ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಲ್‌ ಬಾಕಿ | ಗುತ್ತಿಗೆದಾರನಿಂದ ಆತ್ಮಹತ್ಯೆ ಬೆದರಿಕೆ

ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ಬಿಡುಗಡೆ
Published 6 ಜೂನ್ 2024, 0:21 IST
Last Updated 6 ಜೂನ್ 2024, 0:21 IST
ಅಕ್ಷರ ಗಾತ್ರ

ಪಾವಗಡ (ತುಮಕೂರು): ‘ಗುಣಮಟ್ಟದ ರಸ್ತೆ ಕಾಮಗಾರಿ ಮುಗಿಸಿದರೂ ವಿಶ್ವೇಶ್ವರಯ್ಯ ಜಲ ನಿಗಮ ಉದ್ದೇಶಪೂರ್ವಕವಾಗಿ ಹಣ ಬಿಡುಗಡೆ ಮಾಡುತ್ತಿಲ್ಲ’ ಎಂದು ಸುಜಿತ್ ಎಂಬ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಳ್ಳುವ ಎಚ್ಚರಿಕೆ ನೀಡಿದ್ದಾರೆ.

ತಮಗೆ ಬರಬೇಕಾದ ಬಾಕಿ ಹಣ ಪಾವತಿಸದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮತ್ತು ತಮ್ಮ ಸಾವಿಗೆ ವಿಶ್ವೇಶ್ವರಯ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕರೇ ಕಾರಣ ಎಂದು ಹೇಳಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಕಿಲಾರ್ಲಹಳ್ಳಿ– ಕನ್ನಮೇಡಿ ರಸ್ತೆ ಕಾಮಗಾರಿ ಪೂರ್ಣಗೊಳಿಸಿ ಹಲವು ತಿಂಗಳು ಕಳೆದರೂ ವಿಶ್ವೇಶ್ವರಯ್ಯ ಜಲ ನಿಗಮ ತನಗೆ ಸೇರಬೇಕಾದ ₹50 ಲಕ್ಷ ಹಣ ಬಿಡುಗಡೆ ಮಾಡಿಲ್ಲ. ಕಾಮಗಾರಿ ಸರಿ ಇಲ್ಲ ಎಂದು ನಿಗಮದ ವ್ಯವಸ್ಥಾಪಕ ತನಿಖೆ ನಡೆಸಿದ್ದರು. ಕಾಮಗಾರಿ ಗುಣಮಟ್ಟ ಸರಿಯಾಗಿಯೇ ಇದೆ ಎಂದು ತನಿಖಾ ವರದಿ ಹೇಳಿದೆ. ಆದರೂ, ತಾಲ್ಲೂಕಿನವರೇ ಆದ ನಿಗಮದ ವ್ಯವಸ್ಥಾಪಕ ನಿರ್ದೇಶಕ ಸಣ್ಣ ಚಿತ್ತಯ್ಯ ಉದ್ದೇಶಪೂರ್ವಕವಾಗಿ ಹಣ ತಡೆ ಹಿಡಿದಿದ್ದಾರೆ ಎಂದು ಗುತ್ತಿಗೆದಾರ ಆರೋಪಿಸಿದ್ದಾರೆ.

‘ಸಾಲ ಮಾಡಿ ಕಾಮಗಾರಿ ಮುಗಿಸಿದ್ದೇನೆ. ಸ್ಥಳೀಯ ರಾಜಕೀಯ ಕಾರಣಗಳಿಗಾಗಿ ದುರುದ್ದೇಶದಿಂದ ವ್ಯವಸ್ಥಾಪಕ ನಿರ್ದೇಶಕರು ಹೀಗೆ ಮಾಡುತ್ತಿದ್ದಾರೆ. ಬೇರೆ ಹಲವು ಗುತ್ತಿಗೆದಾರರ ಹಣ ಬಿಡುಗಡೆ ಮಾಡಲಾಗಿದೆ. ನನ್ನೊಬ್ಬನ ಬಿಲ್‌ ಮಾತ್ರ ತಡೆ ಹಿಡಿಯಲಾಗಿದೆ‘ ಎಂದು ಸುಜಿತ್ ಆರೋಪ ಮಾಡಿದ್ದಾರೆ.

‘ಬುಧವಾರ ಕಚೇರಿಗೆ ಕರೆಸಿಕೊಂಡ ಕೆಲವು ಅಧಿಕಾರಿಗಳು ನನಗೆ ಬೆದರಿಕೆ ಹಾಕಿದ್ದಾರೆ. ಇದರಲ್ಲಿ ಸಣ್ಣ ಚಿತ್ತಯ್ಯ ಅವರ ತಪ್ಪೇನಿಲ್ಲ ಎಂದು ನನ್ನಿಂದ ಹೇಳಿಸಿ ವಿಡಿಯೊ ಮಾಡಿಸಿಕೊಂಡಿದ್ದಾರೆ. ನನಗೆ ನ್ಯಾಯ ಕೊಡಿಸಿ’ ಎಂದು ಅವರು ಗೋಗರೆದಿದ್ದಾರೆ. ಈ ವಿಡಿಯೊ ತಾಲ್ಲೂಕಿನಲ್ಲಿ ಸಂಚಲನ ಮೂಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT