ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನೂನಿನ ಆಳ್ವಿಕೆ ಸದೃಢವಾಗಿರಲಿ ಎಂಬುದು ಎಲ್ಲರ ಅಭಿಲಾಷೆ: ಪಿ.ಎಸ್.ದಿನೇಶ್ ಕುಮಾರ್

ವಕೀಲರ ಭವನದ ಲೋಕಾರ್ಪಣೆ ಸಮಾರಂಭದಲ್ಲಿ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್
Published 11 ಫೆಬ್ರುವರಿ 2024, 14:31 IST
Last Updated 11 ಫೆಬ್ರುವರಿ 2024, 14:31 IST
ಅಕ್ಷರ ಗಾತ್ರ

ಸಾಗರ: ‘ಕಾನೂನಿನ ಆಳ್ವಿಕೆ ಸದೃಢವಾಗಿರಬೇಕು ಎಂಬುದು ಸಮಾಜದ ಪ್ರತಿಯೊಬ್ಬರ ಅಭಿಲಾಷೆಯಾಗಿದೆ’ ಎಂದು ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಹೇಳಿದರು.

ಇಲ್ಲಿನ ನ್ಯಾಯಾಲಯದ ಸಂಕೀರ್ಣದಲ್ಲಿ ಭಾನುವಾರ ನಡೆದ ವಕೀಲರ ಭವನದ ಲೋಕಾರ್ಪಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಕಾನೂನಿನ ಆಳ್ವಿಕೆ ಸಮರ್ಪಕವಾಗಿರುವಲ್ಲಿ ವಕೀಲರ ಪಾತ್ರ ಮಹತ್ವದ್ದಾಗಿದೆ’ ಎಂದು ಹೇಳಿದರು.

‘ವಕೀಲರು ತಮ್ಮ ಕರ್ತವ್ಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಅಗತ್ಯವಿರುವ ಪೂರಕ ವಾತಾವರಣವನ್ನು ನಿರ್ಮಿಸುವುದು ನ್ಯಾಯಾಂಗ ಇಲಾಖೆ ಹಾಗೂ ಸರ್ಕಾರದ ಆದ್ಯ ಕರ್ತವ್ಯ. ಈ ಕಾರಣಕ್ಕೆ ಯಾವುದೇ ತಾಲ್ಲೂಕು ಕೇಂದ್ರದಲ್ಲಿ ವಕೀಲರ ಭವನ ನಿರ್ಮಾಣದ ಪ್ರಸ್ತಾವ ಬಂದಾಗ ನ್ಯಾಯಾಂಗ ಇಲಾಖೆ ಶೀಘ್ರ ಅನುಮತಿ ನೀಡುತ್ತಿದೆ’ ಎಂದು ಅವರು ತಿಳಿಸಿದರು.

‘ಇಲ್ಲಿ ನಿರ್ಮಾಣವಾಗಿರುವ ನೂತನ ವಕೀಲರ ಭವನ ಅತ್ಯಂತ ಸುಸಜ್ಜಿತವಾಗಿದೆ. ಹೈಕೋರ್ಟ್ ಕಟ್ಟಡದಲ್ಲಿ ವಕೀಲರಿಗೆ ಪ್ರತ್ಯೇಕ ಕೊಠಡಿಗಳಿಲ್ಲ. ಆದರೆ, ಇಲ್ಲಿನ ಭವನದಲ್ಲಿ ಸುಪ್ರೀಂಕೋರ್ಟ್ ಮಾದರಿಯಲ್ಲಿ ವಕೀಲರಿಗೆ ಪ್ರತ್ಯೇಕ ಕೊಠಡಿ ನಿರ್ಮಿಸಿರುವುದು ವಿಶೇಷ ಸಂಗತಿಯಾಗಿದೆ’ ಎಂದು ಹೇಳಿದರು.

‘ಕಾರ್ಯಾಂಗ, ಶಾಸಕಾಂಗ ತಪ್ಪು ಮಾಡಿದಾಗ ಎಚ್ಚರಿಸುವ ಕೆಲಸವನ್ನು ನ್ಯಾಯಾಂಗ ಮಾಡುತ್ತಲೇ ಬಂದಿದೆ. ಇಂದಿಗೂ ಜನರು ನ್ಯಾಯಾಂಗದ ಮೇಲೆ ಹೆಚ್ಚಿನ ವಿಶ್ವಾಸವನ್ನು ಇಟ್ಟುಕೊಂಡಿದ್ದಾರೆ. ವಕೀಲರು ಮತ್ತಷ್ಟು ಜನಪರವಾಗಿ ಕಾರ್ಯ ನಿರ್ವಹಿಸುವ ಮೂಲಕ ನ್ಯಾಯಾಂಗ ವ್ಯವಸ್ಥೆಯನ್ನು ಬಲಪಡಿಸಬೇಕಿದೆ’ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

‘ಕನ್ನಡಿಗರೊಬ್ಬರು ಕರ್ನಾಟಕ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾಗಿರುವ ಸಂದರ್ಭದಲ್ಲೇ ಸಾಗರದ ವಕೀಲರ ಭವನ ಅವರಿಂದ ಉದ್ಘಾಟನೆಯಾಗುತ್ತಿರುವುದು ಸಂತಸ ತಂದಿದೆ. ವಕೀಲರ ಭವನಕ್ಕೆ ಅಗತ್ಯವಿರುವ ಮೂಲ ಸೌಕರ್ಯಗಳನ್ನು ಒದಗಿಸಲು ಕ್ಷೇತ್ರದ ಶಾಸಕನಾಗಿ ಬದ್ಧನಿದ್ದೇನೆ’ ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಸದಸ್ಯ ಪಿ.ಪಿ.ಹೆಗ್ಡೆ, ’ಕರ್ನಾಟಕದ ಇತಿಹಾಸದಲ್ಲೇ ಮೊದಲ ಬಾರಿಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದಾಖಲಿಸುವ ಮೂಲಕ ಸಾಗರದ ವಕೀಲರ ಸಂಘ ವಕೀಲರ ಭವನ ನಿರ್ಮಿಸುವ ತನ್ನ ಹಕ್ಕನ್ನು ಪ್ರತಿಪಾದಿಸಿ ಅದರಲ್ಲಿ ಗೆಲುವು ಸಾಧಿಸಿದೆ’ ಎಂದು ಹೇಳಿದರು.

ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಆರ್.ದೇವದಾಸ್ ಅಧ್ಯಕ್ಷತೆ ವಹಿಸಿದ್ದರು. 50 ವರ್ಷಕ್ಕೂ ಹೆಚ್ಚು ಕಾಲ ವಕೀಲಿ ವೃತ್ತಿ ನಡೆಸಿರುವ ಹಿರಿಯ ವಕೀಲರಾದ ಕೆ.ಎನ್.ಶ್ರೀಧರ್, ಟಿ.ಬಿ.ಮಂಜುನಾಥ ಶೆಟ್ಟಿ, ಎಂ.ಬಿ.ಪುಟ್ಟಸ್ವಾಮಿ, ಸಿ.ಎಲ್.ವೆಂಕಟಗಿರಿ, ಜಯಶೀಲ ಶೆಟ್ಟಿ ಗುಲ್ವಾಡಿ ಅವರನ್ನು ಸನ್ಮಾನಿಸಲಾಯಿತು.

ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಹೈಕೋರ್ಟ್‌ ವಿಲೇಖನಾಧಿಕಾರಿ ಕೆ.ಎಸ್.ಭರತ್ ಕುಮಾರ್, ಲೋಕೋಪಯೋಗಿ ಇಲಾಖೆಯ ಮುಖ್ಯ ಎಂಜಿನಿಯರ್‌ ಜಗದೀಶ್, ವಕೀಲರ ಸಂಘದ ಕಾರ್ಯದರ್ಶಿ ರಮೇಶ್ ಎಚ್.ಬಿ. ಇದ್ದರು.

ಸಾಗರದಲ್ಲಿ ಭಾನುವಾರ ನಡೆದ ವಕೀಲರ ಭವನದ ಲೋಕಾರ್ಪಣೆ ಸಮಾರಂಭದಲ್ಲಿ 50 ವರ್ಷಕ್ಕೂ ಹೆಚ್ಚು ಕಾಲ ವಕೀಲಿ ವೃತ್ತಿ ನಡೆಸಿರುವ ಹಿರಿಯ ವಕೀಲರಾದ ಕೆ.ಎನ್.ಶ್ರೀಧರ್ ಟಿ.ಬಿ.ಮಂಜುನಾಥ ಶೆಟ್ಟಿ ಎಂ.ಬಿ.ಪುಟ್ಟಸ್ವಾಮಿ ಸಿ.ಎಲ್.ವೆಂಕಟಗಿರಿ ಜಯಶೀಲ ಶೆಟ್ಟಿ ಗುಲ್ವಾಡಿ ಅವರುಗಳನ್ನು ಸನ್ಮಾನಿಸಲಾಯಿತು.
ಸಾಗರದಲ್ಲಿ ಭಾನುವಾರ ನಡೆದ ವಕೀಲರ ಭವನದ ಲೋಕಾರ್ಪಣೆ ಸಮಾರಂಭದಲ್ಲಿ 50 ವರ್ಷಕ್ಕೂ ಹೆಚ್ಚು ಕಾಲ ವಕೀಲಿ ವೃತ್ತಿ ನಡೆಸಿರುವ ಹಿರಿಯ ವಕೀಲರಾದ ಕೆ.ಎನ್.ಶ್ರೀಧರ್ ಟಿ.ಬಿ.ಮಂಜುನಾಥ ಶೆಟ್ಟಿ ಎಂ.ಬಿ.ಪುಟ್ಟಸ್ವಾಮಿ ಸಿ.ಎಲ್.ವೆಂಕಟಗಿರಿ ಜಯಶೀಲ ಶೆಟ್ಟಿ ಗುಲ್ವಾಡಿ ಅವರುಗಳನ್ನು ಸನ್ಮಾನಿಸಲಾಯಿತು.

ಶ್ರಾವ್ಯ ಪ್ರಾರ್ಥಿಸಿದರು. ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಮಂಜುನಾಥ್ ನಾಯ್ಕ ಸ್ವಾಗತಿಸಿದರು. ವಕೀಲರ ಸಂಘದ ಅಧ್ಯಕ್ಷ ಈ.ನಾಗರಾಜ್ ನಾಯ್ಕ ವಂದಿಸಿದರು. ನ್ಯಾಯಾಧೀಶರಾದ ದೀಪಾ ಕೆ.ಆರ್, ಸಂತೋಷ್ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT