ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ತಿಪಟೂರು: ಸರ್ಕಾರಿ ಶಾಲೆಗಳ ಗೋಳು ಕೇಳೋರ‍್ಯಾರು?

Last Updated 6 ನವೆಂಬರ್ 2022, 5:05 IST
ಅಕ್ಷರ ಗಾತ್ರ

ತಿಪಟೂರು: ಸರ್ಕಾರಿ ಮಾದರಿ ಶಾಲೆಗಳಲ್ಲಿ ಮೂಲ ಸೌಕರ್ಯ ಇಲ್ಲದೆ ನೂರಾರು ವಿದ್ಯಾರ್ಥಿಗಳು ಮಳೆಯಲ್ಲಿ ನೆನೆಯುತ್ತಾ ಆತಂಕದಿಂದಲೇ ನೆಲದ ಮೇಲೆ ಕುಳಿತು ಪಾಠ ಕೇಳುವ ಸ್ಥಿತಿ ಶಿಕ್ಷಣ ಸಚಿವರ ತವರು ಕ್ಷೇತ್ರದ ಶಾಲೆಗಳಲ್ಲಿ ನಿರ್ಮಾಣವಾಗಿದೆ.

ತಾಲ್ಲೂಕಿನಲ್ಲಿ ಕಿರಿಯ ಪ್ರಾಥಮಿಕ ಶಾಲೆ 159, ಹಿರಿಯ ಪ್ರಾಥಮಿಕ ಶಾಲೆ 100 ಹಾಗೂ 16 ಸರ್ಕಾರಿ ಪ್ರೌಢಶಾಲೆಗಳು ಇವೆ. ಇವುಗಳಲ್ಲಿ ದುರಸ್ತಿಗೆ ಒಳಪಡುವ 50ಕ್ಕೂ ಹೆಚ್ಚು ಕಿರಿಯ ಪ್ರಾಥಮಿಕ ಹಾಗೂ 50ಕ್ಕೂ ಹೆಚ್ಚು ಹಿರಿಯ ಪ್ರಾಥಮಿಕ ಶಾಲೆಗಳಿವೆ ಎಂಬುದು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ವಿವರಣೆ.

ಗ್ರಾಮೀಣ ಭಾಗದ ಅನೇಕ ಸರ್ಕಾರಿ ಶಾಲೆಗಳಲ್ಲಿ ಮೇಲ್ಭಾಗದ ಹೆಂಚುಗಳು ಕುಸಿಯುವ ಹಂತದಲ್ಲಿದ್ದು ಚೆನ್ನಾಗಿರುವ ಕಡೆಗೆ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಿ ಒಂದೇ ಕೊಠಡಿಯಲ್ಲಿ ಪಾಠ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಇನ್ನೂ ಕೆಲವು ಶಾಲೆಯ ಗೋಡೆಗಳು ಬಿರುಕುಬಿಟ್ಟಿದ್ದು, ಮೇಲ್ಚಾವಣಿ ಕುಸಿದು ಬೀಳುವ ಹಂತ ತಲುಪಿವೆ.

ಹಾಲ್ಕುರಿಕೆ, ಅನಿವಾಳ, ಸೂರನಹಳ್ಳಿ, ಕೋಟನಾಯಕನಹಳ್ಳಿ, ರಾಮಚಂದ್ರಾಪುರ, ಅನಗೊಂಡನಹಳ್ಳಿ ಸೇರಿದಂತೆ ಹಲವಾರು ಶಾಲೆಯ ಕಟ್ಟಡಗಳು ಶಿಥಿಲಾವಸ್ಥೆ ತಲುಪಿವೆ. ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆಯೂ ಕಡಿಮೆ ಆಗುತ್ತಿದೆ. ಇದರಿಂದ ಇರುವಂತಹ ಕೊಠಡಿಗಳಲ್ಲಿಯೇ ವಿದ್ಯಾರ್ಥಿಗಳನ್ನು ಕೂಡಿಸಿ ಪಾಠ ಮಾಡುವಂತಾಗಿದೆ.

ಬಳಕೆಯಾಗದ ಶಾಲಾ ಸೌಕರ್ಯ: ಪ್ರತಿಯೊಂದು ಶಾಲೆಯಲ್ಲಿನ ಮಕ್ಕಳಿಗೆ ಅನುಕೂಲವಾಗಲೆಂದು ಇಲಾಖೆಯಿಂದ ಆಟಿಕೆಗಳು, ಕ್ರೀಡಾ ಸಾಮಗ್ರಿ, ಗ್ರಂಥಾಲಯ, ನಕ್ಷೆಗಳು, ಕುಡಿಯುವ ನೀರಿನ ಘಟಕ, ಕಂಪ್ಯೂಟರ್ ನೀಡಲಾಗಿದೆ. ‌

ಸೌಲಭ್ಯಗಳು ಇದ್ದರೂ ಅನೇಕ ಶಾಲೆಗಳಲ್ಲಿ ಇವುಗಳ ಸಮರ್ಪಕ ಬಳಕೆ ಆಗದೆ ದೂಳು ಹಿಡಿದಿವೆ. ಹಲವು ಶಾಲೆಗಳ ಮುಂಭಾಗದಲ್ಲಿ ಸ್ವಚ್ಛತೆ ಇಲ್ಲದಂತಾಗಿದೆ. ಗ್ರಾ.ಪಂ. ಖಾಲಿ ಜಾಗದಲ್ಲಿ ತಿಪ್ಪೆಗಳು ಸೃಷ್ಟಿಯಾಗಿದ್ದು, ಶಾಲಾ ಆವರಣಗಳು ಅನೈರ್ಮಲ್ಯದ ತಾಣಗಳಾಗಿವೆ.

ಬಡ ವರ್ಗದ ಜನರ ಮಕ್ಕಳ ಭವಿಷ್ಯದ ಬುನಾದಿಯಾಗಿರುವ ಸರ್ಕಾರಿ ಶಾಲೆಗಳಲ್ಲಿ ಮೂಲ ಸೌಕರ್ಯ ಇಲ್ಲದಿದ್ದರೆ ಉತ್ತಮ ಜ್ಞಾನ ಸಂಪಾದನೆ ಅಸಾಧ್ಯ. ಈ ನಿಟ್ಟಿನಲ್ಲಿ ಶಿಕ್ಷಣ ಸಚಿವರ ಸ್ವಕ್ಷೇತ್ರದಲ್ಲಿನ ಶಾಲೆಗಳ ಸ್ಥಿತಿಯು ಈ ರೀತಿ ಇದ್ದರೆ ಉಳಿದ ಶಾಲೆಗಳ ಗತಿ ಏನು, ಕೂಡಲೇ ಶಾಲೆಗೆ ನೂತನ ಕಟ್ಟಡ ನಿರ್ಮಿಸಿದರೆ ಇನ್ನೂ ಹೆಚ್ಚಿನ ಮಕ್ಕಳನ್ನು ಸರ್ಕಾರಿ ಶಾಲೆಯತ್ತ ಮುಖ ಮಾಡುವಂತೆ ಮಾಡಬಹುದಾಗಿದೆ ಎಂಬುದು ಪೋಷಕರ ನುಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT