ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಾಗರ | ಮಂಗನ ಕಾಯಿಲೆ: ಆಸ್ಪತ್ರೆಗೆ ಶಾಸಕ ಭೇಟಿ

Published 5 ಫೆಬ್ರುವರಿ 2024, 15:51 IST
Last Updated 5 ಫೆಬ್ರುವರಿ 2024, 15:51 IST
ಅಕ್ಷರ ಗಾತ್ರ

ಸಾಗರ: ಮಂಗನ ಕಾಯಿಲೆ (ಕೆಎಫ್‌ಡಿ)ಗೆ ಸಂಬಂಧಪಟ್ಟಂತೆ ಇಲ್ಲಿನ ಸರ್ಕಾರಿ ಆಸ್ಪತ್ರೆಗೆ 8 ರೋಗಿಗಳು ಚಿಕಿತ್ಸೆಗಾಗಿ ದಾಖಲಾಗಿದ್ದಾರೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.

ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಸೋಂಕಿಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿರುವವರ ಆರೋಗ್ಯವನ್ನು ಸೋಮವಾರ ವಿಚಾರಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಹೊಸನಗರ ತಾಲ್ಲೂಕಿನ ಮಾರುತಿಪುರ ಹಾಗೂ ನಿಟ್ಟೂರು ಭಾಗದ ರೋಗಿಗಳು ಇಲ್ಲಿನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಾಗರ ತಾಲ್ಲೂಕಿಗೆ ಹೊಂದಿಕೊಂಡಿರುವ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನಲ್ಲೂ ಕಾಯಿಲೆ ಕಾಣಿಸಿಕೊಂಡಿದೆ. ಅಲ್ಲಿನ ರೋಗಿಗಳು ಸಹ ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಬರುತ್ತಿದ್ದಾರೆ. ರೋಗಿಗಳಿಗೆ ಅಗತ್ಯವಿರುವ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚನೆ ನೀಡಲಾಗಿದೆ’ ಎಂದರು.

‘ಮಂಗನ ಕಾಯಿಲೆ ಕಾಣಿಸಿಕೊಂಡಿದೆ ಎಂದ ಮಾತ್ರಕ್ಕೆ ಭಯ ಪಡುವ ಅಗತ್ಯವಿಲ್ಲ. ಆರಂಭದಲ್ಲೆ ಚಿಕಿತ್ಸೆ ಪಡೆದರೆ ಕಾಯಿಲೆ ಗುಣವಾಗುತ್ತದೆ. ಅಗತ್ಯ ಬಿದ್ದರೆ ಇಲ್ಲಿನ ರೋಗಿಗಳನ್ನು ತಕ್ಷಣ ಮಣಿಪಾಲದ ಆಸ್ಪತ್ರೆಗೆ ಕಳುಹಿಸಲಾಗುವುದು. ಅಲ್ಲಿ ಉಚಿತ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಲಾಗುವುದು’ ಎಂದರು.

‘ಹಿಂದಿನ ವರ್ಷಗಳಲ್ಲಿ ತಾಲ್ಲೂಕಿನ ಅರಳಗೋಡು ಪಂಚಾಯಿತಿ ಹಾಗೂ ಭಾರಂಗಿ ಹೋಬಳಿಯ ಕೆಲವು ಗ್ರಾಮಗಳಲ್ಲಿ ಕಾಯಿಲೆ ವ್ಯಾಪಕವಾಗಿ ಕಾಣಿಸಿಕೊಂಡಿತ್ತು. ಅರಣ್ಯ ಪ್ರದೇಶದಲ್ಲಿ ಮಂಗ ಮೃತಪಟ್ಟಾಗ ಅದರ ಉಣುಗು ತರುವ ಸೋಂಕಿನಿಂದ ಕಾಯಿಲೆ ಹರಡುತ್ತದೆ. ಹೀಗಾಗಿ ಅರಣ್ಯ ಪ್ರದೇಶಕ್ಕೆ ತೆರಳುವ ಗ್ರಾಮಸ್ಥರು ಎಚ್ಚರ ವಹಿಸುವಂತೆ ಸೂಚನೆ ನೀಡಲಾಗಿದೆ’ ಎಂದು ಹೇಳಿದರು.

ಕೆಎಫ್‌ಡಿಗೆ ಸಂಬಂಧಪಟ್ಟಂತೆ ಸಂಶೋಧನಾ ಕೇಂದ್ರವನ್ನು ತೆರೆಯಬೇಕು ಎಂಬ ಬೇಡಿಕೆ ಬಹಳ ವರ್ಷಗಳಿಂದ ಇದೆ. ವಿಧಾನಸಭೆಯ ಮುಂದಿನ ಅಧಿವೇಶನದಲ್ಲಿ ಈ ಸಂಬಂಧ ಸರ್ಕಾರದ ಗಮನ ಸೆಳೆಯಲಾಗುವುದು ಎಂದರು.

ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಪರಪ್ಪ, ನಗರಸಭೆ ಸದಸ್ಯ ಗಣಪತಿ ಮಂಡಗಳಲೆ, ಜಯಕುಮಾರ್, ಫಣೀಂದ್ರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT