ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣ ಕೊಡದೆ ಕೇಂದ್ರ ಸುಳ್ಳು ಹೇಳುತ್ತಿದೆ: ಸಚಿವ ಜಿ. ಪರಮೇಶ್ವರ

ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ನಾಯಕರು
Published 27 ಮಾರ್ಚ್ 2024, 6:43 IST
Last Updated 27 ಮಾರ್ಚ್ 2024, 6:43 IST
ಅಕ್ಷರ ಗಾತ್ರ

ತುಮಕೂರು: ‘ರಾಜ್ಯಕ್ಕೆ ನೀಡಬೇಕಿರುವ ಎಲ್ಲಾ ಬಾಕಿ ಹಣವನ್ನು ಕೊಡಲಾಗಿದೆ. ಯಾವುದೇ ಬಾಕಿ ಉಳಿಸಿಕೊಂಡಿಲ್ಲ’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಮರ್ಥಿಸಿಕೊಳ್ಳುವ ಮೂಲಕ ‘ದೇಶದಲ್ಲೇ ಅತಿ ದೊಡ್ಡ ಸುಳ್ಳು ಹೇಳಿದ್ದಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಅವರು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಜಿಎಸ್‌ಟಿ ಮೂಲಕ ತೆರಿಗೆ ಸಂಗ್ರಹಿಸಿ ಕೇಂದ್ರಕ್ಕೆ ನೀಡುವ ಹಣದಲ್ಲಿ ನಮ್ಮ ಪಾಲು ಸರಿಯಾಗಿ ಕೊಡುತ್ತಿಲ್ಲ. ಭದ್ರ ಮೇಲ್ದಂಡೆ ಯೋಜನೆ ₹5,300 ಕೋಟಿ ನೀಡುವುದಾಗಿ ಹಿಂದಿನ ವರ್ಷದ ಬಜೆಟ್‌ನಲ್ಲಿ ಪ್ರಕಟಿಸಿದರೂ ಈವರೆಗೂ ಬಿಡುಗಡೆ ಮಾಡಿಲ್ಲ. ಎನ್‌ಡಿಆರ್‌ಎಫ್ ನಿಯಮದ ಅನ್ವಯ ಬರ ಬರಿಹಾರ ಕೊಟ್ಟಿಲ್ಲ. ಆದರೂ ಹಣ ನೀಡಿರುವುದಾಗಿ ಹಣಕಾಸು ಸಚಿವರು ಸುಳ್ಳು ಹೇಳುತ್ತಿದ್ದು, ನಿಮಗೆ ನಾಚಿಕೆಯಾಗಬೇಕು’ ಎಂದು ಟೀಕಿಸಿದರು.

ಪರಿಹಾರದ ಹಣ ಕೊಟ್ಟಿದ್ದರೆ ನಾವೇಕೆ ದೆಹಲಿಗೆ ಹೋಗಿ ಪ್ರತಿಭಟನೆ ಮಾಡುತ್ತಿದ್ದೆವು? ಪರಿಹಾರ ಕೊಡಿಸಿ ಎಂದು ಸುಪ್ರೀಂ ಕೋರ್ಟ್ ಮೆಟ್ಟಿಲೇಕೆ ಏರುತ್ತಿದ್ದೆವು? ಎಂದು ಪ್ರಶ್ನಿಸಿದರು. ದೇಶದ ಇತಿಹಾಸದಲ್ಲಿ ಕೇಂದ್ರದ ವಿರುದ್ಧ ಯಾವ ರಾಜ್ಯ ಸರ್ಕಾರವೂ ಪ್ರತಿಭಟನೆ ಮಾಡಿರಲಿಲ್ಲ. ಕೋರ್ಟ್‌ಗೆ ಹೋಗಿರಲಿಲ್ಲ. ಅಂತಹ ಪರಿಸ್ಥಿತಿಯನ್ನು ಕೇಂದ್ರ ಸರ್ಕಾರ ತಂದಿಟ್ಟಿದೆ. ರಾಜ್ಯದ ಕುತ್ತಿಗೆ ಹಿಸುಕಲಾಗುತ್ತಿದೆ. ಒಕ್ಕೂಟ ವ್ಯವಸ್ಥೆ ಹಾಗೂ ಪ್ರಜಾಪ್ರಭುತ್ವ ಅಪಾಯಕ್ಕೆ ಸಿಲುಕಿದೆ ಎಂದು ಆತಂಕ ವ್ಯಕ್ತಪಡಿಸಿದರು.

ರಾಜ್ಯಕ್ಕೆ ಇಷ್ಟೆಲ್ಲ ಅನ್ಯಾಯ ಆಗುತ್ತಿದ್ದರೂ ರಾಜ್ಯದಿಂದ ಆಯ್ಕೆಯಾಗಿದ್ದ ಬಿಜೆಪಿ 25 ಸಂಸದರು ಬಾಯಿ ಬಿಡಲಿಲ್ಲ. ಕೇಂದ್ರದ ಅನ್ಯಾಯದ ವಿರುದ್ಧ ಹೋರಾಟ ಮಾಡಲಿಲ್ಲ. ನಮ್ಮ ಪಾಲು ಕೇಳಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕೆ? ಎಂಬ ಬಗ್ಗೆ ಜನರು ನಿರ್ಧಾರ ಮಾಡಬೇಕಿದೆ ಎಂದು ಮನವಿ ಮಾಡಿದರು.

ಕೇಂದ್ರದಲ್ಲಿ ‘ಇಂಡಿಯಾ’ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ರೈತ ಸಾಲ ಮನ್ನಾ, ಮಹಿಳೆಯರಿಗೆ ಆರ್ಥಿಕ ನೆರವು ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ ಎಂದರು.

ಸಹಕಾರ ಸಚಿವ ಕೆ.ಎನ್.ರಾಜಣ್ಣ, ‘ಕೇಂದ್ರ ಸರ್ಕಾರದ ನಡೆಯನ್ನು ಗಮನಿಸಿದರೆ ಒಕ್ಕೂಟ ವ್ಯವಸ್ಥೆಗೆ ಅಪಾಯ ಬಂದಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ ಎಂಬ ಕಾರಣಕ್ಕೆ ಕೇಂದ್ರದ ಬಿಜೆಪಿ ಸರ್ಕಾರವು ಬರ ಪರಿಹಾರವಾಗಿ ಬಿಡಿಗಾಸೂ ನೀಡಿಲ್ಲ. ಇಂತಹ ಪಕ್ಷದ ಅಭ್ಯರ್ಥಿಗೆ ಲೋಕಸಭೆ ಚುನಾವಣೆಯಲ್ಲಿ ಮತ ನೀಡಬೇಕೆ ಎಂಬ ಬಗ್ಗೆ ಯೋಚಿಸಬೇಕು’ ಎಂದು ಹೇಳಿದರು.

ಕೆಎಸ್ಆರ್‌ಟಿಸಿ ನಿಗಮದ ಅಧ್ಯಕ್ಷ ಎಸ್.ಆರ್.ಶ್ರೀನಿವಾಸ್, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ್‌ಗೌಡ, ಮುಖಂಡರಾದ ಷಫಿಅಹ್ಮದ್, ರಫಿಕ್ಅಹ್ಮದ್, ಆರ್.ರಾಮಕೃಷ್ಣ, ಇಕ್ಬಾಲ್ ಅಹ್ಮದ್, ಗಂಗಹನುಮಯ್ಯ, ಶಣ್ಮುಖಪ್ಪ ಇತರರು ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

‘ಎಲ್ಲರಿಗಿಂತ ಗೌಡರೇ ಸಮರ್ಥರು’ ‘ಎಸ್.ಪಿ.ಮುದ್ದಹನುಮೇಗೌಡ ಅವರಿಗಿಂತ ಸಮರ್ಥ ಅಭ್ಯರ್ಥಿ ಯಾರಿದ್ದಾರೆ. ಅವರಂತಹ ನಾಯಕ ಬೇರೆ ಯಾರು ಇದ್ದಾರೆ’ ಹೇಳಿ ಎಂದು ಜಿ.ಪರಮೇಶ್ವರ ಪ್ರಶ್ನಿಸಿದರು. ಜಿಲ್ಲೆ ರಾಜ್ಯದ ಸಮಸ್ಯೆಗಳನ್ನು ಸಮರ್ಥವಾಗಿ ಲೋಕಸಭೆಯಲ್ಲಿ ಪ್ರತಿಪಾದಿಸಲಿದ್ದಾರೆ. ದೇಶದ ವಿಚಾರಗಳನ್ನು ಸಮಗ್ರವಾಗಿ ಮಂಡಿಸುವ ಶಕ್ತಿ ಗೌಡರಿಗೆ ಇದೆ. ಸಂಸದರಾಗಿದ್ದಾಗ ವಿಶ್ವ ಸಂಸ್ಥೆಯಲ್ಲೂ ದೇಶವನ್ನು ಪ್ರತಿನಿಧಿಸಿದ್ದರು. ಸಜ್ಜನ ವಿದ್ಯಾವಂತರು 35 ವರ್ಷಗಳ ಕಾಲ ರಾಜಕಾರಣದಲ್ಲಿ ಒಂದು ಸಣ್ಣ ಕಪ್ಪು ಚುಕ್ಕೆ ಇಲ್ಲದಂತೆ ಕೆಲಸ ಮಾಡಿದ್ದಾರೆ. ವ್ಯಕ್ತಿತ್ವ ಹಾಳು ಮಾಡಿಕೊಂಡಿಲ್ಲ ಎಂದು ಅವರು ಹೇಳಿದರು. ಯಾರು ಬೇಕು?: ಮುದ್ದಹನುಮೇಗೌಡ ಮಾತನಾಡಿ ‘ನಾನು ಜಿಲ್ಲೆಯಲ್ಲಿ ಹುಟ್ಟಿ ಬೆಳೆದವನು. ಆದರೆ ಬಿಜೆಪಿ ಅಭ್ಯರ್ಥಿ ನನ್ನನ್ನೇ ಹೊರಗಿನವರು ಎಂದು ಹೇಳುತ್ತಿರುವುದೇ ಹಾಸ್ಯಾಸ್ಪದ. ಜಿಲ್ಲೆಗೆ ಒಬ್ಬ ಸಮರ್ಥ ಸಂಸದ ಬೇಕಾದರೆ ಜನರ ಅಭಿವೃದ್ಧಿ ಆಗಬೇಕಿದ್ದರೆ ನನ್ನನ್ನು ಆಯ್ಕೆ ಮಾಡಲಿ. ಜನರು ನನ್ನ ಬಳಿ ಬರುವಂತಿಲ್ಲ. ನಾನೇ ಜನರ ಬಳಿಗೆ ಹೋಗಿ ಕೆಲಸ ಮಾಡಿಕೊಟ್ಟಿದ್ದೇನೆ’ ಎಂದು ತಿಳಿಸಿದರು. ‘ಸಂಸತ್ ಸದಸ್ಯರಾಗಿದ್ದ ಸಮಯದಲ್ಲಿ ಜಿಲ್ಲೆ ರಾಜ್ಯದ ವಿಚಾರಗಳನ್ನು ಸಂಸತ್‌ನಲ್ಲಿ ಸಮರ್ಥವಾಗಿ ಮಂಡಿಸಿದ್ದೇನೆ. ಕೊಬ್ಬರಿ ನೀರಾವರಿ ರೈಲ್ವೆ ಯೋಜನೆಗಳು ರೈತರ ಆತ್ಮಹತ್ಯೆ ಬಗ್ಗೆಯೂ ಮಾತನಾಡಿದ್ದೇನೆ. ಎಚ್ಎಂಟಿ ಮುಚ್ಚಿದ ನಂತರ ಇಸ್ರೋ ಕೇಂದ್ರ ತಂದಿದ್ದೇನೆ. ಪ್ರಸ್ತುತ ಹಲವು ಯೋಜನೆಗಳು ನಿಂತಲ್ಲೇ ನಿಂತಿದ್ದು ಅವುಗಳಿಗೆ ವೇಗ ಕೊಡಲು ನನ್ನಂತಹ ಸಮರ್ಥ ಸಂಸದ ಬೇಕಾಗಿದೆ. ಅದಕ್ಕಾಗಿ ಆಯ್ಕೆ ಮಾಡಿ’ ಎಂದು ಕೇಳಿಕೊಳ್ಳುತ್ತಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT