ಶುಕ್ರವಾರ, ನವೆಂಬರ್ 22, 2019
23 °C
ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ದುರಸ್ತಿ ಕಾಮಗಾರಿ; ಜೂನಿಯರ್ ಕಾಲೇಜಿನಲ್ಲಿ ರಾಜ್ಯೋತ್ಸವ

ಕಾಟಾಚಾರಕ್ಕೆ ಸ್ತಬ್ಧ ಚಿತ್ರ ರೂಪಿಸದಿರಿ

Published:
Updated:
Prajavani

ತುಮಕೂರು: ಜಿಲ್ಲಾ ಕ್ರೀಡಾಂಗಣದಲ್ಲಿ ದುರಸ್ತಿ ಕಾರ್ಯ ನಡೆಯುತ್ತಿರುವುದರಿಂದ ಈ ಬಾರಿ ರಾಜ್ಯೋತ್ಸವ ಕಾರ್ಯಕ್ರಮವನ್ನು ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಆಚರಿಸಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್ ಹೇಳಿದರು.

ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಅಧಿಕಾರಿಗಳು ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಮೈದಾನ ಪರಿಶೀಲಿಸಬೇಕು. ಯಾವುದೇ ಸಮಸ್ಯೆಗಳಿದ್ದರೆ ತಕ್ಷಣ ಗಮನಕ್ಕೆ ತರಬೇಕು.  ರಾಜ್ಯೋತ್ಸವವನ್ನು ಲೋಪದೋಷಗಳು ಇಲ್ಲದಂತೆ ಸಡಗರದಿಂದ ಆಚರಿಸಲು ಎಲ್ಲ ರೀತಿಯ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದರು.

ನವೆಂಬರ್ 1ರಂದು ಬೆಳಿಗ್ಗೆ 8ಕ್ಕೆ ಜನಪದ ಕಲಾ ತಂಡಗಳೊಂದಿಗೆ ಕನ್ನಡ ತಾಯಿ ಭುವನೇಶ್ವರಿ ಪ್ರತಿಮೆ ಮೆರವಣಿಗೆ ನಗರದ ಪ್ರಮುಖ ವೃತ್ತಗಳಲ್ಲಿ ನಡೆಯಲಿದೆ. 9ಕ್ಕೆ ಜೂನಿಯರ್ ಕಾಲೇಜು ಮೈದಾನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಧ್ವಜಾರೋಹಣ ಮಾಡಲಿದ್ದಾರೆ ಎಂದರು.

ವಿವಿಧ ಇಲಾಖೆಗಳು ವಿಶೇಷ ಯೋಜನೆಗಳ ಪರಿಕಲ್ಪನೆ ಬಿಂಬಿಸುವ ಸ್ತಬ್ಧ ಚಿತ್ರಗಳನ್ನು ಪ್ರದರ್ಶಿಸಬೇಕು. ಸ್ತಬ್ಧ ಚಿತ್ರಗಳನ್ನು ಕಾಟಾಚಾರಕ್ಕೆ ನಿರ್ಮಿಸದೇ ವ್ಯವಸ್ಥಿತವಾಗಿ ನಿರ್ಮಿಸಬೇಕು. ಸ್ತಬ್ಧ ಚಿತ್ರಗಳನ್ನು ಜಿಲ್ಲಾಡಳಿತದಿಂದ ಅನುಮೋದನೆ ಪಡೆದುಕೊಂಡೇ ನಿರ್ಮಿಸಬೇಕು ಎಂದು ಸೂಚಿಸಿದರು.

ಶಾಲಾ ಮಕ್ಕಳಿಂದ ಕನ್ನಡ ನಾಡು ನುಡಿ ಬಿಂಬಿಸುವ ಸಾಮೂಹಿಕ ಕಲಾ ಪ್ರದರ್ಶನಗಳನ್ನು ಏರ್ಪಡಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಆದೇಶಿಸಿದರು.

 ಸಂಜೆ 4ಕ್ಕೆ ಗಾಜಿನ ಮನೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿಯೇ ವಿವಿಧ ಕ್ಷೇತ್ರಗಳ 30 ಮಂದಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಚೆನ್ನಬಸಪ್ಪ, ತಿಪಟೂರು ಉಪವಿಭಾಗಾಧಿಕಾರಿ ನಂದಿನಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಸವರಾಜಪ್ಪ ಆಪಿನಕಟ್ಟೆ, ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷೆ ಬಾ.ಹ.ರಮಾಕುಮಾರಿ, ವಿವಿಧ ಇಲಾಖೆಗಳ ಅಧಿಕಾರಿಗಳು, ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು ಇದ್ದರು.

ಪ್ರತಿಕ್ರಿಯಿಸಿ (+)