ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಾಗರ | ನಿರ್ವಹಣೆ ಕೊರತೆ: ಬಳಲುತ್ತಿದೆ ಕ್ರೀಡಾಂಗಣ

ಸಾಗರ: ಭತ್ತದ ಗದ್ದೆಯ ಬಯಲಿನಂತಾದ ಟರ್ಫ್‌ ಅಂಕಣ
Published 11 ಮೇ 2024, 6:23 IST
Last Updated 11 ಮೇ 2024, 6:23 IST
ಅಕ್ಷರ ಗಾತ್ರ

ಸಾಗರ: ನಗರದ ಹೃದಯ ಭಾಗದಲ್ಲಿರುವ ಶಾಂತವೇರಿ ಗೋಪಾಲಗೌಡ ಕ್ರೀಡಾಂಗಣ, ನಿರ್ವಹಣೆ ಕೊರತೆಯಿಂದ ಬಳಲುತ್ತಿದೆ. 1994ರಲ್ಲಿ ನಿರ್ಮಿಸಲಾದ ಈ ಕ್ರೀಡಾಂಗಣದಲ್ಲಿ 2008ರಲ್ಲಿ ಟರ್ಫ್ ಅಂಕಣ ಸಿದ್ಧಪಡಿಸುವ ಮೂಲಕ ಕೇವಲ ಕ್ರಿಕೆಟ್‌ಗೆ ಮೀಸಲಿಡುವಂತೆ ಮಾಡಲಾಗಿದೆ.

ಟರ್ಫ್ ಅಂಕಣದ ಉದ್ಘಾಟನೆಗೆ ಬಂದಿದ್ದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (ಕೆಎಸ್‌ಸಿಎ) ಅಂದಿನ ಅಧ್ಯಕ್ಷ ಬ್ರಿಜೇಶ್ ಪಟೇಲ್ ರಾಜ್ಯದಲ್ಲಿಯೇ ತಾಲ್ಲೂಕು ಕೇಂದ್ರವೊಂದರಲ್ಲಿ ಇಷ್ಟೊಂದು ಗುಣಮಟ್ಟದ ಟರ್ಫ್ ಅಂಕಣ ಎಲ್ಲಿಯೂ ಇಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಟರ್ಫ್ ಅಂಕಣ ಆರಂಭಗೊಂಡ ಶುರುವಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕ್ರಿಕೆಟ್ ಟೂರ್ನಿಗಳು ನಡೆಯುತ್ತಿದ್ದವು. ಯುವ ಪ್ರತಿಭೆಗಳಿಗೆ ಉತ್ತಮ ವೇದಿಕೆ ಕಲ್ಪಿಸಲಾಗಿತ್ತು. ಕ್ರಮೇಣ ನಿರ್ವಹಣೆ ಕೊರತೆಯಿಂದ ಟರ್ಫ್ ಅಂಕಣದ ಹುಲ್ಲು ಇದ್ದ ಸ್ಥಳವು ಭತ್ತದ ಗದ್ದೆಯ ಬಯಲಿನಂತಾಗಿದೆ.

ಕ್ರೀಡಾಂಗಣದಲ್ಲಿ 2008ರಲ್ಲಿ ನಿರ್ಮಿಸಿದ ಕ್ರಿಕೆಟ್ ಅಂಕಣ ಸಂಪೂರ್ಣವಾಗಿ ಹಾಳಾದ ಕಾರಣ ಈ ವರ್ಷ ಕೆಎಸ್‌ಸಿಎ ಶಿವಮೊಗ್ಗ ವಲಯದ ಲೀಗ್ ಪಂದ್ಯಗಳಿಗೆ ಇಲ್ಲಿ ಅವಕಾಶವೇ ನೀಡಿಲ್ಲ. ಇದರಿಂದಾಗಿ ಇಲ್ಲಿನ ನೋಂದಾಯಿತ ಲೀಗ್ ತಂಡಗಳು ಶಿವಮೊಗ್ಗಕ್ಕೆ ತೆರಳಿ ಪಂದ್ಯವಾಡುವ ಸ್ಥಿತಿ ನಿರ್ಮಾಣವಾಗಿದೆ.

ಪ್ರಮುಖವಾಗಿ ಕ್ರೀಡಾಂಗಣದ ಸುತ್ತಲೂ ಇರುವ ಚರಂಡಿ ವ್ಯವಸ್ಥೆ ಅಸಮರ್ಪಕವಾಗಿರುವ ಕಾರಣ ಮಳೆ ಬಂದಾಗ ನೀರು ಸರಾಗವಾಗಿ ಹರಿಯದೆ ಕ್ರೀಡಾಂಗಣದೊಳಗೆ ನುಗ್ಗುತ್ತಿದೆ. ಈ ನೀರಿನ ಜೊತೆಗೆ ಹೇರಳ ಪ್ರಮಾಣದಲ್ಲಿ ಕಸಕಡ್ಡಿಗಳು ಕ್ರೀಡಾಂಗಣದೊಳಗೆ ನುಗ್ಗುತ್ತಿರುವುದರಿಂದ ಅದನ್ನು ಸ್ವಚ್ಛಗೊಳಿಸುವಷ್ಟರಲ್ಲಿ ಅಲ್ಲಿನ ಸಿಬ್ಬಂದಿ ಹೈರಾಣಾಗುತ್ತಿದ್ದಾರೆ.

ಕ್ರೀಡಾಂಗಣದ ಸುತ್ತಲೂ ನಿರ್ಮಿಸಿರುವ ಬೇಲಿ ಶಿಥಿಲಗೊಂಡಿರುವುದರಿಂದ ಸಂಜೆಯ ನಂತರ ಈ ಸ್ಥಳ ಕುಡುಕರ ತಾಣವಾಗಿ ಮಾರ್ಪಡುತ್ತಿದೆ. ಕ್ರೀಡಾಂಗಣದ ಅಂಚಿನ ಸ್ಥಳಗಳಲ್ಲಿ ಒಮ್ಮೆ ಓಡಾಡಿದರೆ ಎಲ್ಲೆಂದರಲ್ಲಿ ಮದ್ಯದ ಬಾಟಲಿಗಳು ಬಿದ್ದಿರುವುದನ್ನು ಕಾಣಬಹುದು. ಗಾಂಜಾ ಸೇವಿಸುವವರಿಗೂ ಕ್ರೀಡಾಂಗಣ ಪ್ರಶಸ್ತ ಸ್ಥಳವಾಗಿಬಿಟ್ಟಿದೆ.

‘ಕ್ರೀಡಾಂಗಣದಲ್ಲಿ ಸುಸಜ್ಜಿತವಾದ ಪೆವಿಲಿಯನ್ ವ್ಯವಸ್ಥೆ ಇಲ್ಲದೇ ಇರುವುದು ಮತ್ತೊಂದು ಕೊರತೆಯಾಗಿ ಕಾಣುತ್ತಿದೆ. ಕ್ರೀಡಾಂಗಣಕ್ಕೆ ಹೊಂದಿಕೊಂಡಿರುವ ಕೃಷ್ಣ ರಾಜೇಂದ್ರ ತರಕಾರಿ ಮಾರುಕಟ್ಟೆ ಇದ್ದು, ಆ ಭಾಗಕ್ಕೆ ಕ್ರೀಡಾಂಗಣವನ್ನು ವಿಸ್ತರಿಸಿ ಪೆವಿಲಿಯನ್ ನಿರ್ಮಿಸುವುದು ಸೂಕ್ತ’ ಎನ್ನುತ್ತಾರೆ ಹಿರಿಯ ಕ್ರಿಕೆಟ್ ಆಟಗಾರ, ನಗರಸಭೆ ಮಾಜಿ ಉಪಾಧ್ಯಕ್ಷ ಐ.ಎನ್.ಸುರೇಶ್ ಬಾಬು.

‘ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಕ್ರೀಡಾಂಗಣದ ನಿರ್ವಹಣೆಯ ಜವಾಬ್ದಾರಿ ಹೊತ್ತಿದೆ. ಇಬ್ಬರು ಸಿಬ್ಬಂದಿ ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಇವರ ವೇತನವನ್ನು ನಗರಸಭೆ ಪಾವತಿಸುತ್ತಿದೆ. ನಿರ್ವಹಣೆ ಜವಾಬ್ದಾರಿ ಹೊತ್ತಿರುವ ನಿವೃತ್ತ ಸರ್ಕಾರಿ ನೌಕರರಿಬ್ಬರಿಗೆ ಇಲಾಖೆ ಗೌರವ ಧನ ನೀಡುತ್ತಿದೆ. ಸಿಬ್ಬಂದಿ ಕೊರತೆ ಕೂಡ ಕ್ರೀಡಾಂಗಣದ ಅವ್ಯವಸ್ಥೆಗೆ ಕಾರಣವಾಗಿದೆ’ ಎಂಬ ಅಭಿಪ್ರಾಯವಿದೆ.

‘ಕ್ರೀಡಾಂಗಣಕ್ಕೆ ಹೊಸದಾಗಿ ಮಣ್ಣು ಹಾಕಿ ಸಮತಟ್ಟು ಮಾಡಿ ಹುಲ್ಲು ಬೆಳೆಸುವ ಜೊತೆಗೆ ಹೊಸದಾಗಿ ತಜ್ಞರ ನೆರವಿನಿಂದ ಕ್ರಿಕೆಟ್ ಅಂಕಣ ನಿರ್ಮಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂಬುದು ಕ್ರಿಕೆಟ್ ಆಟಗಾರರು ಹಾಗೂ ಅಭಿಮಾನಿಗಳ ಒತ್ತಾಯ.

ನಿರ್ವಹಣೆ ಇಲ್ಲದೆ ಕ್ರೀಡಾಂಗಣದ ಹುಲ್ಲಿನ ಹಾಸು ಇದ್ದ ಸ್ಥಳ ಭತ್ತದ ಗದ್ದೆಯಂತಾಗಿರುವುದು 
ನಿರ್ವಹಣೆ ಇಲ್ಲದೆ ಕ್ರೀಡಾಂಗಣದ ಹುಲ್ಲಿನ ಹಾಸು ಇದ್ದ ಸ್ಥಳ ಭತ್ತದ ಗದ್ದೆಯಂತಾಗಿರುವುದು 
ಚರಂಡಿ ಅವ್ಯವಸ್ಥೆಯ ಕಾರಣ ಮಳೆ ಬಂದಾಗ ಕ್ರೀಡಾಂಗಣದೊಳಗೆ ನೀರು ನುಗ್ಗಿ ಕಸಕಡ್ಡಿಗಳು ಒಳಬರುತ್ತಿವೆ
ಚರಂಡಿ ಅವ್ಯವಸ್ಥೆಯ ಕಾರಣ ಮಳೆ ಬಂದಾಗ ಕ್ರೀಡಾಂಗಣದೊಳಗೆ ನೀರು ನುಗ್ಗಿ ಕಸಕಡ್ಡಿಗಳು ಒಳಬರುತ್ತಿವೆ

ಕ್ರೀಡಾಂಗಣದಲ್ಲಿ ಸಂಜೆಯ ವೇಳೆ ಕುಡುಕರ ಹಾವಳಿ ತಪ್ಪಿಸಲು ಪೊಲೀಸ್ ಬೀಟ್ ವ್ಯವಸ್ಥೆ ಬಲಪಡಿಸಬೇಕು. ಈ ಹಿಂದೆ ಈ ಕೆಲಸ ನಡೆದಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಬೀಟ್ ವ್ಯವಸ್ಥೆ ಈ ಭಾಗದಲ್ಲಿ ಇಲ್ಲದೆ ಇರುವುದು ಕ್ರೀಡಾಂಗಣದ ಸುತ್ತಲೂ ಅನೈತಿಕ ಚಟುವಟಿಕೆ ನಡೆಸುವುದಕ್ಕೆ ದಾರಿ ಮಾಡಿಕೊಟ್ಟಿದೆ. ಗಣೇಶ್ ಪ್ರಸಾದ್ ಕೆ.ಆರ್ ನಗರಸಭೆ ಸದಸ್ಯ ಕ್ರಿಕೆಟ್ ಆಟಗಾರ ಕ್ರೀಡಾಂಗಣದ ಸಮಗ್ರ ಅಭಿವೃದ್ಧಿ ಆಗಬೇಕಾದರೆ ಅದರ ಪ್ರದೇಶವನ್ನು ವಿಸ್ತರಣೆ ಮಾಡಬೇಕಿದೆ. ಕ್ರೀಡಾಂಗಣದ ಸುತ್ತಲೂ ಇರುವ ಒತ್ತುವರಿ ಪ್ರದೇಶವನ್ನು ತೆರವುಗೊಳಿಸಬೇಕಿದೆ. ನಗರಸಭೆಗೆ ಸೇರಿರುವ ತರಕಾರಿ ಮಾರುಕಟ್ಟೆ ಪ್ರದೇಶವನ್ನು ಕ್ರೀಡಾಂಗಣಕ್ಕೆ ಸೇರಿಸಿ ರಸ್ತೆಗೆ ಮುಖವಾಗುವ ಭಾಗದಲ್ಲಿ ವಾಣಿಜ್ಯ ಸಂಕೀರ್ಣ ಕ್ರೀಡಾಂಗಣಕ್ಕೆ ಮುಖವಾಗುವ ಭಾಗದಲ್ಲಿ ಪೆವಿಲಿಯನ್ ನಿರ್ಮಿಸುವುದು ಸೂಕ್ತ. ಐ.ಎನ್.ಸುರೇಶ್ ಬಾಬು ಕ್ರಿಕೆಟ್ ಆಟಗಾರ ಹಾಗೂ ನಗರಸಭೆ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT