ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ | ತಿರುಪಿನ ಚೆಂಬು

Published 10 ಮೇ 2024, 22:56 IST
Last Updated 10 ಮೇ 2024, 22:56 IST
ಅಕ್ಷರ ಗಾತ್ರ

ಪದ್ದಮ್ಮ ಹಳೆ ಬೆಳ್ಳಿ ಸಾಮಾನನ್ನ ಹರಡ್ಕೊಂಡು ಸ್ಟಾಕ್ ಚೆಕ್ ಮಾಡ್ತಿದ್ರು. ‘ರೀ, ನಮ್ ಮದುವೇಲಿ ನಿಮ್ ಮನೆ ಕಡೆಯಿಂದ ಒಂದು ಗಿಂಡಿ ತರ ಕೊಟ್ಟಿದ್ರಲ್ಲ ಚಿಕ್ಕ ಚೆಂಬು, ಅದು ಕಾಣುಸ್ತಾನೇ ಇಲ್ಲರೀ’ ಪರ್ಮೇಶಿನ ಕೇಳುದ್ರು.

‘ನೀವಿನ್ನೇನು ಕಾಶಿಯಾತ್ರೆಗೆ ದೊಡ್ಡ ಹಂಡೆ ಕೊಟ್ಟಿದ್ರಾ? ಒಳಲೆ ಅಂತ ಚೆಂಬಲ್ಲಿ ಕಾಲು ನೆನೆಯೋದಿರಲಿ, ಉಂಗುಷ್ಟನೂ ನೆನೀತಿರಲಿಲ್ಲ. ಅದನ್ನೂ ನಿಮ್ ಮಾವ ಹೊಡ್ಕಂಡು ಹೋದ್ನಲ್ಲ...’

‘ಆ ವಿಷಯ ಬಿಡಿ, ಈಗ ನನ್ ಚೆಂಬಿನ ವಿಷಯಕ್ಕೆ ಬನ್ನಿ. ಎಲ್ಲಾದ್ರೂ ತಗಂಡು ಹೋಗಿ ಅಡ ಇಟ್ಟು ಬಂದ್ರೋ ಹೇಗೆ?’

‘ಅಯ್ಯೋ! ಇಡೀ ರಾಜ್ಯದಲ್ಲಿ ಚೆಂಬು ಕೊಡೋಕೆ ಪೈಪೋಟಿ ನಡೀತಿದೆ. ಅಂಥಾದ್ರಲ್ಲಿ ನನಗೊಂದು ಚೆಂಬು ಸಿಗಲ್ವಾ? ನಿನ್ ಚೆಂಬು ತಗಂಡು ಹೋಗಿ ಯಾಕ್ ಅಡ ಇಡ್ಲಿ?’ ಎಂದ ಪರ್ಮೇಶಿ.

‘ರೀ, ಅವರೆಲ್ಲಾ ಬೆಳ್ಳಿ ಚೆಂಬು ಎಲ್ರೀ ಕೊಡ್ತಾರೆ? ಅವರು ಕೊಡೋದೇನಿದ್ರೂ ತಗಡು ಇಲ್ಲ ಪ್ಲಾಸ್ಟಿಕ್ ಚೆಂಬು’ ಅಂದ್ರು ಪದ್ದಮ್ಮ.

‘ಯಾವುದಾದ್ರೇನು? ಸಮಯಕ್ಕೆ ಕೈಗೊಂದು ಚೆಂಬು, ತಲೆಗೊಂದು ದಿಂಬು ಸಿಕ್ರೆ ಸಾಕು, ಎಲ್ಲಿ ಹೋದ್ರೂ ಸುಖನೇ!’

‘ಈ ವೇದಾಂತ ಎಲ್ಲಾ ಬಿಟ್ಟು ನನ್ ಬೆಳ್ಳಿಚೆಂಬು ಎಲ್ಲಿ ಅಂತ ಹೇಳಿ’.

‘ಅಲ್ವೇ, ಮಗಳ ಮದ್ವೆಗೆ ಹೊಸ ಬೆಳ್ಳಿ ಚೆಂಬು ಯಾಕ್ ಮಾಡುಸ್ಬೇಕು ಅಂತ ನಿನ್ ಮದುವೆಗೆ ಕೊಟ್ಟಿದ್ದ ಗಿಂಡಿಯಂಥ ಚೆಂಬನ್ನೇ ಅಲ್ವಾ ನೀನು ಅಳಿಮಯ್ಯಂಗೆ ಕೊಟ್ಟಿದ್ದು’.

‘ಅಯ್ಯೋ ಹೌದಲ್ವಾ? ಮರ್ತೇಹೋಗಿತ್ತು ನೋಡಿ. ರೀ, ನನಗೂ ಒಂದು ಒಳ್ಳೇ ಚೆಂಬು ಮಾಡಿಸ್ಕೊಟ್ಬಿಡಿ. ನಿಮ್ ನೆನಪಲ್ಲಿ ಇಟ್ಕೊತೀನಿ’.

‘ಅಯ್ಯೋ! ನಾನ್ಯಾಕೇ ಮಾಡಿಸ್ಕೊಡ್ಬೇಕು? ಮುಂದೆ ನೆಕ್ಸ್ಟ್‌ ಎಲೆಕ್ಷನ್ ಹೊತ್ತಿಗೆ ರಾಜಕೀಯ ದವರೇ ನಿಜವಾಗ್ಲೂ ಮನೆಮನೆಗೆ ಚೆಂಬು ಹಂಚೋ ಯೋಜನೆ ತಂದರೂ ತಂದಾರು’.

‘ರೀ ಅದೆಲ್ಲಾ ನಡ್ಯಲ್ಲ, ಇಷ್ಟು ದಿವಸ ಕಳಸಗಿತ್ತಿ ಅಂತ ನಮ್ ಕೈಗೆ ಚೆಂಬು ಕೊಟ್ಟು ನೀವು ಪೂರ್ಣ ಕುಂಭ ಸ್ವಾಗತ ಮಾಡಿಸ್ಕೊಂಡು ಮೆರೆದದ್ದು ಸಾಕು. ಇನ್ಮೇಲೆ ಏನಿದ್ರೂ ನಿಮ್ಮ ಕೈಗೆ ರೈಲ್‌ಚೆಂಬು ಬರುತ್ತೆ’.

‘ಅರ್ಥ ಆಯ್ತು ಬಿಡು. ರಾಜಕೀಯ ಅಂದ್ರೆ ತಿರುಪಿರಲ್ಲ, ಸಂಸಾರ ಅಂದ್ರೆ ಪೂರಾ ತಿರುಪು’ ಮುಖ ಹುಳ್ಳಗೆ ಮಾಡಿದ ಪರ್ಮೇಶಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT