ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಂಗಾ ತೀರದ ‘ಧಾರ್ಮಿಕ ಬೀದಿ’ ಕೋಟೆ ರಸ್ತೆ

‘ದಸರಾ ಜಂಬೂ ಸವಾರಿ ಮೆರವಣಿಗೆ’ಯ ರಸ್ತೆಯ ಉದ್ದಕ್ಕೂ ಹಲವು ಧಾರ್ಮಿಕ ಕೇಂದ್ರಗಳು
Last Updated 14 ನವೆಂಬರ್ 2016, 8:47 IST
ಅಕ್ಷರ ಗಾತ್ರ

ಶಿವಮೊಗ್ಗ: ತುಂಗಾ ತೀರದಲ್ಲಿನ ಹಲವು ಪುರಾಣ ಪ್ರಸಿದ್ಧ ದೇವಾಲಯಗಳ ತಾಣ ಶಿವಮೊಗ್ಗದ ಕೋಟೆ ರಸ್ತೆ. ಈ ರಸ್ತೆಯಲ್ಲಿ ಒಮ್ಮೆ ಸಾಗಿದರೆ ಒಂದೇ ಬಾರಿಗೆ ಹಲವು ದೇವರ ಮೂರ್ತಿಗಳ ದರ್ಶನ ಸಾರ್ವಜನಿಕರಿಗೆ ಲಭಿಸುತ್ತದೆ.

ಸುಪ್ರಸಿದ್ಧ ಕೋಟೆ ಸೀತಾರಾಮಾಂಜನೇಯ ಸ್ವಾಮಿ ದೇವಾಲಯ ಇಡೀ ನಗರದಲ್ಲಿಯೇ ಜನಪ್ರಿಯ. ಅನೇಕ ಧಾರ್ಮಿಕ ಕಾರ್ಯಕ್ರಮಗಳ ಕೇಂದ್ರಸ್ಥಾನವೂ ಹೌದು. ಶಿವಮೊಗ್ಗ ದಸರಾ ಜಂಬೂ ಸವಾರಿ ಮೆರವಣಿಗೆಗೆ ಚಾಲನೆ ನೀಡುವುದೂ ಇದೇ ಸ್ಥಳದಲ್ಲಿ. ಹಾಗಾಗಿ ಸಾರ್ವಜನಿಕರ ಭಕ್ತಿಯ ಪ್ರತೀಕವಾಗಿ ಆಂಜನೇಯ ಸ್ವಾಮಿ ಇಲ್ಲಿ ನೆಲೆಸಿದ್ದಾನೆ ಎಂಬ ಪ್ರತೀತಿ ಇದೆ.

ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಹಿಂಭಾಗವೇ ಭೀಮೇಶ್ವರ ದೇವಸ್ಥಾನವಿದೆ. ದ್ವಾಪರಯುಗದ ಸಮಯದಲ್ಲಿ ಭೀಮ ಸನಿಹದ ತುಂಗಾನದಿಯಲ್ಲಿ ಸ್ನಾನ ಮಾಡಿದ್ದ ಎಂಬ ನಂಬಿಕೆ ಇದೆ. ಹಾಗಾಗಿ ಭೀಮನಮಡು ಎಂದು ಜನರು ಕರೆಯುತ್ತಾರೆ. ಜತೆಗೆ ಪ್ರತಿ ವರ್ಷ ಗಣೇಶೋತ್ಸವ ಸಂದರ್ಭ ಈ ಆವರಣದಲ್ಲಿ ಹಿಂದೂ ಮಹಾಸಾಭಾ ಗಣಪತಿ ಮೂರ್ತಿ ಪ್ರತಿಷ್ಠಾಪಿಸಲಾಗುತ್ತದೆ. ಸನಿಹದ ಕೋರಪಲ್ಲಯ್ಯನ ಛತ್ರದ ತುಂಗಾನದಿಯ ಮಂಟಪದ ಬಳಿ ಪ್ರತಿವರ್ಷಕಣ್ಮನ ಸೆಳೆಯುವ ತೆಪ್ಪೋತ್ಸವ ವೀಕ್ಷಿಸಬಹುದು.

ಕೋಟೆ ಪೊಲೀಸ್ ಠಾಣೆ ಬಳಿ ಇರುವ ಚಂಡಿಕಾ ದುರ್ಗಾ ಪರಮೇಶ್ವರಿ ದೇವಾಲಯದಲ್ಲಿ ಪ್ರತಿ ವರ್ಷ ದಸರಾ  ಹಬ್ಬದಲ್ಲಿ ವಿಶೇಷ ಪೂಜೆ  ಸಲ್ಲಿಸಲಾಗುತ್ತದೆ.  ನವರಾತ್ರಿಯ ಧಾರ್ಮಿಕ  ಹಾಗೂ ಸಾಂಸ್ಕೃತಿಕ  ಕಾರ್ಯಕ್ರಮಗಳಿಗೆ ಇಲ್ಲಿಂದಲೇ ಚಾಲನೆ ದೊರೆಯುತ್ತದೆ.

ಆಂಜನೇಯ ಸ್ವಾಮಿ ದೇವಾಲಯದಿಂದ ಮುಂದೆ ಸಾಗಿದಂತೆ ಊರ ದೇವತೆ ಮಾರಿಕಾಂಬ ದೇವಿ ದರ್ಶನ ಮಾಡಬಹುದು. ಕೋಟೆ ಮಾರಿಕಾಂಬಾ ದೇವತೆ ಜಾತ್ರೆ ಎರಡು ವರ್ಷಗಳಿಗೊಮ್ಮೆ ಐದು ದಿನಗಳ ಕಾಲ ವಿಜೃಂಭಣೆಯಿಂದ ಇಲ್ಲಿ ನೆರವೇರುತ್ತದೆ. ಈ ಜಾತ್ರೆಗೆ ಇತರ ಜಿಲ್ಲೆಗಳಿಂದ ಕೂಡ ಭಕ್ತರು ಬರುತ್ತಾರೆ.

ಇದೇ ಬೀದಿಯಲ್ಲಿ ಮುಂದೆ ಸಾಗಿದರೆ ಕಾಣಸಿಗುವ ರಾಮಣ್ಣ ಶ್ರೇಷ್ಠಿ ಪಾರ್ಕ್‌ ದೇವಾಲಯ ನಗರದ ಧಾರ್ಮಿಕ ಆಚರಣೆಯ ಕೇಂದ್ರ ಸ್ಥಾನ. ಇಲ್ಲಿನ ಬೃಹತ್ ಗಣೇಶನ ಸ್ಥಿರಮೂರ್ತಿ ಇಡೀ ಶಿವಮೊಗ್ಗದ ಮುಕುಟ ಪ್ರಾಯ.  ಇಲ್ಲಿ ಸರಳ, ಸಾಮೂಹಿಕ ವಿವಾಹ ಹಿಂದಿನಿಂದಲೂ ನಡೆಯುತ್ತಾ ಬಂದಿದ್ದು, ಗಣೇಶೋತ್ಸವ ವೇಳೆ ಗೌರಿ ಮೂರ್ತಿ ಪ್ರತಿಷ್ಠಾಪಿಸಲಾಗುತ್ತದೆ. ಹಲವು ಮೆರವಣಿಗೆಗಳು ಇಲ್ಲಿಂದಲೇ ಆರಂಭವಾಗುತ್ತವೆ.

ಇತರೆ ದೇವಾಲಯಗಳು: ಹೊಳೆ ಬಸ್ ನಿಲ್ದಾಣದ ಬಳಿ ಇರುವ ಬೆಕ್ಕಿನ ಕಲ್ಮಠದಿಂದ ಆರಂಭವಾಗುವ ದೇವಸ್ಥಾನಗಳ ಸಾಲು ಕೋಟೆ ರಸ್ತೆ, ದೊಡ್ಡ ಬ್ರಾಹ್ಮಣರ ಕೇರಿ ಹಾಗೂ ಕುಂಬಾರ ಬೀದಿ, ಹಳೇ ತೀರ್ಥಹಳ್ಳಿ ರಸ್ತೆಯ ಕೊನೆ ಭಾಗದ ಅಂತರಘಟ್ಟಮ್ಮ ದೇವಾಲಯದವರೆಗೂ ಕಾಣಸಿಗುತ್ತದೆ. ಅಜ್ಜಯ್ಯ, ಗಾಯತ್ರಿ, ಶನೇಶ್ವರ, ಅಯ್ಯಪ್ಪಸ್ವಾಮಿ, ಪಾಂಡುರಂಗ, ರಾಮಣ್ಣ ಶ್ರೇಷ್ಠಿ ಪಾರ್ಕ್‌ ಬಳಿಯ ಅಯ್ಯಪ್ಪ ಸ್ವಾಮಿ, 350 ವರ್ಷಗಳ ಇತಿಹಾಸ ಪ್ರಸಿದ್ಧ ಲಕ್ಷ್ಮೀನಾರಾಯಣ ದೇಗುಲ ಚಿಂದಬರೇಶ್ವರ, ಅರಕೇರಶ್ವರ (ಈಶ್ವರ), ಅಂಬಾಭವಾನಿ ದೇಗುಲ, ಕೂಡ್ಲಿ ಮಠ, ರಾಘವೇಂದ್ರ ಸ್ವಾಮಿ ಮಠ, ಆಂಜನೇಯ ದೇವಸ್ಥಾನ, ಅಶ್ವತ್ಥ ಕಟ್ಟೆ ಗಣಪತಿ, ಅಂತರಘಟಮ್ಮ ದೇವಾಲಯ ಕಾಣಸಿಗುತ್ತದೆ.

ರಾಮಣ್ಣಶ್ರೇಷ್ಠಿ ಪಾರ್ಕ್‌ನಿಂದ ಪಕ್ಕದ ಗಾಂಧಿ ಬಜಾರ್‌ ರಸ್ತೆಗೆ ತೆರಳಿದರೆ ಅಲ್ಲೂ ಸಹ ಜೈನ ಮಂದಿರ, ಬಸವಣ್ಣ ದೇವಸ್ಥಾನ, ತುಳಜಾ
ಭವಾನಿ, ಚೌಡೇಶ್ವರಿ, ಕಾಳಿಕಾ, ಕನ್ನಿಕಾ, ನಾಗಪ್ಪನ ದೇವಾಲಯಗಳಿವೆ.

‘ಸುಮಾರು 40 ವರ್ಷಗಳಿಂದ ಇಲ್ಲಿ ವಾಸವಿದ್ದೇವೆ. ಕೋಟೆ ರಸ್ತೆಯ ಒಂದೇ  ಬೀದಿಯಲ್ಲಿ ಇಷ್ಟೊಂದು ದೇವಾಲಯಗಳಿರುವುದು ನಮ್ಮ ಪುಣ್ಯ. ಶಿವಮೊಗ್ಗದ ಪ್ರತಿ ವಿಶೇಷ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೂ ಇಲ್ಲೇ ನಡೆಯುತ್ತದೆ’ ಎನ್ನುತ್ತಾರೆ ಚಂದ್ರಮತಿ.‘ಪುರಾತನ, ಪ್ರಸಿದ್ಧ ದೇವಸ್ಥಾನಗಳ ಬೀದಿಯಲ್ಲಿ ನಾವಿರುವುದು ಸಂತಸವಾಗುತ್ತದೆ. ಶಿವಮೊಗ್ಗದ ಇತರೆ ಬಡಾವಣೆಗಳಿಂದ ಭಕ್ತರು ಇಲ್ಲಿಗೇ ಬರುತ್ತಾರೆ. ಆದರೆ, ನಾವು ಸನಿಹದಲ್ಲಿ ಇರುವು
ದರಿಂದ ದರ್ಶನ ಸುಲಭವಾಗುತ್ತದೆ’ ಎಂದು ಅಭಿಪ್ರಾಯಪಡುತ್ತಾರೆ ಭಾಸ್ಕರರಾವ್.

‘ದೇವಾಲಯಗಳಿಗೆ ಭೇಟಿ ನೀಡಿದರೆ ದೇವರಲ್ಲಿ ಭಕ್ತಿ ಹೆಚ್ಚಾಗುತ್ತದೆ. ಒಂದಾದ ನಂತರ ದೇವಾಲಯಗಳು ಇಲ್ಲಿ ಕಾಣಸಿಗುವುದರಿಂದ ಸಹಜವಾಗಿ ಜನರಲ್ಲಿ ಭಕ್ತಿಯ ಭಾವನೆ ಮೂಡುತ್ತದೆ’ ಎನ್ನುತ್ತಾರೆ ಅರ್ಚಕ ಶ್ರೀನಿವಾಸ ಭಟ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT