ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಣಿಗಲ್: ಆರಂಭವಾಗದ ಟ್ರಾಮಾ ಸೆಂಟರ್

ಆರೋಗ್ಯಾಧಿಕಾರಿ ಕಚೇರಿಯಾಗಿ ಬಳಕೆಯಾಗುತ್ತಿದೆ ಕಟ್ಟಡ
Published 8 ಫೆಬ್ರುವರಿ 2024, 6:31 IST
Last Updated 8 ಫೆಬ್ರುವರಿ 2024, 6:31 IST
ಅಕ್ಷರ ಗಾತ್ರ

ಕುಣಿಗಲ್: ತಾಲ್ಲೂಕಿನಲ್ಲಿ ಅಪಘಾತಗಳು ಹೆಚ್ಚುತ್ತಿರುವುದರಿಂದ ಗಾಯಾಳುಗಳಿಗೆ ತುರ್ತು ಚಿಕಿತ್ಸೆ ನೀಡುವ ಸಲುವಾಗಿ ತಾಲ್ಲೂಕಿನಲ್ಲಿ 2006ರಲ್ಲಿ ಪ್ರಾರಂಭವಾದ ಟ್ರಾಮಾ ಸೆಂಟರ್ ಈವರೆಗೂ ಕಾರ್ಯಾರಂಭವಾಗಿಲ್ಲ.

ಟ್ರಾಮಾ ಸೆಂಟರ್ ಸದ್ಯ ಆರೋಗ್ಯಾಧಿಕಾರಿ ಕಚೇರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಸುಸಜ್ಜಿತವಾಗಿ ಕಾರ್ಯನಿರ್ವಹಿಸಲು ಸಂಬಂಧಪಟ್ಟವರು ಗಮನಹರಿಸುವಂತೆ ನಾಗರಿಕರು ಮನವಿ ಮಾಡಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 48 ಮತ್ತು ರಾಜ್ಯ ಹೆದ್ದಾರಿ 33 ಸೇರಿದಂತೆ ಗ್ರಾಮೀಣ ಸಂಪರ್ಕ ರಸ್ತೆಗಳಲ್ಲಿ 2004ರಿಂದ 2005ರವರೆಗೆ ಅಪಘಾತಗಳು ಹೆಚ್ಚಾಗಿ ಸಾವು, ನೋವುಗಳು ನಿರಂತರವಾದಾಗ ಅಂದಿನ ಶಾಸಕರಾದ ಡಿ.ನಾಗರಾಜಯ್ಯ, ಎಚ್.ನಿಂಗಪ್ಪ ಅವರು ಟ್ರಾಮಾ ಸೆಂಟರ್ ಪ್ರಾರಂಭಕ್ಕೆ ನಿರ್ಧರಿಸಿದ್ದರು. ಆದರೆ ಅದು ಕಟ್ಟಡ ನಿರ್ಮಾಣಕ್ಕೆ ಸೀಮಿತವಾಯಿತು.

ಈ ಟ್ರಾಮಾ ಸೆಂಟರ್‌ನಲ್ಲಿ ಅಪಘಾತದಲ್ಲಿ ಗಾಯಗೊಂಡವರಿಗೆ ಅಗತ್ಯ ಚಿಕಿತ್ಸೆ ನೀಡಲು ತಜ್ಞ ವೈದ್ಯರು, ನರ್ಸ್‌, ಸಿಬ್ಬಂದಿಯನ್ನು ನಿಯೋಜಿಸಲು, ಅಗತ್ಯ ಯಂತ್ರೋಪಕರಣ ಒದಗಿಸಲು ಸಂಬಂದಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಗಮನ ಹರಿಸದ ಕಾರಣ ಕಟ್ಟಡ ಬಳಕೆಯಾಗದೆ ಶಿಥಿಲಾವಸ್ಥೆ ತಲುಪಿತ್ತು.

ತಾಲ್ಲೂಕು ಆರೋಗ್ಯಾಧಿಕಾರಿ ಕಚೇರಿಗೆ ಸೂಕ್ತ ಕಟ್ಟಡ ದೊರೆಯದಿದ್ದಾಗ ಟ್ರಾಮಾ ಸೆಂಟರ್ ಕಟ್ಟಡವನ್ನೇ 2010ರಿಂದ ತಾಲ್ಲೂಕು ಆರೋಗ್ಯಾಧಿಕಾರಿ ಕಚೇರಿಯಾಗಿ ಬಳಸಿಕೊಳ್ಳಲಾಯಿತು.

ಸದ್ಯ ತಾಲ್ಲೂಕಿನಲ್ಲಿ ರಾಷ್ಟ್ರೀಯ ಹೆದ್ದಾರಿ 48ರ ಬದಲಾಗಿ 75 ಆಗಿ ಚತುಷ್ಪಥವಾಗಿದೆ. ರಾಜ್ಯ ಹೆದ್ದಾರಿ 33 ಕೆ–ಶಿಪ್‌ನಿಂದ ಅಭಿವೃದ್ಧಿಯಾಗಿದೆ. ಅಂತರರಾಜ್ಯ ಸಂಪರ್ಕ ರಸ್ತೆಗಳ ನಿರ್ಮಾಣ ಕಾರ್ಯ ಸಾಗುತ್ತಿದೆ. ಆದರೆ ಅಪಘಾತಗಳು ಮಾತ್ರ ಕಡಿಮೆಯಾಗಿಲ್ಲ. ಟ್ರಾಮಾ ಸೆಂಟರ್ ವ್ಯವಸ್ಥಿತ ಕಾರ್ಯನಿರ್ವಹಣೆಗೆ ಅಥವಾ ತುರ್ತು ಚಿಕಿತ್ಸಾ ವಿಶೇಷ ಘಟಕಕ್ಕೆ ಅಧಿಕಾರಿಗಳು, ಜನಪ್ರತಿನಿಧಿಗಳು ಗಮನಹರಿಸಬೇಕು ಎನ್ನುತ್ತಾರೆ ಸಾರ್ವಜನಿಕರು.

ತಾಲ್ಲೂಕು ಆಸ್ಪತ್ರೆಯ ಮೊದಲ ಮಹಡಿಯಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಕಚೇರಿ, ಸಿಬ್ಬಂದಿಗಳಿಗೆ ಮತ್ತು ಸಭಾಂಗಣವಿದ್ದರೂ ಬಳಕೆ ಮಾಡಿಕೊಳ್ಳುವಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ವಿಫಲರಾಗಿ, ಟ್ರಾಮಾ ಸೆಂಟರ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬ ದೂರೂ ಇದೆ.

ಅಪಘಾತ ಪ್ರಕರಣಗಳಲ್ಲಿ ಗಾಯಗೊಂಡವರಿಗೆ ತುರ್ತು ಚಿಕಿತ್ಸೆ ನೀಡಲು ಟ್ರಾಮಾ ಸೆಂಟರ್ ಪ್ರಾರಂಭ ಮಾಡದಿದ್ದರೂ, ಪ್ರತ್ಯೇಕ ಘಟಕದ ಅಗತ್ಯವಿದೆ. ಜನಪ್ರತಿನಿಧಿಗಳು ಗಮನಹರಿಸಬೇಕು ಎಂದು ಕರವೇ ಅಧ್ಯಕ್ಷ ಮಂಜುನಾಥ್ ಮನವಿ ಮಾಡಿದ್ದಾರೆ.

ಸಿಗಲಿ ಪ್ರಾಮುಖ್ಯತೆ
ಜಿಲ್ಲೆಯಲ್ಲಿ ಪ್ರಾರಂಭವಾಗುವ ಮೊದಲೇ ತಾಲ್ಲೂಕಿನಲ್ಲಿ ಟ್ರಾಮಾ ಸೆಂಟರ್ ಪ್ರಾರಂಭವಾಗಿತ್ತು. ಸಂಬಂಧಿಸಿದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಗಮನಹರಿಸದ ಕಾರಣ ಟ್ರಾಮಾ ಸೆಂಟರ್ ಕಣ್ಮರೆಯಾಗಿದೆ. ಶಾಸಕರು ತಾಯಿ ಮತ್ತು ಮಗುವಿನ ಆಸ್ಪತ್ರೆ ನಿರ್ಮಾಣಕ್ಕೆ ನೀಡುತ್ತಿರುವ ಪ್ರಾಮುಖ್ಯತೆಯನ್ನು ಟ್ರಾಮಾ ಸೆಂಟರ್‌ಗೂ ನೀಡಬೇಕು ಎನ್ನುತ್ತಾರೆ- ನಿವೃತ್ತ ಫಾರ್ಮಾಸಿಸ್ಟ್ ಚಂದ್ರಶೇಖರ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT