ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

5 ವರ್ಷದಲ್ಲಿ 874 ಡೆಂಗಿ ಪ್ರಕರಣ

ಸ್ಮಾರ್ಟ್‌ ಸಿಟಿಯಲ್ಲಿ ಹೆಚ್ಚಿದ ಡೆಂಗಿ
Published 22 ಮೇ 2024, 5:43 IST
Last Updated 22 ಮೇ 2024, 5:43 IST
ಅಕ್ಷರ ಗಾತ್ರ

ತುಮಕೂರು: ‘ಸ್ಮಾರ್ಟ್‌ ಸಿಟಿ’ ಎಂದು ಕರೆಸಿಕೊಳ್ಳುವ ನಗರದಲ್ಲಿ ಡೆಂಗಿ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿವೆ.

ತುಮಕೂರು ತಾಲ್ಲೂಕಿನಲ್ಲಿ ಕಳೆದ ಐದು ತಿಂಗಳಲ್ಲಿ 42 ಡೆಂಗಿ ಪ್ರಕರಣಗಳು ವರದಿಯಾಗಿವೆ. ನಗರ ಸ್ಮಾರ್ಟ್‌ ಆಗುತ್ತಿದ್ದಂತೆ ಕಡಿಮೆಯಾಗಬೇಕಿದ್ದ ಸಾಂಕ್ರಾಮಿಕ ರೋಗಗಳು ಮತ್ತಷ್ಟು ಉಲ್ಬಣಗೊಳ್ಳುತ್ತಿವೆ. ‘ಹೆಸರಿಗೆ ಮಾತ್ರ ನಗರ ಸ್ಮಾರ್ಟ್, ಸ್ವಚ್ಛತೆ ಮರೀಚಿಕೆಯಾಗಿದೆ. ಇದರಿಂದ ಡೆಂಗಿ ಪ್ರಕರಣ ಹೆಚ್ಚಾಗುತ್ತಿವೆ’ ಎಂಬುವುದು ಆರೋಗ್ಯ ಇಲಾಖೆಯ ಅಧಿಕಾರಿಗಳ ವಿವರ.

ಜಿಲ್ಲೆಯಲ್ಲಿ 2020ರಲ್ಲಿ 30 ಪ್ರಕರಣಗಳು ದಾಖಲಾಗಿದ್ದವು. 2023ರ ಹೊತ್ತಿಗೆ ಈ ಸಂಖ್ಯೆ 361ಕ್ಕೆ ಜಿಗಿದಿದೆ. ನಾಲ್ಕೇ ವರ್ಷಕ್ಕೆ ಪ್ರಕರಣಗಳ ಸಂಖ್ಯೆ ಇಷ್ಟು ಏರಿಕೆಯಾಗಿದೆ. ಪ್ರಸಕ್ತ ವರ್ಷದಲ್ಲಿ ಇದುವರೆಗೆ 115 ಪ್ರಕರಣಗಳು ಕಂಡು ಬಂದಿವೆ. ಈಗಷ್ಟೇ ಮಳೆಗಾಲ ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ಡೆಂಗಿ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು ಎಂಬ ಆತಂಕ ಆರೋಗ್ಯ ಇಲಾಖೆಯ ಅಧಿಕಾರಿಗಳನ್ನು ಕಾಡುತ್ತಿದೆ.

‘ತಿಂಗಳಿಗೆ ಎರಡು ಬಾರಿ ಮನೆ–ಮನೆಗೆ ಭೇಟಿ ನೀಡಿ ಡೆಂಗಿ ತಪಾಸಣೆ ನಡೆಸಲಾಗುತ್ತದೆ. ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ, ಅರಿವು ಮೂಡಿಸಲಾಗುತ್ತಿದೆ. ಎಲ್ಲ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಡೆಂಗಿ ಜ್ವರಕ್ಕೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಮಾರ್ಟ್‌ ಸಿಟಿ ಸ್ವಚ್ಛವಾಗಿರದ ಕಾರಣ ನಗರದಲ್ಲಿ ಡೆಂಗಿ ಪ್ರಕರಣಗಳು ಜಾಸ್ತಿಯಾಗುತ್ತಿವೆ’ ಎಂದು ರೋಗ ವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಬಿ.ಎನ್.ಚಂದ್ರಶೇಖರಯ್ಯ ಇಲ್ಲಿ ಮಂಗಳವಾರ ತಿಳಿಸಿದರು.

‘ಮಳೆಗಾಲದ ಸಮಯದಲ್ಲಿ ರೋಗ ಹರಡದಂತೆ ಸೂಕ್ತ ಕ್ರಮಕೈಗೊಳ್ಳುವಂತೆ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಪತ್ರ ಬರೆಯುತ್ತೇವೆ. ಪ್ರಾರಂಭದಲ್ಲಿ ಒಂದೆರಡು ದಿನ ಕೆಲವು ಕಡೆ ಫಾಗಿಂಗ್ ಮಾಡಿಸುತ್ತಾರೆ. ನಂತರ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ. ಸರ್ಕಾರದ ಜತೆಗೆ ಸಾರ್ವಜನಿಕರ ಸಹಭಾಗಿತ್ವದಿಂದ ಮಾತ್ರ ಡೆಂಗಿ ಕಡಿಮೆ ಮಾಡಬಹುದು’ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡರು.

ಡಿಎಚ್‌ಒ ಡಾ.ಡಿ.ಎನ್‌.ಮಂಜುನಾಥ್‌, ‘ಜಿಲ್ಲೆಯಲ್ಲಿ ಮಲೇರಿಯಾ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿದೆ. ಈ ವರ್ಷ ಇತರೆ ಜಿಲ್ಲೆಗಳಿಂದ ವಲಸೆ ಬಂದ 4 ಜನರಲ್ಲಿ ಮಲೇರಿಯಾ ಕಾಣಿಸಿಕೊಂಡಿದೆ. ಇದು ಬಿಟ್ಟರೆ ಬೇರೆ ಜಿಲ್ಲೆಯ ಯಾವ ಭಾಗದಲ್ಲೂ ಮಲೇರಿಯಾ ಪ್ರಕರಣಗಳು ವರದಿಯಾಗಿಲ್ಲ’ ಎಂದರು.

**

ಕಳೆದ ಐದು ವರ್ಷದಲ್ಲಿ ದಾಖಲಾದ ಪ್ರಕರಣಗಳು

ವರ್ಷ;ಡೆಂಗಿ;ಚಿಕುನ್ ಗುನ್ಯಾ;ಮಲೇರಿಯಾ

2020;30;78;6

2021;181;157;3

2022;187;103;0

2023;361;90;14

2024;115;27;4

ಒಟ್ಟು;874;455;27

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT