ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಿಂದೂ ಧರ್ಮದಿಂದ ಬೌದ್ಧ ಧರ್ಮ ನಾಶ: ಪ್ರೊ.ರವಿವರ್ಮಕುಮಾರ್‌

ವಕೀಲ ಪ್ರೊ.ರವಿವರ್ಮಕುಮಾರ್‌ ಹೇಳಿಕೆ
Published 25 ಮೇ 2024, 4:46 IST
Last Updated 25 ಮೇ 2024, 4:46 IST
ಅಕ್ಷರ ಗಾತ್ರ

ತುಮಕೂರು: ‘ಬೌದ್ಧ ಧರ್ಮದ ನಂತರ ಬಂದ ಹಿಂದೂ ಧರ್ಮ ಬೌದ್ಧ ಧರ್ಮವನ್ನು ನಾಶ ಮಾಡಿತು’ ಎಂದು ವಕೀಲ ಪ್ರೊ.ರವಿವರ್ಮಕುಮಾರ್‌ ಹೇಳಿದರು.

ನಗರದಲ್ಲಿ ಗುರುವಾರ ಬೋಧಿ ಮಂಡಲ ಮತ್ತು ಹಳೇಹಟ್ಟಿ ಸಖೀಗೀತ ಪ್ರಕಾಶನ ಏರ್ಪಡಿಸಿದ್ದ ಬುದ್ಧ ಪೂರ್ಣಿಮೆ ಕಾರ್ಯಕ್ರಮದಲ್ಲಿ ಕೆ.ಎಂ.ಶಂಕರಪ್ಪ ಅವರ ‘ಬುದ್ಧ ಬರಲಿ ನಮ್ಮೂರಿಗೆ’ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.

ಬೌದ್ಧ ಧರ್ಮ ಹಿಂದೂ ಧರ್ಮಕ್ಕೆ ದೊಡ್ಡ ಸವಾಲಾಗಿತ್ತು. ಬೌದ್ಧ ಸ್ತೂಪಗಳನ್ನು ನಾಶ ಮಾಡಿ ಹಿಂದೂ ದೇವಾಲಯ ನಿರ್ಮಿಸಲಾಯಿತು. ನಂತರ ಭಾರತದಲ್ಲಿ ಬೌದ್ಧ ಧರ್ಮ ನಾಶವಾಯಿತು. ಡಾ.ಬಿ.ಆರ್.ಅಂಬೇಡ್ಕರ್‌ ಬೌದ್ಧ ಧರ್ಮದಲ್ಲಿ ಮಾತ್ರ ಮಾನವನ ಪ್ರೀತಿ, ಕರುಣೆ, ಮೈತ್ರಿ ಕಾಣಲು ಸಾಧ್ಯ ಎಂದಿದ್ದರು ಎಂದು ತಿಳಿಸಿದರು.

ಕಥೆಗಾರ ಜಿ.ವಿ.ಆನಂದಮೂರ್ತಿ, ‘ಪ್ರಸ್ತುತ ಸಮಾಜದಲ್ಲಿ ನೀವೆಲ್ಲಾ ಒಂದು ದೇವಾಲಯಕ್ಕೆ ಹೋಗಲೇಬೇಕು ಎಂಬ ಪರೋಕ್ಷ ಒತ್ತಡ ಹೇರಲು ಹೊರಟಿದ್ದಾರೆ. ಹೀಗೆ ದೇಶದ ಜನರ ಧಾರ್ಮಿಕ ಹಕ್ಕಿನ ಮೇಲೆ ಸವಾರಿ ಮಾಡುತ್ತಿರುವುದು ಮಾನವ ಹಕ್ಕುಗಳ ದಮನಕಾರಿ ಸೂಚನೆಗಳಾಗಿವೆ’ ಎಂದು ಆತಂಕ ವ್ಯಕ್ತಪಡಿಸಿದರು.

ಧರ್ಮ, ದೇವರ ಹೆಸರಿನಲ್ಲಿ ಧಾರ್ಮಿಕ ಹಕ್ಕುಗಳನ್ನು ಕಸಿದುಕೊಳ್ಳುವುದು ರಾಜನೀತಿಯಲ್ಲ. ಪ್ರಸ್ತುತ ಕರಾಳ ಮುಖಗಳು ಮಾನವ ಹಕ್ಕುಗಳನ್ನು ದೊಡ್ಡ ಪ್ರಮಾಣದಲ್ಲಿ ಕಸಿದುಕೊಂಡಿವೆ. ವಿಚಾರಣೆಯೇ ಇಲ್ಲದೆ ನೂರಾರು ಜನರು ಜೈಲಿನಲ್ಲಿ ಇರುವಂತಾಗಿದೆ. ಇಂತಹ ರಾಜಪ್ರಭುತ್ವಗಳ ಮೇಲೆ ಬೌದ್ಧ ಧರ್ಮದ ಬೆಳಕು ಚೆಲ್ಲಬೇಕಿದೆ. ಕುರುಡಾಗಿರುವ ರಾಜ ಪ್ರಭುತ್ವಕ್ಕೆ ಬುದ್ಧನ ಚಿಂತನೆಗಳನ್ನು ಹೇಳಬೇಕಾಗಿದೆ ಎಂದು ಸಲಹೆ ಮಾಡಿದರು.

ಬುದ್ಧಗುರು ಕೆ.ಎಂ.ಶಂಕರಪ್ಪ ಯಾವುದನ್ನೂ ಬಯಸಿದವರಲ್ಲ, ಏನ್ನನ್ನೂ ಹೇರಿದವರಲ್ಲ. ಸಕಲ ಜೀವಾತ್ಮಗಳ ಏಳ್ಗೆ ಬಯಸಿದ್ದರು, ನಿಜಾರ್ಥದಲ್ಲಿ ಸಂತರಾಗಿದ್ದವರು. ಮಠ, ದೇವಸ್ಥಾನದಲ್ಲಿ ಇರುವವರನ್ನು ಸಂತರು ಎನ್ನುತ್ತೇವೆ. ಅವರೆಲ್ಲಾ ತನುವಿನಿಂದ ಯೋಗಿಗಳು, ಶಂಕರಪ್ಪ ಕಾವಿ ಹಾಕದೆ, ಮನದಿಂದ ಯೋಗಿಯಾದವರು ಎಂದು ಅಭಿಪ್ರಾಯಪಟ್ಟರು.

ಚಿಂತಕ ಕೆ.ದೊರೈರಾಜ್‌, ಪ್ರಕಾಶಕ ನರಸಿಂಹಮೂರ್ತಿ ಹಳೇಹಟ್ಟಿ, ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ.ಎಚ್.ವಿ.ರಂಗಸ್ವಾಮಿ, ಲೇಖಕಿಯರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಮಲ್ಲಿಕಾ ಬಸವರಾಜು, ಕೆ.ಎಸ್.ಸ್ನೇಹಲತಾ, ಕಥೆಗಾರ ಗುರುಪ್ರಸಾದ್ ಕಂಟಲಗೆರೆ, ಬೋಧಿ ಮಂಡಲದ ನಟರಾಜಪ್ಪ ಇತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT