ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮರಣಾವಸ್ಥೆಗೆ ತಲುಪಿದ ಪ್ರಜಾಪ್ರಭುತ್ವ’

ಲೇಖಕ ಜಿ.ವಿ.ಆನಂದಮೂರ್ತಿ ಆತಂಕ
Published 2 ಮೇ 2024, 7:11 IST
Last Updated 2 ಮೇ 2024, 7:11 IST
ಅಕ್ಷರ ಗಾತ್ರ

ತುಮಕೂರು: ‘ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಮೇಲ್ನೋಟಕ್ಕೆ ಸುಂದರವಾಗಿ, ಯಾವುದೇ ತೊಡಕು ಇಲ್ಲದಂತೆ ಕಾಣುತ್ತಿದೆ. ಆದರೆ ಒಳಗಡೆ ಗೆದ್ದಲು ಹಿಡಿಯುತ್ತಿದೆ, ಶಿಥಿಲವಾಗಿ ಮರಣಾವಸ್ಥೆಗೆ ತಲುಪುತ್ತಿದೆ’ ಎಂದು ಲೇಖಕ ಜಿ.ವಿ.ಆನಂದಮೂರ್ತಿ ಆತಂಕ ವ್ಯಕ್ತಪಡಿಸಿದರು.

ನಗರದಲ್ಲಿ ಬುಧವಾರ ಸಿಐಟಿಯು ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಕಾರ್ಮಿಕರ ದಿನ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕಳೆದ 10 ವರ್ಷದಿಂದ ಆಡಳಿತ ನಡೆಸುತ್ತಿರುವ, ಕೋಮುವಾದಿ‌ ಮನಸ್ಥಿತಿ ಹೊಂದಿರುವ ಪಕ್ಷ ಪ್ರಜಾಪ್ರಭುತ್ವ ವ್ಯವಸ್ಥೆಯ ಬೇರಿಗೆ ಕೈ ಹಾಕಿದೆ. ಇದರಿಂದ ಹಾಡುಹಗಲೇ ಪ್ರಜಾಪ್ರಭುತ್ವದ ಕಗ್ಗೊಲೆಯಾಗುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಹಾ ದ್ರೋಹ ಬಗೆಯುತ್ತಿದೆ. ಇದರಿಂದ ಕೆಳವರ್ಗಕ್ಕೆ ಹೆಚ್ಚಿನ ಹಾನಿ ಎಂದು ಎಚ್ಚರಿಸಿದರು.

ಬಡವರು, ಕಾರ್ಮಿಕರು, ಹಿಂದುಳಿದವರು ವಂಚನೆ, ಮೋಸಕ್ಕೆ ಬಲಿಯಾಗುತ್ತಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿರುವ 126 ಹಿಂದುಳಿದ, ದಲಿತ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜಾತಿಯ ವಾತಾವರಣದಿಂದ ನೋವು, ಅಪಮಾನ ಸಹಿಸದೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಎಲ್ಲರು ಇದನ್ನು ಅರಿತುಕೊಳ್ಳಬೇಕು. ಇಲ್ಲದಿದ್ದರೆ ‘ನಮ್ಮ ನಡಿಗೆ-ಪಾತಾಳದ ಕಡೆಗೆ’ ಎಂಬಂತಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರದ ಜನ ವಿರೋಧಿ ಆಡಳಿತ ನೀತಿಯಿಂದ ಕಳೆದ ಐದಾರು ವರ್ಷಗಳಲ್ಲಿ ಸುಮಾರು 40 ಸಾವಿರ ಕುಲ ಕಸುಬುಗಳು, ಸಣ್ಣ ಉದ್ಯಮಗಳು ನಿರ್ನಾಮವಾಗಿವೆ. ಮತ್ತೊಂದು ಕಡೆ ಎಲ್ಲ ಸರ್ಕಾರಿ ಸಂಸ್ಥೆಗಳನ್ನು ಖಾಸಗೀಕರಣ ಮಾಡುತ್ತಿದ್ದು, ಮೀಸಲಾತಿಯೇ ಇಲ್ಲದಂತಾಗಿದೆ. ನಮ್ಮ ಅವಕಾಶ ಕಸಿದು ಕೊಳ್ಳುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದೇಶದ ಸಂಪತ್ತಿನ ಸೃಷ್ಟಿಗೆ ಕಾರಣವಾಗುವ ಕೆಳ ವರ್ಗದವರು ಇಂದಿಗೂ ಮಾನಸಿಕ ಗುಲಾಮಗಿರಿಯಲ್ಲಿ ಇದ್ದೇವೆ. ಇಂದಿನ ಸಮಾಜದಲ್ಲಿ ಯಾರಿಗೆ ನ್ಯಾಯ ಸಿಗುತ್ತಿದೆ. ಕಾರ್ಮಿಕರ ದುಡಿಯುವ ಅವಧಿಯನ್ನು 12 ಗಂಟೆಗೆ ಹೆಚ್ಚಿಸಿದ್ದಾರೆ. ಇದು ಒಂದು ರೀತಿಯ ಕ್ರೌರ್ಯ. ಎಲ್ಲರು ಎಚ್ಚೆತ್ತುಕೊಳ್ಳಬೇಕು, ರಾಜಕೀಯ ಪ್ರಜ್ಞೆ ಇಲ್ಲದಿರುವುದರಿಂದ ಇಂತಹ ಅನಾಹುತಗಳು ಆಗುತ್ತಿವೆ ಎಂದರು.

ಚಿಂತಕ ಕೆ.ದೊರೈರಾಜ್, ‘ದೇಶದ ಸಂಪತ್ತು ಸೃಷ್ಟಿ ಮಾಡುವವರು ಹಸಿವಿನಿಂದ ಬಳಲುವ ಪರಿಸ್ಥಿತಿ ನಿರ್ಮಾಣವಾಗಿದೆ. ನಮ್ಮ ಅವನತಿಗೆ ನಮ್ಮ ಕೊರತೆಗಳೇ ಕಾರಣ. ನಮ್ಮ ಒಳಗಿರುವ ಜಾತಿ, ಧರ್ಮದ ವ್ಯವಸ್ಥೆ ಕೆಳ ವರ್ಗದವರನ್ನು ಒಟ್ಟುಗೂಡಲು ಬಿಡುವುದಿಲ್ಲ. ಇದರಿಂದ ಬಡವರು ಒಗ್ಗಟ್ಟಾಗಲು ಸಾಧ್ಯವಾಗುತ್ತಿಲ್ಲ’ ಎಂದು ವಿಷಾದಿಸಿದರು.

ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಸೈಯದ್‌ ಮುಜೀಬ್, ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ, ಪದಾಧಿಕಾರಿಗಳಾದ ಸಿ.ಜೆ.ಲೋಕೇಶ್, ಬಿ.ಗಿರೀಶ್, ಜಿ.ಕಮಲ ಮೊದಲಾದವರು ಪಾಲ್ಗೊಂಡಿದ್ದರು.

ದೇಶದ ಜನ ನರಕದಲ್ಲಿದ್ದಾರೆ

ಕೋಮುವಾದಿ ವ್ಯವಸ್ಥೆ ವಿರುದ್ಧ ಹೋರಾಡಬೇಕು. ಜಾತ್ಯತೀತ ಪರಂಪರೆಯ ಮೂಲಕ ಕೋಮು ಶಕ್ತಿಗಳನ್ನು ಮಣಿಸಬೇಕು. ಬಸವ ತತ್ವದ ಜತೆಗೆ ಕುವೆಂಪು ಅವರ ಆದರ್ಶ ವೈಚಾರಿಕತೆ ಇಟ್ಟುಕೊಂಡು ಹಲವು ಬಗೆಯ ಹೂವುಗಳಿರುವ ಸಮಾಜ ನಿರ್ಮಾಣಕ್ಕೆ ಪ್ರಯತ್ನಿಸಬೇಕು ಎಂದು ಜಿ.ವಿ.ಆನಂದಮೂರ್ತಿ ಸಲಹೆ ನೀಡಿದರು. ಶೂದ್ರರಿಗೆ ಅರಿವು ಬರುವ ತನಕ ಪುರೋಹಿತ ಶಾಹಿ ವ್ಯವಸ್ಥೆಗೆ ಬಿಡುಗಡೆ ಇಲ್ಲ. ನಾವು ಹೀಗೆ ಇದ್ದರೆ ಇನ್ನೂ ಎರಡು ಸಾವಿರ ವರ್ಷ ಕಳೆದರೂ ಪುರೋಹಿತ ಶಾಹಿ ವ್ಯವಸ್ಥೆಯನ್ನು ಅಲುಗಾಡಿಸಲು ಆಗುವುದಿಲ್ಲ. ನಮ್ಮಲ್ಲಿ ರಾಜಕೀಯ ಪ್ರಜ್ಞೆ ಬರುವ ತ‌ನಕ ವಿಮೋಚನೆ ಸಾಧ್ಯವಿಲ್ಲ ಎಂದು ಹೇಳಿದರು. ಎಲ್ಲರು ಹರಿದ ಬಟ್ಟೆ ಹಾಕಿಕೊಂಡಾಗ ನಾವು ಅರ್ಧ ಗಂಟೆಗೊಂದು ಹೊಸ ಬಟ್ಟಿ ಧರಿಸಲು ಆಗುವುದಿಲ್ಲ. ಯಾವುದೇ ಒಂದು ದೇಶದ ರಾಜ ವೈಭವೋಪೇತವಾಗಿ ಬದುಕುತ್ತಿದ್ದರೆ ಆ ದೇಶದ ಜನ ನರಕದಲ್ಲಿದ್ದಾರೆ ಎಂದರ್ಥ ಎಂದು ಮಾರ್ಮಿಕವಾಗಿ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT