ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮರಸ್ಯ ಕದಡಲು ಪುಷ್ಟಿ ನೀಡದ ಘಟನೆ

ಆನವಟ್ಟಿ: ‘ಜೊತೆಗಿರುವನು ಚಂದಿರ’ ನಾಟಕ ಪ್ರದರ್ಶನ ತಡೆದ ಘಟನೆ
Last Updated 7 ಜುಲೈ 2022, 4:44 IST
ಅಕ್ಷರ ಗಾತ್ರ

ಆನವಟ್ಟಿ: ‘ಜೊತೆಗಿರುವನು ಚಂದಿರ’ ನಾಟಕ ಪ್ರದರ್ಶನಕ್ಕೆ ಬಜರಂಗದಳದ ಕಾರ್ಯಕರ್ತರು ಅಡ್ಡಿಪಡಿಸಿದ ಹೀನ ಘಟನೆ ಇತ್ತೀಚೆಗೆ ನಡೆದಿರುವುದು ಆನವಟ್ಟಿಯ ಸಾಮರಸ್ಯಕ್ಕೆ ಕಪ್ಪುಚುಕ್ಕೆಯಾಗಿ ಪರಿಗಣಿಸಿದೆ. ಆದರೂ, ಹಿಂದೂ–ಮುಸ್ಲಿಂ ಸಮುದಾಯಗಳ ನಡುವಿನ ಭಾಂದವ್ಯಕ್ಕೆ ಈ ಘಟನೆ ಯಾವುದೇ ರೀತಿಯ ಧಕ್ಕೆ ಉಂಟುಮಾಡಲು ಸಾಧ್ಯವಾಗದಿರುವುದೇ ಸಮಾಧಾನಕರ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.

ಕೋಮು ಸಾಮರಸ್ಯಕ್ಕೆ ಆನವಟ್ಟಿ ಹೋಬಳಿ ಮಾದರಿಯಾಗಿದೆ. ಇತಿಹಾಸದಲ್ಲಿ ಇದುವರೆಗೂ ಕೋಮ ಗಲಭೆಗಳು ನಡೆದ ಉದಾಹರಣೆಗಳಿಲ್ಲ. ಸಣ್ಣಪುಟ್ಟ ಸಮಸ್ಯೆಗಳನ್ನು ಉದ್ಭವವಾದರೂ ಎರಡೂ ಸಮುದಾಯಗಳ ಜನ ತಮ್ಮಲ್ಲೇ ಬಗೆಹರಿಕೊಳ್ಳುತ್ತಿದ್ದರು. ಆದರೆ, ನಾಟಕ ಪ್ರದರ್ಶನ ಅಡ್ಡಿಪಡಿಸಿರುವ ಆರ್‌ಎಸ್‌ಎಸ್ ಕಾರ್ಯಕರ್ತ ಶ್ರೀಧರ ಆಚಾರ್ ಹಾಗೂ ಬಜರಂಗದಳದ ಮಂಜಪ್ಪ ಮಿಲ್ಟ್ರಿ ಅವರ ನಡೆಗೆ ಪ್ರಗತಿಪರರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆನವಟ್ಟಿಯಲ್ಲಿಹಬ್ಬ–ಹರಿದಿನಗಳನ್ನು ಒಟ್ಟಾಗಿ ಸಂಭ್ರಮದಿಂದ ಆಚರಿಸಲಾಗುತ್ತಿದೆ. ದುರ್ಗಮ್ಮ ಜಾತ್ರೆಯನ್ನು ಎರಡೂ ಸಮುದಾಯದವರು ಕೂಡಿ ನಡೆಸುತ್ತಾರೆ. ತಾಲ್ಲೂಕಿನ ಉರಗನಹಳ್ಳಿಯಲ್ಲಿ ಇರುವ ಧಾರ್ಮಿಕ ಕ್ಷೇತ್ರದಲ್ಲಿ ಹಿಂದೂಗಳು ಮುಸ್ಲಿಮರ ದರ್ಗಾದಲ್ಲಿ, ಮುಸ್ಲಿಮರು ಹಿಂದೂ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸುತ್ತಾರೆ. ಒಟ್ಟಾರೆ ಧಾರ್ಮಿಕ ಆಚರಣೆಯ ವಿಚಾರದಲ್ಲೂ ಸಾಮರಸ್ಯವಿದೆ.

‘ಅದೃಷ್ಟವಶಾತ್‌ ಈ ಘಟನೆಯಿಂದ ಯಾವುದೇ ಅಹಿತಕರ ಘಟನೆಗಳಿಗೆ ಪುಷ್ಟಿ ದೊರೆತಿಲ್ಲ. ಹಿಂದೂ– ಮುಸ್ಲಿಮರ ಭಾವನೆಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಎಂದಿನಂತೆ ಎಲ್ಲರೂ ಸಾಮರಸ್ಯದಿಂದಲೇ ಇದ್ದೇವೆ. ಇದು ತಪ್ಪು ಗ್ರಹಿಕೆಯಿಂದ ಆಗಿರುವ ಬೆಳವಣಿಗೆ. ಇಂಥ ಘಟನೆ ಮರುಕಳಿಸಬಾರದು’ ಎಂಬ ಆಶಯವನ್ನೂ ಅವರು ವ್ಯಕ್ತಪಡಿಸಿದ್ದಾರೆ.

ಹಿಂದೆ ಎಸ್.ಎಲ್. ಭೈರಪ್ಪ ಅವರ ‘ಆವರಣ’ ಕಾದಂಬರಿ ಬಿಡುಗಡೆಯಾದಾಗ ಒಂದು ಕೋಮಿನವರು ವಿರೋಧ ವ್ಯಕ್ತಪಡಿಸಿರುವುದಕ್ಕೂ, ಜಯಂತ ಕಾಯ್ಕಿಣಿ ಅವರ ‘ಜೊತೆಗಿರುವನು ಚಂದಿರ’ ನಾಟಕಕ್ಕೆ ವಿರೋಧ ವ್ಯಕ್ತ ಆಗಿರುವುದಕ್ಕೂ ವ್ಯತ್ಯಾಸವಿಲ್ಲ. ಈ ಎರಡೂ ಘಟನೆಗಳಿಗೆ ಹೋಲಿಸಿದರೆ ಇಬ್ಬರ ಮನಃಸ್ಥಿತಿಗಳು ಒಂದೇ. ಎಲ್ಲವನ್ನೂ ಸ್ವೀಕರಿಸಿ, ಭಾರತೀಯ ಮನೋಧರ್ಮವನ್ನು ಅರ್ಥಮಾಡಿಕೊಳ್ಳಬೇಕಷ್ಟೇ’ ಎನ್ನುತ್ತಾರೆ ಅತಿಥಿ ಉಪನ್ಯಾಸಕಇರ್ಫಾನ್ ಕೋಟಿ.

‘ಆನವಟ್ಟಿಯ ಸಾಮರಸ್ಯಕ್ಕೆ ಧಕ್ಕೆಯಾಗಿಲ್ಲ. ಎಲ್ಲರೂ ಸ್ನೇಹಿತರೇ, ಮನಸ್ಸಿನಲ್ಲಿ ಏನೂ ಇಟ್ಟುಕೊಳ್ಳುವ ಅವಶ್ಯಕತೆ ಇಲ್ಲ. ಎಲ್ಲರೂ ಸಾಮರಸ್ಯದಿಂದ ಇದ್ದೇವೆ. ಹಿಂದೂ–ಮಸ್ಲಿಂ ಎಂಬ ಭೇದ ಇಟ್ಟುಕೊಳ್ಳಬಾರದು. ನಾಟಕದ ಕಥಾಹಂದರದ ಆಶಯ ಏನು ಎಂಬುದನ್ನು ಅರ್ಥೈಸಿಕೊಳ್ಳಬೇಕು. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸುವ ಮನೋಭಾವ ಇರಬೇಕು. ನಾಟಕ ಕಲೆಯನ್ನು ಒಂದು ಸಮುದಾಯದಕ್ಕೆ ಸೀಮಿತವಾಗಿ ನೋಡುವ ಬದಲು, ಎಲ್ಲ ಸಮುದಾಯಗಳನ್ನೂ ಒಳಗೊಂಡಿದೆ ಎಂಬುವುದನ್ನು ಅರಿಯಬೇಕು’ ಎಂದು ಕನ್ನಡ ಸಾಹಿತ್ಯ ಪರಿಷತ್‌ನ ಆನವಟ್ಟಿ ಘಟಕದ ಅಧ್ಯಕ್ಷ ಬಸವನಗೌಡ ಮಲ್ಲಾಪುರ ಅಭಿಪ್ರಾಯಪಟ್ಟರು.

***

ಅರ್ಧಂಬರ್ಧ ತಿಳಿದುಕೊಂವರಿಂದ ದುರ್ಘಟನೆ

ಯಾವುದೇ ಕಾರ್ಯಕ್ರಮದ ಅತಿಥ್ಯ ವಹಿಸಿಕೊಂಡಾಗ, ಊರಿನ ಗೌರವ ಹಾಳಾಗುವ ಹಾಗೆ ಯಾರೂ ನಡೆದುಕೊಳ್ಳಬಾರದು. ನಾನು ಆರ್‌ಎಸ್‌ಎಸ್ ಇಷ್ಟಪಡುತ್ತೇನೆ. ಆರ್‌ಎಸ್‌ಎಸ್ ತತ್ವ– ಸಿದ್ಧಾಂತಗಳು ಈ ರೀತಿಯ ಧೋರಣೆ ಹೊಂದಿಲ್ಲ. ಅರ್ಧಂಬರ್ಧ ತಿಳಿದುಕೊಂಡ ಆರ್‌ಎಸ್‌ಎಸ್, ಬಜರಂಗದಳದ ಕಾರ್ಯಕರ್ತರಿಂದ ಈ ರೀತಿಯ ಘಟನೆ ನಡೆದಿದೆ. ಎಲ್ಲ ಸಮುದಾಯದವರ ಕಥೆ ಹೊಂದಿರುವ ನಾಟಕವನ್ನು ಸ್ವೀಕರಿಸಬೇಕು. ಒಂದು ವೇಳೆ ತಿರಸ್ಕಾರ ಮನೋಭಾವ ಇದ್ದರೆ ನಾಟಕ ಪ್ರದರ್ಶನದ ನಂತರ ವಿಮರ್ಶಿಸಬೇಕು. ಮಧ್ಯದಲ್ಲೇ ನಾಟಕ ಪ್ರದರ್ಶನ ತಡೆಯುವುದು ಸೌಜನ್ಯವಲ್ಲ. ಮುಂದೆ ಇಂತಹ ಘಟನೆಗಳು ಆಗದಂತೆ ಎಚ್ಚರ ವಹಿಸಿ, ಸಾಮರಸ್ಯ ಕಾಪಾಡಿಕೊಳ್ಳಬೇಕು.

– ರಾಜಶೇಖರ್ ಪಾಟೀಲ್, ನೆಗವಾಡಿ, ಸಾಹಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT