ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನೋಂದಾಯಿತ ಆಟೊ ರಿಕ್ಷಾಗಳಿಗೆ ಪರವಾನಿಗೆ ಕೊಡಿ: ಡಿ.ಸಿ ಡಾ.ಆರ್.ಸೆಲ್ವಮಣಿ ಸೂಚನೆ

ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆ:
Published 4 ಜನವರಿ 2024, 15:30 IST
Last Updated 4 ಜನವರಿ 2024, 15:30 IST
ಅಕ್ಷರ ಗಾತ್ರ

ಶಿವಮೊಗ್ಗ: ಹೊಸದಾಗಿ ಖರೀದಿಸಿ ನೋಂದಣಿಯಾದ ಆಟೊ ರಿಕ್ಷಾಗಳಿಗೆ ಪರವಾನಗಿ ನೀಡುವಂತೆ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ಡಾ. ಆರ್‌. ಸೆಲ್ವಮಣಿ ಸೂಚನೆ ನೀಡಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಟೊರಿಕ್ಷಾ ಪರವಾನಗಿ ನೀಡುವ ಕುರಿತು ಏರ್ಪಡಿಸಿದ್ದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ (ಆರ್‌ಟಿಎ) ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಗರದಲ್ಲಿ ಹೊಸದಾಗಿ ನೋಂದಣಿ ಆಗಿರುವ 304 ಆಟೊ ರಿಕ್ಷಾಗಳಿಗೆ ಪರವಾನಗಿ ಬಾಕಿ ಇದ್ದು, ಅವುಗಳಿಗೆ ಪರವಾನಗಿ ನೀಡುವಂತೆ ಸೂಚಿಸಿದರು. ನಿಯಮದನ್ವಯ 15 ವರ್ಷಗಳಿಗೂ ಮೇಲ್ಪಟ್ಟ ವಾಹನಗಳ ನವೀಕರಣ ಸಾಧ್ಯವಿಲ್ಲ ಎಂದು ತಿಳಿಸಿದರು.

ನಗರದಲ್ಲಿ ಸುಮಾರು 4 ಸಾವಿರ ಆಟೊಗಳು ಚಾಲನೆಯಲ್ಲಿವೆ. 2 ಸಾವಿರ ಆಟೊಗಳ ನವೀಕರಣ ಬಾಕಿ ಇದೆ ಎಂದು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿ ಬಿ.ಶಂಕರಪ್ಪ ತಿಳಿಸಿದರು. 

‘ಕೇವಲ 304 ಅಲ್ಲ, ನಗರದಲ್ಲಿ ಸುಮಾರು 1,200 ನೊಂದಾಯಿತ ಆಟೊಗಳಿವೆ. ಅವುಗಳಿಗೆಲ್ಲ ಪರವಾನಗಿ ಕೊಡಬೇಕು. ಶೋ ರೂಂನವರು ಪರವಾನಗಿ ಕೊಡಿಸುತ್ತೇವೆ ಎಂದು ಆಟೊ ಖರೀದಿ ವೇಳೆ ₹30 ರಿಂದ 40 ಸಾವಿರದವರೆಗೆ ಹಣ ವಸೂಲಿ ಮಾಡುತ್ತಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ನಗರದಲ್ಲಿ ಆಟೊ ಚಾಲನೆ ವ್ಯಾಪ್ತಿ 20 ಕಿ.ಮೀ ವರೆಗೆ ವಿಸ್ತರಿಸಬೇಕು’ ಎಂದು ಆಟೊ ಚಾಲಕರ ಸಂಘದ ಪದಾಧಿಕಾರಿಗಳು ಮನವಿ ಮಾಡಿದರು.

ಇದಕ್ಕೆ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ, ಆನ್‍ಲೈನ್‍ನಲ್ಲಿ ಪರವಾನಗಿ ಬಾಕಿ ಕಡಿಮೆ ತೋರಿಸುತ್ತಿದ್ದು, ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಾತ್ರ ಪರವಾನಗಿ ನೀಡಲಾಗುವುದು. ಪರವಾನಗಿ ಪಡೆಯದ ಆಟೊಗಳ ನೋಂದಣಿ ನಿಲ್ಲಿಸುವಂತೆ ಸೂಚಿಸಿದರು.

‘ನಗರದಲ್ಲಿ ಹೊಸದಾಗಿ ಆಟೊರಿಕ್ಷಾಗಳನ್ನು ಖರೀದಿಸಿ ನೋಂದಣಿ ಮಾಡಿಸಿಕೊಂಡವರಿಗೆ ಪರವಾನಗಿ ನೀಡಬೇಕು. ಅರ್ಹರಾದವರಿಗೆ ನವೀಕರಣ ಮಾಡಬೇಕು’ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ತಿಳಿಸಿದರು.

ಆಟೊಗಳಿಗೆ ರೆಟ್ರೊ ಎಲೆಕ್ಟ್ರಿಕ್ ಸ್ಟಿಕ್ಕರ್ ಅಳವಡಿಕೆ ಮಾಡಬೇಕೆಂಬ ನಿಯಮ ತರಲಾಗಿದೆ. ಇದರಿಂದ ಚಾಲಕರಿಗೆ ₹2,000ವರೆಗೆ ಖರ್ಚು ಬರುತ್ತದೆ. ಎಫ್‍ಸಿ ವೇಳೆ ಇದರ ಬಿಲ್‌ ಕೇಳುವುದರಿಂದ ತೊಂದರೆ ಆಗುತ್ತಿದೆ. ಹೀಗಾಗಿ ಸ್ಟಿಕ್ಕರ್‌ನಿಂದ ವಿನಾಯಿತಿ ಕೊಡಿ ಎಂದು ಆಟೊ ಚಾಲಕರು ಕೋರಿದರು.

ಇದಕ್ಕೆ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಪ್ರತಿಕ್ರಿಯಿಸಿ, ‘ಸ್ಟಿಕ್ಕರ್ ಹಾಕಿಸುವುದು ಒಳ್ಳೆಯದು. ಆ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆದೇಶದಲ್ಲಿನ ಗೊಂದಲದ ಬಗ್ಗೆ ಸಂಬಂಧಿಸಿದ ಆಯುಕ್ತರಿಗೆ ಪತ್ರ ಬರೆದು ಸ್ಪಷ್ಪನೆ ಪಡೆಯಲಾಗುವುದು. ಹಳೇ ಸ್ಟಿಕ್ಕರ್ ಇರುವವರು ಹೊಸದಾಗಿ ಹಾಕಿಸುವ ಅವಶ್ಯಕತೆ ಇಲ್ಲ’ ಎಂದರು. 

ರೈಲ್ವೆ ನಿಲ್ದಾಣದಲ್ಲಿ ಆಟೊ ಪಥ ಇದ್ದರೂ ಅಲ್ಲಿ ನಿಲುಗಡೆ ಮಾಡುತ್ತಿಲ್ಲ. ಬದಲಾಗಿ ಒಂದೆಡೆ ಆಟೊಗಳನ್ನು ಗುಡ್ಡೆ ಹಾಕಿಕೊಳ್ಳುತ್ತಿರುವುದರಿಂದ ಸಾರ್ವಜನಿಕರ ಓಡಾಟಕ್ಕೆ ಕಷ್ಟವಾಗಿದೆ. ಬಸ್ಸು, ಲಾರಿ ಇತರೆ ವಾಹನಗಳು ಜೋರಾಗಿ ಹಾರ್ನ್ ಮಾಡುತ್ತಿರುವುದರಿಂದ ಕೆಲವು ರಸ್ತೆಗಳಲ್ಲಿ ಶಬ್ದ ಮಾಲಿನ್ಯ ಉಂಟಾಗುತ್ತಿದೆ ಎಂದು ದೂರಿದರು.

ಸಭೆಯಲ್ಲಿ ಎಎಸ್ಪಿ ಅನಿಲ್‍ಕುಮಾರ್ ಭೂಮರಡ್ಡಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿ ಬಿ.ಶಂಕ್ರಪ್ಪ, ಕೆಎಸ್‍ಆರ್‌ಟಿಸಿ ವಿಭಾಗೀಯ ನಿಯಂತ್ರಕ ವಿಜಯಕುಮಾರ್, ಸರ್ಕಲ್ ಇನ್ಸ್ಪೆಕ್ಟರ್ ಸಂತೋಷ್, ನಾಗರಿಕ ಹಿತ ರಕ್ಷಣಾ ವೇದಿಕೆಯ ವಸಂತಕುಮಾರ್ ಹಾಜರಿದ್ದರು.

ಆಟೊ ನಿಲುಗಡೆ; ದಂಡ ವಿಧಿಸಲು ಸೂಚನೆ:

ಸಾರ್ವಜನಿಕರಿಗೆ ತೊಂದರೆ ಆಗುವ ರೀತಿಯಲ್ಲಿ ಆಟೊ ನಿಲ್ಲಿಸಿದ ಚಾಲಕರಿಗೆ ಸರ್ಕಲ್ ಇನ್ಸ್ಪೆಕ್ಟರ್‌ ದಂಡ ವಿಧಿಸಬೇಕು. ಜೋರಾಗಿ ಹಾರ್ನ್ ಮಾಡಿದಲ್ಲಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದಲ್ಲಿ ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು. ಆಟೊಗಳಲ್ಲಿ ಮೀಟರ್ ಅಳವಡಿಸಬೇಕು. ರಾತ್ರಿ 10 ರಿಂದ ಬೆಳಿಗ್ಗೆ 5 ರವರೆಗೆ ಮಾತ್ರ ಒಂದೂವರೆ ಪಟ್ಟು ಚಾರ್ಜ್ ತೆಗೆದುಕೊಳ್ಳಬೇಕು. ನಂತರ ತೆಗೆದುಕೊಳ್ಳುವ ಹಾಗಿಲ್ಲ. ಈ ಸಮಯ ಮತ್ತು ದರದ ಕುರಿತು ರೈಲ್ವೆ ನಿಲ್ದಾಣದ ಬಳಿ ಸಾರ್ವಜನಿಕರ ಅನುಕೂಲಕ್ಕಾಗಿ ಒಂದು ಬೋರ್ಡ್ ಬರೆಸಿ ಹಾಕಿಸುವಂತೆ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಅಧಿಕಾರಿಗಳಿಗೆ ಸೂಚಿಸಿದರು.

ಪ್ರೀ-ಪೇಯ್ಡ್ ಕೌಂಟರ್ ತೆರೆಯಲು ಸೂಚನೆ :

ಮೊದಲನೇ ಹಂತದಲ್ಲಿ ರೈಲ್ವೆ ನಿಲ್ದಾಣ ಮತ್ತು ಬಸ್ ನಿಲ್ದಾಣದಲ್ಲಿ ಇನ್ನು 20 ದಿನಗಳ ಒಳಗೆ ಆಟೊರಿಕ್ಷಾ ಪ್ರಿ-ಪೇಯ್ಡ್ ಕೌಂಟರ್‌ಗಳ ತೆರೆಯಲು ಪ್ರಾದೇಶಿಕ ಸಾರಿಗೆ ಅಧಿಕಾರಿಗೆ (ಆರ್‌ಟಿಒ) ಜಿಲ್ಲಾಧಿಕಾರಿ ಡಾ.ಆರ್‌.ಸೆಲ್ವಮಣಿ ಸೂಚಿಸಿದರು. ರೈಲು ನಿಲ್ದಾಣದಿಂದ ಬಸ್‍ಸ್ಟ್ಯಾಂಡ್ ಕಡೆ ತೆರಳಲು ನಗರ ಸಾರಿಗೆ ಬಸ್ ಕಾರ್ಯಾಚರಣೆಯನ್ನು 10 ದಿನಗಳ ಒಳಗೆ ಆರಂಭಿಸಬೇಕೆಂದು ಕೆಎಸ್‍ಆರ್‌ಟಿಸಿ ವಿಭಾಗೀಯ ನಿಯಂತ್ರಕರಿಗೆ ಸೂಚಿಸಿದ ಅವರು ಬಸ್ ನಿಲ್ದಾಣ ಸ್ಥಳ ನಿಗದಿ ಕುರಿತು ಆರ್‌ಟಿಒ ಆಟೊ ಬಸ್ ಚಾಲಕರ ಸಂಘ ಟ್ರಾಫಿಕ್ ಪೊಲೀಸ್ ಕೆಎಸ್‍ಆರ್‌ಟಿಸಿ ಯವರು ಸಮೀಕ್ಷೆ ಮಾಡಿ ಸ್ಥಳ ನಿಗದಿಪಡಿಸುವಂತೆ ಸೂಚನೆ ನೀಡಿದರು. ಸಹ್ಯಾದ್ರಿ ಕಾಲೇಜು ಬಳಿಯ ಕೆಇಬಿ ವೃತ್ತದಲ್ಲಿ ಬಸ್ ಕಾಯುವವರ ಸಂಖ್ಯೆ ಹೆಚ್ಚಿದ್ದು ಒಂದು ಬಸ್ ಶೆಲ್ಟರ್ ಸ್ಥಾಪಿಸುವಂತೆ ಜಿಲ್ಲಾಧಿಕಾಗೆ ಸಾರ್ವಜನಿಕರು ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT