ಸೋಮವಾರ, ಅಕ್ಟೋಬರ್ 14, 2019
28 °C

ಶಿಥಿಲಾವಸ್ಥೆಯಲ್ಲಿ ಸಿಂದಗಿ ಮಿನಿವಿಧಾನಸೌಧ

Published:
Updated:
Prajavani

ಸಿಂದಗಿ: ಸರ್ಕಾರದ ವಿವಿಧ ಇಲಾಖೆಗಳ ಸಂಕೀರ್ಣ ಕಾರ್ಯಾಲಯಗಳ ಸಂಗಮ ಮಿನಿವಿಧಾನಸೌಧ ಶಿಥಿಲಗೊಂಡಿದೆ. ಮಳೆಗೆ ಇಡೀ ಕಟ್ಟಡ ತೇವಗೊಳ್ಳುತ್ತಿದ್ದು, ಅಲ್ಲಲ್ಲಿ ಚಾವಣಿ ಪದರು ಕಿತ್ತುಕೊಂಡು ಬೀಳುತ್ತಿದೆ.

1993ರ ಆಗಸ್ಟ್ 15ರಂದು ಅಂದಿನ ಸಿಂದಗಿ ಮತಕ್ಷೇತ್ರದ ಶಾಸಕ, ಸಣ್ಣ ನೀರಾವರಿ ಸಚಿವರೂ ಆಗಿದ್ದ ಡಾ.ಆರ್.ಬಿ.ಚೌಧರಿ ಅವರು ಮಿನಿವಿಧಾನಸೌಧ ಕಟ್ಟಡದ ಉದ್ಘಾಟನೆ ನೆರವೇರಿಸಿದ್ದರು. ಅಂದಿನ ಪುರಸಭೆ ಅಧ್ಯಕ್ಷರಾಗಿದ್ದ ಡಾ.ಎಂ.ಎನ್.ಪೂಜಾರಿ, ವರ್ತಕರ ಸಂಘದ ಅಧ್ಯಕ್ಷರಾಗಿದ್ದ ಗುರುಸಂಗಪ್ಪ ವಾರದ ಸಮಾರಂಭದಲ್ಲಿ ಇದ್ದರು.

‘ಈಗ ಈ ಕಟ್ಟಡ ತುಂಬಾ ಹಳೆಯದ್ದಾಗಿದ್ದಲ್ಲದೇ ತಾಲ್ಲೂಕಿನ ಎಲ್ಲಾ ಸರ್ಕಾರಿ ಇಲಾಖೆಗಳ ಕಚೇರಿಗಳಿಗಾಗಿ ಇಲ್ಲಿ ಸ್ಥಳ ಲಭ್ಯವಿಲ್ಲ. ಹಲವಾರು ಸರ್ಕಾರಿ ಕಚೇರಿಗಳು ಬಾಡಿಗೆ ಆಧಾರದ ಮೇಲೆ ಖಾಸಗಿ ಕಟ್ಟಡದಲ್ಲಿವೆ. ಹೀಗಾಗಿ ಸಿಂದಗಿ ಮಿನಿವಿಧಾನಸೌಧ ಕಟ್ಟಡ ಸ್ಥಳಾಂತರಗೊಳ್ಳದಿದ್ದರೆ ಶಿಥಿಲಾವಸ್ಥೆಯಲ್ಲಿದ್ದ ಕಟ್ಟಡದಿಂದಾಗಿ ಅನಾಹುತ ತಪ್ಪಿದ್ದಲ್ಲ’ ಎಂದು ಜನತೆ ಆತಂಕ ವ್ಯಕ್ತಪಡಿಸಿದ್ದಾರೆ.

ಈ ಶಿಥಿಲಾವಸ್ಥೆ ಕಟ್ಟಡವನ್ನು ಗಮನಿಸಿದ ಮತಕ್ಷೇತ್ರದ ಶಾಸಕ ಎಂ.ಎಸ್.ಮನಗೂಳಿ ಅವರು ನೂತನ ಮಿನಿವಿಧಾನಸೌಧ ಕಟ್ಟಡ ನಿರ್ಮಾಣಕ್ಕಾಗಿ ನಿವೇಶನ ಗುರುತಿಸಿ, ಆರ್ಥಿಕ ಅನುಮೋದನೆ ಪಡೆದುಕೊಂಡಿದ್ದಾರೆ. ಆದರೆ, ನೂತನ ಮಿನಿವಿಧಾನಸೌಧ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಅಡ್ಡಿ ಎದುರಾಗಿದ್ದು, ಅಭಿವೃದ್ಧಿ ಕೆಲಸಗಳಿಗೆ ಅಡ್ಡಿ ಪಡಿಸುವುದು ಸರಿಯಲ್ಲ ಎಂದು ಶಾಸಕ ಎಂ.ಸಿ.ಮನಗೂಳಿ ಮನವಿ ಮಾಡಿಕೊಂಡಿದ್ದಾರೆ.

ಆರ್ಥಿಕ ಮಂಜೂರಾತಿ ದೊರೆತು ಹಲವು ತಿಂಗಳಾದರೂ ಕಾಮಗಾರಿ ಆರಂಭವಾಗದಿರುವುದು ಸಾರ್ವಜನಿಕರ ಕೆಂಗಣ್ಣಿಗೂ ಗುರಿಯಾಗಿದೆ.

‘ಪ್ರತಿಯೊಂದು ತಾಲ್ಲೂಕಿನಲ್ಲೂ ನೂತನ ಮಿನಿವಿಧಾನಸೌಧ ಕಟ್ಟಡಗಳು ಉದ್ಘಾಟನೆಗೊಂಡಿವೆ. ಆದರೆ, ಸಿಂದಗಿ ಪಟ್ಟಣದಲ್ಲಿ ಮಾತ್ರ ಮಿನಿವಿಧಾನಸೌಧ ನೂತನ ಕಟ್ಟಡ ಕಾರ್ಯಾರಂಭಗೊಂಡಿಲ್ಲ. ಜಿಲ್ಲಾಡಳಿತ ಈ ಬಗ್ಗೆ ಹೆಚ್ಚಿನ ಮುತವರ್ಜಿ ವಹಿಸಿ ನೂತನ ಮಿನಿವಿಧಾನಸೌಧ ಕಟ್ಟಡ ಕಾಮಗಾರಿ ಪ್ರಾರಂಭಗೊಳ್ಳುವಂತೆ ಕ್ರಮ ಜರುಗಿಸಬೇಕು’ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Post Comments (+)