ಗುರುವಾರ , ಸೆಪ್ಟೆಂಬರ್ 19, 2019
24 °C
ಸಂವಾದ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶಾಂತರಾಜ್ ಅಭಿಮತ

ಸುಗಮ ಸಂಚಾರ, ಜನಸ್ನೇಹಿ ಠಾಣೆಗೆ ಮೊದಲ ಪ್ರಾಶಸ್ತ್ಯ

Published:
Updated:
Prajavani

ಶಿವಮೊಗ್ಗ: ಸಂಚಾರ ವ್ಯವಸ್ಥೆ ಸಮರ್ಪಕವಾಗಿ ನಿರ್ವಹಿಸಿದರೆ, ಠಾಣೆಗಳು ಜನಸ್ನೇಹಿಯಾದರೆ ಪೊಲೀಸರ ಮೇಲಿನ ಗೌರವ ಹೆಚ್ಚಾಗುತ್ತದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜ್ ಹೇಳಿದರು.

ಶಿವಮೊಗ್ಗ ಪ್ರೆಸ್‌ಟ್ರಸ್ಟ್ ಶುಕ್ರವಾರ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಿವಿಲ್ ಪ್ರಕರಣಗಳು ಕಡಿಮೆಯಾದರೆ ಠಾಣೆಗಳ ಮೇಲಿನ ಹೊರೆ ಕಡಿಮೆಯಾಗುತ್ತದೆ. ನ್ಯಾಯ ಪಂಚಾಯಿತಿ ಮಾಡಲು ಪೊಲೀಸರಿಗೆ ಅವಕಾಶ ಇಲ್ಲದಿದ್ದರೂ, ಜನರೇ ರಾಜಿಯಾಗಲು ನಿರ್ಧರಿಸಿದರೆ ಸಹಕಾರ ನೀಡಬೇಕಾಗುತ್ತದೆ. ಸಿವಿಲ್‌ ಪ್ರಕರಣಗಳಲ್ಲಿ ಹೊಡೆದಾಡಿಕೊಂಡರೆ ಪ್ರಕರಣ ದಾಖಲಿಸುವುದು ಅನಿವಾರ್ಯ ಎಂದರು.

ಸಂಚಾರಿ ವ್ಯವಸ್ಥೆ ಪರಿಣಾಮಕಾರಿಯಾಗಿ ನಿರ್ವಹಿಸಬೇಕು. ಸುಗಮ ಸಂಚಾರಕ್ಕೆ ಅಡ್ಡಿಪಡಿಸುವ, ಕಾನೂನು ಗೌರವಿಸದ ಚಾಲಕರಿಗೆ, ಸವಾರರಿಗೆ ದಂಡ ವಿಧಿಸುವುದು ಸಹಜ. ನಗರದಲ್ಲಿ ಇರುವ ಸಂಚಾರ ಸಮಸ್ಯೆಗಳನ್ನು ಗುರುತಿಸಲಾಗುವುದು. ಜಿಲ್ಲಾಡಳಿತ, ನಗರ ಪಾಲಿಕೆ ಜತೆ ಚರ್ಚಿಸಲಾಗುವುದು. ಸಮಸ್ಯೆಗಳ ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಮದು ಭರವಸೆ ನೀಡಿದರು.

ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಗಾಂಜಾ ಹಾವಳಿ ತಡೆಗೆ ಕಡಿವಾಣ ಹಾಕಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ.ಶಾಂತರಾಜು ಎಂದರು.

ಗಾಂಜಾ ಹಾವಳಿ ತಡೆಗೆ ಕ್ರಮ: ಜಿಲ್ಲೆಯಲ್ಲಿ ಗಾಂಜಾ ಹಾವಳಿ ಹೆಚ್ಚಾಗಿದೆ. ಇದಕ್ಕೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಲಾಗುವುದು. ಹೆಚ್ಚಾಗಿ ವಿದ್ಯಾರ್ಥಿಗಳೇ ಗಾಂಜಾಕ್ಕೆ ಬಲಿಯಾಗುತ್ತಿದ್ದಾರೆ. ಶಾಲಾ, ಕಾಲೇಜು ಬಳಿ ಇರುವ ಅಂಗಡಿಗಳಲ್ಲಿ ತಂಬಾಕು ಉತ್ಪನ್ನ ಮಾರಾಟ ನಿಯಂತ್ರಿಸಲಾಗುವುದು. ಕಾಲೇಜುಗಳ ಬಳಿ ಸುಳಿದಾಡುವ ಅನುಮಾಸ್ಪದ ವ್ಯಕ್ತಿಗಳ ಮೇಲೆ ಹದ್ದಿನ ಕಣ್ಣು ಇಡಲಾಗುವುದು. ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ಬಗ್ಗೆ ಜಾಗೃತಿ ಮೂಡಿಸಲು ಕಾರ್ಯಾಗಾರ ಹಮ್ಮಿಕೊಳ್ಳಲಾಗುವುದು ಎಂದರು.

ಬಗಿ ಬಂದೋಬಸ್ತ್‌: ಸಮಾಜದ ಶಾಂತಿ-, ಸುವ್ಯವಸ್ಥೆಗೆ ಭಂಗ ತರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಗಣಪತಿ ಹಬ್ಬದ ಸಮಯದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಬಿಗಿ ಬಂದೋಬಸ್ತ್‌ ಮಾಡಲಾಗುವುದು ಎಂದರು.

ಸೈಬರ್ ಕ್ರೈಂ ಜಾಗೃತಿ ಅಗತ್ಯ: ಸೈಬರ್ ಕ್ರೈಂ ಈಚೆಗೆ ಹೆಚ್ಚಾಗುತ್ತಿದೆ. ಅಪರಿಚಿತರು ಬ್ಯಾಂಕ್ ಅಧಿಕಾರಿಗಳ ಸೋಗಿನಲ್ಲಿ ನಾಗರಿಕರಿಗೆ ಕರೆ ಮಾಡಿ ಹಣ ದೋಚುವ ಪ್ರಕರಣಗಳು ದಾಖಲಾಗುತ್ತಿವೆ. ಬ್ಯಾಂಕ್‌ ಸಿಬ್ಬಂದಿ ದೂರವಾಣಿಯಲ್ಲಿ ಯಾವುದೆ ಮಾಹಿತಿ ಪಡೆಯುವುದಿಲ್ಲ. ನಾಗರಿಕರು ಇಂತಹ ಕರೆಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಅಪರಿಚಿತ ಕರೆಗಳು ಬಂದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಕೋರಿದರು.

ಪ್ರೆಸ್‌ಟ್ರಸ್ಟ್ ಅಧ್ಯಕ್ಷ ಎನ್‌.ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು.

Post Comments (+)