ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ನಿಂದ ದ್ವೇಷ ರಾಜಕಾರಣ: ಪ್ರಕಾಶ್ ತಲಕಾಲಕೊಪ್ಪ ಆರೋಪ

Published 25 ಮಾರ್ಚ್ 2024, 14:26 IST
Last Updated 25 ಮಾರ್ಚ್ 2024, 14:26 IST
ಅಕ್ಷರ ಗಾತ್ರ

ಸೊರಬ: ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಪೊಲೀಸರ ಮೂಲಕ ದೌರ್ಜನ್ಯ ನಡೆಸಲಾಗುತ್ತಿದೆ ಎಂದು ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಪ್ರಕಾಶ್ ತಲಕಾಲಕೊಪ್ಪ ಆರೋಪಿಸಿದರು.

ಉಳವಿ ಗ್ರಾಮದ ಮುಸ್ಲಿಂ ಯುವಕರು ತಾಲ್ಲೂಕಿನ ಕಣ್ಣೂರು ಗ್ರಾಮಕ್ಕೆ ನುಗ್ಗಿ ದಾಂದಲೆ‌ ನಡೆಸಿದ್ದಾರೆ. ಆದರೆ, ಅವರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳದಂತೆ ಸಚಿವರು ಒತ್ತಡ ಹಾಕಿದ್ದಾರೆ. ಗ್ರಾಮಕ್ಕೆ ನುಗ್ಗಿ ಗಲಾಟೆ ನಡೆಸಿದ ಯುವಕರನ್ನು 24 ಗಂಟೆಗಳೊಳಗೆ ಬಂಧಿಸದಿದ್ದರೆ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಸಚಿವರಿಗೆ ನಮ್ಮ ಶಕ್ತಿ ಏನೆಂಬುದನ್ನು ಹೋರಾಟದ ಮೂಲಕ ತೋರಿಸಬೇಕಾಗುತ್ತದೆ. ಕಳೆದ 5 ವರ್ಷಗಳ ಅವಧಿಯಲ್ಲಿ ಕುಮಾರ್ ಬಂಗಾರಪ್ಪ ಅವರು ದ್ವೇಷದ ರಾಜಕಾರಣ ಮಾಡಲಿಲ್ಲ. ಮಧು ಬಂಗಾರಪ್ಪ ಅವರಿಗೆ ಅಧಿಕಾರ ಸಿಕ್ಕ ನಂತರದಲ್ಲಿ ತಾಲ್ಲೂಕಿನ ಹಲವಡೆ ಗಲಾಟೆ ಮಾಡಿಸಲಾಗಿದೆ. ಶಾಂತಿ, ಸುವ್ಯವಸ್ಥೆ ಹದೆಗೆಟ್ಟಿದೆ ಎಂದು ದೂರಿದರು.

ಖಾಸಗಿ ಕಟ್ಟಡದಲ್ಲಿ ನಡೆಯುತ್ತಿರುವ ನಾರಾಯಣಗುರು ವಸತಿ ಶಾಲೆ‌ಗೆ ಕಟ್ಟಡ ನಿರ್ಮಿಸಲು ಪಟ್ಟಣದಲ್ಲಿ ಮಂಜೂರಾಗಿದ್ದ‌ 19 ಎಕರೆ‌ ಭೂಮಿಯನ್ನು ತಿರಸ್ಕರಿಸಿ ಸಚಿವ ಮಧು ಬಂಗಾರಪ್ಪ ತಾಲ್ಲೂಕಿನ ಕುಪ್ಪೆ ಗ್ರಾಮದಲ್ಲಿ ಶಂಕುಸ್ಥಾಪನೆ ಮಾಡಿದ್ದಾರೆ. ಪಟ್ಟಣದ ಹೃದಯ ಭಾಗದಲ್ಲಿರುವ ಬೆಲೆಬಾಳುವ 19 ಎಕರೆ ಭೂಮಿಯನ್ನು ಭೂಗಳ್ಳರಿಗೆ ಅನುಕೂಲ ಮಾಡಿಕೊಡಲು ಸಚಿವರು ಕುಪ್ಪೆ ಗ್ರಾಮದಲ್ಲಿ ಭೂಮಿ ಪೂಜೆ‌ ನೆರವೇರಿಸಿದ್ದಾರೆ ಎಂದು ಆರೋಪಿಸಿದರು.

ತಾಲ್ಲೂಕಿನಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿಗೆ ಸಚಿವರ ಕೊಡುಗೆ ಏನು? ಹತ್ತು ತಿಂಗಳ ಅವಧಿಯಲ್ಲಿ ‌ಅಭಿವೃದ್ಧಿಗೆ ನಯಾ ಪೈಸೆ ಅನುದಾನ ತಂದಿಲ್ಲ. ಬಿಜೆಪಿ ಅವಧಿಯಲ್ಲಿ ಮಂಜೂರಾದ ಕಾಮಗಾರಿಗಳಿಗೆ ಗುದ್ದಲಿ ಪೂಜೆ ಮಾಡುವುದಾಗಿದೆ. ರಂಗನಾಥ ದೇವಸ್ಥಾನದಿಂದ ಹಳೇಸೊರಬದವರೆಗೆ ₹ 8 ಕೋಟಿ ಅನುದಾನ‌ ಆಡಳಿತಾತ್ಮಕ ಅಡಚಣೆಯಿಂದ ವಾಪಸ್‌ ಹೋಗಿದೆ. ಅದನ್ನು ವಾಪಸ್‌ ತರಿಸುವ ಶಕ್ತಿ ಸಚಿವರಿಗೆ ಶಕ್ತಿ ಇಲ್ಲ. ಕಳೆದ 10 ತಿಂಗಳುಗಳಲ್ಲಿ ಕೈಗೊಂಡಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ತಾಲ್ಲೂಕಿನ ಜನರಿಗೆ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ವರು ಹತ್ತು ವರ್ಷಗಳಿಂದ ಎಲ್ಲಿ ಹೋಗಿದ್ದರು. ಶೋಷಿತರ ಪರವಾದ ಅವರ ಕಾಳಜಿ ಏನು ಎಂದು ಮಡಿವಾಳ ಮಾಚಿದೇವ ನಿಗಮದ ಮಾಜಿ‌ ಅಧ್ಯಕ್ಷ ರಾಜು ತಲ್ಲೂರು ಪ್ರಶ್ನಿಸಿದರು.

ಕಾಂಗ್ರೆಸ್ ಅಭ್ಯರ್ಥಿಗೆ ಜಿಲ್ಲೆಯಲ್ಲಿ ಎಷ್ಟು ತಾಲ್ಲೂಕು ಇವೆ ಎನ್ನುವ ಸಾಮಾನ್ಯ ಜ್ಞಾನವೂ ಇಲ್ಲ. ಮತದಾರರ ಕುರಿತು ಮಾಹಿತಿಯೂ ಇಲ್ಲ. ರಾಘವೇಂದ್ರ ಅವರನ್ನು ಟೀಕಿಸುವ ನೈತಿಕತೆ ಅವರಿಗೆ ಇಲ್ಲ. ಸಚಿವ ಮಧು ಬಂಗಾರಪ್ಪ ಬಿಜೆಪಿ ಕಾರ್ಯಕರ್ತರ ಬಗ್ಗೆ ಹಗುರುವಾಗಿ ಮಾತನಾಡುವುದನ್ನು ನಿಲ್ಲಿಸಬೇಕು ಎಂದರು.

ತಾಲ್ಲೂಕು ಪ್ರಧಾನ‌‌ ಕಾರ್ಯದರ್ಶಿಗಳಾದ ಶಿವಕುಮಾರ್ ಕಡಸೂರು, ಪ್ರಕಾಶ್ ಅಗಸನಹಳ್ಳಿ, ಮುಖಂಡರಾದ ಎ.ಎಲ್.ಅರವಿಂದ್, ಎಂ.ಡಿ.ಉಮೇಶ್, ದೇವೇಂದ್ರಪ್ಪ ಚನ್ನಾಪುರ, ಗಜಾನನರಾವ್ ಉಳವಿ, ವಿಜಯೇಂದ್ರ, ವಿನಾಯಕ, ಗೌರಮ್ಮ ಭಂಡಾರಿ, ಶಿವಯೋಗಿ, ಸಂಜಯ್, ಗುರುಪ್ರಸನ್ನಗೌಡ, ವಿನಾಯಕ ಶೆರ್ವಿ, ಅಶಿಕ್, ಮಲ್ಲಿಕಾರ್ಜುನ ಗುತ್ತೇರ್, ಅಶೋಕ್ ಶೇಟ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT