ಬುಧವಾರ, ಸೆಪ್ಟೆಂಬರ್ 29, 2021
19 °C

ಕಾಲೇಜು ಶಿಕ್ಷಣವೇ ಪರಮ ಜ್ಞಾನವಲ್ಲ; ‘ವೀರಪಥ’ ಕೃತಿ ಬಿಡುಗಡೆ ಸಮಾರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುರುವೇಕೆರೆ: ‘ವಿಶ್ವ ವಿದ್ಯಾನಿಲಯ, ಕಾಲೇಜುಗಳು ನೀಡುತ್ತಿರುವ ಶಿಕ್ಷಣವೇ ಸರ್ವ ಜ್ಞಾನವಲ್ಲ. ವಿದ್ಯೆ ಅಕ್ಷರದಲ್ಲಿದೆ ಎನ್ನುವುದು ಬಹು ದೊಡ್ಡ ಮೌಢ್ಯ’ ಎಂದು ಚಿಂತಕ ಪ್ರೊ.ಎಂ.ಕೃಷ್ಣೇಗೌಡ ಅಭಿಪ್ರಾಯಪಟ್ಟರು.

ಪಟ್ಟಣದಲ್ಲಿ ಬುಧವಾರ ತಾಲ್ಲೂಕು ನಾಗರಿಕ ವೇದಿಕೆ ಹಾಗೂ ಹಲವು ಸಂಘ ಸಂಸ್ಥೆಗಳು ಆಯೋಜಿಸಿದ್ದ ಪ್ರೊ.ಪುಟ್ಟರಂಗಪ್ಪ ಅವರ ವಿರಚಿತ ಸ್ವಾತಂತ್ರ್ಯ ಹೋರಾಟಗಾರರ ‘ವೀರಪಥ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

ನಿಜವಾದ ಜ್ಞಾನ ಅನುಭವದಿಂದ ಬರುತ್ತದೆ, ಅರಿವಿನಿಂದ ಸಿಗುತ್ತದೆ. ಇದನ್ನು ಯಾರೂ ಹೇಳಿಕೊಡಲಾಗದು. ಈ ದೇಶದ ಚಾರಿತ್ರಿಕ ಪರಂಪರೆ, ದಾಖಲೆ ಮತ್ತು ಗ್ರಂಥ ಸಂಪತ್ತನ್ನು ಸಂಗ್ರಹಿಸುವ ಹಾಗೂ ಸಂರಕ್ಷಿಸುವ ಕೆಲಸ ಮಾಡಿದ್ದರೆ ಭಾರತದಲ್ಲಿ ಎಂತಹ ಜ್ಞಾನ ಸಂಪತ್ತು ಇತ್ತು ಎನ್ನುವುದು ತಿಳಿಯುತ್ತಿತ್ತು ಎಂದು ಹೇಳಿದರು.

ತಾಲ್ಲೂಕಿನ ಸ್ವಾತಂತ್ರ್ಯ ಹೋರಾಟಗಾರರ ಕಥನಗಳನ್ನು ಪ್ರೊ.ಪುಟ್ಟರಂಗಪ್ಪ ಅವರು ಖಚಿತತೆ, ಶಿಸ್ತಿನ ಬರವಣಿಗೆ ಮತ್ತು ಸ್ಪಷ್ಟತೆಯೊಂದಿಗೆ ಕಟ್ಟಿಕೊಟ್ಟಿದ್ದಾರೆ. ತಾಲ್ಲೂಕಿನ ಚರಿತ್ರೆ, ಹೋರಾಟಗಾರರ ಅನುಭವಗಳು ಮುಂದಿನ ತಲೆಮಾರಿನ ಮಕ್ಕಳಿಗೆ ತಿಳಿಯಬೇಕು ಎಂದರು.

ಪ್ರೊ.ಪುಟ್ಟರಂಗಪ್ಪ ಮಾತನಾಡಿ, ತಾಲ್ಲೂಕಿನ ಪ್ರತಿ ಊರಿಗೂ ಭೇಟಿ ನೀಡಿ ಎರಡು ವರ್ಷ ಸ್ವಾತಂತ್ರ್ಯ ಹೋರಾಟಗಾರ ಅನುಭವಗಳನ್ನು ಸಣ್ಣ ಸಣ್ಣ ವಿವರಗಳೊಂದಿಗೆ ಕಟ್ಟಿಕೊಡಲು ಯತ್ನಿಸಿದ್ದೇನೆ ಎಂದರು.

ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, 17ನೇ ಶತಮಾನದವರೆಗೆ ದೇಶದ ಜಿಡಿಪಿ ದರ 23.5ರಷ್ಟಿತ್ತು. ಬ್ರಿಟಿಷರು ಭಾರತದಿಂದ ನಿರ್ಗಮಿಸಿದ ನಂತರ 2.5ಗೆ ಇಳಿದಿತ್ತು. ವಿಜ್ಞಾನ, ಜ್ಞಾನ, ಗಣಿತ ಕ್ಷೇತ್ರದಲ್ಲಿ ಭಾರತೀಯರು ವಿಶ್ವಕ್ಕೆ ನೀಡಿದ ಕೊಡುಗೆ ಅಪಾರ. ರಾಮಾಯಣ ದರ್ಶನಂ ಮಹಾಕಾವ್ಯದಲ್ಲಿ ಕುವೆಂಪು ಅವರು ಮಂಥರೆಯಂತಹ ಸಣ್ಣ ಪಾತ್ರಗಳಲ್ಲೇ ಔದಾರ್ಯ ತುಂಬಿದ್ದಾರೆ. ಯಾವುದೇ ದೇಶದಲ್ಲಿ ಸ್ವಾತಂತ್ರ್ಯವಿಲ್ಲದೆ ಯಾವ ಪ್ರಗತಿಯೂ ನಡೆಯದು. ಸ್ವಾತಂತ್ರ್ಯ ಹೋರಾಟದಲ್ಲಿ ಭೌದ್ಧಿಕ ಹೋರಾಟದ ಜೊತೆಗೆ ಆಧ್ಯಾತ್ಮಿಕ ಹೋರಾಟವೂ ಮುಖ್ಯವೆನಿಸಿದೆ ಎಂದರು.

ಇಬ್ಬರು ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಕೃತಿ ರಚನೆಕಾರ ಪ್ರೊ.ಪುಟ್ಟರಂಗಪ್ಪ ದಂಪತಿಯನ್ನು ಅಭಿನಂದಿಸಲಾಯಿತು.

ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ತುಮುಲ್ ಜಿಲ್ಲಾಧ್ಯಕ್ಷ ಸಿ.ವಿ.ಮಹಾಲಿಂಗಯ್ಯ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಂಜನ್‌ಕುಮಾರ್‌, ತಾಲ್ಲೂಕು ನಾಗರಿಕ ವೇದಿಕೆ ಅಧ್ಯಕ್ಷ ಪಿ.ಎಚ್.ಧನಪಾಲ್, ಕಸಾಪ ಜಿಲ್ಲಾಧ್ಯಕ್ಷೆ ಬಾ.ಹ.ರಮಾಕುಮಾರಿ, ತಾಲ್ಲೂಕು ಅಧ್ಯಕ್ಷ ನಂರಾಜುಮುನಿಯೂರು, ಕೊಂಡಜ್ಜಿ ವಿಶ್ವನಾಥ್, ಗಂಗಾಧರ್ ದೇವರ ಮನೆ, ಚೌದ್ರಿ ನಾಗೇಶ್, ದಿನೇಶ್ ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು