ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಪಿಎಂಸಿ; ಜನಪರ ಕಾಯ್ದೆ ಜಾರಿಗೆ ಬದ್ಧ

ಪರಿಶೀಲನಾ ಸಮಿತಿಯಿಂದ ರೈತರು, ವರ್ತಕರು, ಹಮಾಲರ ಅಹವಾಲು ಸ್ವೀಕಾರ
Published 22 ನವೆಂಬರ್ 2023, 14:38 IST
Last Updated 22 ನವೆಂಬರ್ 2023, 14:38 IST
ಅಕ್ಷರ ಗಾತ್ರ

ಶಿವಮೊಗ್ಗ: ರೈತರು, ವರ್ತಕರು ಮಾರುಕಟ್ಟೆಯ ಅವಲಂಬಿತರ ಸಲಹೆಗಳಿಗೆ ಮನ್ನಣೆ ನೀಡಿ ಜನಪರ ಎಪಿಎಂಸಿ ವಿಧೇಯಕ 2023 ಜಾರಿಗೆ ತರಲಾಗುವುದು ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಎಸ್. ಪಾಟೀಲ ಭರವಸೆ ನೀಡಿದರು.

ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ ವಿಧೇಯಕ 2023 ನ್ನು ಪರಿಶೀಲಿಸಿ ಸದನಕ್ಕೆ ವರದಿ ಸಲ್ಲಿಸಲು ರಚಿಸಲಾದ ಸಮಿತಿ ಬುಧವಾರ ಇಲ್ಲಿನ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ನಡೆಸಿದ ಸಭೆಯಲ್ಲಿ ರೈತರು, ವರ್ತಕರು, ದಲಾಲರು ಮತ್ತು ಹಮಾಲರ ಪ್ರತಿನಿಧಿಗಳಿಂದ ಸಲಹೆ ಸ್ವೀಕರಿಸಿ ಅವರು ಮಾತನಾಡಿದರು.

ವಿಧೇಯಕಕ್ಕೆ ವಿಧಾನಸಭೆಯಲ್ಲಿ ಅನುಮೋದನೆ ದೊರೆತಿದೆ. ಆದರೆ, ಪರಿಷತ್ತಿನ ಒಪ್ಪಿಗೆ ಪಡೆಯುವ ಮುನ್ನ ಸಾರ್ವಜನಿಕರಿಂದ ಸಲಹೆ ಪಡೆಯಲು ನಿರ್ಧರಿಸಿ ರಾಜ್ಯದಾದ್ಯಂತ ಸಭೆಗಳನ್ನು ನಡೆಸಲಾಗುತ್ತಿದೆ ಎಂದರು.

ರಾಜ್ಯದ ಎಪಿಎಂಸಿಗಳ ವ್ಯಾಪ್ತಿಯಲ್ಲಿ ₹ 16,000 ಕೋಟಿ ಮೊತ್ತದ ಆಸ್ತಿ ಇದೆ. 8,000 ಎಕರೆ ಜಮೀನು ಇದೆ. ಅದನ್ನು ಉಳಿಸಿಕೊಂಡು ಪುನರ್ ನಿರ್ಮಾಣಕ್ಕೆ ಅವಕಾಶ ನೀಡಲಾಗುವುದು. ಸಭೆಯಲ್ಲಿ ಕೇಳಿಬಂದ ಎಪಿಎಂಸಿ ಅಧಿಕಾರ ವಿಕೇಂದ್ರೀಕರಣ, ಸೆಸ್ ಕಡಿತಗೊಳಿಸುವುದು, ಆಸ್ತಿ ತೆರಿಗೆ ಇತರೆ ವಿಷಯಗಳನ್ನು ಗಮನದಲ್ಲಿರಿಸಿಕೊಂಡು ಹೊಸ ಕಾಯ್ದೆ ಜಾರಿಗೆ ತರಲಾಗುವುದು ಎಂದು ಶಿವಾನಂದ ಪಾಟೀಲ ತಿಳಿಸಿದರು.

ಸಭೆಯಲ್ಲಿ ರೈತ ಸಂಘದವರು, ವರ್ತಕರು, ಅಕ್ಕಿ ವ್ಯಾಪಾರಿಗಳ ಸಂಘ, ಎಪಿಎಂಸಿ ಮಾಜಿ ಪದಾಧಿಕಾರಿಗಳು, ದಲಾಲಿಗಳ ಸಂಘ, ಕೃಷಿ ಪೇಟೆ ಕಾರ್ಯಕರ್ತರು, ಹಮಾಲಿ, ತೂಕದವರ ಸಂಘಗಳ ಪದಾಧಿಕಾರಿಗಳ ಸಲಹೆ ಸ್ವೀಕರಿಸಲಾಯಿತು.

ಸಮಿತಿ ಸದಸ್ಯ ಡಿ.ಎಸ್.ಅರುಣ್ ಮಾತನಾಡಿ, 2019–20ರಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದ ಕಾಯ್ದೆಯಿಂದ ಸೆಸ್ ₹600 ಕೋಟಿ ಸಂಗ್ರಹವಾಗಿತ್ತು. ರೈತರಿಗೆ ಹೆಚ್ಚು ಬೆಲೆ ಸಿಗಲಿ ಎಂಬ ಉದ್ದೇಶದಿಂದ ಕಾಯ್ದೆ ತರಲಾಗಿತ್ತು ಎಂದರು.

ಅಡಿಕೆ ಸೆಸ್ 0.6ರಿಂದ 0.1ಕ್ಕೆ ಇಳಿಸಬೇಕೆಂದು ವರ್ತಕರು ಒತ್ತಾಯಿಸಿದ್ದಾರೆ. ನಿಯಂತ್ರಣ ಮಂಡಳಿ ಸ್ಥಾಪನೆ, ಇತರೆ ನಿಯಮ ಸರಳೀಕರಣ ಪ್ರಯತ್ನ ಆಗುತ್ತಿದ್ದು, ಹಲವು ಸುಧಾರಣೆಗಳೊಂದಿಗೆ ಹೊಸ ಕಾಯ್ದೆ ತರಬೇಕು ಎಂದು ಕೋರಿದರು.

ಎಪಿಎಂಸಿ ಮಾಜಿ ಅಧ್ಯಕ್ಷ ಶಿವಕುಮಾರ್, ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ್, ರೈತ ಸಂಘದ ಕಾರ್ಯಾಧ್ಯಕ್ಷ ಪಿ.ಡಿ ಮಂಜಪ್ಪ, ಸಮಿತಿ ಸದಸ್ಯರಾದ ಅನಿಲ್‍ಕುಮಾರ್, ಕೆ.ಎ.ತಿಪ್ಪೇಸ್ವಾಮಿ ಮಾತನಾಡಿದರು.

ಸದಸ್ಯೆ ಹೇಮಲತಾ ನಾಯಕ್, ಎಪಿಎಂಸಿ ನಿರ್ದೇಶಕ ಗಂಗಾಧರ ಸ್ವಾಮಿ, ಕೃಷಿ ಮಾರುಕಟ್ಟೆ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್, ಜಿಲ್ಲಾಧಿಕಾರಿ ಡಾ.ಆರ್‌.ಸೆಲ್ವಮಣಿ, ಸಿಇಒ ಸ್ನೇಹಲ್ ಸುಧಾಕರ ಲೋಖಂಡೆ ಉಪಸ್ಥಿತರಿದ್ದರು.

Quote - ಎಪಿಎಂಸಿಯ ಅವೈಜ್ಞಾನಿಕ ಆಸ್ತಿ ತೆರಿಗೆಗೆ ಕಡಿವಾಣ ಹಾಕಿ ಆಸ್ತಿ ಹಂಚಿಕೆ ನಿಯಮ ಮತ್ತು ಪ್ರಕ್ರಿಯೆ ಸರಳಗೊಳಿಸಬೇಕು ಹಾಗೂ ನಿಯಮ 46 ಪುನರ್‌ ಪರಿಶೀಲಿಸಬೇಕು. ಎಚ್.ಎಂ ರವಿಕುಮಾರ್ ಕೃಷಿಕ

ರೈತರ ಸ್ವಾತಂತ್ರ್ಯಕ್ಕೆ ಒತ್ತು ನೀಡಲಾಗಿತ್ತು

ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ ‘ತನಗೆ ಬೇಕಾದವರಿಗೆ ಉತ್ಪನ್ನ ಮಾರಾಟ ಮಾಡುವ ಸ್ವಾತಂತ್ರ್ಯವನ್ನು ಬೆಳೆಗಾರರಿಗೆ ಪ್ರಸ್ತುತ ಕಾಯ್ದೆ ನೀಡಿದೆ. ಜಿಲ್ಲೆಯ ಪ್ರಮುಖ ಬೆಳೆ ಅಡಿಕೆ. ಒಂದು ಕ್ವಿಂಟಲ್ ಅಡಿಕೆ ಎಪಿಎಂಸಿಗೆ ತರಲು ₹ 1500 ಖರ್ಚು ಬರುತ್ತದೆ. ಆದ್ದರಿಂದ ರೈತರು ಎಪಿಎಂಸಿ ಅಥವಾ ಬಹುರಾಷ್ಟ್ರೀಯ ಕಂಪೆನಿ ಹೀಗೆ ಎಲ್ಲಿಯಾದರೂ ಮಾರಾಟ ಮಾಡಿ ಲಾಭ ಗಳಿಸಬಹುದು ಎಂಬ ಉದ್ದೇಶದಿಂದ ಕಾಯ್ದೆ ಜಾರಿಗೆ ತರಲಾಗಿತ್ತು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT