ಆನಂದಪುರ: ಕ್ಷೇತ್ರದಲ್ಲಿ ತಮ್ಮ ಮಗನನ್ನು ಗೆಲ್ಲಿಸುವುದಕ್ಕಾಗಿ ಕಾಂಗ್ರೆಸ್‌ನಿಂದ ದುರ್ಬಲ ಅಭ್ಯರ್ಥಿಯನ್ನು ಹಾಕಿಸಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್ ಈಶ್ವರಪ್ಪ ಅವರು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪನವರ ವಿರುದ್ಧ ಹರಿಹಾಯ್ದರು.
ಇಲ್ಲಿ ಶುಕ್ರವಾರ ಕಾರ್ಯಕರ್ತರನ್ನು ಭೇಟಿ ಮಾಡಿ ಅವರು ಮಾತನಾಡಿದರು.
ಈ ಬಾರಿ ನಡೆದ ವಿಧಾನಸಭೆ ಚುನಾವಣೆಯಲ್ಲೂ ಶಿಕಾರಿಪುರದಲ್ಲಿ ಬಿ.ವೈ.ವಿಜಯೇಂದ್ರನನ್ನು ಗೆಲ್ಲಿಸುವುದಕ್ಕಾಗಿ ಹೊಂದಾಣಿಕೆ ರಾಜಕಾರಣ ಮಾಡುವ ಮೂಲಕ ಲಿಂಗಾಯತ ಹಾಗೂ ಹಿಂದುಳಿದ ನಾಯಕರನ್ನು ತುಳಿದು ಹಾಕಿದರು. ಲೋಕಸಭಾ ಚುನಾವಣೆಯಲ್ಲೂ ಹೊಂದಾಣಿಕೆ ರಾಜಕಾರಣದ ಮೂಲಕ ದುರ್ಬಲ ಅಭ್ಯರ್ಥಿಯನ್ನು ಹಾಕಿಸಿದ್ದಾರೆ. ಯಡಿಯೂರಪ್ಪ ಅವರನ್ನು ಜನರು ಇಷ್ಟಪಡದ ಕಾರಣ 60 ಸಾವಿರ ಲೀಡ್ ಇದ್ದ ಶಿಕಾರಿಪುರ 10 ಸಾವಿರಕ್ಕೆ ಬಂದಿದೆ ಎಂದು ಆರೋಪಿಸಿದರು.
ಶಿವಮೊಗ್ಗದಲ್ಲಿ ಕಾಂಗ್ರೆಸ್ ಗೆಲ್ಲುವ ಪ್ರಶ್ನೆಯೇ ಉದ್ಭವವಾಗುವುದಿಲ್ಲ. ದುರ್ಬಲ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿರುವ ಕಾರಣ ನಮ್ಮ ಮತ ಈಶ್ವರಪ್ಪನವರಿಗೆ ಎಂದು ಕಾಂಗ್ರೆಸ್‌ನವರೇ ಹೇಳುತ್ತಿದ್ದಾರೆ. ಎಲ್ಲಾ ಸಮುದಾಯದವರು ನನ್ನ ಜೊತೆ ಇದ್ದು, ಜಯಗಳಿಸುವ ವಿಶ್ವಾಸವಿದೆ ಎಂದು ಹೇಳಿದರು.
ಏ.12ರಂದು ನಾಮಪತ್ರ ಸಲ್ಲಿಸುತ್ತೇನೆ. ರಾಮಶೆಟ್ಟಿ ಪಾರ್ಕ್‌ನಿಂದ ಮೆರವಣಿಗೆ ಹೊರಡಲಿದ್ದು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವರು ಎಂದು ಹೇಳಿದರು.
ಮುಖಂಡರಾದ ಹೇಮಾ ರವಿ, ಮಂಜುನಾಥ್, ನಾರಾಯಣ, ಸತೀಶ್, ಗಣಪತಿ ಯಡೇಹಳ್ಳಿ ಇದ್ದರು.