ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೊದಲ ಸುತ್ತಿನಲ್ಲಿಯೇ ಗೆಲ್ಲುವೆ; ಆಯನೂರು

ಚುನಾವಣೆಯಲ್ಲಿ ಸರಸ್ವತಿ ಬದಲು ಲಕ್ಷ್ಮಿ ಕುಣಿದಾಡಿದ್ದಾಳೆ, ಬಿಜೆಪಿಯಿಂದ ಕಾಂಚಾಣ ಸದ್ದು ಜೋರು: ಆರೋಪ
Published 5 ಜೂನ್ 2024, 15:43 IST
Last Updated 5 ಜೂನ್ 2024, 15:43 IST
ಅಕ್ಷರ ಗಾತ್ರ

ಶಿವಮೊಗ್ಗ: ‘ನೈರುತ್ಯ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಈ ಬಾರಿ ಸರಸ್ವತಿ ಬದಲು ಲಕ್ಷ್ಮಿ ಕುಣಿದಾಡಿದ್ದಾಳೆ. ಬಿಜೆಪಿಯ ಕಾಂಚಾಣದ ಸದ್ದು ಜೋರಾಗಿದೆ. ಆದರೂ ನಾನು ಪ್ರಥಮ ಪ್ರಾಶಸ್ತ್ಯ ಮತದಲ್ಲಿಯೇ ಗೆಲುವು ಸಾಧಿಸುತ್ತೇನೆ’ ಎಂದು ನೈರುತ್ಯ ಪದವೀಧರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಆಯನೂರು ಮಂಜುನಾಥ ಹೇಳಿದರು. 

‘ಕ್ಷೇತ್ರದಲ್ಲಿ ಎಂದೂ ಕಾಣದಷ್ಟು ಹಣ ಸದ್ದು ಮಾಡಿದೆ. ಹೆಂಡದ ಹೊಳೆ ಹರಿಸಿ ಜಾತಿ ರಾಜಕೀಯ ಮಾಡಿದ್ದಾರೆ. ಪದವೀಧರರು ಇದೆಲ್ಲವನ್ನು ತಿರಸ್ಕಾರ ಮಾಡುವ ಮೂಲಕ ತಮ್ಮ ಪ್ರಜ್ಞಾವಂತಿಕೆ ಮೆರೆದಿದ್ದಾರೆ. ಇದು ಹೋರಾಟ ಮತ್ತು  ಹಣದ ನಡುವಿನ ಚುನಾವಣೆಯಾಗಿದೆ. ಮತದಾರರು ನನ್ನ ಹೋರಾಟಕ್ಕೆ ಮನ್ನಣೆ ನೀಡಿದ್ದಾರೆ’ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. 

‘ಪಕ್ಷೇತರ ಅಭ್ಯರ್ಥಿ ರಘುಪತಿ ಭಟ್‌ ಮತ್ತು ನನ್ನ ನಡುವೆ ಪೈಪೋಟಿಯಿದೆ. ಮೊದಲನೇ ಸುತ್ತಿನಲ್ಲಿಯೇ ಜಯ ಸಾಧಿಸುತ್ತೇನೆ. ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧೆ ಮಾಡಿರುವ ಕೆ.ಕೆ. ಮಂಜುನಾಥ ಅವರೂ ಗೆಲ್ಲಲಿದ್ದಾರೆ’ ಎಂದರು. 

ಮೋದಿ ಎದುರು ಸೋಲು:

‘ಶಿವಮೊಗ್ಗ ಲೋಕಸಭೆ ಕ್ಷೇತ್ರದಿಂದ ಜಯಗಳಿಸಿರುವ ಬಿ.ವೈ. ರಾಘವೇಂದ್ರ ಪ್ರಚಾರ ವೇಳೆ ಎಲ್ಲಿಯೂ ನನಗೆ ಮತ ಕೊಡಿ ಅಂತಾ ಕೇಳಲಿಲ್ಲ. ಬದಲಾಗಿ ಮೋದಿಗೆ ಮತ ಹಾಕುವಂತೆ ಹೇಳಿದರು. ಈ ಚುನಾವಣೆ ಕಾಂಗ್ರೆಸ್‌ ಅಭ್ಯರ್ಥಿ ಗೀತಾ ಶಿವರಾಜ್‌ ಕುಮಾರ್‌ ಮತ್ತು ಮೋದಿ ನಡುವೆ ನಡೆದಂತಾಯಿತು. ಕೊನೆಗೂ ಮೋದಿ ಜಯಗಳಿಸಿದ್ದಾರೆ. ಜಾತಿ ಮತ್ತು ಹಣಬಲ ಕೂಡ ಕೆಲಸ ಮಾಡಿದೆ’ ಎಂದರು. 

‘ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಬರಲಿವೆ. ಪ್ರಚಾರಕ್ಕೆ ಬಿಜೆಪಿ ನಾಯಕರು ನರೇಂದ್ರ ಮೋದಿ ಅವರನ್ನು ಕರೆತರಬಹುದು’ ಎಂದು ವ್ಯಂಗ್ಯವಾಡಿದರು. 

ಪಕ್ಷೇತರ ಅಭ್ಯರ್ಥಿ ಕೆ.ಎಸ್‌. ಈಶ್ವರಪ್ಪ ಅವರು ನಿರೀಕ್ಷಿತ ಮತ ಪಡೆಯದ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ, ‘ಈಶ್ವರಪ್ಪ ಅವರು ಬಿಜೆಪಿಯವರಿಗಿಂತಲೂ ಮೋದಿ ಕುರಿತು ಹೆಚ್ಚಿಗೆ ಪ್ರಚಾರ ಮಾಡಿದರು. ಈಶ್ವರಪ್ಪಗೆ ಮತ ಹಾಕಿದರೇ ಪ್ರಯೋಜನವಿಲ್ಲ ಎಂದು ರಾಘವೇಂದ್ರಗೆ ಹಾಕಿದ್ದಾರೆ’ ಎಂದರು.  

ಸುದ್ದಿಗೋಷ್ಠಿಯಲ್ಲಿ ನಾಗರಾಜ, ಲಕ್ಷ್ಮಣ, ಮಲ್ಲೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT