂಬದಿಯ ಗೇಟ್‌ ಇದ್ದರೂ ಬಳಕೆಯಲ್ಲಿ ಇಲ್ಲ. ಯಾವಾಗಲೂ ಮುಚ್ಚಿರುತ್ತದೆ. ತುರ್ತು ಸಂದರ್ಭದಲ್ಲಿ ಆಂಬುಲೆನ್ಸ್‌ಗಳು ಸುತ್ತುವರಿದು ಬರಬೇಕಿದೆ. ಕಾಂಕ್ರಿಟ್‌ ರಸ್ತೆ ಕೂಡ ಬಿರುಕು ಬಿಟ್ಟಿದ್ದು ಸಂಚಾರಕ್ಕೆ ಅನುಕೂಲ ವಾತಾವರಣ ಇಲ್ಲದಂತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT