ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದಿ ನಾಯಿಗಳ ನಿಯಂತ್ರಣವಿಲ್ಲ, ಕಾಟ ತಪ್ಪುತ್ತಿಲ್ಲ: ಕಠಿಣ ಕ್ರಮಕ್ಕೆ ಜನರ ಆಗ್ರಹ

Published 1 ಜನವರಿ 2024, 7:43 IST
Last Updated 1 ಜನವರಿ 2024, 7:43 IST
ಅಕ್ಷರ ಗಾತ್ರ

ಶಿವಮೊಗ್ಗ: ನಗರ ಸೇರಿದಂತೆ ಜಿಲ್ಲೆಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಪ್ರಮುಖ ವೃತ್ತ, ರಸ್ತೆಗಳಲ್ಲಿ ನಾಯಿಗಳ ಹಿಂಡಿನಿಂದಾಗಿ ಮಕ್ಕಳು, ಮಹಿಳೆಯರು ಭಯದಲ್ಲೇ ಓಡಾಡುವಂತಾಗಿದೆ.

ಇಲ್ಲಿನ ಸರ್ಕಾರಿ ಹಾಗೂ ಖಾಸಗಿ ಬಸ್ ನಿಲ್ದಾಣ, ಮಹಾವೀರ ವೃತ್ತ, ಟಿ. ಸೀನಪ್ಪ ವೃತ್ತ (ಗೋಪಿ ವೃತ್ತ), ದುರ್ಗಿಗುಡಿ, ಪೊಲೀಸ್ ಚೌಕಿ, ವಿನೋಬನಗರ ಮುಖ್ಯ ರಸ್ತೆಯಲ್ಲಿ ಮಲಗಿರುವ ನಾಯಿಗಳು ವಾಹನಗಳ ಸದ್ದಿಗೂ ಜಗ್ಗುವುದಿಲ್ಲ. ಇದರಿಂದ ಪ್ರಯಾಣಿಕರು, ಪಾದಚಾರಿಗಳು ಪರದಾಡುವಂತಾಗಿದೆ.

ಇಲ್ಲಿನ ಬೊಮ್ಮನಕಟ್ಟೆ ಹಾಗೂ ನಗರದ ಪ್ರಮುಖ ವೃತ್ತಗಳಲ್ಲಿ ತೆರೆದ ಸ್ಥಳದಲ್ಲೇ ಎಗ್‌ರೈಸ್ ಅಂಗಡಿ, ಚಿಕನ್‌ ಅಂಗಡಿ, ಸಣ್ಣ ಹೋಟೆಲ್‌ಗಳು ಇರುವುದರಿಂದ ಮಾಂಸದ ವಾಸನೆ ಹಿಡಿದುಬರುವ ನಾಯಿಗಳ ಹಿಂಡು ಅಲ್ಲಿ ಠಿಕಾಣಿ ಹೂಡುತ್ತದೆ ಎಂಬುದು ಸ್ಥಳೀಯರ ದೂರು.

ಬೀದಿ ನಾಯಿಗಳ ಹಾವಳಿಂದ ಜನರಿಗೆ ನೆಮ್ಮದಿ ಇಲ್ಲದಂತಾಗಿದೆ. ರಾತ್ರಿ ವೇಳೆ ನಿದ್ರೆ ಮಾಡಲು ಆಗುತ್ತಿಲ್ಲ. ತಡರಾತ್ರಿಗೆ ಕೆಲಸ ಮುಗಿಸಿ ಬರುವ ಬೈಕ್‌ ಸವಾರರು ಹಾಗೂ ಪಾದಾಚಾರಿಗಳನ್ನು ಅಟ್ಟಿಸಿಕೊಂಡು ಹೋಗುತ್ತವೆ. ಮನೆಗಳ ಮುಂದೆ ನಿಲ್ಲಿಸಿರುವ ವಾಹನಗಳ ಮೇಲೆ ಮೂತ್ರ ವಿಸರ್ಜನೆ ಮಾಡುತ್ತವೆ. ರಸ್ತೆಯಲ್ಲಿ ಹೋದರೆ ಅಟ್ಟಿಸಿಕೊಂಡು ಬರುತ್ತವೆ. ನಾಯಿಗಳ ಹಾವಳಿಯಿಂದ ರಸ್ತೆಗೆ ಬರಲು ಹೆದರುವಂತಾಗಿದೆ ಎಂದು ಬೊಮ್ಮನಕಟ್ಟೆ ನಿವಾಸಿಗಳು ಆತಂಕ ವ್ಯಕ್ತಪಡಿಸಿದರು.

‘ರಾತ್ರಿ ವೇಳೆ ಜನರ ನೆಮ್ಮದಿಯ ನಿದ್ರೆಗೆ ಭಂಗ ತರುತ್ತವೆ. ನಾಯಿಗಳ ಜಗಳದಿಂದ ನಿದ್ರೆ ಮಾಡಲು ಆಗುವುದಿಲ್ಲ. ಸುಮ್ಮನೆ ಬೊಗಳುತ್ತಿರುತ್ತವೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ನಾಯಿಗಳನ್ನು ಸೆರೆಹಿಡಿದು ಬೇರೆಡೆ ಸಾಗಿಸಬೇಕು’ ಎಂದು ಸ್ಥಳೀಯ ನಿವಾಸಿ ಸಂತೋಷ್ ಆಗ್ರಹಿಸಿದರು.

ನಾಯಿಗಳ ಬಗ್ಗೆಯೂ ಕನಿಕರ ತೋರಬೇಕು. ಅವುಗಳಿಗೂ ಬದುಕುವ ಹಕ್ಕಿದೆ. ಎಲ್ಲ ನಾಯಿಗಳು ಕಚ್ಚುವುದಿಲ್ಲ. ಅವುಗಳನ್ನು ಪ್ರೀತಿಯಿಂದ ನೋಡಿಕೊಂಡರೆ ಸ್ನೇಹ ತೋರುತ್ತವೆ ಎಂದು ಪ್ರಾಣಿದಯೆ ಸಂಘದ ಪ್ರಸಾದ್ ‘ಪ್ರಜಾವಾಣಿ’ಗೆ ತಿಳಿಸಿದರು.

ನಗರ ವ್ಯಾಪ್ತಿಯಲ್ಲಿ 10,000 ಬೀದಿ ನಾಯಿಗಳು

ನಗರ ವ್ಯಾಪ್ತಿಯಲ್ಲಿ 10,000 ಬೀದಿ ನಾಯಿಗಳಿವೆ. ಒಂದು ನಾಯಿಗೆ ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆಗೆ ₹ 3,000 ವೆಚ್ಚ ತಗುಲುತ್ತದೆ. ಒಟ್ಟು ₹ 3 ಕೋಟಿ ವೆಚ್ಚ ಭರಿಸಬೇಕಾಗುತ್ತದೆ. ಪಾಲಿಕೆ ಈ ಕುರಿತು ಕ್ರಮ ಕೈಗೊಳ್ಳಲಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣಗೌಡ ಮಾಹಿತಿ ನೀಡಿದರು.

ಸುಪ್ರೀಂ ಕೋರ್ಟ್ ಆದೇಶದಂತೆ ಬೀದಿ ನಾಯಿಗಳನ್ನು ವಧೆ ಮಾಡುವಂತಿಲ್ಲ. ಸ್ಥಳಾಂತರಗೊಳಿಸುವಂತಿಲ್ಲ. ಚಿಕಿತ್ಸೆ ನೀಡಿ ಅದೇ ಜಾಗದಲ್ಲಿ ಬಿಡಬೇಕು. ಆದರೆ, ಆಹಾರ ಅರಸಿ ನಗರಕ್ಕೆ ಹೊರಗಿನಿಂದ ನಾಯಿಗಳು ಬರುತ್ತಲೇ ಇರುತ್ತವೆ ಎಂದು ಅವರು ವಿವರಿಸಿದರು.

ದ್ವಿಚಕ್ರ ವಾಹನ ಸವಾರರಿಗೇ ಹೆಚ್ಚು ಅಪಾಯ

ವರದಿ – ಕಿರಣ್‌ಕುಮಾರ್

ಭದ್ರಾವತಿ: ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ ಎಂಬ ದೂರುಗಳು ಕೇಳಿಬರುತ್ತಿವೆ. ನಗರದ ವಿವಿಧೆಡೆ ಮಾಂಸಾಹಾರದ ತ್ಯಾಜ್ಯಗಳನ್ನು ಎಸೆಯುವುದರಿಂದ ಅಲ್ಲೆಲ್ಲ ನಾಯಿಗಳ ಹಿಂಡು ಸೇರುತ್ತಿದ್ದು, ಜನರು ತೊಂದರೆ ಎದುರಿಸುವಂತಾಗಿದೆ.

ದ್ವಿಚಕ್ರ ವಾಹನ ಸವಾರರನ್ನು ಬೀದಿ ನಾಯಿಗಳು ಅಟ್ಟಿಸಿಕೊಂಡು ಬರುತ್ತವೆ. ಚಾಲಕರು ಅಥವಾ ಹಿಂಬದಿ ಕುಳಿತಿರುವವರು ಭಯಭೀತರಾಗಿ, ತಪ್ಪಿಸಿಕೊಳ್ಳಲು ವಾಹನಗಳಿಂದ ಬೀಳುವ ಅಥವಾ ಅಪಘಾತಕ್ಕೆ ಒಳಗಾಗುವ ಸಂಭವಗಳೇ ಹೆಚ್ಚು. ಕೆಲವೊಮ್ಮೆ ತಡರಾತ್ರಿಯಲ್ಲಿ 10ರಿಂದ 15 ನಾಯಿಗಳು ಒಮ್ಮೆಲೇ ದಾಳಿ ಮಾಡುತ್ತವೆ. ಕಚೇರಿಯಿಂದ ಮನೆಗೆ ಬರಲು ಕಷ್ಟವಾಗುತ್ತದೆ ಎಂದು ವಾಹನ ಸವಾರ ಪ್ರವೀಣ್‌ ಅಳಲು ತೋಡಿಕೊಂಡರು.

ಕಸದ ಗಾಡಿಯಲ್ಲಿಯೇ ಸಾರ್ವಜನಿಕರು ಕಸ ಹಾಕಬೇಕು. ಸ್ವಚ್ಛತೆಗೆ ಗಮನಹರಿಸಬೇಕು. ಇದರಿಂದ ಕೊಂಚ ಮಟ್ಟಿಗೆ ಬೀದಿ ನಾಯಿಗಳ ಹಾವಳಿ ತಪ್ಪಿಸಬಹುದು ಎಂದು ನಗರಸಭೆಯ ಸಹಾಯಕ ಕಾರ್ಯಪಾಲಕ (ಪರಿಸರ) ಎಂಜಿನಿಯರ್‌ ಪ್ರಭಾಕರ್ ತಿಳಿಸಿದರು.

ನಿತ್ಯ 25ರಂತೆ 1,000 ನಾಯಿಗಳಿಗೆ ಸಂತಾನ ಶಕ‌್ತಿಹರಣ ಚಿಕಿತ್ಸೆ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.

ಜಾನುವಾರುಗಳ ಮೇಲೆ ದಾಳಿ

ವರದಿ – ವರುಣ್ ಕುಮಾರ್ ಡಿ. 

ಕುಂಸಿ: ಸಮೀಪದ ಚೋರಡಿ ಸೇರಿದಂತೆ ಸುತ್ತಲಿನ ಗ್ರಾಮಸ್ಥರು ಬೀದಿ ನಾಯಿಗಳ ಕಾಟದಿಂದ ರಸ್ತೆಯಲ್ಲಿ ಓಡಾಡದಂತಾಗಿದೆ.

ಜನ, ಜಾನುವಾರುಗಳ ಮೇಲೆ ಬೀದಿ ನಾಯಿಗಳು ದಾಳಿ ಮಾಡುತ್ತಿದ್ದು, ರಸ್ತೆಯಲ್ಲಿ ಓಡಾಡಲು ಜನರು ಭಯಪಡುವಂತಾಗಿದೆ. ಕುಂಸಿಯ ಪ್ರಮುಖ ಬೀದಿಗಳು ಹಾಗೂ ಹಳೆ ಕುಂಸಿಯ ಆಂಜನೇಯ ದೇವಸ್ಥಾನದ ಅಕ್ಕಪಕ್ಕದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ.

ಸಮೀಪದ ಚೋರಡಿಯಲ್ಲಿ ಈಚೆಗೆ ವಿದ್ಯಾರ್ಥಿಗಳ ಮೇಲೆ ದಾಳಿ ಮಾಡಿದ್ದು, ನಾಲ್ಕೈದು ಹಸುಗಳ ಕರುವನ್ನು ತಿಂದು ಹಾಕಿವೆ.

ಇಲ್ಲಿನ ಹೆಗ್ಗೆರೆ ಕೆರೆಯ ಆಸುಪಾಸಿನಲ್ಲಿ ಕೋಳಿ ಮತ್ತು ಮಾಂಸದ ಅಂಗಡಿಗಳು ಹೆಚ್ಚಿದ್ದು, ಅಂಗಡಿಗಳ ತ್ಯಾಜ್ಯವನ್ನು ರಸ್ತೆಯ ಪಕ್ಕದಲ್ಲೇ ಹಾಕುವುದರಿಂದ ಬೀದಿ ನಾಯಿಗಳ ಉಪಟಳ ಹೆಚ್ಚಾಗಿದೆ. ಇದರಿಂದ ಸುತ್ತಲಿನ ಹಳ್ಳಿಗಳಿಂದ ಬರುವ ಜನರು ಭಯದಲ್ಲೇ ಓಡಾಡುವಂತಾಗಿದೆ ಎಂಬುದು ನಿವಾಸಿಗಳು ದೂರು.

ಗ್ರಾಮ ಪಂಚಾಯಿತಿ ಸಿಬ್ಬಂದಿ ತ್ಯಾಜ್ಯವನ್ನು ಸರಿಯಾದ ರೀತಿ ವಿಲೇವಾರಿ ಮಾಡಲು ಸಂಬಂಧಪಟ್ಟ ಅಂಗಡಿಗಳಿಗೆ ಸೂಚನೆ ನೀಡಬೇಕು ಎಂದು ನಿವಾಸಿಗಳು ಒತ್ತಾಯಿಸಿದ್ದಾರೆ.

ಗ್ರಾಮ ಪಂಚಾಯಿತಿಯಿಂದ ನಮಗೆ ಸಹಕಾರ ನೀಡುವ ಮೂಲಕ ಬೀದಿ ನಾಯಿಗಳನ್ನು ಹಿಡಿದುಕೊಟ್ಟರೆ ಅವುಗಳ ಸಂತಾನ ಶಕ್ತಿಹರಣ ಚಿಕಿತ್ಸೆ ಮಾಡುತ್ತೇವೆ ಎಂದು ಪಶು ವೈದ್ಯಕೀಯ ಇಲಾಖೆ ಅಧಿಕಾರಿಗಳು ಹೇಳಿದರು.

ಬೀದಿನಾಯಿ ಉಪಟಳ: ಆಡಳಿತ ವರ್ಗದ ನಿರ್ಲಕ್ಷ್ಯ

ವರದಿ – ರವಿ ನಾಗರಕೊಡಿಗೆ

ಹೊಸನಗರ: ತಾಲ್ಲೂಕಿನಲ್ಲಿ ಬೀದಿ ನಾಯಿಗಳ ಕಾಟ ವಿಪರೀತವಾಗಿದೆ. ಆದರೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.

ಬೀದಿನಾಯಿಗಳನ್ನು ಹಿಡಿದು ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡುವ ಜವಾಬ್ದಾರಿ ಸ್ಥಳೀಯ ಆಡಳಿತದ್ದು, ಆದರೆ ಅಧಿಕಾರಿಗಳು ಕೆಲಸ ಮಾಡುತ್ತಿಲ್ಲ ಎಂದು ಇಲ್ಲಿನ ನಿವಾಸಿ ಮಧುಕರ ದೂರಿದರು.

ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆಯನ್ನು ಶಿವಮೊಗ್ಗದ ಕೆಲ ಏಜೆನ್ಸಿಗಳು ಮಾತ್ರ ಮಾಡುತ್ತವೆ. ಕಾರ್ಯಾಚರಣೆಯಲ್ಲಿ ಹಲವು ಸಮಸ್ಯೆಗಳು ಇವೆ. ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆ ಸೇರಿದಂತೆ ಎಲ್ಲಾ ಪ್ರಾಥಮಿಕ ಕೇಂದ್ರದಲ್ಲೂ ನಾಯಿ ಕಡಿತಕ್ಕೆ ಅಗತ್ಯ ಲಸಿಕೆ ದಾಸ್ತಾನು ಇದೆ. ನಾಗರಿಕರು ಬೀದಿ ನಾಯಿಗಳ ವಿಚಾರದಲ್ಲಿ ಎಚ್ಚರಿಕೆಯಿಂದ ಇರಬೇಕು ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಸುರೇಶ್ ತಿಳಿಸಿದರು.

ತಪ್ಪದ ಹಾವಳಿ: ಹಲವರಿಗೆ ಗಾಯ

ವರದಿ – ರಿ.ರಾ. ರವಿಶಂಕರ್

ರಿಪ್ಪನ್‌ಪೇಟೆ: ಗ್ರಾಮ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿದೆ. ಹಲವು ಭಾಗಗಳಲ್ಲಿ ಜನರು ಸಂಚರಿಸುವುದೇ ಕಷ್ಟವಾಗಿದೆ. 

ಪಾದಚಾರಿಗಳು ಮತ್ತು ದ್ವಿಚಕ್ರ ವಾಹನಗಳ ಸವಾರರು ನಾಯಿಗಳಿಂದ ತಪ್ಪಿಸಿಕೊಳ್ಳಲು ವೇಗದಿಂದ ಹೋಗಿ ಬಿದ್ದು ಗಾಯಗೊಂಡಿದ್ದಾರೆ. ದೈನಂದಿನ ಕೆಲಸ  ಮತ್ತು ವಾಯು ವಿಹಾರಕ್ಕೆ ತೆರಳುವ ಹಿರಿಯ ನಾಗರಿಕರು ಜೀವ ಭಯದಲ್ಲೇ ಓಡಾಡುವಂತಾಗಿದೆ.

ಸ್ಥಳೀಯ ಗ್ರಾಮ ಆಡಳಿತ ಹಾಗೂ ಸಂಘ–ಸಂಸ್ಥೆಗಳು ಬೀದಿ ನಾಯಿಗಳ ಉಪಟಳ ತಪ್ಪಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ನಾಯಿಗಳ ಹಾವಳಿ ತಡೆಗೆ ಕ್ರಮ ಕೈಗೊಳ್ಳಬೇಕು ಎಂಬುದು ಸರಿ. ಆದರೆ ಅವುಗಳ ಬಗ್ಗೆ ಮಾನವೀಯತೆ ತೋರಬೇಕು ಎಂದು ಒತ್ತಾಯಿಸುತ್ತಾರೆ ಸಾಮಾಜಿಕ ಕಾರ್ಯಕರ್ತ ಟಿ.ಆರ್. ಕೃಷ್ಣಪ್ಪ.

ಈಚೆಗೆ ಇಲ್ಲಿ ಮೂರು ಮರಿಗಳಿಗೆ ಜನ್ಮ ನೀಡಿದ್ದ ಬೀದಿನಾಯಿಯೊಂದನ್ನು ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಿಡಿದಿದ್ದರು. ಮರಿಗಳನ್ನು ಅಲ್ಲೇ ಬಿಟ್ಟು ಹೋಗಿದ್ದರು. ಹೀಗಾದರೆ ಹೇಗೆ. ಕಾರ್ಯಾಚರಣೆ ಪ್ರಜ್ಞಾಪೂರ್ವಕವಾಗಿ ಇರಬೇಕು ಎಂದು ಆಗ್ರಹಿಸಿದರು.

ಸಂತಾನ ಶಕ್ತಿಹರಣ ಕಾರ್ಯಾಚರಣೆ

ವರದಿ – ಎಂ. ರಾಘವೇಂದ್ರ

ಸಾಗರ: ನಗರ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಉಪಟಳ ಹೆಚ್ಚುತ್ತಿದ್ದು, ಸಾರ್ವಜನಿಕರಿಂದ ಈ ಬಗ್ಗೆ ವ್ಯಾಪಕ ದೂರುಗಳು ದಾಖಲಾಗುತ್ತಿವೆ. ಈ ಕಾರಣ ನಗರಸಭೆ ಬೀದಿ ನಾಯಿಗಳ ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ ಕಾರ್ಯಾಚರಣೆಗೆ ಮುಂದಾಗಿದೆ.

ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ ನಡೆಸಲು ಟೆಂಡರ್ ಪ್ರಕ್ರಿಯೆ ನಡೆದಿದ್ದು, ಚಿಕ್ಕಮಗಳೂರಿನ ಸ್ವಯಂಸೇವಾ ಸಂಘಟನೆಯೊಂದು ಟೆಂಡರ್ ಹಿಡಿದಿದೆ. ಜನವರಿ ತಿಂಗಳ ಮೊದಲ ವಾರದಿಂದಲೇ ಬೀದಿ ನಾಯಿಗಳನ್ನು ಹಿಡಿಯುವ ಕಾರ್ಯಾಚರಣೆ ಆರಂಭಗೊಳ್ಳಲಿದೆ. ನಾಯಿಗಳನ್ನು ಸಾಕಿದವರು ಅವುಗಳನ್ನು ಜೋಪಾನ ಮಾಡಿಕೊಳ್ಳಬೇಕು ಎಂದು ನಗರಸಭೆ ಪರಿಸರ ಎಂಜಿನಿಯರ್‌ ಮದನ್ ತಿಳಿಸಿದರು.

ಕಳೆದ ವರ್ಷ 792 ಬೀದಿನಾಯಿಗಳನ್ನು ಹಿಡಿದು ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಈ ವರ್ಷ ಒಂದು ನಾಯಿಯ ಚಿಕಿತ್ಸೆಗೆ ₹ 1,650 ದರ ನಿಗದಿಪಡಿಸಲಾಗಿದೆ. ಚಿಕಿತ್ಸೆ ನೀಡಿದ ನಾಯಿಗೆ ರೇಬಿಸ್ ನಿರೋಧಕ ಚುಚ್ಚುಮದ್ದು ನೀಡುವುದು ಕಡ್ಡಾಯ. ಜೊತೆಗೆ ಯಾವ ಪ್ರದೇಶದಿಂದ ನಾಯಿಯನ್ನು ಹಿಡಿಯಲಾಗಿತ್ತೋ ಅದೇ ಪ್ರದೇಶಕ್ಕೆ ಮರಳಿ ಬಿಡುವುದೂ ಕಡ್ಡಾಯ ಎಂದು ಅವರು ವಿವರಿಸಿದರು.

ಸುಪ್ರೀಂ ಕೋರ್ಟ್ ನಿರ್ದೇಶನದ ಪ್ರಕಾರ ನಾಯಿಗಳನ್ನು ಯಾವುದೇ ಕಾರಣಕ್ಕೂ ಕೊಲ್ಲುವಂತಿಲ್ಲ. ಗುಣಪಡಿಸಲಾಗದ ಕಾಯಿಲೆ ಬಂದಿದೆ ಎಂದು ಇಬ್ಬರು ವೈದ್ಯರು ದೃಢಪಡಿಸಿದ ನಂತರವೇ ಅವುಗಳನ್ನು ಕೊಲ್ಲಲು ಅವಕಾಶವಿದೆ. ಹೀಗಾಗಿ ಬೀದಿ ನಾಯಿಗಳ ನಿಯಂತ್ರಣಕ್ಕೆ ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆಯೊಂದೇ ಪರಿಣಾಮಕಾರಿ ಮಾರ್ಗ ಎಂದು ಪಶುಪಾಲನಾ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ ಡಾ. ಶ್ರೀಪಾದರಾವ್ ಮಾಹಿತಿ ನೀಡಿದರು.

ಕಾರ್ಯಾಚರಣೆ ಶುರು

ವರದಿ – ನಿರಂಜನ ವಿ.

ತೀರ್ಥಹಳ್ಳಿ: ನಾಯಿಗಳ ಉಪಟಳ ನಿಯಂತ್ರಿಸಲು ಅನೇಕ ವರ್ಷಗಳಿಂದ ಕೇಳಿಬಂದಿದ್ದ ಬೇಡಿಕೆ ಈಡೇರಿದೆ. ಪಟ್ಟಣ ಪಂಚಾಯಿತಿ ವತಿಯಿಂದ ಸುಮಾರು 50ಕ್ಕೂ ಹೆಚ್ಚು ಬೀದಿ ನಾಯಿಗಳಿಗೆ ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.

ಒಂದು ನಾಯಿ ಚಿಕಿತ್ಸೆಗೆ ₹ 1,650 ನಿಗದಿ ಪಡಿಸಲಾಗಿದೆ. ಅದರಲ್ಲಿ ₹ 876 ಶಸ್ತ್ರಚಿಕಿತ್ಸೆ, ₹ 482 ನಿರ್ವಹಣೆ, ₹ 282 ಹಿಡಿಯಲು ಅನುದಾನ ಕಲ್ಪಿಸಲಾಗಿದೆ. ₹ 876 ಶಸ್ತ್ರಚಿಕಿತ್ಸೆ, ₹ 275 ವೈದ್ಯರಿಗೆ ಪ್ರೋತ್ಸಾಹಧನ ನಿಗದಿಪಡಿಸಲಾಗಿದೆ. ಶಸ್ತ್ರಚಿಕಿತ್ಸೆಯೊಂದಿಗೆ ರೇಬಿಸ್ ಚುಚ್ಚುಮದ್ದು ನೀಡಲಾಗುತ್ತಿದ್ದು, 2030ರ ವೇಳೆಗೆ ರೇಬಿಸ್‌ಮುಕ್ತ ಭಾರತಕ್ಕೆ ಸರ್ಕಾರ ಮುಂದಾಗಿದೆ  ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಗೀತಾ ರಮೇಶ್ ತಿಳಿಸಿದರು.

‘ಸ್ವಯಂ ಸೇವಕ ಸಂಘ ಅಥವಾ ಜಿಲ್ಲಾ ಪಶು ಸಂಗೋಪನಾ ಇಲಾಖೆ ನಾಯಿಗೆ ಶಸ್ತ್ರಚಿಕಿತ್ಸೆ ಮಾಡಿಸಬಹುದು. ನಾಯಿ ಹಿಡಿಯುವವರಿಗೆ ವಿಪರೀತ ಬೇಡಿಕೆ ಇದೆ. ಆದರೆ ಸರ್ಕಾರಿ ದರದಲ್ಲಿ ನಾಯಿ ಹಿಡಿಯುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಪಟ್ಟಣದ ವ್ಯಾಪ್ತಿಯಲ್ಲಿ 300 ನಾಯಿಗಳಿಗೆ ಶಸ್ತ್ರಚಿಕಿತ್ಸೆ ಮಾಡುವ ಅವಕಾಶ ಇದೆ. 50 ನಾಯಿಗಳಿಗೆ ₹ 44,300 ಪಾವತಿಸಿದ್ದೇವೆ. ಸಂಕ್ರಾಂತಿ ನಂತರ ನಾಯಿಗಳಿಗೆ ಶಸ್ತ್ರಚಿಕಿತ್ಸೆ ನೀಡಲು ತಯಾರಿ ಮಾಡಿಕೊಂಡಿದ್ದೇವೆ’ ಎಂದು ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT