ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

SSLC Results | ಶಿವಮೊಗ್ಗ: ವರ್ಷವಿಡೀ ನಡೆಸಿದ ಪ್ರಯೋಗ, ಕೊನೆಗೂ ಸಿಕ್ತು ಫಲ

ಶೇ. 88.67ರಷ್ಟು ಸಾಧನೆ, ಶಿವಮೊಗ್ಗ ಜಿಲ್ಲೆಗೆ 3ನೇ ಸ್ಥಾನ
ಮಲ್ಲಪ್ಪ ಸಂಕೀನ್‌
Published 10 ಮೇ 2024, 5:18 IST
Last Updated 10 ಮೇ 2024, 5:18 IST
ಅಕ್ಷರ ಗಾತ್ರ

ಶಿವಮೊಗ್ಗ: ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಕಳೆದ ವರ್ಷ ರಾಜ್ಯಮಟ್ಟದಲ್ಲಿ 28ನೇ ಸ್ಥಾನ ಪಡೆದು ಕಳಪೆ ಸಾಧನೆ ಮಾಡಿದ್ದ ಶಿವಮೊಗ್ಗ ಜಿಲ್ಲೆ ಈ ಬಾರಿ ಶೇ. 88.67ರಷ್ಟು ಫಲಿತಾಂಶದೊಂದಿಗೆ ಮೂರನೇ ಸ್ಥಾನಕ್ಕೆ ಜಿಗಿದಿದೆ. ವರ್ಷದೊಳಗೆ ಜಿಲ್ಲೆಯ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಸಾಧನೆ ಪೋಷಕರ ವಲಯದಲ್ಲಿ ಭಾರಿ ಮೆಚ್ಚುಗೆಗೆ ಕಾರಣವಾಗಿದೆ.

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಅವರ ತವರು ಜಿಲ್ಲೆ ಆಗಿರುವುದರಿಂದ ಶಿವಮೊಗ್ಗದ ಫಲಿತಾಂಶ ಇಡೀ ರಾಜ್ಯದ ಗಮನ ಸೆಳೆದಿದೆ. ಜಿಲ್ಲೆಯಲ್ಲಿ ಈ ಬಾರಿ ಒಟ್ಟು 23,028 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇದರಲ್ಲಿ 20,420 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.  ನಿಜಕ್ಕೂ ಇದೊಂದು ದೊಡ್ಡ ರೀತಿಯಲ್ಲಿ ಸಾಧನೆ ಆಗಿದೆ.  

ಕಳೆದ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. 84.06ರಷ್ಟು ಫಲಿತಾಂಶ ಜಿಲ್ಲೆಗೆ ಲಭಿಸಿತ್ತು. ರಾಜ್ಯದಲ್ಲಿ 28ನೇ ಸ್ಥಾನ ದೊರಕಿತ್ತು. ಸಹಜವಾಗಿಯೇ ಇದು ಜಿಲ್ಲೆಯ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಮುಜುಗರ ತರಿಸಿತ್ತು. ಆದರೆ ಈ ಬಾರಿ  ಫಲಿತಾಂಶ ಸುಧಾರಣೆ ಕಂಡಿದೆ. ಶಾಲಾ ಶಿಕ್ಷಣ ಮತ್ತು ಸಾರಕ್ಷರತಾ ಇಲಾಖೆಯ ಬಿಗಿ ನಿಲುವು ಈ ಸುಧಾರಣೆಗೆ ಕಾರಣ ಎಂದು ಹೇಳಲಾಗುತ್ತಿದೆ.

ನಿರಂತರ ನಿಗಾ; ಡಿಡಿಪಿಐ: ಕಳೆದ ಬಾರಿ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ 103 ಶಾಲೆಗಳಲ್ಲಿ ಶೇ. 70ಕ್ಕಿಂತ ಕಡಿಮೆ ಫಲಿತಾಂಶ ಬಂದಿತ್ತು. ಈ ಶಾಲೆಗಳಿಗೆ ವಿಶೇಷವಾದ ಒತ್ತು ನೀಡಲಾಗಿತ್ತು. ಇಲಾಖೆಯ ಅಧಿಕಾರಿಗಳು ನಿರಂತರವಾಗಿ ಆ ಶಾಲೆಗಳಲ್ಲಿನ ಶೈಕ್ಷಣಿಕ ಸುಧಾರಣೆಗೆ ನಿಗಾ ಇಟ್ಟಿದ್ದರು. ಮಾರ್ಗದರ್ಶನ ಮಾಡುತ್ತಿದ್ದರು. ಅದೀಗ ಫಲ ನೀಡಿದ್ದು, ಫಲಿತಾಂಶದಲ್ಲಿ ಏರಿಕೆ ಆಗಿದೆ ಎಂದು ಡಿಡಿಪಿಐ ಸಿ.ಆರ್.ಪರಮೇಶ್ವರಪ್ಪ ಹೇಳುತ್ತಾರೆ.

ಪ್ರತಿವಾರ ಪ್ರತಿ ವಿಷಯದ ಕುರಿತು 25 ಅಂಕಗಳ ಕಿರು ಪರೀಕ್ಷೆ ತೆಗೆದುಕೊಳ್ಳಲಾಗಿದೆ. ಎಲ್ಲ ಶಾಲೆಗಳಿಗೆ ನೋಡಲ್‌ ಆಧಿಕಾರಿಗಳ ನೇಮಕ ಮಾಡಿ ವಿಷಯ ಪರಿವೀಕ್ಷಕರಿಂದ ಎರಡು ತಿಂಗಳಿಗೊಮ್ಮೆ ಶಿಕ್ಷಕರಿಗೆ ತರಬೇತಿ ನೀಡಲಾಗಿದೆ. ಮುಖ್ಯ ಶಿಕ್ಷಕರ ಸಭೆ ಕೂಡ‌ ಮೇಲಿಂದ ಮೇಲೆ ಮಾಡಲಾಗಿದೆ.

ಡಿಸೆಂಬರ್ ತಿಂಗಳ ಅಂತ್ಯದಲ್ಲಿಯೇ ಪಠ್ಯಕ್ರಮ ಮುಗಿಸಲಾಗಿತ್ತು. ಜನವರಿಯಲ್ಲಿ ಒಟ್ಟು 4 ಪೂರ್ವ ಸಿದ್ದತಾ  ಪರೀಕ್ಷೆಗಳ ತೆಗೆದುಕೊಳ್ಳಲಾಗಿದೆ. ತರಗತಿ ಪರೀಕ್ಷೆಗಳಲ್ಲಿ ಹಾಗೂ ಪೂರ್ವ ಸಿದ್ದತಾ ಪರೀಕ್ಷೆಗಳಲ್ಲಿ ಕಡಿಮೆ ಸಾಧನೆ ತೋರಿದ ವಿದ್ಯಾರ್ಥಿಗಳು ಕನಿಷ್ಠ ಅಂಕಗಳನ್ನು ಪಡೆದು ಉತ್ತೀರ್ಣರಾಗಲು ಅನುಕೂಲವಾಗುವಂತೆ  ಅವರಿಗೆ 60 ಅಂಕಗಳಿಗೆ ಪೂರಕ ಸಾಹಿತ್ಯ ಸಿದ್ದಪಡಿಸಿ (ಪಾಸಿಂಗ್ ಪ್ಯಾಕೇಜ್) ನೆರವಾಗಲಾಗಿದೆ.

ಪ್ರತಿ ವಿಷಯದಲ್ಲಿ ರಸಪ್ರಶ್ನೆ ಕಾರ್ಯಕ್ರಮ ವಾರದಲ್ಲಿ ಒಂದು ದಿನ 40 ನಿಮಿಷದ  ಅವಧಿಯಲ್ಲಿ ನಡೆಸಲು ಕ್ರಮವಹಿಸಲಾಗಿದೆ. ಇದಲ್ಲದೇ ಪರೀಕ್ಷಾ ಭಯ ಹೋಗಲಾಡಿಸಲು ಎಲ್ಲ ಮಕ್ಕಳಿಗೆ ಮನೋವೈದ್ಯರಿಂದ ಆಪ್ತ ಸಮಾಲೋಚಕರಿಂದ ಸೂಕ್ತ ತಿಳಿವಳಿಕೆ ಮತ್ತು ಮಾರ್ಗದರ್ಶನ ಮಾಡಿಸಲಾಗಿದೆ ಎಂದು ಹೇಳುತ್ತಾರೆ. 

ಗ್ರಾಮಾಂತರ ಮತ್ತು‌ನಗರ ಪ್ರದೇಶದಲ್ಲಿ ಇಂಗ್ಲಿಷ್ ಭಾಷೆ ಹಾಗೂ ಕೋರ್ ವಿಷಯಗಳಲ್ಲಿ ಫಲಿತಾಂಶ ಹೆಚ್ಚಳಕ್ಕೆ ನುರಿತ ಶಿಕ್ಷಕರಿಂದ ವಿಶೇಷ ತರಗತಿಗಳನ್ನು ನಡೆಸಲಾಗಿದೆ. ಇದಲ್ಲದೇ ಹೋಬಳಿ ಮಟ್ಟದಲ್ಲಿ ನೇರ್ ಫೋನ್‌ ಇನ್ ಕಾರ್ಯಕ್ರಮ ನಡೆಸಿ ಮಕ್ಕಳ ಕಲಿಕಾ ಸಮಸ್ಯೆಗಳನ್ನು ಪರಿಹರಿಸಲಾಗಿದೆ. ಮಕ್ಕಳ ಪೋಷಕರ ಸಭೆ ಮೇಲಿಂದ‌ ಮೇಲೆ ಮಾಡಲಾಗಿದೆ.

ಕಳೆದ ವರ್ಷ ಶೇ 70ಕ್ಕಿಂತ ಕಡಿಮೆ ಫಲಿತಾಂಶ ಪಡೆದ ಹಾಗೂ ಸಿ ಗ್ರೇಡ್ ಶಾಲೆಗಳ ಮುಖ್ಯ ಶಿಕ್ಷಕರು ಹಾಗೂ ವಿಷಯವಾರು ಶಿಕ್ಷಕರ ಸಭೆಯನ್ನು ಪ್ರತಿ ತಿಂಗಳು 4ನೇ ಶುಕ್ರವಾರ ನಡೆಸಿ ಫಲಿತಾಂಶ ಸುಧಾರಣೆ ಮಾಡುವ ಕುರಿತು ಸಮರ್ಪಕವಾದ ಮಾರ್ಗದರ್ಶನ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಮಾಡಿಸಲಾಗಿತ್ತು ಎಂದು ಡಿಡಿಪಿಐ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT