ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಶುಕ್ರವಾರ ನಡೆದ 29 ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್, ಪಿಎಚ್.ಡಿ ಹಾಗೂ ಪದವಿ ಪ್ರದಾನ ಮಾಡಲಾಯಿತು.
ಈ ಬಾರಿ ಒಟ್ಟು 205 ಮಂದಿಗೆ ಪಿಎಚ್.ಡಿ, 12,096 ವಿದ್ಯಾರ್ಥಿಗಳಿಗೆ ಪದವಿ, ದೂರ ಶಿಕ್ಷಣದ ಮೂಲಕ 15,351 ವಿದ್ಯಾರ್ಥಿಗಳಿಗೆ ಪದವಿ ನೀಡಲಾಯಿತು.
15 ಪುರುಷರು ಹಾಗೂ 49 ಮಹಿಳೆಯರು ಸೇರಿ ಒಟ್ಟು 64 ವಿದ್ಯಾರ್ಥಿಗಳು 112 ಸ್ವರ್ಣ ಪದಕ ಹಂಚಿಕೊಂಡರು. ಎಂ.ಎ. ಕನ್ನಡ ವಿಭಾಗದಲ್ಲಿ ಚಿಕ್ಕಮಗಳೂರಿನ ಐಡಿಎಸ್ಜಿ ಕಾಲೇಜು ವಿದ್ಯಾರ್ಥಿನಿ ನೇತ್ರಾವತಿ 7 ಸ್ವರ್ಣ ಪದಕ ಹಾಗೂ ಒಂದು ನಗದು ಬಹುಮಾನ ಪಡೆದರು.
ವಿಶ್ವವಿದ್ಯಾಲಯದ ಘಟಿಕೋತ್ಸವ ಸಭಾಂಗಣದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಕುಲಪತಿ ಪ್ರೊ. ಜೋಗನ್ ಶಂಕರ್, ಕುಲಸಚಿವರಾದ ಪ್ರೊ.ಎಚ್.ಎಸ್. ಭೋಜ್ಯಾನಾಯ್ಕ, ರಾಜನಾಯಕ್ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು. ರಾಷ್ಟ್ರೀಯ ಮೌಲ್ಯೀಕರಣ ಮತ್ತು ಮಾನ್ಯತಾ ಪರಿಷತ್ ನಿರ್ದೇಶಕ ಡಾ. ಎಸ್.ಸಿ. ಶರ್ಮ ಘಟಿಕೋತ್ಸವ ಭಾಷಣ ಮಾಡಿದರು.