ಸೋಮವಾರ, ಸೆಪ್ಟೆಂಬರ್ 20, 2021
29 °C

ಜಾತಿ ಗಣತಿ ಬಹಿರಂಗಕ್ಕೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ನಡೆಸಿರುವ ಸಾಮಾಜಿಕ, ಶೈಕ್ಷಣಿಕ ಗಣತಿ (ಜಾತಿ
ಗಣತಿ) ವರದಿಯನ್ನು ಬಹಿರಂಗಪಡಿ
ಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ಪ್ರವರ್ಗ 2ಎ ಮೀಸಲಾತಿ ಪಟ್ಟಿಗೆ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಇತರೆ ಎಲ್ಲಾ ರೀತಿಯಲ್ಲೂ ಮುಂದುವರಿದ ಜಾತಿ
ಗಳನ್ನು ಸೇರಿಸಬಾರದು ಎಂದು ಒತ್ತಾ
ಯಿಸಿದರು. ಪ್ರಸ್ತುತ ಹಿಂದುಳಿದ ವರ್ಗಗಳ ಆಯೋಗ ಕಾರ್ಯ ನಿರ್ವಹಿಸುತ್ತಿರುವ ಸಮಯದಲ್ಲೇ ಸುಭಾಷ್ ಆಡಿ ನೇತೃತ್ವದಲ್ಲಿ ಉನ್ನತ ಮಟ್ಟದ ಮತ್ತೊಂದು ಸಮಿತಿಯನ್ನು ನೇಮಿಸಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಕೂಡಲೇ ಸಮಿತಿಯನ್ನು ರದ್ದುಪಡಿಸುವಂತೆ ಆಗ್ರಹಿಸಿದರು.

ಕಾಂಗ್ರೆಸ್‌ ಮುಖಂಡ ವಿ.ಆರ್.ಸುದರ್ಶನ್ ಮಾತನಾಡಿ, ‘1931ರಲ್ಲಿ ಬ್ರಿಟಿಷರ ಆಡಳಿತದಲ್ಲಿ ಜಾತಿ ಗಣತಿ ನಡೆಸಿದ್ದನ್ನು ಬಿಟ್ಟರೆ, 1974ರಲ್ಲಿ ದೇವರಾಜ ಅರಸು ಅಧಿಕಾರಕ್ಕೆ ಬರುವವರೆಗೂ ಜಾತಿ ಗಣತಿ ನಡೆದಿರಲಿಲ್ಲ. ಎಲ್.ಜಿ.ಹಾವನೂರು ನೇತೃತ್ವದಲ್ಲಿ ಆಯೋಗ ರಚಿಸಿ, ಆ ವರದಿಯ ಆಧಾರದ ಮೇಲೆ ಅನೇಕ ಕಾಯ್ದೆಗಳನ್ನು ಜಾರಿಗೆ ತಂದರು. ಇದರ ಪರಿಣಾಮವಾಗಿ ಹಿಂದುಳಿದ ವರ್ಗಗಳು ರಾಜಕೀಯ, ಶೈಕ್ಷಣಿಕ ಮೀಸಲಾತಿ ಪಡೆದು ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗಿದೆ’ ಎಂದರು.

ಆಡಳಿತದಲ್ಲಿರುವ ಸರ್ಕಾರಗಳು ಒತ್ತಡಕ್ಕೆ ಮಣಿದು, ಮನಸ್ಸಿಗೆ ಬಂದಂತೆ ಕಾನೂನು ಬಾಹಿರವಾಗಿ ಮೀಸಲಾತಿ ಹಂಚಿಕೆ ಮಾಡುವುದನ್ನು ತಕ್ಷಣವೇ ನಿಲ್ಲಿಸಬೇಕು. ಪ್ರಬಲ ಜಾತಿಗಳನ್ನು 2ಎ ಪಟ್ಟಿಗೆ ಸೇರಿಸಬಾರದು ಎಂದು ಆಗ್ರಹಿಸಿದರು.

ಒಕ್ಕೂಟದ ಮುಖಂಡ ಎಚ್.ಎಂ.ರೇವಣ್ಣ, ‘ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜು ಸಲ್ಲಿಸಿರುವ ವರದಿಯನ್ನು ಸರ್ಕಾರ ಕೂಡಲೇ ಸಾರ್ವಜನಿಕ ಚರ್ಚೆಗೆ ತೆರೆದಿಡಬೇಕು. ವರದಿ ಸಲ್ಲಿಸಿ ಮೂರು ವರ್ಷ ಕಳೆದರೂ, ಅದನ್ನು ಜಾರಿಗೆ ತರದೆ ಮೂಲೆಗುಂಪು ಮಾಡಲಾಗಿದೆ. ವರದಿಯಲ್ಲಿ ಇರುವ ಅಂಶಗಳ ಬಗ್ಗೆ ಸಾರ್ವಜನಿಕವಾಗಿ ಚರ್ಚೆ ಮಾಡಲು ಅವಕಾಶ ಮಾಡಿಕೊಡಬೇಕು. ಬರುವ ಅಭಿಪ್ರಾಯ ಸಂಗ್ರಹಿಸಿ, ಅಗತ್ಯ ತಿದ್ದುಪಡಿಗಳನ್ನು ಮಾಡಿ ವರದಿ ಜಾರಿಗೆ ತರಲು ಅವಕಾಶವಿದೆ. ಆದರೆ ಇದನ್ನು ಮಾಡುತ್ತಿಲ್ಲ’ ಎಂದು ಆರೋಪಿಸಿದರು.

ಕೋವಿಡ್ ಹೆಸರಿನಲ್ಲಿ ಹಿಂದುಳಿದ ಸಮುದಾಯದ ಮಕ್ಕಳಿಗೆ ನೀಡುತ್ತಿದ್ದ ವಿದ್ಯಾರ್ಥಿ ವೇತನ, ವಿದ್ಯಾಸಿರಿ ಸಹಾಯಧನ ಸೇರಿದಂತೆ ಈ ಹಿಂದಿನ ಸರ್ಕಾರಗಳು ಕೊಡುತ್ತಿದ್ದ ಅನೇಕ ಸವಲತ್ತುಗಳನ್ನು ತಡೆ ಹಿಡಿದಿದೆ. ಇದರ ವಿರುದ್ಧ ನಾವೆಲ್ಲರೂ ಧ್ವನಿ ಎತ್ತಬೇಕಾಗಿದೆ ಎಂದರು.

ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಡಿ.ಲಕ್ಷ್ಮಿನಾರಾಯಣ್, ‘ರಾಜ್ಯದಲ್ಲಿ ಸುಮಾರು 2.70 ಕೋಟಿ ಜನಸಂಖ್ಯೆ ಇರುವ ಹಿಂದುಳಿದ ವರ್ಗಗಳ ವಿರುದ್ಧವಾಗಿ ನಡೆದುಕೊಳ್ಳುತ್ತಿರುವ ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ ನಾವೆಲ್ಲರೂ ಸಿಡಿದೇಳಬೇಕಾಗಿದೆ. ಜಾತಿ ಗಣತಿಯ ವರದಿಯನ್ನು ಸ್ವೀಕರಿಸದೆ ರಾಜ್ಯದ 6.50 ಕೋಟಿ ಜನರಿಗೆ ಅಪಮಾನ ಮಾಡಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ. ಹಿಂದುಳಿದ 197 ಸಮುದಾಯಗಳು ವರದಿ ಜಾರಿಗೆ ಒಗ್ಗಟ್ಟು ಪ್ರದರ್ಶಿಸದಿದ್ದರೆ ಭವಿಷ್ಯದಲ್ಲಿ ಮತ್ತಷ್ಟು ಕರಾಳ ದಿನಗಳನ್ನು ಎಣಿಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ಕೇವಲ ಎರಡು ಜಾತಿಗಳ ನಿಗಮಗಳಿಗೆ ₹1,000 ಕೋಟಿ ನೀಡಲಾಗಿದೆ. ಆದರೆ 197 ಜಾತಿಗಳನ್ನು ಪ್ರತಿನಿಧಿಸುವ 16 ನಿಗಮಗಳಿಗೆ 500 ಕೋಟಿ ಕೊಡಲಾಗಿದೆ. ಇದು ನಿಮ್ಮ ಸಾಮಾಜಿಕ ನ್ಯಾಯವೇ ಎಂದು ಪ್ರಶ್ನಿಸಿದರು.

ಬಿಎಂಟಿಸಿ ಮಾಜಿ ಅಧ್ಯಕ್ಷ ನಾಗರಾಜ್ ಯಾದವ್, ‘ರಾಜ್ಯ, ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಜಾತಿವಾರು ಮೀಸಲಾತಿಗೆ ಬದಲಾಗಿ, ಆರ್ಥಿಕ ಮೀಸಲಾತಿ ಜಾರಿಗೆ ತರಲು ಹೊರಟಿದೆ. ಇದು ಜಾರಿಯಾದರೆ ತುಳಿತಕ್ಕೆ ಒಳಗಾಗಿರುವ ಹಿಂದುಳಿದ ಜಾತಿಗಳಿಗೆ ತೀವ್ರ ಅನ್ಯಾಯವಾಗಲಿದೆ’ ಎಂದರು.

ನೇಕಾರ ಸಮುದಾಯ
ದ ದೊಡ್ಡಬಳ್ಳಾಪುರ ಮಠದ ಜ್ಞಾನಾನಂದ ಸ್ವಾಮೀಜಿ, ‘ಹಿಂದುಳಿದ ಸಮುದಾಯದಲ್ಲಿ ಇರುವ ಎಲ್ಲಾ ಜಾತಿಗಳು ಹೋರಾಟಕ್ಕೆ ಹೆಗಲು ಕೊಟ್ಟು ದುಡಿಯಬೇಕಿದೆ’ ಎಂದು ಹೇಳಿದರು.

ಒಕ್ಕೂಟದ ಮುಖಂಡರಾದ ಕೆ.ಎಂ.ರಾಮಚಂದ್ರಪ್ಪ, ಡಾ.ರಫೀಕ್ ಅಹಮದ್, ಪಿ.ಎನ್.ರಾಮಯ್ಯ, ನರಸೀಯಪ್ಪ, ಆರ್.ವೇಣುಗೋಪಾಲ್, ಅಡಿಟರ್ ಆಂಜನಪ್ಪ, ಸುರೇಶ್ ಲಾತೂರ್, ನಿಕೇತ್ ರಾಜ್ ಮೌರ್ಯ, ರಾಮಚಂದ್ರಪ್ಪ, ಧನಿಯಕುಮಾರ್, ಪ್ರೆಸ್ ರಾಜಣ್ಣ, ಕೆಂಪರಾಜು, ವಿರೂಪಾಕ್ಷ, ಟಿ.ಎಲ್.ಕುಂಭಯ್ಯ, ಲಕ್ಷ್ಮಣ್, ಶಾಂತ
ಕುಮಾರ್, ಮಂಜೇಶ್, ಎಸ್.ನಾಗಣ್ಣ,
ಪುಟ್ಟರಾಜು, ತಿಪ್ಪೇಸ್ವಾಮಿ, ನಾಗರಾಜು ಭಾಗವಹಿಸಿದ್ದರು. ಜಿಲ್ಲಾಧಿಕಾ
ರಿಗೆ ಮನವಿ ಸಲ್ಲಿಸಲಾಯಿತು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.