ಮಂಗಳವಾರ, ಆಗಸ್ಟ್ 20, 2019
25 °C
ಕಾರ್ಮಿಕ ಕಾನೂನು ತಿದ್ದುಪಡಿಗೆ ವಿರೋಧ; ಬಿಎಸ್‌ಎನ್‌ಎಲ್‌ ಕಚೇರಿ ಬಳಿ ಕಾರ್ಮಿಕ ಸಂಘಟನೆ ಪ್ರತಿಭಟನೆ

ಕೇಂದ್ರ ಸರ್ಕಾರದ ನೀತಿಗಳಿಗೆ ಖಂಡನೆ

Published:
Updated:
Prajavani

ತುಮಕೂರು: ಕಾರ್ಮಿಕ ಕಾಯ್ದೆಗಳ ತಿದ್ದುಪಡಿಗೆ ಕೇಂದ್ರ ಸರ್ಕಾರ ತರಾತುರಿಯಲ್ಲಿ ಕ್ರಮಕ್ಕೆ ಮುಂದಾಗಿದೆ. ಕೈಗಾರಿಕೆಗಳ ಖಾಸಗೀಕರಣಕ್ಕೆ, ಮೋಟಾರು ವಾಹನ ಕಾಯ್ದೆಗೆ ಮಾರಕ ತಿದ್ದುಪಡಿಗೆ ಮುಂದಾಗಿದೆ ಎಂದು ಆರೋಪಿಸಿ ಜೆಸಿಟಿಯು ಸಂಘಟನೆಯ ನೇತೃತ್ವದಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳು ನಗರದ ಬಿಎಸ್‌ಎನ್‌ಎಲ್ ಕಚೇರಿ ಹತ್ತಿರ ಶುಕ್ರವಾರ ಪ್ರತಿಭಟನೆ ನಡೆಸಿದವು.

ರಸ್ತೆ ಸುರಕ್ಷತಾ ಕಾಯ್ದೆ ಹೆಸರಲ್ಲಿ ಮೋಟಾರು ವಾಹನ ಕಾಯ್ದೆಗೆ ತಂದಿರುವ ತಿದ್ದುಪಡಿಗಳು ವಾಹನ ಮಾಲೀಕರನ್ನು ಹಾಗೂ ಚಾಲಕರನ್ನು ದಂಡಿಸುತ್ತದೆ. ಅಲ್ಲದೇ, ವಿಪರೀತ ಕಿರುಕುಳ ಹಾಗೂ ಸಾರ್ವಜನಿಕ ವಲಯದಲ್ಲಿರುವಂತಹ ಸಾರಿಗೆ ನಿಗಮಗಳ ಖಾಸಗೀಕರಣಕ್ಕೆ ಕಾರಣವಾಗುತ್ತಿದೆ ಎಂದು ಪ್ರತಿಭಟನೆಕಾರರು ಆರೋಪಿಸಿದರು.

ಭಾರತೀಯ ರೈಲ್ವೆ, ವಿಶ್ವೇಶ್ವರಯ್ಯ ಅವರು ಸ್ಥಾಪಿಸಿದ ಉಕ್ಕಿನ ಕಾರ್ಖಾನೆ, ಯಲಹಂಕದಲ್ಲಿರುವ ರೈಲು ಗಾಲಿ ಕಾರ್ಖಾನೆಗಳು ಸೇರಿದಂತೆ ಅನೇಕ ಸಾರ್ವಜನಿಕ ವಲಯದ ಕಾರ್ಖಾನೆಗಳನ್ನು ಕನಿಷ್ಠ ದರಕ್ಕೆ ಖಾಸಗಿಯವರಿಗೆ ಮಾರಾಟಕ್ಕೆ ಮುಂದಾಗಿರುವುದು ಖಂಡನೀಯ ಎಂದರು.

ಸಿಐಟಿಯು ಜಿಲ್ಲಾ ಘಟಕ ಅಧ್ಯಕ್ಷ ಸೈಯದ್ ಮುಜೀಬ್ ಮಾತನಾಡಿ, ‘ಕಾರ್ಮಿಕ ಸಂಘಟನೆಗಳ ತೀವ್ರ ವಿರೋಧದ ನಡುವೆಯೂ ಕೇಂದ್ರದ ಬಿಜೆಪಿ ಸರ್ಕಾರ ಕಾರ್ಮಿಕ ಕಾಯ್ದೆಗಳ ತಿದ್ದುಪಡಿಗೆ ಅವಸರ ಮಾಡುತ್ತಿದೆ. ಕನಿಷ್ಠ ವೇತನಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಹಾಗೂ ಭಾರತೀಯ ಕಾರ್ಮಿಕ ಸಮ್ಮೇಳನದ ಶಿಫಾರಸ್ಸುಗಳನ್ನು ಸರ್ಕಾರ ಸಂಪೂರ್ಣ ಬದಿಗಿರಿಸಿದೆ ಎಂದು ಆರೋಪಿಸಿದರು.

ಸಾರ್ವಜನಿಕ ವಲಯ ಖಾಸಗೀಕರಣಕ್ಕೆ ಒತ್ತು ಕೊಡುತ್ತಿದೆ. ಈ ನೀತಿಗಳಿಂದ ಯಾರಿಗೂ ಪ್ರಯೋಜನವಿಲ್ಲ. ನಿರುದ್ಯೋಗ ಪ್ರಮಾಣ ಕಳೆದ ಅರ್ಧ ಶತಮಾನದಲ್ಲಿ ಗರಿಷ್ಠ ಮಟ್ಟ ತಲುಪಿದೆ ಎಂದು ಹೇಳಿದರು.

ಎಐಟಿಯುಸಿ ಉಪಾಧ್ಯಕ್ಷ ಕಂಬೇಗೌಡ ಮಾತನಾಡಿ, ‘ಸರ್ಕಾರ ಹಲವು ತಿದ್ದುಪಡಿಗಳನ್ನು ಮಾಡಿ ಪಾರದರ್ಶಕತೆ ಇಲ್ಲದಂತೆ ವ್ಯವಹರಿಸುತ್ತಿದೆ. ಮಾಹಿತಿ ಕಾಯ್ದೆ ತಿದ್ದುಪಡಿ ಖಂಡನಾರ್ಹ’ ಎಂದರು.

ಎಐಟಿಯುಸಿ ಗಿರೀಶ್ ಮಾತನಾಡಿ, ‘ಕಟ್ಟಡ ಕಾರ್ಮಿಕರ ಕಲ್ಯಾಣಕ್ಕಾಗಿ ಇರುವಂತಹ ಕಾಯ್ದೆ ಹಾಗೂ ನಿಧಿಯನ್ನು ನಿರ್ಮಾಣ ಮಾಡಲು ಹೊರಟಿರುವ ಕಲ್ಯಾಣ ಮಸೂದೆ ಬೇಡ’ ಎಂದರು.

ಎಐಯುಟಿಯುಸಿ ಮಂಜುಳ ಪ್ರತಿಭಟನೆ ಬೆಂಬಲಿಸಿ ಮಾತನಾಡಿದರು.

ಜೀವ ವಿಮಾನೌಕರರ ಸಂಘಟನೆಯ ನಂಜುಂಡಸ್ವಾಮಿ, ಲಕ್ಷ್ಮೀಕಾಂತ್, ಸಿಐಟಿಯುನ ತಾಲ್ಲೂಕು ಕಾರ್ಯದರ್ಶಿ ಸುಜಿತ್, ಟಿಮೆಕ್ ಇಂಡಿಯಾ ಕಾರ್ಮಿಕ ಸಂಘದ ನರಸಿಂಹಮೂರ್ತಿ, ಮಂಜುನಾಥ್, ಲಕ್ಷ್ಮೀಕಾಂತ್, ಎಐಟಿಯುಸಿಯ ವೇಣುಗೋಪಾಲ್, ನಾಗಣ್ಣ ಹಾಗೂ ಮೂರ್ತಿ ಇದ್ದರು.

Post Comments (+)