ಸಹಿ ಸಂಗ್ರಹ ಅಭಿಯಾನ

7
ಪದವಿ ಕಾಲೇಜುಗಳಿಗೆ ಬೋಧಕರ ನೇಮಕ, ಮೂಲಸೌಕರ್ಯಕ್ಕೆ ಒತ್ತಾಯ

ಸಹಿ ಸಂಗ್ರಹ ಅಭಿಯಾನ

Published:
Updated:
Deccan Herald

ರಾಮನಗರ: ಉನ್ನತ ಶಿಕ್ಷಣದಲ್ಲಿ ಗುಣಮಟ್ಟ, ಮೂಲ ಸೌಕರ್ಯ, ಬೋಧಕರ ನೇಮಕಾತಿ ಮತ್ತು ಸುಭದ್ರ ಉದ್ಯೋಗಾವಕಾಶಗಳಿಗಾಗಿ ಒತ್ತಾಯಿಸಿ ಕರ್ನಾಟಕ ವಿದ್ಯಾರ್ಥಿ ಸಂಘಟನೆ ವತಿಯಿಂದ ಇಲ್ಲಿನ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಸಹಿ ಸಂಗ್ರಹ ಅಭಿಯಾನವನ್ನು ಗುರುವಾರ ಹಮ್ಮಿಕೊಳ್ಳಲಾಗಿತ್ತು.

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಕೂಡಲೆ ಭರ್ತಿ ಮಾಡಬೇಕು. ಪದವಿ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಳಕ್ಕಾಗಿ ಅಗತ್ಯ ಇರುವ ಎಲ್ಲಾ ಮೂಲ ಸೌಕರ್ಯಗಳನ್ನು ಒದಗಿಸಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಮಹಿಳಾ ಘಟಕದ ಅಧ್ಯಕ್ಷೆ ಅನಸೂಯಮ್ಮ ತಿಳಿಸಿದರು.

ಪ್ರಪಂಚದ ಮೊದಲ 200 ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಭಾರತದ ಒಂದೂ ವಿಶ್ವವಿದ್ಯಾಲಯ ಇಲ್ಲ. ವಿಶ್ವವಿದ್ಯಾಲಯಗಳ ಅಡಿಯಲ್ಲಿ ಕಾರ್ಯನಿರ್ವಹಿಸುವ 4870 ಕಾಲೇಜುಗಳಲ್ಲಿ ನ್ಯಾಕ್‌ ಮಾನ್ಯತೆ ಪಡೆದ 2780 ಕಾಲೇಜುಗಳಲ್ಲಿ, ಶೇ 9ರಷ್ಟು ಕಾಲೇಜಗಳು ಮಾತ್ರ ‘ಎ’ ಮತ್ತು ಅದಕ್ಕಿಂತ ಹೆಚ್ಚಿನ ಶ್ರೇಣಿ ಪಡೆದಿವೆ ಎಂದರು.

ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಹೊಸ ಕಾಯ್ದೆಯನ್ನು ತರಲು ಹೊರಟಿದೆ. ಯೂನಿರ್ವಸಿಟಿ ಗ್ರಾಂಟ್ಸ್ ಕಮೀಷನ್‌ ಅನ್ನು ವಿಸರ್ಜಿಸಲಾಗುತ್ತಿದೆ. ಈಗಾಗಲೇ ಶಿಕ್ಷಣ ಕ್ಷೇತ್ರದಲ್ಲಿ ತೀವ್ರತರವಾದ ವ್ಯಾಪಾರೀಕರಣವಾಗುತ್ತಿದೆ. ಈಗ ಕೇಂದ್ರ ಸರ್ಕಾರ ಯುಜಿಸಿ ಕಾಯ್ದೆಯನ್ನು ರದ್ದು ಮಾಡಿದರೆ, ಉನ್ನತ ಶಿಕ್ಷಣವು ರದ್ದಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕರ್ನಾಟಕದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಕನಿಷ್ಠ 5600 ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳನ್ನು ಭರ್ತಿ ಮಾಡುವ ಜತೆಗೆ, ಕಾಲೇಜುಗಳಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.

ಸರ್ಕಾರಿ ಶಾಲೆಗಳನ್ನು ಯಾವುದೇ ಕಾರಣವನ್ನು ನೀಡಿ ಮುಚ್ಚಬಾರದು. ಒಂದು ಮಗುವಿದ್ದರೂ ಸಹ ಶಿಕ್ಷಣವನ್ನು ನೀಡಬೇಕು. ಶಿಕ್ಷಣ ಪಡೆಯುವುದು ಸಂವಿಧಾನ ಬದ್ಧವಾದ ಹಕ್ಕಾಗಿದೆ. ಆರ್‌ಟಿಇ ಯನ್ನು ರದ್ದುಪಡಿಸಿ, ಅದೇ ಹಣವನ್ನು ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಬಳಸಬೇಕು ಎಂದು ತಿಳಿಸಿದರು.

ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ಪದಾಧಿಕಾರಿಗಳಾದ ನಾಗರಾಜ ಮೈತ್ರಿ, ಮರಿಸ್ವಾಮಿ, ಗುರುಪ್ರಸಾದ್, ಸಂಜಯ್‌ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !