ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿವಮೊಗ್ಗ | ವಿಜಯೇಂದ್ರ, ರಾಘವೇಂದ್ರ ಮನೆಗೆ ಮುತ್ತಿಗೆ ಯತ್ನ

ಜಿಎಸ್‌ಟಿ ಪಾವತಿಗೆ ಆಗ್ರಹ; ಯುವ ಕಾಂಗ್ರೆಸ್, ಎನ್‌ಎಸ್‌ಯುಐ ಪ್ರತ್ಯೇಕ ಪ್ರತಿಭಟನೆ
Published 7 ಫೆಬ್ರುವರಿ 2024, 15:54 IST
Last Updated 7 ಫೆಬ್ರುವರಿ 2024, 15:54 IST
ಅಕ್ಷರ ಗಾತ್ರ

ಶಿವಮೊಗ್ಗ: ದೆಹಲಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಸಂಪುಟ ಸಚಿವರ ನೇತೃತ್ವದಲ್ಲಿ ನಡೆಯುತ್ತಿರುವ ದೆಹಲಿ ಚಲೋ ಬೆಂಬಲಿಸಿ ಬುಧವಾರ ವಿನೋಬನಗರ ಪೊಲೀಸ್ ಚೌಕಿ ವೃತ್ತದಲ್ಲಿ ಯುವ ಕಾಂಗ್ರೆಸ್‌ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ನಂತರ ಸಂಸದ ಬಿ.ವೈ. ರಾಘವೇಂದ್ರ ಅವರ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದ 50ಕ್ಕೂ ಹೆಚ್ಚು ಪ್ರತಿಭಟನಕಾರರನ್ನು ಪೊಲೀಸರು ವಶಕ್ಕೆ ಪಡೆದರು.

‘ಕೇಂದ್ರ ಸರ್ಕಾರ 2017– 18ರಿಂದ ಇಲ್ಲಿಯವರೆಗೆ ರಾಜ್ಯಕ್ಕೆ ಜಿಎಸ್‌ಟಿ ಪರಿಹಾರ ನಿಧಿಯಿಂದ ₹ 1.87 ಲಕ್ಷ ಕೋಟಿ ಹಣವನ್ನು ಕೊಡದೇ ಅನ್ಯಾಯ ಮಾಡಿದೆ. ಇಡೀ ದೇಶದಲ್ಲಿ ಅತಿ ಹೆಚ್ಚು ಜಿಎಸ್‌ಟಿ ಪಾವತಿಸುವ ಶ್ರೇಯ ಕರ್ನಾಟಕ ರಾಜ್ಯಕ್ಕೆ ಸಲ್ಲುತ್ತದೆ. ಆದರೆ, ಇಲ್ಲಿ ಗೆದ್ದು ಹೋದ ಬಿಜೆಪಿಯ 25 ಸಂಸದರು ಸಂಸತ್‌ನಲ್ಲಿ ತುಟಿ ಬಿಚ್ಚುತ್ತಿಲ್ಲ’ ಎಂದು ಪ್ರತಿಭಟನೆ ವೇಳೆ ಯುವ ಕಾಂಗ್ರೆಸ್ ಮುಖಂಡರು ಆರೋಪಿಸಿದರು.

‘ಇದರಿಂದ ರಾಜ್ಯಕ್ಕೆ ಬರಬೇಕಾದ ಪರಿಹಾರ, ರೈತರ ಬರ ಪರಿಹಾರ ಒಳಗೊಂಡಂತೆ ಯಾವುದೂ ಬಾರದೇ ಅನ್ಯಾಯವಾಗುತ್ತಿದೆ. ಕೂಡಲೇ ರಾಷ್ಟ್ರಪತಿ ಮಧ್ಯಪ್ರವೇಶಿಸಿ ರಾಜ್ಯಕ್ಕೆ ನ್ಯಾಯ ಕೊಡಿಸಬೇಕು’ ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ.ಪ್ರವೀಣ್, ಯುವ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ.ಗಿರೀಶ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ರಂಗನಾಥ್, ಪ್ರಮುಖರಾದ ಬಿ.ಲೋಕೇಶ್, ಎಸ್ ಕುಮಾರೇಶ್, ಎಚ್.ಫಾಲಾಕ್ಷಿ, ಎಂ.ರಾಹುಲ್, ಸಂದೀಪ್, ಸುಂದರ್ ರಾಜ್, ಎಂ.ರಾಕೇಶ್, ಸುಹಾಸ್ ಗೌಡ, ಎನ್.ಎಸ್.ಆನಂದ್, ನದೀಮ್, ಮಕ್ಬೂಲ್, ಚಂದ್ರಶೇಖರ್, ಪ್ರಶಾಂತ್ ರಾಯ್, ಗೋಪಿ, ಏನೋಶ್, ಇನ್ಶಾಲ್, ರಾಯಿಲ್, ಪ್ರಶಾಂತ್ ಭಾಗವಹಿಸಿದ್ದರು.

ಶಿವಮೊಗ್ಗದ ವಿನೋಬ ನಗರದಲ್ಲಿರುವ ಸಂಸದ ಬಿ.ವೈ.ರಾಘವೇಂದ್ರ ಮನೆಗೆ ಬುಧವಾರ ಮುತ್ತಿಗೆ ಹಾಕಲು ಮುಂದಾದ ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು ಕರೆದೊಯ್ದರು
ಶಿವಮೊಗ್ಗದ ವಿನೋಬ ನಗರದಲ್ಲಿರುವ ಸಂಸದ ಬಿ.ವೈ.ರಾಘವೇಂದ್ರ ಮನೆಗೆ ಬುಧವಾರ ಮುತ್ತಿಗೆ ಹಾಕಲು ಮುಂದಾದ ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು ಕರೆದೊಯ್ದರು

ಬಿ.ವೈ.ವಿಜಯೇಂದ್ರ ಮನೆಗೆ ಮುತ್ತಿಗೆ ಯತ್ನ.. ರಾಜ್ಯಕ್ಕೆ ನೀಡಬೇಕಾದ ತೆರಿಗೆ ಹಣ ನೀಡುವಂತೆ ಒತ್ತಾಯಿಸಿ ದೆಹಲಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆ ಬೆಂಬಲಿಸಿ ಎನ್.ಎಸ್.ಯು.ಐ ಕಾರ್ಯಕರ್ತರು ಬುಧವಾರ ನಗರದಲ್ಲಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಮನೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಈ ವೇಳೆ 33ಕ್ಕೂ ಹೆಚ್ಚು ಕಾರ್ಯಕರ್ತರನ್ನು  ವಶಕ್ಕೆ ಪಡೆದು ಪೊಲೀಸರು ಕರೆದೊಯ್ದರು. ರಾಜ್ಯಕ್ಕೆ ಕೇಂದ್ರದಿಂದ ಬರಬೇಕಾದ ತೆರಿಗೆ ಹಣ ಕೊಡುವಂತೆ ಆಗ್ರಹಿಸಿದ ಪ್ರತಿಭಟನಕಾರರು ರಾಜ್ಯದ ವಿಚಾರದಲ್ಲಿ ಮೊದಲಿನಿಂದಲೂ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ತೋರುತ್ತಿದೆ ಎಂದು ಆರೋಪಿಸಿದರು.  ಭದ್ರಾ ಮೇಲ್ದಂಡೆ ಯೋಜನೆ ರಾಜ್ಯ ಸರ್ಕಾರ 2023– 24ನೇ ಸಾಲಿನಲ್ಲಿ ಘೋಷಿಸಿದ್ದು ಯೋಜನೆಗೆ ₹ 5300 ಕೋಟಿ ವೆಚ್ಚವಾಗಲಿದೆ. ಕೇಂದ್ರ ಸರ್ಕಾರ ಒಂದು ರೂಪಾಯಿ ಅನುದಾನ ಕೂಡ ನೀಡಿಲ್ಲ. 15ನೇ ಹಣಕಾಸು ಆಯೋಗವು ರಾಜ್ಯಕ್ಕೆ ₹5495 ಕೋಟಿ ವಿಶೇಷ ಅನುದಾನ ನೀಡುವಂತೆ ಶಿಫಾರಸ್ಸು ಮಾಡಿದ್ದರೂ ಈವರೆಗೂ ಬಿಡಿಗಾಸು ಸಹ ಕೊಟ್ಟಿಲ್ಲ. ಸಹಭಾಗಿತ್ವ ಯೋಜನೆಗೆ 2021– 21ನೇ ಸಾಲಿನಲ್ಲಿ ₹20000 ಕೋಟಿ ಇದ್ದದ್ದನ್ನು 2022– 23ನೇ ಸಾಲಿನಲ್ಲಿ ₹ 13000 ಕೋಟಿ ಕಡಿತಗೊಳಿಸಿದೆ ಎಂದು ದೂರಿದರು.  ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿ.ಎ.ರಮೇಶ್ ಹೆಗ್ಡೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲೀಮ್ ಪಾಷ ನೂರುಲ್ಲಾ ಯುವ ಕಾಂಗ್ರೆಸ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ಚೇತನ್ ಯುವ ಮುಖಂಡ ಮಧುಸೂದನ್ ಶಿವು ನೂಡೂರು ಅಕ್ಬರ್ ಗಿರೀಶ್ ವಿಜಯ್ ರವಿ ಕಾಟಿಕೆರೆ ಹರ್ಷಿತ್ ಗೌಡ ಧನರಾಜ್ ಗೌತಮ್ ರವಿ ಚಂದ್ರ ಜಿ.ರಾವ್ ಅಬ್ದುಲ್ ವರುಣ್ ಪಂಡಿತ್ ಉಲ್ಲಾಸ್ ದೀಪು ಸಾಗರ್ ಸೃಜನ ತೇಜು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT