ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು | ಕಟ್ಟಡ ಕಾರ್ಮಿಕರ ಸೆಸ್ ಹಣ ದುರುಪಯೋಗ: ಎಐಟಿಯುಸಿ ಪ್ರತಿಭಟನೆ

Published 31 ಅಕ್ಟೋಬರ್ 2023, 4:41 IST
Last Updated 31 ಅಕ್ಟೋಬರ್ 2023, 4:41 IST
ಅಕ್ಷರ ಗಾತ್ರ

ತುಮಕೂರು: ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು ಕಟ್ಟಡ ಕಾರ್ಮಿಕರ ಬೆವರಿನ ಹಣವನ್ನು ದುಂದುವೆಚ್ಚ ಮಾಡುವುದನ್ನು ನಿಲ್ಲಿಸಬೇಕು ಎಂಬುದು ಸೇರಿದಂತೆ ಇತರೆ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ (ಎಐಟಿಯುಸಿ) ನೇತೃತ್ವದಲ್ಲಿ ಕಾರ್ಮಿಕರು ಸೋಮವಾರ ಪ್ರತಿಭಟನೆ ನಡೆಸಿದರು.

ಬಿಜಿಎಸ್ ವೃತ್ತದಿಂದ ಮೆರವಣಿಗೆಯಲ್ಲಿ ತೆರಳಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಹಕ್ಕೊತ್ತಾಯ ಮಂಡಿಸಿದರು.

ಕಟ್ಟಡ ಕಾರ್ಮಿಕರ ಹೆಸರಿನಲ್ಲಿ ಸಂಗ್ರಹಿಸಿರುವ ಸೆಸ್ ಹಣವನ್ನು ಮನಸ್ಸಿಗೆ ಬಂದಂತೆ ದುಂದು ವೆಚ್ಚ ಮಾಡಲಾಗುತ್ತಿದೆ. ಕಿಟ್‍ ವಿತರಣೆ, ಲ್ಯಾಪ್‍ಟಾಪ್‌, ಟ್ಯಾಬ್‌, ಶಾಲಾ ಕಿಟ್‍ಗಳು, ಆರೋಗ್ಯ ತಪಾಸಣೆ, ಕಾರ್ಮಿಕರ ಕೌಶಲಾಭಿವೃದ್ಧಿ ತರಬೇತಿ ಸೇರಿದಂತೆ ಇನ್ನಿತರೆ ಕೆಲಸಗಳಿಗೆ ಸೆಸ್ ಹಣ ಬಳಸಿಕೊಳ್ಳಲಾಗಿದೆ. ಇದರಲ್ಲಿ ಸಾಕಷ್ಟು ಅಕ್ರಮ, ಅವ್ಯವಹಾರಗಳು ನಡೆದಿದ್ದು ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಕಟ್ಟಡ ಕಾರ್ಮಿಕರಿಗೆ ನಡೆಸುತ್ತಿರುವ ಆರೋಗ್ಯ ತಪಾಸಣೆಯನ್ನು ತಕ್ಷಣ ನಿಲ್ಲಿಸಿ, ಆರೋಗ್ಯ ಇಲಾಖೆಯಿಂದಲೇ ಉಚಿತವಾಗಿ ತಪಾಸಣೆ ನಡೆಸಬೇಕು. ಇದರಿಂದ ಮಂಡಳಿಯಲ್ಲಿ ಹಣ ಉಳಿತಾಯವಾಗುತ್ತದೆ. ಬಾಕಿ ಇರುವ 14 ಲಕ್ಷ ಮಕ್ಕಳ ಶೈಕ್ಷಣಿಕ ಧನ ಸಹಾಯವನ್ನು ಕೂಡಲೇ ಬಿಡುಗಡೆ ಮಾಡಬೇಕು. ಬೋಗಸ್ ಕಾರ್ಡ್ ತಡೆಯಲು ಕ್ರಮ ಕೈಗೊಳ್ಳಬೇಕು. ಮಂಡಳಿ ಅಭಿವೃದ್ಧಿಪಡಿಸಿರುವ ದತ್ತಾಂಶದಲ್ಲಿ ಕಾರ್ಮಿಕ ಸಂಘಟನೆಗಳಿಗೆ ಅವಕಾಶ ನೀಡಬೇಕು. ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸಲು ಮಂಡಳಿಯಲ್ಲಿ ಎಐಟಿಯುಸಿಗೆ ಕಾಯಂ ಸದಸ್ಯತ್ವ ನೀಡಬೇಕು ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ ಹಿಂದೆ ಆಡಳಿತ ನಡೆಸಿದ ಬಿಜೆಪಿಯಾಗಲಿ, ಈಗಿನ ಕಾಂಗ್ರೆಸ್ ಸರ್ಕಾರವಾಗಲಿ ಈ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಆಗಸ್ಟ್ 20ರಂದು ಸಭೆ ನಡೆಸಿದ ಕಾರ್ಮಿಕ ಸಚಿವರು, ‘ಕಿಟ್, ಸೇರಿದಂತೆ ವಸ್ತುಗಳ ರೂಪದಲ್ಲಿ ನೀಡುತ್ತಿದ್ದ ಎಲ್ಲವನ್ನೂ ನಿಲ್ಲಿಸಲಾಗಿದೆ’ ಎಂದು ಹೇಳಿದ್ದರು. ಸಭೆ ನಂತರ 7 ಸಾವಿರ ಲ್ಯಾಪ್‌ಟಾಪ್ ಖರೀದಿಸಲಾಗಿದೆ. ಆರೋಗ್ಯ ತಪಾಸಣೆ ಹೆಸರಿನಲ್ಲಿ ಪ್ರತಿ ಕಾರ್ಮಿಕರಿಗೆ ₹2,850 ವೆಚ್ಚ ಮಾಡಲಾಗುತ್ತಿದೆ. ಆರೋಗ್ಯ ತಪಾಸಣೆಗೆ ಪ್ರತಿ ಜಿಲ್ಲೆಯ 33 ಸಾವಿರ ಕಾರ್ಮಿಕರಿಗೆ ₹10 ಕೋಟಿಯಂತೆ 31 ಜಿಲ್ಲೆಗಳಲ್ಲಿ ₹310 ಕೋಟಿ ವೆಚ್ಚ ಮಾಡಲಾಗುತ್ತಿದೆ. ಕಾರ್ಮಿಕರ ಹಣವನ್ನು ದುಂದು ವೆಚ್ಚ ಮಾಡಿ, ಮಂಡಳಿಯಲ್ಲಿದ್ದ ಹಣವನ್ನು ಖಾಲಿ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಐಟಿಯುಸಿ ಮುಖಂಡರಾದ ಗಿರೀಶ್, ಗೋವಿಂದರಾಜು, ಅಶ್ವತ್ಥನಾರಾಯಣ, ಬಿ.ಎಚ್.ನಾಗರತ್ನಮ್ಮ, ಬಸವರಾಜು, ಶಿವಾನಂದ್, ದೊಡ್ಡತಿಮ್ಮಯ್ಯ, ವಿಜಯ್‍ಕುಮಾರ್, ರವಿಕುಮಾರ್, ವಸಂತರಾಜು, ಪಾಪಣ್ಣಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT